Site icon Vistara News

Karnataka Election: ಸಿದ್ದರಾಮಯ್ಯಗೆ ಮತ್ತೆ ಲಿಂಗಾಯತ ಪ್ರತ್ಯೇಕ ಧರ್ಮ ಸವಾಲು: ಕೇಂದ್ರಕ್ಕೆ ಪ್ರಸ್ತಾವ ಕಳಿಸಲು ಒತ್ತಾಯ

karnataka election linagayt community again demands for seperate religion

#image_title

ಹುಬ್ಬಳ್ಳಿ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯಾದ್ಯಂತ ಸುದ್ದಿಯಾಗಿದ್ದ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಇದೀಘ ಮತ್ತೆ ಸಿದ್ದರಾಮಯ್ಯ ಅವರಿಗೆ ಸವಾಲಾಗುವ ಮುನ್ಸೂಚನೆ ನೀಡಿದೆ. ಈ ಹಿಂದೆ ಪ್ರತ್ಯೇಕ ಧರ್ಮ ವಿಚಾರಕ್ಕೆ ಕೈ ಹಾಕಿದ್ದರಿಂದಲೇ ಸಿದ್ದರಾಮಯ್ಯ ಸರ್ಕಾರ ಪತನವಾಗಿತ್ತು ಎಂದು ಹೇಳಲಾಗಿತ್ತು. ಇದೀಗ ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಿದ್ದು, ಈ ಬಗ್ಗೆ ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಎಸ್‌.ಎಂ. ಜಾಮದಾರ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಸ್‌.ಎಂ. ಜಾಮದಾರ, ಡಿಸಿಎಂ ಹುದ್ದೆ ಒಂದೇ ಯಾಕೆ ಇದೆ? ಲಿಂಗಾಯತರು, ಪರಿಶಿಷ್ಟರು ಹಾಗೂ ಮುಸಲ್ಮಾನರನ್ನು ಸಹ ಪರಿಗಣಿಸಬಹುದಿತ್ತಲ್ಲವೆ? ಕಾಂಗ್ರೆಸ್ ಈ ಬಗ್ಗೆ ಗಮನ ಹರಿಸಬೇಕು. ಇಲ್ಲದಿದ್ದರೆ, ಅದರ ಪರಿಣಾಮವನ್ನು ಕಾಂಗ್ರೆಸ್ ಎದುರಿಸಬೇಕಾಗುತ್ತದೆ.

ಮುಂದೆ ಲೋಕಸಭಾ ಚುನಾವಣೆ ಸಹ ಬರಲಿದ್ದು, ಸಚಿವ ಸಂಪುಟ ಹೇಗಿರಲಿದೆ ಎಂದು ಕಾಯುತ್ತಿದ್ದೇವೆ. ಬಿಎಸ್‌ವೈ, ಶೆಟ್ಟರ್ ಅವರನ್ನು ಬಿಜೆಪಿ ಮತ್ತು ಆರೆಸ್ಸೆಸ್ ನಡೆಸಿಕೊಂಡ ರೀತಿ ಹೇಗಿದೆ ಎಂದು ಗೊತ್ತಿದೆ. ಲಿಂಗಾಯತ ಸಂಘಟನೆಗಳ ಎಲ್ಲ ಸಮುದಾಯದ ಸ್ವಾಮೀಜಿಗಳ ಬೆಂಬಲ ನನಗಿದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಅದು ಲಿಂಗಾಯತರಲ್ಲ, ಬದಲಿಗೆ ವೀರಶೈವರು.

ಪಂಚಪೀಠಗಳ ನಾಲ್ಕು ಸ್ವಾಮಿಗಳ ಬೆಂಬಲವಿದ್ದರೆ ಎಲ್ಲಾ ಲಿಂಗಾಯತರ ಬೆಂಬಲವಿದ್ದಂತೆ ಆಗಲ್ಲ. ಹಿಂದೆ ಧರ್ಮ ಒಡೆದರು ಎಂದು ಬೊಬ್ಬೆ ಇಟ್ಟವರು ಇದೇ ವೀರಶೈವರು. ಇದೇ ಕಾರಣಕ್ಕೆ ಕಾಂಗ್ರೆಸ್ ಸರ್ಕಾರ ಬಿದ್ದು ಹೋಯಿತು. ನಂತರ ಡಿ.ಕೆ. ಶಿವಕುಮಾರ ಕ್ಷಮೆ ಕೋರಿದ್ದರು. ಡಿಸಿಎಂ ಹುದ್ದೆಗೆ ಉಳಿದ ಸಮುದಾಯದವರು ಅರ್ಹರಿಲ್ಲವೆ? ಲಿಂಗಾಯತ ಸಮುದಾಯಕ್ಕೆ ಡಿಸಿಎಮ್ ಹುದ್ದೆ ಕೊಡದಿದ್ದರೆ ಅನ್ಯಾಯವಾಗುತ್ತದೆ.

ನಾವು ಜಾತಿ ಬಿಟ್ಟು, ಜನಸಂಖ್ಯೆ ಆಧಾರದಲ್ಲಿ ಹಕ್ಕು ಕೇಳುತ್ತಿದ್ದೇವೆ. ಸಿದ್ದರಾಮಯ್ಯ ಅವರಿಂದ ನಿರೀಕ್ಷೆ ಇಟ್ಟುಕೊಂಡಿದ್ದೇವೆ‌. 1871ರಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ಆದೇಶವಾಗಿತ್ತು. ನಂತರ 1901ರ ಜನಗಣತಿಯಲ್ಲಿ ಇದರ ವಿರುದ್ಧ ಕೆಲಸಗಳಾದವು. ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆಯ ಪ್ರಸ್ತಾಪ ಕೇಂದ್ರಕ್ಕೆ ಕಳಿಸಬೇಕು. ಪ್ರತ್ಯೇಕ ಧರ್ಮದ ಪ್ರಸ್ತಾವವನ್ನು ಪುನರ್ ಪರಿಶೀಲನೆಗೆ ಕೇಂದ್ರ ಸರ್ಕಾರಕ್ಕೆ ಕಳಿಸಿ‌ಕೊಡಿ ಎಂದು ಒತ್ತಾಯಿಸುತ್ತೇವೆ. ಅಗತ್ಯ ಇದ್ದರೆ ನಿಯೋಗ ಹೋಗುತ್ತೇವೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ನ ಹೊಸ ಸರ್ಕಾರದಲ್ಲಿ ಈ ವಿಚಾರವಾಗಿ ಯಾವ ರೀತಿಯ ನಿರ್ಧಾರಗಳು ಆಗುತ್ತವೆ ಎನ್ನುವುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ: Karnataka Election: ಕಾಂಗ್ರೆಸ್‌ನವರು ಲಿಂಗಾಯತರಿಗೆ ಯಾವ ಹುದ್ದೆ ಕೊಡ್ತಾರೆ ನೋಡೋಣ: ಬೊಮ್ಮಾಯಿಗೂ ಕುತೂಹಲ!

Exit mobile version