Site icon Vistara News

Karnataka Elections : ನಡ್ಡಾ ಜತೆ ಶೆಟ್ಟರ್‌ ಖಡಕ್‌ ಮಾತು; ಟಿಕೆಟ್‌ ಸಿಗುವ ಆಶಾವಾದವಿದೆ ಎಂದ ಮಾಜಿ ಸಿಎಂ, 99% ಗ್ಯಾರಂಟಿ ಎಂದ ಬಿಎಸ್‌ವೈ

Nadda Shettar BSY

#image_title

ಬೆಂಗಳೂರು: ʻʻಈ ಬಾರಿ ನಿಮಗೆ ಟಿಕೆಟಿಲ್ಲ. ಬೇರೆಯವರಿಗೆ ಅವಕಾಶ ನೀಡುವುದಕ್ಕಾಗಿ ನೀವು ನಿವೃತ್ತಿ ಘೋಷಿಸಬೇಕುʼ ಎಂಬ ಹೈಕಮಾಂಡ್‌ ಸೂಚನೆಯಿಂದ (Karnataka Elections) ಕೆಂಡಾಮಂಡಲರಾಗಿರುವ ಧಾರವಾಡ ಸೆಂಟ್ರಲ್‌ ಕ್ಷೇತ್ರದ ಶಾಸಕ, ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ (Jagadish Shettar) ಅವರು ಬುಧವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವದೊಂದಿಗೆ ದಿಲ್ಲಿಯಲ್ಲಿ ಖಡಕ್‌ ಮಾತು ಆಡಿದ್ದಾರೆ. ಅವರಿಗೆ ಸ್ಪರ್ಧೆಯ ಅವಕಾಶ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಪತ್ರಿಕಾಗೋಷ್ಠಿ ನಡೆಸಿದ ಜಗದೀಶ್‌ ಶೆಟ್ಟರ್‌ ಅವರು, ʻʻನನಗೆ ಕ್ಷೇತ್ರವನ್ನು ಬೇರೆಯವರಿಗೆ ಬಿಟ್ಟುಕೊಡುವಂತೆ ಹೈಕಮಾಂಡ್‌ನಿಂದ ಸಂದೇಶ ಬಂದಿದೆ. ನಾನು ಯಾವ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ನಾನು ಇನ್ನೂ 10 ವರ್ಷ ಸಕ್ರಿಯ ಚುನಾವಣಾ ರಾಜಕೀಯದಲ್ಲಿರುತ್ತೇನೆ. ಪಕ್ಷದ ನಾಯಕರಲ್ಲಿ ಮಾತನಾಡುತ್ತೇನೆʼʼ ಎಂದು ಹೇಳಿದ್ದರು. ಪಕ್ಷದ ಟಿಕೆಟ್‌ ಸಿಗದಿದ್ದರೆ ಪಕ್ಷೇತರವಾಗಿಯಾದರೂ ಸ್ಪರ್ಧೆಗಿಳಿಯವುದು ಖಚಿತ ಎಂಬ ಸಂದೇಶ ನೀಡಿದ್ದರು.

ಈ ನಡುವೆ ಅವರಿಗೆ ದಿಲ್ಲಿಯಿಂದ ಮತ್ತೊಂದು ಕರೆ ಬಂದಿದ್ದು, ಬುಧವಾರ ಜೆ.ಪಿ. ನಡ್ಡಾ ಅವರೊಂದಿಗೆ ಮಾತುಕತೆಗೆ ಅಗಮಿಸುವಂತೆ ಸೂಚನೆ ನೀಡಿತ್ತು. ಜಗದೀಶ್‌ ಶೆಟ್ಟರ್‌ ಅವರಿಗೆ ಇನ್ನೂ 67 ವರ್ಷ. ಯಾವ ಕಾರಣಕ್ಕಾಗಿ ಟಿಕೆಟ್‌ ನಿರಾಕರಣ ಮಾಡಲಾಗುತ್ತಿದೆ ಎಂಬ ಚರ್ಚೆ ಎದ್ದಿತ್ತು.

ಬುಧವಾರ ಮುಂಜಾನೆಯೇ ಜಗದೀಶ್‌ ಶೆಟ್ಟರ್‌ ಅವರು ದಿಲ್ಲಿಗೆ ಧಾವಿಸಿದ್ದರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ನಡ್ಡಾ ಅವರನ್ನು ಭೇಟಿಯಾದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಶೆಟ್ಟರ್‌ ʻʻನನಗೆ ಟಿಕೆಟ್‌ ಸಿಗುವ ಆಶಾವಿದೆ. ಒಂದೊಮ್ಮೆ ಬಿಜೆಪಿ ಟಿಕೆಟ್‌ ಕೊಡದೇ ಹೋದರೂ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಹೇಳುವ ಮೂಲಕ ಪಕ್ಷೇತರನಾಗಿಯಾದರೂ ಕಣಕ್ಕಿಳಿಯುವ ಸಂದೇಶ ನೀಡಿದರು.

ʻʻನಾನು ಆಶಾವಾದಿಯಾಗಿದ್ದೇನೆ. ಚುನಾವಣೆಯಲ್ಲಿ ಸ್ಪರ್ಧಿಸಲೇಬೇಕು ಎಂಬ ನನ್ನ ಇಚ್ಛೆಯ ಬಗ್ಗೆ ನಾನು ಜೆ.ಪಿ. ನಡ್ಡಾ ಅವರಿಗೆ ತಿಳಿಸುವ ಮತ್ತು ಅರ್ಥ ಮಾಡಿಸುವ ಕೆಲಸವನ್ನು ನನ್ನ ಕೈಲಾದ ಮಟ್ಟಿಗೆ ಮಾಡಿದ್ದೇನೆ. ಅವರು ಪರಿಶೀಲಿಸುವ ಮತ್ತು ನಾಯಕತ್ವದ ಜತೆ ಮಾತನಾಡುವ ಭರವಸೆಯನ್ನು ನೀಡಿದ್ದಾರೆʼʼ ಎಂದು ಶೆಟ್ಟರ್‌ ಹೇಳಿದರು.

ʻʻನಾನು ನನ್ನ ಕ್ಷೇತ್ರದ ಜನರ ಜತೆ ಮಾತನಾಡಿದ್ದೇನೆ. ಅವರು ನಾನು ಚುನಾವಣೆಯಲ್ಲಿ ಸ್ಪರ್ಧಿಸಲೇಬೇಕು ಎಂದು ಬಯಸುತ್ತಿದ್ದಾರೆ. ಹಾಗಾಗಿ ನಾನು ಸ್ಪರ್ಧೆ ಮಾಡುವುದು ಖಚಿತʼʼ ಎಂದು ಶೆಟ್ಟರ್‌ ಸ್ಪಷ್ಟಪಡಿಸಿದರು.

ಬಿಜೆಪಿ ಮಂಗಳವಾರ ರಾತ್ರಿ ಬಿಡುಗಡೆ ಮಾಡಿದ 189 ಅಭ್ಯರ್ಥಿಗಳ ಪಟ್ಟಿಯಲ್ಲಿ ಧಾರವಾಡ ಸೆಂಟ್ರಲ್‌ ಹೆಸರಿಲ್ಲ. ಮುಂದಿನ ಒಂದೆರಡು ದಿನದಲ್ಲಿ ಎರಡನೇ ಪಟ್ಟಿ ಬಿಡುಗಡೆಯಾಗಲಿದ್ದು, ಅದರಲ್ಲಿ ಶೆಟ್ಟರ್‌ ಹೆಸರು ಬಂದರೆ ಸಮಸ್ಯೆ ಬಗೆಹರಿಯಲಿದೆ. ಇಲ್ಲವಾದರೆ ಶೆಟ್ಟರ್‌ ಪಕ್ಷೇತರರಾಗಿ ಸ್ಪರ್ಧಿಸುವುದು ಖಚಿತವಾಗಿದೆ.

ಶೆಟ್ಟರ್‌ಗೆ 99% ಟಿಕೆಟ್‌ ಗ್ಯಾರಂಟಿ ಎಂದ ಬಿ.ಎಸ್‌. ಯಡಿಯೂರಪ್ಪ

ಈ ನಡುವೆ ಜಗದೀಶ್‌ ಶೆಟ್ಟರ್‌ ಅವರಿಗೆ ಬಿಜೆಪಿ ಟಿಕೆಟ್‌ ಸಿಗುವುದು 99% ಗ್ಯಾರಂಟಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ.

ಇದನ್ನೂ ಓದಿ : Karnataka Elections : ಈಶ್ವರಪ್ಪ, ಶೆಟ್ಟರ್‌ ಫುಲ್‌ ಟೀಮ್‌ ತೆಗೀತೇವೆ; 20 ತಿಂಗಳ ಹಿಂದಿನ ನಳಿನ್‌ ಮಾತು ನಿಜವಾಯ್ತು! ಆಡಿಯೊ ಮತ್ತೆ ವೈರಲ್!

Exit mobile version