ರಾಮನಗರ: ರಾಜ್ಯ ವಿಧಾನ ಸಭೆ ಚುನಾವಣೆಗೆ (Karnataka Election) ಕೆಲವೇ ದಿನಗಳು ಬಾಕಿಯಿದ್ದು, 224 ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ಶುರುವಾಗಿದೆ. ತಮ್ಮ ಅಭ್ಯರ್ಥಿಗಳ ಪರ ಕಾರ್ಯಕರ್ತರು ಅಷ್ಟೇ ಅಲ್ಲದೆ ಚುನಾವಣಾ ಕಣಕ್ಕೆ ಧುಮುಕಿರುವ ತಮ್ಮ ಮನೆಯವರಿಗೋಸ್ಕರ ಕುಟುಂಬ ಸದಸ್ಯರು ಸಹ ಭಾಗಿಯಾಗುತ್ತಿದ್ದಾರೆ. ಅದರಂತೆ ಮಂಗಳವಾರ (ಏಪ್ರಿಲ್ 25ರಂದು) ರಾಮನಗರ ಜಿಲ್ಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಪತ್ನಿ ಉಷಾ ಹಾಗೂ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ (HD Kumaraswamy) ಪತ್ನಿ ಅನಿತಾ ಕುಮಾರಸ್ವಾಮಿ ಚುನಾವಣಾ ಅಖಾಡಕ್ಕಿಳಿದು ಮತಯಾಚನೆ ಮಾಡಿದರು.
ಕನಕಪುರದಲ್ಲಿ ಡಿ.ಕೆ. ಶಿವಕುಮಾರ್ (DK Shivakumar) ವಿರುದ್ಧ ಬಿಜೆಪಿಯಿಂದ ಆರ್.ಅಶೋಕ್, ಚನ್ನಪಟ್ಟಣದಲ್ಲಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಮಾಜಿ ಸಚಿವ ಯೋಗೇಶ್ವರ್ ಅವರು ಕಣಕ್ಕೆ ಇಳಿದಿರುವುದರಿಂದ ಎರಡೂ ಹೈವೋಲ್ಟೇಜ್ ಕ್ಷೇತ್ರಗಳಾಗಿ ಮಾರ್ಪಟ್ಟಿವೆ. ಘಟಾನುಘಟಿ ನಾಯಕರ ಸ್ಪರ್ಧೆ ಕುರಿತು ಜಿಲ್ಲೆಯ ರಾಜಕೀಯ ಪಡಸಾಲೆಯಲ್ಲಿ ಮಾತು ಜೋರಾಗಿದೆ. ನಾನೇ ಮತ್ತೆ ಸಿಎಂ ಎನ್ನುತ್ತಿರುವ ಎಚ್.ಡಿ ಕುಮಾರಸ್ವಾಮಿ ಮತ್ತು ನಾನೇ ಮುಂದಿನ ಸಿಎಂ ಎನ್ನುತ್ತಿರುವ ಡಿ.ಕೆ ಶಿವಕುಮಾರ್ ಇಬ್ಬರೂ ಸಹ ರಾಜ್ಯದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಬ್ಯುಸಿ ಯಾಗಿದ್ದಾರೆ.
ರಾಜ್ಯ ಸುತ್ತುವ ಬ್ಯುಸಿಯಲ್ಲಿ ತಮ್ಮ ಸ್ವಕ್ಷೇತ್ರ ಕಡೆ ಗಮನಹರಿಸದ ನಾಯಕರಿಗೆ ಇದೀಗ ಪತ್ನಿಯರ ಸಾಥ್ ಸಿಕ್ಕಿದೆ. ಕನಕಪುರದಲ್ಲಿ ಡಿ.ಕೆ ಶಿವಕುಮಾರ್ ಪತ್ನಿ ಉಷಾ ಹಾಗೂ ಎಚ್.ಡಿ ಕುಮಾರಸ್ವಾಮಿ ಪತ್ನಿ ಅನಿತಾ ಪ್ರಚಾರಕ್ಕೆ ಧುಮುಕಿದ್ದಾರೆ.
ಡಿ.ಕೆ. ಶಿವಕುಮಾರ್ ಅವರ ಪತ್ನಿ ಉಷಾ ಅವರು ಕನಕಪುರ ಟೌನ್ ಭಾಗದ ಪ್ರಮುಖ ಬೀದಿಗಳಲ್ಲಿ ಮತಯಾಚನೆ ಮಾಡಿದರು. ನೂರಾರು ಕಾರ್ಯಕರ್ತರ ಜೊತೆಗೆ ಕ್ಷೇತ್ರದ ಮಹಿಳಾ ಮತದಾರರನ್ನು ಮಾತಾಡಿಸುತ್ತ ಕನಕಪುರದಲ್ಲಿ ರೌಂಡ್ಸ್ ಹಾಕಿ ಪ್ರಚಾರ ಮಾಡಿದ್ದಾರೆ. ಅವರು ಹತ್ತಾರು ಮನೆಗಳನ್ನು ಸುತ್ತಿದ್ದು, ಅಲ್ಲೆಲ್ಲ ಮನೆಯವರು ಅವರನ್ನು ಪ್ರೀತಿಯಿಂದ ಆದರಿಸಿದರು. ಮನೆಗಳಿಗೆ ಸ್ವಾಗತಿಸಿ ಕುಡಿಯಲು ಪಾನೀಯ ನೀಡಿದರು, ಅರಶಿನ ಕುಂಕುಮ ನೀಡಿ ಗೌರವಿಸಿದ್ದು ವಿಶೇಷವಾಗಿತ್ತು.
ಚನ್ನಪಟ್ಟಣದಲ್ಲಿ ಅನಿತಾ ಕುಮಾರಸ್ವಾಮಿ ಪತಿಯ ಗೆಲುವಿಗಾಗಿ ಟೊಂಕ ಕಟ್ಟಿ ನಿಂತಿದ್ದು, ಮಾಜಿ ಸಚಿವ ಯೋಗೇಶ್ವರ್ ಅವರನ್ನು ಈ ಬಾರಿಯೂ ಮಣಿಸಲು ಕ್ಷೇತ್ರ ಸುತ್ತಾಟ ನಡೆಸುತ್ತಿದ್ದಾರೆ. ಈ ವೇಳೆ ಮಾತನಾಡಿದ ಅವರು ಬಿಜೆಪಿ ತಂತ್ರಗಾರಿಕೆಗೆ ಜನ ಮನ್ನಣೆ ಕೊಡೋದಿಲ್ಲ. ಪ್ರಧಾನಿ ಮೋದಿಯವರು ನಮ್ಮ ದೇಶದ ಪ್ರಧಾನಿ ಚನ್ನಪಟ್ಟಣದಕ್ಕೆ ಬಂದ್ರೆ ಸಂತೋಷ ಆದರೆ ಮತದಾರನ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಇಲ್ಲಿ ಹೆಚ್ಡಿಕೆ ಬಿಟ್ಟು ಬೇರೆಯವರು ಗೆದ್ದರೆ ಬರೀ ಶಾಸಕರಾಗ್ತಾರೆ, ಎರಡ್ಮೂರು ಕೋಟಿ ಅನುದಾನ ತರಬಹುದಷ್ಟೇ. ಆದ್ರೆ ಹೆಚ್ಡಿಕೆ ಗೆದ್ರೆ ಸಿಎಂ ಕ್ಯಾಂಡೇಟ್ ಆಗಿ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಮಾಡಬಹುದೆಂದು ಠಕ್ಕರ್ ನೀಡಿದರು.
ಇದನ್ನೂ ಓದಿ : ಸಿಎಂ ಬೊಮ್ಮಾಯಿ ಪರ ಪ್ರಚಾರದ ಕಣಕ್ಕಿಳಿದ ಪತ್ನಿ, ಹಳ್ಳಿ ಹಳ್ಳಿಗಳಲ್ಲಿ ಸಂಚಾರ