Site icon Vistara News

Karnataka Election : ಲಿಂಗಾಯತ ವೇದಿಕೆ ಒಂದು ಕಾಲ್ಪನಿಕ ಸಂಘಟನೆ ಎಂದ ಸಿಎಂ ಬೊಮ್ಮಾಯಿ

farmer cm basavaraj bommai lashes out over karnataka cm siddaramaiah

karnataka-election: LIngayata vedike an imaginary organization says Bommai

ಹುಬ್ಬಳ್ಳಿ,: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ʻಲಿಂಗಾಯತ ವೇದಿಕೆʼ ಕಾಂಗ್ರೆಸ್‌ನ್ನು ಬೆಂಬಲಿಸಲಿದೆ ಎಂಬ ಪ್ರಕಟಣೆಗೆ ಸಿಎಂ ಬಸವರಾಜ ಬೊಮ್ಮಾಯಿ (CM Basavaraja Bommai) ಪ್ರತಿಕ್ರಿಯಿಸಿದ್ದಾರೆ. ಲಿಂಗಾಯತ ವೇದಿಕೆ ಎನ್ನುವುದು ಎಲ್ಲಿಯೂ ಇಲ್ಲ, ಅದೊಂದು ಕಾಲ್ಪನಿಕ ಸಂಘಟನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೀರಶೈವ ಸಮಾಜ ದೊಡ್ಡದಿದ್ದು ಯಾವುದೇ ಸಂಸ್ಥೆಯ ಅಡಿಯಲ್ಲಿ ಇಲ್ಲ ಎಂದರು. ʻʻವೀರಶೈವ ಮಹಾಸಭಾ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ (Shamanur Shivashankarappa) ಅವರನ್ನು ಗೌರವಿಸುತ್ತೇನೆ. ಆದರೆ, ಚುನಾವಣೆ ಸಂದರ್ಭದಲ್ಲಿ ಯಾವುದೇ ಒಂದು ಪಕ್ಷಕ್ಕೆ ಸಂಸ್ಥೆಯ ಹೆಸರು ಬಳಸುವುದು ಸರಿಯಲ್ಲ.ʼʼ ಎಂದು ಹೇಳಿದರು ಬಸವರಾಜ ಬೊಮ್ಮಾಯಿ.

ʻʻನಾಲ್ಕು ಜನ ಸೇರಿ ಏನೋ ಹೇಳಿದರೆ ಅದು ಲಿಂಗಾಯತರ ಧ್ವನಿ ಆಗುತ್ತದೆಯೇ? ಲಿಂಗಾಯತ ಸಮಾಜ ಸಮುದ್ರ ಇದ್ದಂತೆ. ಲಿಂಗಾಯತ ವೇದಿಕೆ ಚುನಾವಣೆ ಸಂದರ್ಭಗಳಲ್ಲಿ ಹುಟ್ಟಿಕೊಂಡ ಸಂಘಟನೆ ಎಂದು ಬೊಮ್ಮಾಯಿ ನುಡಿದರು.

ನಮ್ಮನ್ನು ಪ್ರಶ್ನಿಸಲು ಕಾಂಗ್ರೆಸ್‌ಗೆ ಯಾವುದೇ ನೈತಿಕತೆ ಇಲ್ಲ

ʻʻಬಿಜೆಪಿ ವಿರುದ್ಧ ಯಾವುದೇ ಪ್ರಕರಣ ಇಲ್ಲ, ಸಾಕ್ಷಿಯೂ ಇಲ್ಲ. ಭ್ರಷ್ಟಾಚಾರ ಆರೋಪದ ದಾಖಲೆ‌ ಕೊಡಿ ಎಂದು ಚುನಾವಣಾ ಆಯೋಗವನ್ನು ಕೇಳಿದ್ದು ಅವರಿಗೆ ಕೊಡಲು ಆಗಿಲ್ಲʼʼ ಎಂದು ಹೇಳಿದ ಬಸವರಾಜ ಬೊಮ್ಮಾಯಿ ಅವರು, ಇಷ್ಟೆಲ್ಲಾ ಮಾತನಾಡುವ ಎಲ್ಲಾ ಕಾಂಗ್ರೆಸ್‌ನವರ ಮೇಲೆ ಭ್ರಷ್ಟಾಚಾರ ಪ್ರಕರಣಗಳಿದ್ದು, ನ್ಯಾಯಾಲಯಗಳಿಗೆ ಅಲೆದಾಡುತ್ತಿದ್ದಾರೆ. ಯಾವ ನೈತಿಕತೆಯಿಂದ ನಮ್ಮನ್ನು ಪ್ರಶ್ನಿಸುತ್ತಾರೆ? ಎಂದರು.

ತಪ್ಪು ಮಾಡುವುದನ್ನು ಕಾಂಗ್ರೆಸ್ ಬಿಡಲಿ, ಆಮೇಲೆ ಐಟಿ ಬಗ್ಗೆ ಮಾತನಾಡಲಿ

ʻʻಆದಾಯ ತೆರಿಗೆ ಇಲಾಖೆಯವರು ಎಲ್ಲಾ ಜಿಲ್ಲೆಗಳಲ್ಲಿ ಇದ್ದಾರೆ, ಅವರಿಗೆ ಎಲ್ಲಿ ತಪ್ಪು‌ನಡೆಯುತ್ತಿದೆ ಎನ್ನುವ ಮಾಹಿತಿ ಅವರಿಗೆ ಇರುತ್ತದೆ. ಕಾಂಗ್ರೆಸ್‌ನವರು ತಪ್ಪು ಮಾಡಿದರೆ ನಾವು ಏನು ಮಾಡಲಾಗುತ್ತದೆ? ದಾಳಿಯಾಗುತ್ತದೆ ಎಂದು ಎಂ.ಬಿ. ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್ ಮೊದಲೇ ಹೇಳಿ ಬಿಡೋದು ಕಾಂಗ್ರೆಸ್ ನವರ ತಂತ್ರಗಾರಿಕೆʼʼ ಎಂದರು.

ಕೇಂದ್ರ ನಾಯಕರದ್ದು ಭಾವನಾತ್ಮಕ ಸಂಬಂಧ

ನಮ್ಮ ರಾಷ್ಟ್ರೀಯ ನಾಯಕರು ಎಲ್ಲಾ ಚುನಾವಣೆಗಳಲ್ಲಿ ರಾಜ್ಯಕ್ಕೆ‌ ಬಂದಿದ್ದಾರೆ. ರಾಷ್ಟ್ರೀಯ ನಾಯಕರದ್ದು ಹಾಗೂ ಕರ್ನಾಟಕದ ಜನರದ್ದು ಭಾವನಾತ್ಮಕ ಸಂಬಂಧ ಇದರಿಂದ ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಬೂಸ್ಟ್ ಕೊಡಲಿದೆ, ಇಂದೊಂದು ಬೂಸ್ಟರ್ ಡೋಸ್ ಎಂದರು.

ಸೋಮವಾರ ರಾಜ್ಯಾದ್ಯಂತ ಅಂತಿಮ ಹಂತದ ಬಹಿರಂಗ ಪ್ರಚಾರ ನಡೆಯುತ್ತಿದೆ‌. ಎಲ್ಲ ನಾಯಕರು ಬಹಿರಂಗ ಸಭೆ- ರೋಡ್ ಶೋ ನಡೆಸುತ್ತಿದ್ದಾರೆ. 224 ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ : Karnataka Election: ವರ್ಚಸ್ಸು ಕುಂದಿದ್ದೇ ಶೆಟ್ಟರ್‌ಗೆ ಟಿಕೆಟ್‌ ಕೈತಪ್ಪಲು ಕಾರಣ; ಲಿಂಗಾಯತರಿಗೆ ಅನ್ಯಾಯ ಆಗಿಲ್ಲ: ವಿಜಯ ಸಂಕೇಶ್ವರ

Exit mobile version