Site icon Vistara News

Karnataka Election: ಉರಿಗೌಡ-ನಂಜೇಗೌಡ ವಿವಾದವನ್ನು BJPಗೇ ತಿರುಗು ಬಾಣವಾಗಿಸಲು JDS ತಂತ್ರ

tipu sultan Urigoda nanjegowda movie in dilema

#image_title

ಬೆಂಗಳೂರು: ಟಿಪ್ಪು ಸುಲ್ತಾನನನ್ನು ಕೊಂದವರು ಎಂದು ಬಿಜೆಪಿ ಹೇಳುತ್ತಿರುವ ಉರಿಗೌಡ ಹಾಗೂ ನಂಜೇಗೌಡ ವಿಚಾರವನ್ನು ಬಿಜೆಪಿಗೇ ತಿರುಗು ಬಾಣವಾಗಿಸಲು ಜೆಡಿಎಸ್‌ ಮುಂದಾಗಿದೆ. ಟಿಪ್ಪು ಸುಲ್ತಾನನನ್ನು ಕೊಂದ ವೀರರು ಎಂದು ಬಿಜೆಪಿ ಹೇಳಿದರೆ, ಟಿಪ್ಪುವನ್ನು ಕೊಂದವರು ಎಂಬ ಕಳಂಕವನ್ನು ಒಕ್ಕಲಿಗರಿಗೆ ಕಟ್ಟಲು ಬಿಜೆಪಿ ಮುಂದಾಗಿದೆ ಎಂದು ಜೆಡಿಎಸ್‌ ಹೊಸ ಪ್ರಚಾರ ಆರಂಭಿಸಿದೆ. ಇದೆಲ್ಲದರ ನಡುವೆ ಉರಿಗೌಡ ನಂಜೇಗೌಡ ವಿಚಾರದಲ್ಲಿ ಕಾಂಗ್ರೆಸ್‌ ಯಾವುದೇ ಆಕ್ರಮಣಶಿಲತೆ ತೋರದೆ ಸೈಲೆಂಟ್‌ ಆಗಿದೆ.

ಟಿಪ್ಪುವನ್ನು ಕೊಂದಿದ್ದು ಬ್ರಿಟಿಷರು ಎನ್ನುವ ಇಲ್ಲಿವರೆಗಿನ ಇತಿಹಾಸದ ಬದಲಿಗೆ, ಉರಿಗೌಡ ಹಾಗೂ ನಂಜೇಗೌಡ ಎಂಬವರಿಬ್ಬರು ಎನ್ನುವುದನ್ನು ಬಿಜೆಪಿ ಹೇಳುತ್ತಿದೆ. ಇದಕ್ಕೆ ಸೂಕ್ತ ದಾಖಲಾತಿಗಳನ್ನು ನೀಡಿ ಎಂದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಒತ್ತಾಯಿಸುತ್ತಿದೆ.

ಈ ನಡುವೆ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇ ಉದ್ಘಾಟನೆಗೆ ಪ್ರಧಾನಿ ಮೋದಿ ಆಗಮಿಸಿದಾಗ ʼಉರಿಗೌಡ ದೊಡ್ಡ ನಂಜೇಗೌಡ ಮಹಾದ್ವಾರʼ ಎಂದು ಬಿಜೆಪಿ ನಿರ್ಮಿಸಿತ್ತು. ಇದರ ಕುರಿತು ವಿರೋಧ ವ್ಯಕ್ತವಾದಾಗ ಅದನ್ನು ತೆರವುಗೊಳಿಸಲಾಯಿತು. ಶಾಶ್ವತವಾಗಿ ಉರಿಗೌಡ ನಂಜೇಗೌಡ ದ್ವಾರವನ್ನು ನಿರ್ಮಿಸುತ್ತೇವೆ ಎಂದು ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು. ಇದೀಗ ಸಚಿವ ಹಾಗೂ ಸಿನಿಮಾ ನಿರ್ಮಾಪಕ ಮುನಿರತ್ನ ಅವರು ಉರಿಗೌಡ ನಂಜೇಗೌಡ ಎಂಬ ಹೆಸರಿನ ಸಿನಿಮಾವನ್ನು ನಿರ್ಮಾಣ ಮಾಡಲು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಣಿ ಮಾಡಿದ್ದಾರೆ.

ಜೆಡಿಎಸ್‌ ತಂತ್ರ
ಉರಿಗೌಡ, ನಂಜೇಗೌಡ ಎಂಬ ವ್ಯಕ್ತಿಗಳು ಇಲ್ಲವೇ ಇಲ್ಲ ಎನ್ನುವುದನ್ನೇ ಹೇಳುತ್ತಿದ್ದ ಜೆಡಿಎಸ್‌ ಈಗ ವಾದವನ್ನು ಬದಲು ಮಾಡಿದೆ. ಟಿಪ್ಪುವನ್ನು ಕೊಂದವರು ಒಕ್ಕಲಿಗರು ಎಂದು ಹೇಳುವ ಮೂಲಕ ಸಮುದಾಯಕ್ಕೆ ಬಿಜೆಪಿ ಕಳಂಕ ಅಂಟಿಸಲು ಮುಂದಾಗಿದೆ ಎಂದು ಜೆಡಿಎಸ್‌ ಹೇಳುತ್ತಿದೆ. ಶುಕ್ರವಾರ ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಎಚ್‌.ಡಿ. ಕುಮಾರಸ್ವಾಮಿ ಸುದೀರ್ಘ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಕಲ್ಪಿತಕಥೆ, ಸುಳ್ಳುಗಳಿಂದಲೇ ಜನರ ಮನಸ್ಸಿನಲ್ಲಿ ವಿಷಬೀಜ ಬಿತ್ತಿ ಕರ್ನಾಟಕವನ್ನು ಅಲ್ಲೋಲಕಲ್ಲೋಲ ಮಾಡುತ್ತಿರುವ ಬಿಜೆಪಿ ವಕ್ರದೃಷ್ಟಿ ಸದ್ಯಕ್ಕೆ ಒಕ್ಕಲಿಗರ ಮೇಲೆ ಬಿದ್ದಿದೆ. ಸ್ವಾಭಿಮಾನಿ ಒಕ್ಕಲಿಗರನ್ನು ಹೇಗಾದರೂ ಹಳ್ಳ ಹಿಡಿಸಲೆಬೇಕೆಂಬ ಹಿಡೆನ್‌ ಅಜೆಂಡಾ ಬಿಜೆಪಿಗೆ ಇರುವುದಂತೂ ಸತ್ಯ.

ಈ ಮಹಾ ಷಡ್ಯಂತ್ರದ ಭಾಗವೇ ಉರಿಗೌಡ, ನಂಜೇಗೌಡ ಎಂಬ ಸುಳ್ಳುಪಾತ್ರಗಳ ಸೃಷ್ಟಿ. ಟಿಪ್ಪುವನ್ನು ಕೊಂದವರೆಂದು ಸೃಷ್ಟಿಸಲಾದ ಕಲ್ಪಿತ ಒಕ್ಕಲಿಗ ಹೆಸರುಗಳ ಮೂಲಕ ಒಕ್ಕಲಿಗ ಸಮುದಾಯವನ್ನು ಕಳಂಕದ ದಳ್ಳುರಿಗೆ ತಳ್ಳುವ, ಐತಿಹಾಸಿಕ ನಂಜಿನ ವಿಷವರ್ತುಲಕ್ಕೆ ನೂಕುವ ಹೇಯ ಕೃತ್ಯವನ್ನು ಬಿಜೆಪಿ ಮಾಡುತ್ತಿದೆ.

ಹೆದ್ದಾರಿ ಲೋಕಾರ್ಪಣೆಗೆ ಆಗಮಿಸಿದ್ದ ಪ್ರಧಾನಿಗಳ ಸ್ವಾಗತ ಕಮಾನಿಗೆ ಉರಿಗೌಡ-ನಂಜೇಗೌಡ ಕಲ್ಪಿತ ಹೆಸರುಗಳನ್ನು ಇಟ್ಟಿತ್ತು ಬಿಜೆಪಿ ಸರ್ಕಾರ. ಮೊದಲೇ ಇದ್ದ ಪರಮಪೂಜ್ಯ ಶ್ರೀಶ್ರೀಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಹೆಸರನ್ನು ಮರೆಮಾಚಿ ಕಲ್ಪಿತ ಹೆಸರುಗಳ ಕಮಾನು ಕಟ್ಟಿದ್ದೇ ಪರಮದ್ರೋಹ.

ಕುಲಕ್ಕೆ, ಕುಲ ಗುರುವಿಗಾದ ಈ ಘೋರ ಅಪಮಾನದಿಂದ ಕುದಿಯುತ್ತಿರುವ ಒಕ್ಕಲಿಗ ಸಮಾಜವನ್ನು ಇನ್ನಷ್ಟು ಹೀನಾಯವಾಗಿ ಕಳಂಕದ ಕೂಪಕ್ಕೆ ತಳ್ಳಲು ಇದೇ ಬಿಜೆಪಿ ಸರ್ಕಾರದ ಸಚಿವರೊಬ್ಬರು ಧೂರ್ತ ಪ್ರಯತ್ನ ನಡೆಸಿದ್ದಾರೆ.

ಸಚಿವರು, ವೃತ್ತಿಯಲ್ಲಿ ಚಿತ್ರ ನಿರ್ಮಾಪಕರಾದ ಮುನಿರತ್ನ ಅವರು ತಮ್ಮ ವೃಷಭಾದ್ರಿ ಪ್ರೊಡಕ್ಷನ್ಸ್‌ ಮೂಲಕ ‘ ಉರಿಗೌಡ ನಂಜೇಗೌಡ ‘ ಹೆಸರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿ ಸಿನಿಮಾ ಮಾಡಲು ಹೊರಟಿದ್ದಾರೆ. ಈ ಮೂಲಕ ಒಕ್ಕಲಿಗರ ಗೌರವವನ್ನು ಬೆಳ್ಳಿತೆರೆಯ ಮೇಲೆಯೂ ಮೂರಾಬಟ್ಟೆ ಮಾಡಲು ಸಂಚು ರೂಪಿಸಿದ್ದಾರೆ.

ಕುದಿಯುತ್ತಿರುವ ಒಕ್ಕಲಿಗರ ನೋವಿನ ಮೇಲೆ ಮಾರಣಾಂತಿಕ ಬರೆ ಎಳೆಯುವಂತಿದೆ ಮುನಿರತ್ನರ ಈ ದುರಹಂಕಾರ. ಬಿಜೆಪಿ ಸೃಷ್ಟಿಸಿದ ಕಿರಾತಕ ಸುಳ್ಳನ್ನೇ ಸಿನಿಮಾ ಮಾಡಿ ಒಕ್ಕಲಿಗರನ್ನು ಇತಿಹಾಸದಲ್ಲಿ ಶಾಶ್ವತವಾಗಿ ಖಳನಾಯಕರನ್ನಾಗಿ ಚಿತ್ರಿಸುವುದೇ ಅವರ ದುರುದ್ದೇಶವಾಗಿದೆ. ಈ ದ್ರೋಹವನ್ನು ಒಕ್ಕಲಿಗರು ಸಹಿಸುವ ಪ್ರಶ್ನೆಯೇ ಇಲ್ಲ.

ಚರಿತ್ರೆಯನ್ನು ವಿರೂಪಗೊಳಿಸುವ ನಿರ್ಲಜ್ಜ ರಾಜಕಾರಣಕ್ಕೆ ಮೂಲಕಾರಣರು ಯಾರು? ಇಷ್ಟಕ್ಕೂ, ಈ ಮುನಿರತ್ನಗೂ ಮಂಡ್ಯದ ಒಕ್ಕಲಿಗರಿಗೂ ಸಂಬಂಧವೇನು? ಒಕ್ಕಲಿಗ ಕುಲದಲ್ಲೇ ಹುಟ್ಟಿ ಒಕ್ಕಲು ಸಂಕುಲಕ್ಕೆ ಟಿಪ್ಪು ಕೊಲೆಯ ಕೊಳೆ ಮೆತ್ತಿಸಲು ಹೊರಟಿರುವ ಒಕ್ಕಲು ಕುಲದ ಇಬ್ಬರು ನಿಜವಾದ ಖಳನಾಯಕರನ್ನು ಒಕ್ಕಲಿಗರೆಂದೂ ಕ್ಷಮಿಸರು.

ಮುನಿರತ್ನ ಮಾಡುವ ಸಿನಿಮಾಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ ಸಿ.ಟಿ.ರವಿ ಕಥೆ ಬರೆಯುತ್ತಾರಾ? ಟಿಪ್ಪು ನೆಪದಲ್ಲಿ ಜನ್ಮತೆಳೆದ ಜಾತಿ ವಿರುದ್ಧವೇ ವಿಷ ಕಕ್ಕುತ್ತಿರುವ, ಬಿಜೆಪಿಯನ್ನು ಎತ್ತಿ ಕಟ್ಟುತ್ತಿರುವ ಸಿ.ಟಿ.ರವಿ ಅವರು ಉರಿಗೌಡ, ನಂಜೇಗೌಡರೆಂಬ ಕಲ್ಪಿತ ಹೆಸರುಗಳ ನೆಪದಲ್ಲಿ ದಿನವೂ ವಿಷ ಕಕ್ಕುತ್ತಿದ್ದಾರೆ.

ವಿಜ್ಞಾನ, ತಂತ್ರಜ್ಞಾನ, ಆವಿಷ್ಕಾರ ಎಂದು ಸದಾ ಬಡಬಡಿಸುತ್ತಿದ್ದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರಂತೂ ಈಗ ಉರಿಗೌಡ, ನಂಜೇಗೌಡ ಎಂದು ವಿಷನಂಜು ಉಗಳುತ್ತಿದ್ದಾರೆ. ಅವರು ಈ ಸಿನಿಮಾಕ್ಕೆ ಚಿತ್ರಕಥೆ ಬರೆಯುತ್ತಾರಾಯೇ? ಬರೆದರೂ ಬರೆಯಬಹುದು. ಏಕೆಂದರೆ, ಇವರಿಬ್ಬರೂ ಕುಲದ್ರೋಹಿಗಳಷ್ಟೇ ಅಲ್ಲ, ಒಕ್ಕಲು ಸಂಕುಲದ ವಿನಾಶಕರು.

ವಿನಾಶಕಾಲೇ ವಿಪರೀತ ಬುದ್ಧಿ ಎನ್ನುವಂತಿದೆ ಬಿಜೆಪಿ ಸ್ಥಿತಿ. ಪ್ರತಿ ಸೂಕ್ಷ್ಮ ವಿಷಯದಲ್ಲೂ ಮತ ರಾಜಕಾರಣ ಮಾಡುವ ಕಮಲ ಪಕ್ಷಕ್ಕೆ ಕರ್ನಾಟಕವೇ ಪ್ರಯೋಗ ಶಾಲೆ. ಜಾತಿ, ಧರ್ಮಗಳ ನಡುವೆ ಕಿಚ್ಚಿಟ್ಟು, ಸರ್ವಜನಾಂಗದ ತೋಟವಾದ ಕರ್ನಾಟಕಕ್ಕೆ ಕೋಮುಪ್ರಾಷನ ಮಾಡಿಸುತ್ತಿದೆ ಬಿಜೆಪಿ .

ಉರಿಗೌಡ, ನಂಜೇಗೌಡ ಎಂಬ ಕಲ್ಪಿತ ಒಕ್ಕಲಿಗ ಹೆಸರುಗಳ ಸೃಷ್ಟಿ, ಸಿನಿಮಾ ಮಾಡುವ ದುರುಳ ಐಡಿಯಾ, ಒಕ್ಕಲಿಗರ ಮೇಲೆ ಬಿಜೆರಿ ಬೀರುತ್ತಿರುವ ವಕ್ರದೃಷ್ಟಿ… ಇದೆಲ್ಲವೂ ಒಕ್ಕಲಿಗರನ್ನು ರಾಜಕೀಯವಾಗಿ ಮುಗಿಸಿಬಿಡುವ ಬಿಜೆಪಿ ರಕ್ಕಸ ಹಿಡೆನ್ ಅಜೆಂಡಾ ಅಲ್ಲದೆ ಮತ್ತೇನೂ ಅಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಜೆಡಿಎಸ್‌ನ ಹೊಸ ತಂತ್ರದಿಂದಾಗಿ ನಿಧಾನವಾಗಿ ಬಿಜೆಪಿ ವಿರುದ್ಧ ನಾಗರಿಕರು ತಿರುಗಿ ಬೀಳುತ್ತಾರೆಯೇ ಎಂಬ ಕುತೂಹಲವಿದೆ. ಜೆಡಿಎಸ್‌ ತಂತ್ರಕ್ಕೆ ಬಿಜೆಪಿ ಯಾವ ಪರಿಹಾರ ಹುಡುಕುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.

Exit mobile version