Site icon Vistara News

Karnataka Election : ಬಸವರಾಜ ಬೊಮ್ಮಾಯಿಯೇ ಮುಂದಿನ ಸಿಎಂ; ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಘೋಷಣೆ

karnataka election jp nadda announces that bommai will be next cm

karnataka election jp nadda announces that bommai will be next cm

ಬೆಂಗಳೂರು: ಒಂದು ವೇಳೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Election) ಬಿಜೆಪಿ ಗೆದ್ದರೂ ಬಸವರಾಜ ಬೊಮ್ಮಾಯಿ (Basavaraja Bommai) ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡುವುದಿಲ್ಲ ಎಂಬ ವದಂತಿಗಳನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (JP Nadda) ಅವರು ತಳ್ಳಿ ಹಾಕಿದ್ದಾರೆ. ಮುಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಎಂದು ಸ್ಪಷ್ಪಪಡಿಸಿದ್ದಾರೆ.

ವಿಸ್ತಾರ ನ್ಯೂಸ್‌ ಜತೆ ಮಾತನಾಡಿದ ಜೆ.ಪಿ. ನಡ್ಡಾ ಅವರು, ಬಸವರಾಜ ಬೊಮ್ಮಾಯಿ ಮುಂದಾಳತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ. ನಾವು ಗೆಲ್ಲುವುದು ಸತ್ಯ. ಬೊಮ್ಮಾಯಿ ಸಿಎಂ ಆಗುವುದು ಸತ್ಯ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ವಿಷಯದಲ್ಲಿ ರಾಜ್ಯದಲ್ಲಿ ಭಾರಿ ಚರ್ಚೆ ಆಗುತ್ತಿದೆ. ಲಿಂಗಾತರೇ ಮುಂದಿನ ಮುಖ್ಯಮಂತ್ರಿ ಎಂದು ಕೂಡಾ ಬಿಜೆಪಿ ಬಾಯಿ ಬಿಟ್ಟು ಹೇಳಿರಲಿಲ್ಲ. ಒಂದು ಕಡೆ ಬ್ರಾಹ್ಮಣರನ್ನು ಸಿಎಂ ಮಾಡಲಾಗುತ್ತದೆ ಎಂದು ಎಚ್‌.ಡಿ. ಕುಮಾರಸ್ವಾಮಿ ಅವರು ಸುದ್ದಿ ಮಾಡಿದ್ದರು! ಹೀಗಾಗಿ ಜೆ.ಪಿ. ನಡ್ಡಾ ಹೇಳಿಕೆ ಮಹತ್ವ ಪಡೆದಿದೆ.

ಎಲ್ಲೆಡೆ ಡಬಲ್‌ ಎಂಜಿನ್‌ ಸರ್ಕಾರಕ್ಕೆ ಬೇಡಿಕೆ

ರಾಜ್ಯಾದ್ಯಂತ ಬಿಜೆಪಿ ಪರ ಒಲವು ಇದೆ. ನಾನು ರಾಜ್ಯದ ಹಲವು ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದೇನೆ. ಡಬಲ್ ಇಂಜಿನ್ ಸರ್ಕಾರದ ಸಾಧನೆಗಳು ಜನರಿಗೆ ತಲುಪಿವೆ. ಮುಂದೆಯೂ ಡಬಲ್ ಇಂಜಿನ್ ಬೇಕು ಎಂದು ಜನ ತೀರ್ಮಾನ ಮಾಡಿದ್ದಾರೆ ಎನ್ನುವುದು ಸ್ಪಷ್ಟ ಎಂದು ಅವರು ತಿಳಿಸಿದರು.

ʻʻರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಗುರಿ 113 ಸ್ಥಾನ ಗೆಲ್ಲುವುದು ಅಷ್ಟೇ ಅಲ್ಲ. ನಮ್ಮ ಗುರಿ 150 ಸ್ಥಾನಗಳು. ನಾವು ನಮ್ಮ ಗುರಿ ತಲುಪುತ್ತೇವೆʼʼ ಎಂದು ಹೇಳಿದರು.

ʻʻಗುಜರಾತ್‌ಗೂ ಇಲ್ಲಿಗೂ ತುಂಬ ವ್ಯತ್ಯಾಸ ಏನೂ ಇಲ್ಲ. ಅಲ್ಲಿಯೂ ನಮ್ಮ ಪರ ವಾತಾವರಣ ಇತ್ತು. ಇಲ್ಲಿಯೂ ನಮ್ಮ ಪರ ವಾತಾವರಣ ಇದೆʼʼ ಎಂದು ನಡ್ಡಾ ಹೇಳಿದರು.

ಮೋದಿ ವಿಷದ ಹಾವು ಎಂಬ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಕಾಂಗ್ರೆಸ್‌ನ ಒಟ್ಟಾರೆ ಮನಸ್ಥಿತಿ ತೋರಿಸುತ್ತದೆ. ಜನ ಇದನ್ನು ಗಮನಿಸುತ್ತಿದ್ದಾರೆ. ಚುನಾವಣೆಯಲ್ಲಿ ಜನ ಬುದ್ಧಿ ಕಲಿಸುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ʻʻಕಾಂಗ್ರೆಸ್ ಅವಧಿಯಲ್ಲಿ ಭ್ರಷ್ಟಾಚಾರ ಮಾಡಿ ನಮ್ಮ ಬಗ್ಗೆ ಮಾತನಾಡ್ತಾರೆ. ಸಿದ್ದರಾಮಯ್ಯ ಅರ್ಕಾವತಿ ಡಿನೋಟಿಫಿಕೇಷನ್ ಮಾಡಿದ್ದರು. ಶಿಕ್ಷಕರ ಅಕ್ರಮ ನೇಮಕಾತಿ ಮಾಡಿದರು. ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇವರಿಗಿಲ್ಲʼʼ ಎಂದು ಹೇಳಿದ ನಡ್ಡಾ, ʻʻಜಾಮೀನಿನ ಮೇಲೆ ಇರೋ ಡಿ.ಕೆ ಶಿವಕುಮಾರ್‌ ಅವರು ನಮ್ಮ ಬಗ್ಗೆ ಮಾತನಾಡ್ತಾರೆ. ಅವರಿಗೆ ಯಾವ ನೈತಿಕತೆ ಇದೆʼʼ ಎಂದು ಕೇಳಿದರು.

ಬಿ.ಎಸ್‌. ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗಿದೆ ಎಂಬ ಆರೋಪಕ್ಕೆ ಉತ್ತರಿಸಿದ ಅವರು, ʻʻನಾವು ನಮ್ಮ ನಾಯಕರನ್ನು ಕಡೆಗಣಿಸಿಲ್ಲ. ಲಿಂಗಾಯತ ನಾಯಕರನ್ನು ಕಡೆಗಣಿಸಿದ್ದು ಕಾಂಗ್ರೆಸ್. ವೀರೇಂದ್ರ ಪಾಟೀಲ್ ಅವರಿಗೆ ಮೋಸ ಮಾಡಿದ್ದು ಕಾಂಗ್ರೆಸ್‌ʼʼ ಎಂದು ಆರೋಪಿಸಿದರು.

ಗದಗದ ಡಂಬಳದಲ್ಲಿ ಮಾತನಾಡಿದ ಜೆ.ಪಿ. ನಡ್ಡಾ ಅವರು, ʻʻನರೇಂದ್ರ ಮೋದಿ ಅವರ ಸರಕಾರ ಬಂದ ಮೇಲೆ ದೇಶದ ಸಂಸ್ಕೃತಿ ಬದಲಾಗಿದೆ. ಅಭಿವೃದ್ಧಿಯಾಗಿದೆ. ಹೀಗಾಗಿ ನಾವು ಜನರಲ್ಲಿ ಕೇಳಿ ಮತ ಪಡೆಯುವುದಲ್ಲ. ದೇಶದ ಜನರ ಜವಾಬ್ದಾರಿ ಹೊತ್ತುಕೊಂಡು ಕೆಲಸ ಮಾಡಬೇಕು. ಆಗ ಜನರು ನಮಗೆ ಆಶೀರ್ವಾದ ಮಾಡುತ್ತಾರೆʼʼ ಎಂದು ಹೇಳಿದರು.

ಇದನ್ನೂ ಓದಿ : Modi In Karnataka: ಬೆಂಗಳೂರಿನಲ್ಲಿ ಮೋದಿ ರೋಡ್‌ ಶೋ ಅಬ್ಬರ; ಇಲ್ಲಿವೆ ಫೋಟೊಗಳು

Exit mobile version