Site icon Vistara News

Karnataka Election : ನಾನು ಕೊಟ್ಟ ಚೆಕ್‌ ವಾಪಸ್‌ ಕೊಡಿ; 64 ಮಸೀದಿಗಳಿಗೆ ಕೆಜಿಎಫ್‌ ಬಾಬು ನೋಟಿಸ್‌!

KGF Babu

KGF Babu gives notice Mosques

ಬೆಂಗಳೂರು: ನಾನು ಕೊಟ್ಟಿರುವ ಚೆಕ್‌ಗಳನ್ನು ವಾಪಸ್‌ ಕೊಡಿ..: ಇದು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ‌ (Karnataka Election 2023) ಪಕ್ಷೇತರ ಅಭ್ಯರ್ಥಿಯಾಗಿ (Independent candidate) ಸ್ಪರ್ಧಿಸಿ ಸೋಲುಂಡ ಯೂಸೂಫ್ ಷರೀಫ್ ಅಲಿಯಾಸ್ ಕೆಜಿಎಫ್ ಬಾಬು (KGF Babu) ಮಾಡಿಕೊಂಡಿರುವ ಮನವಿ ಮತ್ತು ನೀಡಿರುವ ನೋಟಿಸ್‌. ಅವರು ಈ ಮನವಿ ಮಾಡಿದ್ದು, ಚಿಕ್ಕಪೇಟೆ ಕ್ಷೇತ್ರ ವ್ಯಾಪ್ತಿಯ 64 ಮಸೀದಿಗಳಿಗೆ ( Notice to 64 mosques). ಈ ಸಂಬಂಧ ಅವರು ಉರ್ದು ಪತ್ರಿಕೆಗಳಲ್ಲಿ ಜಾಹೀರಾತನ್ನೇ ನೀಡಿದ್ದಾರೆ!

ಎಲ್ಲರಿಗೂ ಗೊತ್ತಿರುವ ಪ್ರಕಾರ, ಕೆಜಿಎಫ್‌ ಬಾಬು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳ ಪೈಕಿ ಶ್ರೀಮಂತರಲ್ಲಿ ಒಬ್ಬರು. ಅವರ ಸ್ಥಿರ ಮತ್ತು ಚರ ಆಸ್ತಿಯ ಮೌಲ್ಯ 1621 ಕೋಟಿ ರೂ.

ಚಿಕ್ಕಪೇಟೆ ಕ್ಷೇತ್ರದಿಂದ ತನಗೆ ಟಿಕೆಟ್‌ ಕೊಡಿ ಎಂದು ಅವರು ಕಾಂಗ್ರೆಸ್‌ ಮುಂದೆ ಬಗೆಬಗೆಯಲ್ಲಿ ಮನವಿ ಮಾಡಿದ್ದರು. ಆದರೆ ಕಾಂಗ್ರೆಸ್‌ ತನ್ನ ಹಳೆ ಅಭ್ಯರ್ಥಿ ಆರ್‌.ವಿ ದೇವರಾಜು ಅವರನ್ನೇ ನೆಚ್ಚಿಕೊಂಡಿತ್ತು. ಅಂತಿಮವಾಗಿ ಈ ಕ್ಷೇತ್ರದಲ್ಲಿ ಬಿಜೆಪಿಯ ಉದಯ ಗರುಡಾಚಾರ್‌ ಗೆಲುವು ಸಾಧಿಸಿದ್ದಾರೆ. ಉದಯ ಗರುಡಾಚಾರ್‌ ಅವರಿಗೆ 57,299 ಮತಗಳು ಬಿದ್ದರೆ, ಕಾಂಗ್ರೆಸ್‌ ದೇವರಾಜ್‌ ಅವರಿಗೆ 45,186 ಮತಗಳು ಬಿದ್ದಿವೆ. ಪಕ್ಷೇತರರಾಗಿ ನಿಂತ ಕೆಜಿಎಫ್‌ ಬಾಬು ಅವರು 20,931 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರೂ ಕಾಂಗ್ರೆಸ್‌ನ್ನು ಸೋಲಿಸಿದ ಸಮಾಧಾನ ಅವರಲ್ಲಿದೆ!

ಒಂದು ಹಂತದಲ್ಲಿ ತನ್ನ ಎರಡನೇ ಪತ್ನಿಯನ್ನೂ ಕಣಕ್ಕೆ ಇಳಿಸಿದ್ದ ಕೆಜಿಎಫ್‌ ಬಾಬು ಬಳಿಕ ನಾಮಪತ್ರ ಹಿಂದೆ ಪಡೆದಿದ್ದರು. ಚುನಾವಣೆಯ ಸಂದರ್ಭದಲ್ಲಿ ಮಾತ್ರವಲ್ಲ, ಅದಕ್ಕಿಂತ ಮೊದಲು ಕೂಡಾ ಕೆಜಿಎಫ್‌ ಬಾಬು ಅವರು ಚಿಕ್ಕಪೇಟೆ ಕ್ಷೇತ್ರದಲ್ಲಿ ಸಿಕ್ಕಾಪಟ್ಟೆ ಹಣ ಚೆಲ್ಲಿದ್ದರು.

ಚುನಾವಣೆ ವೇಳೆ ಚಿಕ್ಕಪೇಟೆಯ ಸ್ಲಂ ನಿವಾಸಿಗಳಿಗೆ 300 ಮನೆಗಳನ್ನು ನಿರ್ಮಿಸಿಕೊಡುವುದಾಗಿ ಪ್ರಚಾರದ ವೇಳೆ ಬಾಬು ಭರವಸೆ ನೀಡಿದ್ದರು. ಚಿಕ್ಕಪೇಟೆ ಅಭಿವೃದ್ಧಿಗೆ 300 ಕೋಟಿ ರೂಪಾಯಿ ವೆಚ್ಚ ಮಾಡುವುದಾಗಿ ಪ್ರಣಾಳಿಕೆಯನ್ನೂ ಮಂಡಿಸಿದ್ದರು. ಬಾಬು ಅವರು 1,621 ಕೋಟಿ ರೂಪಾಯಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿ ಹೊಂದಿದ್ದಾರೆ ಮತ್ತು 62.32 ಕೋಟಿ ರೂಪಾಯಿ ಸಾಲ ಹೊಂದಿದ್ದಾರೆ ಎಂದು ಚುನಾವಣಾ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ಅವರು ಹಲವು ಕಾಂಗ್ರೆಸ್‌ ನಾಯಕರಿಗೆ ದೊಡ್ಡ ಮೊತ್ತದ ಸಾಲವನ್ನೂ ನೀಡಿದ್ದರು.

ಇಂಥ ಕೆಜಿಎಫ್‌ ಬಾಬು ಅವರು ಮುಸ್ಲಿಮರ ಮತಗಳನ್ನು ಸೆಳೆಯುವುದಕ್ಕಾಗಿ, ಚಿಕ್ಕಪೇಟೆಯ ಮಸೀದಿಗಳಿಗೆ ದೊಡ್ಡ ಮೊತ್ತದ ಚೆಕ್‌ ನೀಡಿದ್ದರು.

ಬಾಬು ಅವರು ಎಲ್ಲಾ ಮಸೀದಿಗಳಿಗೆ ಆಹ್ವಾನಗಳನ್ನು ಕಳುಹಿಸಿ ಎಸ್‌ಆರ್‌ನಗರದ ಹಕ್ ಹೌಸ್‌ನಲ್ಲಿ ನಡೆದ ಸಮಾರಂಭದಲ್ಲಿ ಅವರು ಚೆಕ್‌ಗಳನ್ನು ವಿತರಿಸಿದ್ದರು. ಇದು ಅವರ ದೇಣಿಗೆಯಾಗಿದ್ದು, ಮಸೀದಿಗಳ ಅಭಿವೃದ್ಧಿಗೆ ಬಳಸಿಕೊಳ್ಳಬಹುದು ಎಂದು ಬಾಬು ಆ ಸಂದರ್ಭದಲ್ಲಿ ಹೇಳಿದ್ದರು. ಅವರು 64 ಮಸೀದಿಗಳಿಗೆ ನೀಡಿದ ದೇಣಿಗೆ (ಚೆಕ್)‌ ಮೊತ್ತ ಸುಮಾರು 17.30 ಕೋಟಿ ರೂ.!

ಇದೀಗ ಚುನಾವಣೆಯಲ್ಲಿ ಸೋತಿರುವ ಬಾಬು ಅವರಿಗೆ ಎರಡು ಸಿಟ್ಟಿದೆ. ಒಂದು ಇಷ್ಟು ಸಹಾಯ ಪಡೆದರೂ ಮತ ಹಾಕಿಲ್ಲ ಎನ್ನುವುದು, ಎರಡನೆಯದು, ಮೊದಲೇ ಹೇಗೂ ಸೋತಾಗಿದೆ. ಚೆಕ್‌ ಪಡೆದುಕೊಂಡವರು ಅದನ್ನು ನಗದೀಕರಿಸಿಕೊಂಡರೆ ಏನು ಗತಿ ಎನ್ನುವುದು!

ಹೀಗಾಗಿ ಅವರು ಈ ಚೆಕ್‌ಗಳನ್ನು ನಗದೀಕರಿಸದಂತೆ ಸೂಚಿಸಿದ್ದಾರೆ. ʻʻನಾನು ಕೊಟ್ಟ ಹಣ ಹರಾಮ್ ಆಗಿದ್ದು ಅದನ್ನು ಖರ್ಚು ಮಾಡಬೇಡಿ, ಸಾಧ್ಯವಾದಷ್ಟೂ ಬೇಗ ಅದನ್ನು ವಾಪಸ್ ಕೊಡಿʼʼ ಎಂದು ಹೇಳಿದ್ದಾರೆ. ದಾರುಲ್ ಉಲೂಮ್ ನ ಫತ್ವಾವನ್ನು ಉಲ್ಲೇಖಿಸಿರುವ ಬಾಬು, ಚುನಾವಣಾ ಸಮಯದಲ್ಲಿ ರಾಜಕಾರಣಿಗಳಿಂದ ಇಂತಹ ದೇಣಿಗೆಗಳನ್ನು ಪಡೆಯುವುದು ಹರಾಮ್ ಆಗಿದೆ ಎಂದು ಸಿದ್ದಾಪುರದ ಟ್ಯಾಂಕ್ ಗಾರ್ಡನ್‌ನಲ್ಲಿರುವ ಮಸೀದಿ-ಇ-ಅತಿಕ್ ಮತ್ತು ಕೃಷ್ಣಪ್ಪ ಗಾರ್ಡನ್‌ನ ಮಸೀದಿ-ಇ-ಹುಸ್ನಾ ಸೇರಿದಂತೆ ಮಸೀದಿಗಳ ಸಮಿತಿಗಳಿಗೆ ಬಾಬು ತಮ್ಮ ಚೆಕ್‌ಗಳನ್ನು ಹಿಂದಿರುಗಿಸುವಂತೆ ಹೇಳಿದ್ದಾರೆ!

ಇದನ್ನೂ ಓದಿ : Karnataka Election: ಚಿಕ್ಕಪೇಟೆಯಲ್ಲಿ ಕೆಜಿಎಫ್ ಬಾಬು, ಕಾಂಗ್ರೆಸ್‌ನ ಯುವರಾಜ್ ಬೆಂಬಲಿಗರ ನಡುವೆ ಘರ್ಷಣೆ

Exit mobile version