Site icon Vistara News

Karnataka Election : ಯಾರು ಏನೇ ಹೇಳಿದ್ರೂ ಲಿಂಗಾಯತರ ಮತ ಬಿಜೆಪಿಗೇ; ಬಿಎಸ್‌ವೈ ಪುನರುಚ್ಚಾರ

Lingayat community supporting BJP Says BSY

iLingayat community supporting BJP Says BSY

ಬೆಂಗಳೂರು: ಕಾಂಗ್ರೆಸ್‌ ವೀರಶೈವ ಲಿಂಗಾಯತ ಸಮುದಾಯವನ್ನು ಬಿಜೆಪಿ ವಿರುದ್ಧವಾಗಿ ಎತ್ತಿಕಟ್ಟುವ ಕೆಲಸವನ್ನು ಮಾಡುತ್ತಿದೆ. ಯಾರು ಏನೇ ಮಾಡಿದರೂ ಲಿಂಗಾಯತ ಸಮುದಾಯ (Lingayat Community) ಸಂಪೂರ್ಣವಾಗಿ ಬಿಜೆಪಿಗೆ ಬೆಂಬಲವಾಗಿ ನಿಲ್ಲಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ (BS Yediyurappa) ಅವರು ಹೇಳಿದ್ದಾರೆ. ಸೋಮವಾರ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಶೇ. 75ರಷ್ಟು ಲಿಂಗಾಯತ ಸಮುದಾಯ ಬಿಜೆಪಿ ಪರ ಇದೆ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ ಪದೇಪದೆ ಬಿ.ಎಸ್‌. ಯಡಿಯೂರಪ್ಪ ಮತ್ತು ಜಗದೀಶ್‌ ಶೆಟ್ಟರ್‌ (Jagadish Shettar) ಅವರನ್ನು ಉಲ್ಲೇಖಿಸಿ, ಬಿಜೆಪಿ ಲಿಂಗಾಯತ ನಾಯಕರನ್ನು ಕಡೆಗಣಿಸುತ್ತಿದೆ. ಈ ಬಾರಿ ಲಿಂಗಾಯತರೇ ಬಿಜೆಪಿಯನ್ನು ಕೈಬಿಟ್ಟಿದ್ದಾರೆ ಎಂದು ಹೇಳುತ್ತಿದೆ. ಇದಕ್ಕೆ ಬೆಂಕಿ ಹಚ್ಚುವಂತೆ ಸೋಮವಾರ ಬಿಡುಗಡೆಯಾದ ಕಾಂಗ್ರೆಸ್‌ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ನಡುವಿನ ಮನದಾಳದ ಮಾತಿನ ಎರಡನೇ ಭಾಗದಲ್ಲಿ ಲಿಂಗಾಯತರ ಬಗ್ಗೆ ಹೆಚ್ಚು ಚರ್ಚೆಯಾಗಿದೆ. ಸುಮಾರು 100 ಲಿಂಗಾಯತ ಸಮುದಾಯದ ಸ್ವಾಮೀಜಿಗಳು ತಮಗೆ ಕರೆ ಮಾಡಿ ಈ ಬಾರಿ ತಾವು ಕಾಂಗ್ರೆಸ್‌ಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ ಎಂದು ಹೇಳಿಕೊಳ್ಳುವುದು ಚರ್ಚೆಗೆ ಕಾರಣವಾಗಿದೆ. ಜತೆಗೆ ಲಿಂಗಾಯತ ವೇದಿಕೆಯ ಹೆಸರಿನಲ್ಲಿ ಕಾಂಗ್ರೆಸ್‌ಗೆ ಬೆಂಬಲ ಸಾರಿದ ಘಟನೆಯೂ ನಡೆದಿದೆ. ಇದೆಲ್ಲದಕ್ಕೆ ಪ್ರತಿಕ್ರಿಯೆಯೋ ಎಂಬಂತೆ ಬಿ.ಎಸ್‌. ಯಡಿಯೂರಪ್ಪ ಅವರು ತಮ್ಮ ಪತ್ರಿಕಾಗೋಷ್ಠಿಯಲ್ಲಿ ಇದೇ ವಿಚಾರವನ್ನು ಪ್ರಸ್ತಾಪ ಮಾಡಿ ಕಾಂಗ್ರೆಸ್‌ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗ ಲಿಂಗಾಯತ ಪರವಾಗಿ ಯಾವುದೇ ಕೆಲಸ ಮಾಡಲಿಲ್ಲ. ಸಾಲದ್ದಕ್ಕೆ ವೀರಶೈವ ಲಿಂಗಾಯತ ಧರ್ಮವನ್ನು ಒಡೆಯಲು ಪ್ರಯತ್ನ ಮಾಡಿತು. ಆದರೆ, ಲಿಂಗಾಯತ ಸಮುದಾಯ ಯಾವತ್ತೂ ಬಿಜೆಪಿಗೆ ಬೆಂಬಲವಾಗಿ ನಿಂತಿದೆ. ಅವರ ಆಶೀರ್ವಾದಿಂದಲೇ ನಾನು ಸಿಎಂ ಆದೆ ಎಂದು ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ದೇಶದಲ್ಲಿ ಧಾರ್ಮಿಕ ನಂಬಿಕೆಗಳನ್ನು ಉಳಿಸುತ್ತಿರುವುದು ಬಿಜೆಪಿ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡಾ ಇದನ್ನೇ ಹೇಳಿದ್ದಾರೆ. ಸಮದಾಯ ಬಿಜೆಪಿ ಪರವಾಗಿಯೇ ಇದೆ. ಸಮುದಾಯದ ಬಂಧುಗಳು ಮೇ 10ರಂದು ಮತಗಟ್ಟೆಗೆ ಬಂದು ಬಿಜೆಪಿಗೆ ಮತ ಹಾಕಬೇಕು ಎಂದು ಬಿಎಸ್‌ ಯಡಿಯೂರಪ್ಪ ಮನವಿ ಮಾಡಿದರು.

ಬಿಜೆಪಿ ನನ್ನನ್ನು ಕಡೆಗಣಿಸಿಲ್ಲ ಎಂದು ಸ್ಪಷ್ಟಪಡಿಸಿದ ಬಿಎಸ್‌ವೈ

ಅಭಿವೃದ್ಧಿ ವಿಚಾರಗಳ ಆಧಾರದಲ್ಲಿ ಮತ ಕೇಳುವ ಧೈರ್ಯವನ್ನು ನೀವ್ಯಾಕೆ ಮಾಡುತ್ತಿಲ್ಲ. ಸಮುದಾಯದ ಆಧಾರದ ಮೇಲೆ ಯಾಕೆ ಮತ ಕೇಳುತ್ತಿದ್ದೀರಿ? ಲಿಂಗಾಯತ ನಾಯಕರನ್ನು ಬಿಜೆಪಿ ಕಡೆಗಣಿಸುತ್ತಿದೆ ಎಂಬ ಕಾಂಗ್ರೆಸ್‌ ಆರೋಪ ನಿಜವಲ್ಲವೇ ಎಂಬ ವಿಸ್ತಾರ ನ್ಯೂಸ್‌ ಪ್ರಶ್ನೆಗೆ ಉತ್ತರಿಸಿದ ಬಿ.ಎಸ್‌. ಯಡಿಯೂರಪ್ಪ ಅವರು, ಬಿಜೆಪಿ ನನ್ನನ್ನು ಕಡೆಗಣಿಸಿಲ್ಲ ಎಂದರು.

ʻʻನೀವು ಈ ಪ್ರಶ್ನೆಯನ್ನು ನೇರವಾಗಿ ನನಗೇ ಕೇಳಿದ್ದೀರಿ ಎನ್ನುವುದು ನನಗೆ ಗೊತ್ತಿದೆ. ಆದರೆ, ಬಿಜೆಪಿ ನನ್ನನ್ನು ಕಡೆಗಣಿಸಿಲ್ಲ. ನಾನು ಸ್ವಯಂಪ್ರೇರಿತವಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟೆ. ಬೇರೆಯವರನ್ನು ನೇಮಿಸಿ ಎಂದು ಹೇಳಿದೆ. ಇನ್ನು ಮುಂದೆ ಚುನಾವಣೆಗೆ ನಿಲ್ಲುವುದಿಲ್ಲ ಎಂದು ನಾನೇ ಘೋಷಿಸಿದೆ. ಈಗ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ನನ್ನ ಗುರಿ. ಅದಕ್ಕಾಗಿ ರಾಜ್ಯಾದ್ಯಂತ ಓಡಾಡುತ್ತಿದ್ದೇನೆ. ಇಷ್ಟೇ ಅಲ್ಲ, ಮುಂದಿನ ಲೋಕಸಭಾ ಚುನಾವಣೆಯಲ್ಲೂ 25ಕ್ಕೂ ಅಧಿಕ ಸ್ಥಾನ ಗೆಲ್ಲುತ್ತೇವೆ. ಮುಂದಿನ ಅವಧಿಪೂರ್ಣ ನಾನು ರಾಜ್ಯಾದ್ಯಂತ ಓಡಾಡಿ ಪಕ್ಷ ಸಂಘಟನೆ ಮಾಡುತ್ತೇನೆʼʼ ಎಂದು ಯಡಿಯೂರಪ್ಪ ಹೇಳಿದರು.

ಬೊಮ್ಮಾಯಿ ಅವರ ಕಡೆಗಣನೆ ಪ್ರಶ್ನೆಯೇ ಇಲ್ಲ ಎಂದ ಬಿಎಸ್‌ವೈ

ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ ಎಂಬ ಮಾತಿಗೆ ಉತ್ತರಿಸಿದ ಅವರು, ಅವರು ರಾಜ್ಯವಿಡೀ ಓಡಾಡುತ್ತಿದ್ದಾರೆ ಎಂದು ಹೇಳಿದರು. ರಾಜ್ಯದಲ್ಲಿ ನಾಯಕತ್ವ ಗಟ್ಟಿಯಿದೆ ಎಂದು ನುಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆಯೇ ಜಾಸ್ತಿ ಅವಲಂಬನೆ ಇದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಮಾಡಿದ್ದಾರೆ, ಸಮಾವೇಶಗಳಲ್ಲಿ ಭಾಗಿಯಾಗಿದ್ದಾರೆ. ಜನರೊಂದಿಗೆ ಬೆರೆತು ಜನರ ನಾಡಿಮಿಡಿತ ಅರಿತಿದ್ದಾರೆ. ಅವರು ನಮ್ಮ ಶಕ್ತಿ. ಅವರನ್ನು ಬಿಜೆಪಿ ಬಳಸಿಕೊಂಡಿದೆ ಎಂದರು ಬಿಎಸ್‌ ಯಡಿಯೂರಪ್ಪ.

ಸಿದ್ದರಾಮಯ್ಯ ಈ ಬಾರಿ ಸೋಲುವುದು ಖಂಡಿತ

ಬಿಜೆಪಿ ಈ ಬಾರಿ ಬಹುಮತ ಪಡೆಯುವುದು ಖಚಿತ. 130ರಿಂದ 135 ಸ್ಥಾನ ಖಂಡಿತವಾಗಿ ಪಡೆಯುತ್ತದೆ. ಸೂರ್ಯಚಂದ್ರರು ಇರುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಬಿಜೆಪಿ ಅಧಿಕಾರಕ್ಕೆ ಬರುವುದು. ನಾವು ಸ್ಪಷ್ಟ ಬಹುಮತದ ಸರ್ಕಾರ ರಚಿಸುತ್ತೇವೆʼʼ ಎಂದು ಹೇಳಿದ ಬಿ.ಎಸ್‌. ಯಡಿಯೂರಪ್ಪ, ಇನ್ನೊಂದು ಮಾತು ನಾನು ಹೇಳಲೇಬೇಕು, ವರುಣ ಕ್ಷೇತ್ರದಲ್ಲಿ ಈ ಬಾರಿ ಸಿದ್ದರಾಮಯ್ಯ ಖಂಡಿತವಾಗಿ ಸೋಲುತ್ತಾರೆ, ಸೋಮಣ್ಣ ಗೆದ್ದೇ ಗೆಲ್ಲುತ್ತಾರೆ ಎಂದು ನಗುತ್ತಾ ಹೇಳಿದರು.

ಇದನ್ನೂ ಓದಿ : Karnataka Election : 100ಕ್ಕೂ ಅಧಿಕ ಲಿಂಗಾಯತ ಸ್ವಾಮೀಜಿಗಳಿಂದ ಕಾಂಗ್ರೆಸ್‌ಗೆ ಬೆಂಬಲ ಎಂದ ಡಿಕೆಶಿ

Exit mobile version