Site icon Vistara News

Karnataka Election: ಲಿಂಗಾಯತ ಮುಖ್ಯಮಂತ್ರಿಗಳೇ ರಾಜ್ಯವನ್ನು ಹಾಳು ಮಾಡಿದ್ದು ಎಂದ ಸಿದ್ದರಾಮಯ್ಯ: ಡ್ಯಾಮೇಜ್‌ ಕಂಟ್ರೋಲ್‌ ಪ್ರಯತ್ನ ಆರಂಭ

karnataka congress incharge surjewala defends siddaramaiah

Karnataka Congress: Siddaramaiah Said What Nehru Olekar Said: Randeep Singh Surjewala Defends.

ಮೈಸೂರು: ಸುದ್ದಿಗಾರರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಆಡಿದ ಮಾತಿನಿಂದ ಮಾಜಿ ಸಿಎಂ ಸಿದ್ದರಾಮಯ್ಯ ಈಗ ಪೇಚಿಗೆ ಸಿಲುಕಿದ್ದಾರೆ. ವೀರಶೈವ ಲಿಂಗಾಯತರು ಭ್ರಷ್ಟರು, ಅವರೇ ರಾಜ್ಯವನ್ನು ಹಾಳು ಮಾಡಿದರು ಎಂದಿದ್ದಾರೆ. ನಂತರ ವಿವಾದವಾಗುವುದನ್ನು ಕಂಡು ರಿಪೇರಿಗೆ ಮುಂದಾಗಿದ್ದಾರೆ.

ಮೈಸೂರಿನಲ್ಲಿ ಪ್ರಚಾರದಲ್ಲಿದ್ದ ಸಂದರ್ಭದಲ್ಲಿ ವಾಹಿನಿಯೊಂದರ ಜತೆಗೆ ಸಿದ್ದರಾಮಯ್ಯ ಮಾತನಾಡಿದ್ದಾರೆ. ಲಿಂಗಾಯತ ಸಿಎಂ ಮಾಡಿ ಎಂದು ಕಾಂಗ್ರೆಸ್‌ಗೆ ಬಿಜೆಪಿ ಸವಾಲು ಹಾಕುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿ, “ಈಗಾಗಲೆ ಇಷ್ಟು ಚೀಫ್‌ ಮಿನಿಸ್ಟರ್‌ ಇದಾರಲ್ಲ? ಅವರೇ ಎಲ್ಲ ಭ್ರಷ್ಟಾಚಾರ ಮಾಡಿ ಹಾಳು ಮಾಡಿರುವುದು ರಾಜ್ಯವನ್ನು” ಎಂದು ಹೇಳಿದ್ದರು.

ಈ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಬಿಜೆಪಿಯೂ ಇದನ್ನು ಅಸ್ತ್ರವಾಗಿ ಬಳಸಿಕೊಳ್ಳಲು ಆರಂಭಿಸಿದೆ. ರಾಜ್ಯ ಬಿಜೆಪಿ ಟ್ವಿಟರ್‌ನಲ್ಲಿ ಈ ವಿಡಿಯೊವನ್ನು ಹಂಚಿಕೊಂಡು, “ಈ ಹಿಂದೆ ವೀರಶೈವ ಲಿಂಗಾಯತ ಸಮಾಜವನ್ನು ಒಡೆಯಲು ಯತ್ನಿಸಿದ ಸಿದ್ದರಾಮಯ್ಯ ಈಗ ಆ ಸಮುದಾಯದವರೆಲ್ಲ ಭ್ರಷ್ಟರು, ರಾಜ್ಯವನ್ನು ಹಾಳುಗೆಡವುವವರು ಎಂಬ ಸಂವೇದನಾರಹಿತ ದ್ವೇಷಪೂರಿತ ಹೇಳಿಕೆ ನೀಡಿರುವುದು ಅಕ್ಷಮ್ಯ. ಜಗದ್ಗುರು ಬಸವಣ್ಣನ ಆದರ್ಶ ಪಾಲಿಸುವ 7 ಕೋಟಿ ಕನ್ನಡಿಗರು, ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ. #LingayatVirodhiCongress” ಎಂದು ಹೇಳಿದೆ.

ಈ ವಿಚಾರ ಎಲ್ಲೆಡೆ ಹಬ್ಬುತ್ತಿರುವಂತೆ ಮತ್ತೆ ಮಾಧ್ಯಮಗಳಿಗೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸುವಾಗ, ಬಿಜೆಪಿಯವರು ಲಿಂಗಾಯತ ಅಸ್ತ್ರವನ್ನು ಪ್ರಯೋಗ ಮಾಡುತ್ತಿದ್ದಾರೆ ಎಂದು ಹೇಳಿದ್ದೆ. ನಾನು ಬಸವರಾಜ ಬೊಮ್ಮಾಯಿ ಅವರಿಗೆ ಸೀಮಿತವಾಗಿ ಭ್ರಷ್ಟ ಎಂದು ಹೇಳಿದ್ದೆ, ಲಿಂಗಾಯತರು ಭ್ತಷ್ಟರು ಎಂದು ಎಲ್ಲಿಯೂ ಹೇಳಿಲ್ಲ. ಇದನ್ನು ವರದಿ ಮಾಡಿರುವುದು ಸರಿಯಾಗಿಲ್ಲ.

ಲಿಂಗಾಯತರಲ್ಲಿ ಬಹಳಷ್ಟು ಮಂದಿ ಮುಖ್ಯಮಂತ್ರಿಗಳು ಅತ್ಯಂತ ಪ್ರಾಮಾಣಿಕರಿದ್ದರು. ವೀರೇಂದ್ರ ಪಾಟೀಲರು, ನಿಜಲಿಂಗಪ್ಪನವರು, ಜೆ.ಹೆಚ್ ಪಟೇಲರು ಇವರೆಲ್ಲ ಪ್ರಾಮಾಣಿಕರಾಗಿದ್ದರು. ಆದರೆ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭ್ರಷ್ಟರಿದ್ದಾರೆ ಎಂದು ಹೇಳಿದ್ದೆ.

ಬಿಜೆಪಿಯವರು ನನ್ನ ಹೇಳಿಕೆಯನ್ನು ಕಟ್ ಮಾಡಿ ಸೇರಿಸಿ, ತಮಗೆ ಬೇಕಾದಂತೆ ತಿರುಚಿ ಚುನಾವಣೆ ಸಂದರ್ಭವಿರುವುದರಿಂದ ಅದರ ಲಾಭ ಪಡೆಯಲು ಪ್ರಯತ್ನ ಮಾಡುತ್ತಿದ್ದಾರೆ. ನನಗೆ ಲಿಂಗಾಯತ ಸಮುದಾಯದ ಬಗ್ಗೆ ಅಪಾರವಾದ ಗೌರವವಿದೆ. ಹಿಂದೆ ಬಹಳ ಜನ ಲಿಂಗಾಯತರು ಪ್ರಾಮಾಣಿಕ ಮುಖ್ಯಮಂತ್ರಿಗಳಾಗಿ ಕೆಲಸ ಮಾಡಿದ್ದರು ಆದರೆ ಬೊಮ್ಮಾಯಿ ಮಾತ್ರ ಭ್ರಷ್ಟರಾಗಿದ್ದಾರೆ.

ಲಿಂಗಾಯತರ ಬಗ್ಗೆ ನಮಗೆ ಗೌರವ ಇರುವುದರಿಂದಲೇ ಹೆಚ್ಚು ಟಿಕೆಟನ್ನು ಅವರಿಗೆ ನೀಡಿದ್ದೇವೆ. ಕಳೆದ ಬಾರಿ 47 ಲಿಂಗಾಯತ ಅಭ್ಯರ್ಥಿಗಳಿಗೆ ಪಕ್ಷದ ಟಿಕೆಟ್ ನೀಡಿದ್ದೆವು, ಈ ಬಾರಿ ಅದಕ್ಕಿಂತ ಹೆಚ್ಚು ಅಂದರೆ ಸುಮಾರು 52 – 53 ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿದ್ದೇವೆ. ನಮ್ಮಲ್ಲಿ ಜಾತಿ ಮೇಲೆ ಮುಖ್ಯಮಂತ್ರಿಯ ತೀರ್ಮಾನ ಮಾಡುವುದಿಲ್ಲ. ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಇದು ನಮ್ಮಲ್ಲಿ ನಡೆದುಕೊಂಡುಬಂದ ಪದ್ಧತಿ. ಬಿಜೆಪಿಯವರು ಜಾತಿ ಮೇಲೆ ಮಾಡಿದರೆ ನಾವೇನು ಮಾಡೋಕಾಗಲ್ಲ. ಲಿಂಗಾಯತರೆಲ್ಲ ಭ್ರಷ್ಟರೆಂದು ನಾನು ಹೇಳಿಯೇ ಇಲ್ಲ. ರಾಜಕೀಯ ದುರುದ್ದೇಶದಿಂದ ನನ್ನ ಹೇಳಿಕೆಯನ್ನು ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಕಳೆದ ಚುನಾವಣೆ ಸಮಯದಲ್ಲಿ, ವೀರಶೈವ ಲಿಂಗಾಯತ ಸಮುದಾಯವನ್ನು ಒಡೆಯಲು ಮುಂದಾಗಿದ್ದರು ಎಂಬ ಆರೋಪ ಈಗಾಗಲೆ ಸಿದ್ದರಾಮಯ್ಯ ಅವರ ಮೇಲಿದೆ. ಇದೀಘ ಹೊಸ ವಿವಾದ ಹೆಗಲೇರಿದೆ.

ಇದನ್ನೂ ಓದಿ: Karnataka Congress: ಬಿಜೆಪಿ ಅಣೆಕಟ್ಟೆ ಒಡೆದಿದೆ; ವೀರಶೈವ ಲಿಂಗಾಯತರು ಕಾಂಗ್ರೆಸ್‌ ಸೇರುವುದನ್ನು ತಡೆಯಲಾಗದು: ಡಿಕೆಶಿ

Exit mobile version