Site icon Vistara News

Karnataka Election : ಬಿಜೆಪಿ, ಕಾಂಗ್ರೆಸ್‌ ರೀತಿ ದುಡ್ಡು ಇದ್ದಿದ್ದರೆ ನಾನೂ 150-160 ಕ್ಷೇತ್ರ ಗೆಲ್ಲುತ್ತಿದ್ದೆ ಎಂದ ಎಚ್‌ಡಿಕೆ

If I had money i would have won 150-160 Seats, says HDK

If I had money i would have won 150-160 Seats, says HDK

ಮೈಸೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ (Karnataka Election 2023) ಗೆಲ್ಲಲು ಎಲ್ಲಕ್ಕಿಂತ ಮುಖ್ಯವಾಗಿ ಬೇಕಾಗಿರುವುದು ಹಣ ಎನ್ನುವುದನ್ನು ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಒಪ್ಪಿಕೊಂಡಿದ್ದಾರೆ. ಒಂದು ವೇಳೆ ಕಾಂಗ್ರೆಸ್‌, ಬಿಜೆಪಿ ರೀತಿ ದುಡ್ಡು ಇದ್ದರೆ ಈ ಚುನಾವಣೆಯಲ್ಲೇ 150-160 ಕ್ಷೇತ್ರಗಳಲ್ಲಿ ಗೆಲ್ಲುತ್ತಿದ್ದೆ ಎಂದು ಅವರು ಹೇಳಿದ್ದಾರೆ.

ಅವರು ಮೈಸೂರಿನ ತಿ. ನರಸೀಪುರ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿರುವ ಅಶ್ವಿನ್‌ ಕುಮಾರ್‌ ಪರವಾಗಿ ಮತಯಾಚನೆ ಮಾಡುವ ವೇಳೆ ಅವರು ರಾಜಕೀಯ ಕಥೆ ತೆರೆದಿಟ್ಟರು!

ಬನ್ನೂರಿನಲ್ಲಿ ತೀ. ನರಸೀಪುರ ಕ್ಷೇತ್ರದ ಅಭ್ಯರ್ಥಿ ಅಶ್ವಿನಿ ಕುಮಾರ್‌ ಪರ ಪ್ರಚಾರ

ʻʻಬಿಜೆಪಿ, ಕಾಂಗ್ರೆಸ್ ರೀತಿ ದುಡ್ಡು ಇದ್ದರೆ 150-160 ಕ್ಷೇತ್ರ ಗೆಲ್ಲುತ್ತಿದ್ದೆ. ನಾವು ಸುಮಾರು 30 ಕ್ಷೇತ್ರಗಳಲ್ಲಿ 500ರಿಂದ 3000 ಸಾವಿರ ವೋಟಿನಲ್ಲಿ ಅಂತರದಲ್ಲಿ ಸೋಲುತ್ತೇವೆ. ಇದಕ್ಕೆ ಕಾರಣ ನಮ್ಮ ಬಳಿ ಹಣ ಇಲ್ಲದಿರುವುದು. ಅಶ್ವಿನ್ ಕುಮಾರ್ ಬಳಿ ಹಣ ಇಲ್ಲ. ನಾವೂ ಅಷ್ಟೋ ಇಷ್ಟೋ ದುಡ್ಡು ಕೊಡಬಹುದು. ನಾನು ಕೊಡೋದು ಯಾವುದಕ್ಕೂ ಸಾಲುವುದಿಲ್ಲ. ಕಾಂಗ್ರೆಸ್‌ನವರಷ್ಟು ದುಡ್ಡಿಗೆ ಅಶ್ವಿನ್ ಮ್ಯಾಚ್ ಮಾಡಲಾರರುʼʼ ಎಂದು ಕುಮಾರಸ್ವಾಮಿ ಹೇಳಿದರು.

ತಿ. ನರಸೀಪುರದ ಜನ ದುಡ್ಡಿಗೆ ಮರುಳಾಗಲ್ಲ ಎಂದ ಎಚ್‌ಡಿಕೆ

ದುಡ್ಡು ಇಲ್ಲದೇ ಇದ್ದರೂ ತಿ. ನರಸೀಪುರದಲ್ಲಿ ಅಶ್ವಿನಿಕುಮಾರ್‌ ಅವರೇ ಗೆಲ್ಲುತ್ತಾರೆ. ಇದಕ್ಕೆ ಕಾರಣ ಇಲ್ಲಿನ ಜನರು ದುಡ್ಡಿಗೆ ಮರುಳಾಗುವುದಿಲ್ಲ. ಬದಲಾಗಿ ಅಶ್ವಿನಿ ಕುಮಾರ್‌ ಅವರ ಒಳ್ಳೆಯತನಕ್ಕೆ ಮತ ಹಾಕುತ್ತಾರೆ ಎಂದು ಹೇಳಿದ ಕುಮಾರಸ್ವಾಮಿ ಅವರು, ʻʻತಿ.ನರಸೀಪುರದಲ್ಲಿ ಪಂಚರತ್ನ ಯಾತ್ರೆ ಮಾಡಿದ್ದೇನೆ. ದೇವೇಗೌಡರು ಬಂದು ಮತ ಕೇಳಿದ್ದಾರೆ. ನಾನು ಬರುವ ಅವಶ್ಯಕತೆಯೇ ಇರಲಿಲ್ಲ. ನಾನು ಬರದೇ ಇದ್ದರೂ ಗೆಲ್ಲುತ್ತೀಯ ಅಂತ ಹೇಳಿದ್ದೆ.
ನೀನು ಮನೆ ಮಗನಂತೆ ಇದ್ದೀಯ. ಅದೇ ರೀತಿ ಜೀವನ ಪೂರ್ತಿ ಹೀಗೇ ಇರುʼʼ ಎಂದು ಹೇಳಿದ್ದೇನೆ ಎಂದರು.

ʻʻಕಾಂಗ್ರೆಸ್, ಬಿಜೆಪಿ ಜತೆ ಸರ್ಕಾರ ಮಾಡಿದರೆ ನಮಗೆ ನಮ್ಮ ಯೋಜನೆ ಜಾರಿಗೆ ಕಷ್ಟವಾಗುತ್ತದೆ. ಒಮ್ಮೆ ಸ್ವತಂತ್ರ ಸರ್ಕಾರ ಕೊಟ್ಟರೆ ಮಾತ್ರ ಅಭಿವೃದ್ಧಿ ಸಾಧ್ಯ. ಯುವಜನರು, ರೈತರು, ವಿಧವೆಯರು ಎಲ್ಲರಿಗೂ ಅನುಕೂಲ ಆಗುವಂತೆ ಮಾಡುತ್ತೇನೆ. ಬಡತನ ಹೋಗಲಾಡಿಸಲು ಸ್ಪಷ್ಟ ಬಹುಮತ ಕೇಳುತ್ತಿದ್ದೇನೆʼʼ ಎಂದರು ಕುಮಾರಸ್ವಾಮಿ.

ಕಷ್ಟ ಕಾಲದಲ್ಲಿ ಯಾರೂ ಬರಲಿಲ್ಲ

ʻʻಉತ್ತರ ಭಾರತದ ದೊಡ್ಡ ನಾಯಕರು, ಪ್ರಧಾನಿ, ಮಂತ್ರಿಗಳು ನಿತ್ಯ ಬಂದು ಹೋಗುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಕೋವಿಡ್ ಸಮಸ್ಯೆ ಉಲ್ಬಣಿಸಿದಾಗ, ರೈತರ ಆತ್ಮಹತ್ಯೆ, ಪ್ರವಾಹ ಪರಿಸ್ಥಿತಿ ಎದುರಾದಾಗ ಯಾರೂ ಬರಲಿಲ್ಲʼʼ ಎಂದು ಹೇಳಿದ ಕುಮಾರಸ್ವಾಮಿ ಅವರು, ʻʻಎರಡೂ ರಾಷ್ಟ್ರೀಯ ಪಕ್ಷಗಳು ನಮ್ಮ ನಾಡಿನ ಬೇಡಿಕೆಗಳನ್ನು ಈಡೇರಿಸಿಲ್ಲ. ನಮ್ಮ ನಾಡಿನ ಬಗ್ಗೆ ತಾರತಮ್ಯ ಧೋರಣೆ ತೋರಿದ್ದಾರೆʼʼ ಎಂದರು. ರಾಜ್ಯಕ್ಕೆ ಪ್ರಾದೇಶಿಕ ಅಸ್ಮಿತೆಯ ಅಗತ್ಯ ಇದೆ ಎಂದು ಪ್ರತಿಪಾದಿಸಿದರು ಕುಮಾರಸ್ವಾಮಿ.

ಇದನ್ನೂ ಓದಿ : Karnataka Election: ಆಶೀರ್ವಾದ ಮಾಡಿ, ಐದು ವರ್ಷದಲ್ಲಿ ಋಣ ತೀರಿಸುತ್ತೇನೆ: ಎಚ್.ಡಿ. ಕುಮಾರಸ್ವಾಮಿ

Exit mobile version