Site icon Vistara News

Karnataka Election : ಡಿಕೆ ಶಿವಕುಮಾರ್‌ ಅನ್ನೋ ಹೆಸರೇಕೆ, ಕೇಡಿ ಶಿವಕುಮಾರ್ ಅಂತಿಟ್ಕೊಳ್ಳಿ; ಈಶ್ವರಪ್ಪ ಫುಲ್‌ ಗರಂ

Eshwarappa Asks DK Shivkumar to change his name as KD Shivkumar

Eshwarappa Asks DK Shivkumar to change his name as KD Shivkumar

ಹುಬ್ಬಳ್ಳಿ: ಕರ್ನಾಟಕದಲ್ಲಿ (Karnataka Election 2023) ಜಾತಿ ರಾಜಕಾರಣಕ್ಕೆ ಬೆಂಕಿ ಹಚ್ಚಿದವರೇ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್‌. ಇಂಥವರು ಬಿಜೆಪಿ ಜಾತಿ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸುತ್ತಿರುವುದು ನಾಚಿಕೆಗೇಡು ಎಂದಿದ್ದಾರೆ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ (KS Eshwarappa) ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್‌ (DK Shivakumar) ಸೇರಿದಂತೆ ಕೈ ನಾಯಕರನ್ನು ತರಾಟೆಗೆ ತೆಗೆದುಕೊಂಡರು.

ʻʻಕರ್ನಾಟಕ ರಾಜ್ಯದ ಜನರ ಆಕ್ರೋಶ ತೋರಿಸಲು ಕಾಂಗ್ರೆಸ್ ಪ್ರಣಾಳಿಕೆ ಸುಟ್ಟಿದ್ದೇನೆ. ರಾಷ್ಟ್ರಾಭಿಮಾನಿ, ದೇಶ ರಕ್ಷಕ ಸಂಘಟನೆ ಬಜರಂಗ ದಳವನ್ನು ಮುಸ್ಲಿಂ ಮತಕ್ಕಾಗಿ ನಿಷೇಧಿಸುವ ಮಾತನ್ನು ಆಡುತ್ತಿದೆ ಕಾಂಗ್ರೆಸ್‌ʼʼ ಎಂದು ದೂರಿದರು.

ಡಿ.ಕೆ. ಶಿವಕುಮಾರ್‌ ಅವರು ಅವರು ಜಾತಿವಾದಿ. ನಿಮ್ಮ ಜಾತಿಯವನನ್ನು ಸಿಎಂ ಮಾಡಲು ನನ್ನನ್ನು ಬೆಂಬಲಿಸಿ ಎಂದು ಕೇಳುವ ಅವರ ಜಾತಿವಾದಿಯಲ್ಲವೇ ಎಂದು ಕೇಳಿದರು ಈಶ್ವರಪ್ಪ. ಬಜರಂಗ ದಳಕ್ಕೂ ಆಂಜನೇಯನಿಗೂ ಏನು ಸಂಬಂಧ ಎನ್ನುವ ಅಸಂಬದ್ಧ ಪ್ರಶ್ನೆಯನ್ನು ಕೇಳಿದ್ದಾರೆ ಡಿ.ಕೆ. ಶಿವಕುಮಾರ್‌. ಬಜರಂಗ ಬಲಿಯಂತೆ ಕೆಚ್ಚು ತೋರಿಸುವುದು, ಅವನನ್ನು ಆರಾಧಿಸುತ್ತೇವೆ ಎನ್ನುವ ಕಾರಣಕ್ಕಾಗಿ ಸಂಘಟನೆಗೆ ಆ ಹೆಸರು ಇಟ್ಟಿದ್ದೇವೆ. ಡಿ.ಕೆ. ಶಿವಕುಮಾರ್‌ಗೆ ಶಿವಕುಮಾರ್‌ ಅನ್ನೋ ಹೆಸರು ಯಾಕಿಟ್ಟರು? ಶಿವಕುಮಾರ್‌ ಥರ ಇರಲಿ ಅಂತ ತಾನೇ? ಅವರಿಗೆ ಡಿ.ಕೆ. ಶಿವಕುಮಾರ್‌ ಅಂತ ಹೆಸರು ಯಾಕೆ ಬೇಕು? ಕೇಡಿ ಶಿವಕುಮಾರ್‌ ಅಂತ ಹೆಸರು ಇಟ್ಕೊಳ್ಳಿ ಎಂದು ಈಶ್ವರಪ್ಪ ಹೇಳಿದರು.

ಜಾತಿ ಬೆಂಕಿ ಹಚ್ಚಿದ, ಬಜರಂಗ ದಳ ನಿಷೇಧದ ಮಾತು ಆಡಿರುವ ಕಾಂಗ್ರೆಸ್‌ ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಕಳೆದುಕೊಳ್ಳುತ್ತದೆ ಎಂದ ಈಶ್ವರಪ್ಪ ಅವರು, ಕಾಂಗ್ರೆಸ್ ಧರ್ಮ ವಿರೋಧಿ, ದೇಶ ವಿರೋಧಿಯಾಗಿದೆ ಎಂದು ಕೆಂಡ ಕಾರಿದರು. ಕಾಂಗ್ರೆಸ್‌ನವರು ಕೂಡಲೆ ಈ ಪ್ರಣಾಳಿಕೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಮೋದಿ ಆನೆ, ಪ್ರಿಯಾಂಕ ಖರ್ಗೆ ತಿಗಣೆಗೆ ಸಮಾನ!

ʻʻರಾಜ್ಯದಲ್ಲಿ ರಾಷ್ಟ್ರೀಯವಾದ ಬೇಕೋ, ರಾಷ್ಟ್ರ ವಿರೋಧಿಗಳು ಬೇಕೋ ಅನ್ನೋ ಚರ್ಚೆ ನಡೆಯುತ್ತಿದೆ. ನರೇಂದ್ರ ಮೋದಿಯಂತಹ ವಿಶ್ವ ನಾಯಕನಿಗೆ, ಬಿಜೆಪಿಗೆ ಜನ ಬೆಂಬಲ ಕೊಡುತ್ತಿದ್ದಾರೆ. ಸಾಯೋ ಸಮಯದಲ್ಲೂ ಕಾಂಗ್ರೆಸ್‌ಗೆ ಬುದ್ಧಿ ಬಂದಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿಯವರನ್ನು ವಿಷಸರ್ಪ ಅಂತಾರೆ. ಮೋದಿ ಒಂದು ಆನೆ ತರಹ. ಅವರ ಮುಂದೆ ಮಲ್ಲಿಕಾರ್ಜುನ ಖರ್ಗೆ ಮಗ ತಿಗಣೆಗೆ ಸಮಾನ. ಅವನು ಮೋದಿಯವರನ್ನು ನಾಲಾಯಕ್‌ ಅಂತಾನೆʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶೆಟ್ಟರ್‌ ಸಿದ್ಧಾಂತ ಬಿಟ್ಟು ಹೋಗಿಲ್ಲ, ಮನೆಯಲ್ಲಿನ್ನೂ ಮೋದಿ ಫೋಟೊ ಇದೆ!

ʻʻಜಗದೀಶ್ ಶೆಟ್ಟರ್ ಪರಿಸ್ಥಿತಿ ನೋಡಿ ಅಯ್ಯೋ ಪಾಪ ಅನಿಸುತ್ತಿದೆ. ಆರ್‌ಎಸ್‌ಎಸ್‌, ಹಿಂದುತ್ವ ವಿಧಾಸನಭೆಯಲ್ಲಿ ಮಾತನಾಡಿದ್ದ ಶೆಟ್ಟರ್ ಸ್ವಾಭಿಮಾನವನ್ನು ನಾನು ನಿರೀಕ್ಷಿಸುತ್ತಿದ್ದೆ. ಟಿಕೆಟ್‌ಗಾಗಿ ಶೆಟ್ಟರ್ ಸ್ವಾಭಿಮಾನ ಮಾರಿಕೊಳ್ಳುತ್ತಿದ್ದಾರೆ. ಶೆಟ್ಟರ್ ಬಹಿರಂಗವಾಗಿ ಕಾಂಗ್ರೆಸ್ ನಿಲುವನ್ನು ಖಂಡಿಸಲಿʼʼ ಎಂದು ಹೇಳಿದ ಈಶ್ವರಪ್ಪ ಅವರು, ಒಂದುವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಬಜರಂಗ ದಳ ನಿಷೇಧ ಮಾಡಿದರೆ ಏನು ಮಾಡುತ್ತೀರಾ ಶೆಟ್ಟರೆ ಎಂದು ಪ್ರಶ್ನಿಸಿದರು.

ಜಗದೀಶ್‌ ಶೆಟ್ಟರ್‌ ಅವರು ಬಿಜೆಪಿ ಬಿಟ್ಟು ಹೋಗಿದ್ದಕ್ಕೆ ಬೇಸರವಿದೆ. ಹಾಗಂತ ಅವರು ಎಂದೂ ಸಿದ್ಧಾಂತವನ್ನು ಬಿಟ್ಟು ಹೋಗಿಲ್ಲ. ಶೆಟ್ಟರ್ ಅವರು ತಮ್ಮ ಮನೆಯಲ್ಲಿ ಇನ್ನೂ ಪ್ರಧಾನಿ ಮೋದಿ ಫೋಟೊ ಇಟ್ಟುಕೊಂಡಿದ್ದಾರೆ. ಯಾರೋ ಒಬ್ಬ ವ್ಯಕ್ತಿಯ ಕಾರಣಕ್ಕಾಗಿ ಪಕ್ಷ ತೊರೆದಿದ್ದಾಗಿ ಅವರೇ ಹೇಳುತ್ತಿದ್ದಾರೆ ಎಂದು ಈಶ್ವರಪ್ಪ ನೆನಪಿಸಿದರು. ಶೆಟ್ಟರ್‌ ಅವರು ಬಜರಂಗ ದಳ ನಿಷೇಧಿಸುವ ಕಾಂಗ್ರೆಸ್‌ ಪ್ರಸ್ತಾಪವನ್ನೂ ಸಮರ್ಥಿಸಿಲ್ಲ ಎಂದು ಅವರು ಹೇಳಿದರು.

ʻʻಮುಸಲ್ಮಾನರನ್ನು ತೃಪ್ತಿಪಡಿಸುವುದೇ ಕಾಂಗ್ರೆಸ್ ಕೆಲಸವಾಗಿದೆ. ಬಜರಂಗ ದಳವನ್ನು ನಿಷೇಧ ಮಾಡುವ ವಿಚಾರದಲ್ಲಿ ಅವರಲ್ಲೇ ಗೊಂದಲವಿದೆ. ಭಾರತದ ಸಂಸ್ಕೃತಿಯ ರಕ್ಷಣೆಗಿರುವ ಸಂಘಟನೆ ಬಜರಂಗ ದಳ. ಇಂಥ ಸಂಘಟನೆಯನ್ನು ಪಿಎಫ್‌ಐಗೆ ಹೋಲಿಸಿದ್ದು ದೊಡ್ಡ ದುರಂತ. ಹಿಂದುಗಳನ್ನು ಪಕ್ಕಕ್ಕೆ ಸರಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಎಐಸಿಸಿ ಅಧ್ಯಕ್ಷರು ಪ್ರಧಾನಿಗಳ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಮೋದಿಯವರನ್ನು ವಿಷಸರ್ಪಕ್ಕೆ ಹೋಲಿಸಿದಾಗಲೇ ಖರ್ಗೆ ಜೀವನದ ಸಾಧನೆ ಮಣ್ಣುಪಾಲಾಯಿತು. ಆನೆ ಗಾತ್ರದ ಮೋದಿಯವರ ಬಗ್ಗೆ ತಿಗಣೆ ಗಾತ್ರದ ಪ್ರಿಯಾಂಕ ಖರ್ಗೆ ಮಾತನಾಡುತ್ತಿದ್ದಾರೆʼʼ ಎಂದು ಈಶ್ವರಪ್ಪ ಲೇವಡಿ ಮಾಡಿದರು.

ಇದನ್ನೂ ಓದಿ : Modi in Karnataka : ಮೋದಿ ರೋಡ್‌ ಶೋ ನಡುವೆ ಕಾಂಗ್ರೆಸ್‌ನವರು ಆಂಬ್ಯುಲೆನ್ಸ್‌ ಬಿಟ್ಟು ಸೀನ್‌ ಕ್ರಿಯೇಟ್‌ ಮಾಡ್ತಾರಂತೆ!

Exit mobile version