ಮೈಸೂರು/ಬೆಂಗಳೂರು: ಜ್ವರದಿಂದ ಬಳಲಿ ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆದ ಮರುದಿನವೇ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಮತ್ತೆ ವಿಧಾನಸಭಾ ಚುನಾವಣಾ (Karnataka Election) ಪ್ರಚಾರದ ಕಣಕ್ಕೆ ಇಳಿದಿದ್ದಾರೆ. ಸೋಮವಾರ ಸಂಜೆಯಷ್ಟೇ ಮಣಿಪಾಲ್ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಅವರಿಗೆ ಮೂರು ದಿನಗಳ ಕಾಲವಾದರೂ ವಿಶ್ರಾಂತಿ ಪಡೆಯಬೇಕು ಎಂದು ವೈದ್ಯರು ಸೂಚಿಸಿದ್ದರು. ಆದರೆ, ಎಚ್.ಡಿ ಕುಮಾರಸ್ವಾಮಿ ಅವರು ಮಾತ್ರ ಮಂಗಳವಾರ ಮುಂಜಾನೆಯೇ ಮೈಸೂರು ತಲುಪಿದ್ದಾರೆ.
ಮಂಗಳವಾರ ಬೆಳಗ್ಗೆ ಪದ್ಮನಾಭ ನಗರದ ಮನೆ ಸಮೀಪ ಮಾಧ್ಯಮಗಳ ಜತೆ ಮಾತನಾಡಿದ ಅವರು, ವೈದ್ಯರು ಮೂರು ದಿನ ವಿಶ್ರಾಂತಿ ಪಡೆಯಲು ಸೂಚಿಸಿದರು. ಆದರೆ ನಾನು ವಿಶ್ರಾಂತಿ ಪಡೆಯುವ ಸ್ಥಿತಿಯಲ್ಲಿ ಇಲ್ಲ. ಇವತ್ತು ಕೆ.ಆರ್.ಕ್ಷೇತ್ರ, ಚಾಮರಾಜ ಮತ್ತು ವರುಣಾ ಕ್ಷೇತ್ರದಲ್ಲಿ ಪ್ರಚಾರ ಸಭೆ ಕರೆದಿದ್ದೇನೆ. ಇವತ್ತಿನಿಂದ ಮೇ 8 ರವರೆಗೆ ನಿರಂತರ ಕಾರ್ಯಕ್ರಮಗಳಿ ಚಾಲನೆ ಕೊಡ್ತಿದ್ದೇನೆ ಎಂದು ಹೇಳಿದರು.
ʻʻನನ್ನ ಆರೋಗ್ಯದ ಬಗ್ಗೆ ದೇವೇಗೌಡರಿಗೆ ಸ್ವಲ್ಪ ಆತಂಕ ಇದೆ. ನಿನ್ನೆಯಿಂದ ಶಿರಾ, ಮಧುಗಿರಿ, ಕೊರಟಗೆರೆ ಸಭೆಯಲ್ಲಿ ಬಿಸಿಲಿನಲ್ಲೇ ಭಾಗಿಯಾಗಿದ್ದಾರೆ. ಇವತ್ತು ಪಿರಿಯಾಪಟ್ಟಣ, ಕೆ.ಆರ್. ನಗರಕ್ಕೆ ಹೊರಟಿದ್ದಾರೆ ನಮ್ಮ 123 ಗುರಿ ಮುಟ್ಟಲು ಇಳಿ ವಯಸ್ಸಿನಲ್ಲೂ ಶ್ರಮ ಹಾಕುತ್ತಿದ್ದಾರೆʼʼ ಎಂದು ಎಚ್.ಡಿ ದೇವೇಗೌಡರ ಬಗ್ಗೆ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ರಾಮನಗರದಲ್ಲಿ ಪ್ರಚಾರ ಕಾರ್ಯಕ್ರಮ ಆಯೋಜಿಸಿರುವ ಬಗ್ಗೆ ಪ್ರಸ್ತಾಪಿಸಿದ ಅವರು, ʻʻಪ್ರಧಾನಿಯನ್ನಾದರೂ ಕರೆಸಿಕೊಳ್ಳಲಿ. ಅಮೆರಿಕ ಅಧ್ಯಕ್ಷನನ್ನಾದರೂ ಕರೆಸಿಕೊಳ್ಳಲಿ. ನನಗೇನೂ ಆತಂಕ ಇಲ್ಲ, ಒಂದು ದಿನ ಭಾಷಣ ಮಾಡಿ ಹೋಗೋದಲ್ವಾ? ಚನ್ನಪಟ್ಟಣಕ್ಕೆ ಮಂಡ್ಯ, ತುಮಕೂರು, ಮೈಸೂರಿನಿಂದ ಜನ ಸೇರಿಸಬಹುದು. ಒಂದು ದಿನ ಜಾತ್ರೆ ಮಾಡಿ ಹೋಗಬಹುದು. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಮಾಡುತ್ತಾರೆ. ಅದನ್ನ ಹೊರತುಪಡಿಸಿ ಜನರಿಗೆ ಅನುಕೂಲ ಆಗುವ ಕಾರ್ಯಕ್ರಮ ಮಾಡ್ತಾರಾ?ʼʼ ಎಂದು ಪ್ರಶ್ನಿಸಿದರು.
ʻʻಅಮಿತ್ ಶಾ ರೋಡ್ ಶೋ ಕೂಡ ಗಮನಿಸಿದ್ದೇನೆ. ನಾನು ನಾಲ್ಕು ತಿಂಗಳಿನಿಂದ ನಡೆಸುತ್ತಿರುವ ರೋಡ್ ಶೋ ಮುಂದೆ ಇದೇನಿಲ್ಲ. ಬಿಜೆಪಿ, ಕಾಂಗ್ರೆಸ್ ರೋಡ್ ಶೋಗಳು ಏನೇನೂ ಅಲ್ಲ. ನನ್ನ ಕಾರ್ಯಕ್ರಮದ ವಿಶೇಷತೆಗಳೆ ಬೇರೆಯಾಗಿತ್ತು. ಅವರ ಕಾರ್ಯಕ್ರಮ ನನ್ನ ಕಾರ್ಯಕ್ರಮಕ್ಕೆ ಸರಿಸಾಟಿ ಅಲ್ಲʼʼ ಎಂದರು ಕುಮಾರಸ್ವಾಮಿ.
ಭ್ರಷ್ಟಾಚಾರದ ವಿಷಯ ನಮಗೆ ಸಂಬಂಧವಿಲ್ಲ
ಲಿಂಗಾಯತ ಮುಖ್ಯಮಂತ್ರಿಗಳು ಮತ್ತು ಭ್ರಷ್ಟಾಚಾರದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಆಡಿದ ಮಾತಿನ ಬಗ್ಗೆ ಪ್ರಶ್ನಿಸಿದಾಗ, ʻʻಅದೆಲ್ಲ ದೊಡ್ಡವರ ವಿಚಾರ.. ನಮಗ್ಯಾಕೆ? ಭ್ರಷ್ಟಾಚಾರದ ಬಗ್ಗೆ ನಾನ್ಯಾಕೆ ಮಾತಾಡ್ಲಿ? ಇಬ್ಬರು ಸೇರಿ ಮಾತನಾಡಿಕೊಳ್ತಿದ್ದಾರೆ. ಅವರಿಗೆ ಬಿಟ್ಟುಬಿಡೋಣ. ನಮ್ಮ ಬಗ್ಗೆ ಭ್ರಷ್ಟಾಚಾರ ವಿಷಯದಲ್ಲಿ ಯಾರೂ ಪ್ರಶ್ನೆ ಮಾಡಿಲ್ಲʼʼ ಎಂದರು.
ಚಾಮುಂಡೇಶ್ವರಿ ದರ್ಶನ ಮಾಡಿದ ಕುಮಾರಸ್ವಾಮಿ
ಕುಮಾರಸ್ವಾಮಿ ಅವರು ಮಂಗಳವಾರ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ನಾಡದೇವತೆಯ ದರ್ಶನ ಪಡೆದರು. ಶಾಸಕರಾದ ಜಿ.ಟಿ. ದೇವೇಗೌಡ, ಸಾ.ರಾ.ಮಹೇಶ್, ಎಂಎಲ್ಸಿ ಸಿ.ಎನ್.ಮಂಜೇಗೌಡ ಸೇರಿ ಹಲವರು ಮುಖಂಡರು ಸಾಥ್ ನೀಡಿದರು.
ಕುಮಾರಸ್ವಾಮಿ ಅವರು ಮಂಗಳವಾರ ಕೃಷ್ಣರಾಜ, ಚಾಮರಾಜ ಮತ್ತು ಅತ್ಯಂತ ಪ್ರಮುಖವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸ್ಪರ್ಧಿಸುತ್ತಿರುವ ವರುಣದಲ್ಲಿ ಪ್ರಚಾರ ನಡೆಸುವುದು ವಿಶೇಷವಾಗಿದೆ. ಮಧ್ಯಾಹ್ನ ಒಂದು ಗಂಟೆಗೆ ಚಾಮರಾಜ ಕ್ಷೇತ್ರದಲ್ಲಿ, ಮೂರು ಗಂಟೆಗೆ ವರುಣ ಕ್ಷೇತ್ರದಲ್ಲಿ ಪ್ರಚಾರ ನಡೆಸುವರು. ಇಲ್ಲಿ ರೋಡ್ ಶೋ ಮತ್ತು ಬಹಿರಂಗ ಸಭೆಗಳು ಇರಲಿವೆ.
ಇದನ್ನೂ ಓದಿ : Amit Shah: ಬಿಜೆಪಿಯವರು ಅಮೆರಿಕ ಪ್ರೆಸಿಡೆಂಟನ್ನೇ ಕರ್ಕೊಂಡು ಬರಲಿ; ನಮಗೆ ದೇವೇಗೌಡ, ಕುಮಾರಸ್ವಾಮಿಯೇ ಚಾಣಕ್ಯ: ಎಚ್.ಡಿ. ರೇವಣ್ಣ