ಬೆಂಗಳೂರು: ನಗರದ ಅಗ್ರಹಾರ ಬಡಾವಣೆಯಲ್ಲಿರುವ ಬಿಜೆಪಿ ನಾಯಕ ಮುನಿರಾಜು ಅವರ ಮನೆಗೆ ಚುನಾವಣೆ (Karnataka Elections) ಸಂಬಂಧಿತ ಫ್ಲೈಯಿಂಗ್ ಸ್ವ್ಕಾಡ್ ಮತ್ತು ಜಿಎಸ್ ಟಿ ಆಧಿಕಾರಿಗಳು ದಾಳಿ ನಡೆಸಿದ್ದಾರೆ. ಹಲವು ತಂಡಗಳಾಗಿ ಅಧಿಕಾರಿಗಳು ದಾಳಿ ನಡೆಸಿದ್ದು, ಮನೆಯಲ್ಲಿ ಸೀರೆ ಮತ್ತು ದೊಡ್ಡ ಮೊತ್ತ ಗಿಫ್ಟ್ ವಸ್ತುಗಳು ಪತ್ತೆಯಾಗಿವೆ. ಒಂದು ಹಂತದಲ್ಲಿ ಇಲ್ಲಿ ನಕಲಿ ವೋಟರ್ ಐಡಿಗಳನ್ನು ಪ್ರಿಂಟ್ ಮಾಡುವ ಬಗ್ಗೆ ಆಪಾದನೆಗಳು ಕೇಳಿಬಂದಿದ್ದವು. ಆದರೆ, ನಂತರ ಅದು ನಿಜವಲ್ಲ ಎಂದು ಅಧಿಕಾರಿಗಳು ತಿಳಿಸಿದರು.
ಮನೆಯಲ್ಲಿ ದೊಡ್ಡ ಪ್ರಮಾಣದ ಸೀರೆ ಮತ್ತು ಗಿಫ್ಟ್‌ಗಳು ಸಿಕ್ಕಿದ್ದು, ಇದು ಚುನಾವಣೆಯಲ್ಲಿ ಹಂಚಲು ತಂದಿಟ್ಟಿರಬಹುದು ಎನ್ನುವುದು ಬಲವಾದ ಗುಮಾನಿಯಾಗಿದೆ. ಜಿಎಸ್‌ಟಿ ಅಧಿಕಾರಿಗಳು ಸೀರೆ ಮತ್ತು ಉಡುಗೊರೆಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು, ಸೀರೆ ಎಲ್ಲಿಂದ ತಗೊಂಡು ಬಂದ್ರಿ? ಸೀರೆ ತಂದಿದ್ದಕ್ಕೆ ಬಿಲ್ ಇದೆಯಾ? ನಿಮ್ಮ ಜಿಎಸ್ಟಿ ಬಿಲ್ ಇದೆಯಾ? ಚುನಾವಣೆ ಸಮಯದಲ್ಲಿ ಯಾಕೆ ಸೀರೆ ಶೇಖರಿಸಿದ್ದೀರಿ ಎಂಬ ಪ್ರಶ್ನೆಗಳೊಂದಿಗೆ, ಯಾರಿಗಾದರು ಹಂಚಲು ಸೀರೆಯನ್ನು ತಂದಿದ್ರಾ ಎನ್ನುವ ಪ್ರಶ್ನೆ ಕೇಳಿದ್ದಾರೆ.
ಅಧಿಕಾರಿಗಳ ಇಷ್ಟು ಪ್ರಶ್ನೆಗೆ ಉತ್ತರ ನೀಡಿರುವ ಮುನಿರಾಜು, ʻನಮ್ಮದು ಎಸ್ ಎಲ್ ವಿ ಎಂಟರ್ ಪ್ರೈಸಸ್ ಅನ್ನೋ ರಿಜಿಸ್ಟರ್ ಜಿಎಸ್ ಟಿ ಇದೆ. ನಾವು ಸೀರೆ ತಂದು ಮಾರಾಟ ಮತ್ತು ಪೂರೈಕೆ ಮಾಡುತ್ತೇವೆ. ಇದ್ಯಾವುದು ಚುನಾವಣಾ ಉದ್ದೇಶಕ್ಕೆ ತಂದಿರೋದಲ್ಲ. ಸೀರೆ ಖರೀದಿಗೆ ಸಂಬಂಧಿಸಿದಂತೆ ನಮ್ಮ ಬಳಿ ಜಿಎಸ್ ಟಿ ಬಿಲ್ ಇದೆʼʼ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ನೋಡಲ್ ಆಫೀಸರ್ ಸತೀಶ್ ಕುಮಾರ್ ನೇತೃತ್ವದಲ್ಲಿ ಪರಿಶೀಲನೆ ನಡೆಯುತ್ತಿದ್ದು, ಸುಮಾರು 25 ಜನ ಅಧಿಕಾರಿಗಳು ಭಾಗಿಯಾಗಿದ್ದಾರೆ.
ಮುನಿರಾಜು ಮನೆಯಲ್ಲಿ ವೋಟರ್ ಐಡಿಗೆ ಸಂಬಂಧಿಸಿ ಕೆಲವು ಫಾರ್ಮ್‌ಗಳು ಪತ್ತೆಯಾಗಿವೆ. ʻʻವೋಟರ್ ಐಡಿ ಇಲ್ಲದೆ ಇರುವವರಿಗೆ ವೋಟರ್ ಐಡಿ ಮಾಡಲು ಸಹಾಯ ಮಾಡುತ್ತೇವೆ. ಯಾರು ವೋಟರ್ ಐಡಿ ಬೇಕು ಅಂತಾ ಬರ್ತಾರೋ ಅವರ ಫಾರ್ಮ್ ಫಿಲ್ ಮಾಡಿ ಫೋಟೊ ಅಂಟಿಸಿ ಕೊಡುತ್ತೇವೆ. ಇದು ಯಾವುದೇ ರೀತಿಯ ಕಾನೂನು ಬಾಹಿರ ಕೃತ್ಯ ಅಲ್ಲ. ನಾವು ಅಪ್ಲೋಡ್ ಮಾಡಿದ ಫಾರ್ಮ್‌ಗಳನ್ನು ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆʼʼ ಎಂದು ವಿವರಿಸಿದ್ದಾರೆ. ವೋಟರ್ ಫಾರಂ ಅಲ್ಲಿ ಯಾವುದೇ ರೀತಿಯ ಅಕ್ರಮ ಸದ್ಯ ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುನಿರಾಜು ಬಿಜೆಪಿ ಟಿಕೆಟ್ ಆಕಾಂಕ್ಷಿ ಮುನೀಂದ್ರ ಕುಮಾರ್ ಅವರ ಆಪ್ತ. ಇತ್ತೀಚೆಗೆ ಮುನೀಂದ್ರ ಕುಮಾರ್ ಅವರಿಗೆ ಸೇರಿದ ಶಾಲೆಗೆ ಜಿಎಸ್‌ಟಿ ದಾಳಿ ನಡೆದಿತ್ತು.
ಇದನ್ನೂ ಓದಿ ; Mysore News: 5 ವರ್ಷದ ನಂತರ ನಮ್ಮೂರು ನೆನಪಾಯ್ತಾ; ಬಿಜೆಪಿ ಶಾಸಕ ಹರ್ಷವರ್ಧನ್ಗೆ ಜನರಿಂದ ಹಿಗ್ಗಾಮುಗ್ಗಾ ತರಾಟೆ