ಕರ್ನಾಟಕ ವಿಧಾನಸಭೆ ಚುನಾವಣೆ (karnataka election 2023) ಗರಿಗೆದರಿದೆ. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯ ಕ್ಷಣ ಕ್ಷಣ ಸುದ್ದಿಗೆ (Karnataka Election Live Updates) ವಿಸ್ತಾರ ನ್ಯೂಸ್ ಲೈವ್ ಅಪ್‌ಡೇಟ್ ನೋಡ್ತಾ ಇರಿ.
ಜನಾರ್ದನರೆಡ್ಡಿ ನಾಮ ಪತ್ರ ಸಲ್ಲಿಕೆ
ಮಾಜಿ ಸಚಿವ, ಕೆಆರ್ಪಿಪಿ ಸಂಸ್ಥಾಪಕ ಗಾಲಿ ಜನಾರ್ದನರೆಡ್ಡಿ ಇಂದು ಗಂಗಾವತಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
ಬೆಳಿಗ್ಗೆ ಟೆಂಪಲ್ ರನ್ ನಡೆಸಿದ ಬಳಿಕ ಮನೆಯಲ್ಲಿ ಗೋಪೂಜೆ ಮಾಡಿದರು. ನಂತರ ಬೃಹತ್ ರೋಡ್ ಶೋ ನಡೆಸಿದರು. ಸಾವಿರಾರು ಜನರು ಭಾಗವಹಿಸಿದ್ದ ರೋಡ್ ಶೋ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು.
ಬಳಿಕ ಕಾರಿನಲ್ಲಿ ತಹಸೀಲ್ದಾರ ಕಚೇರಿಗೆ ತೆರಳಿ ಪತ್ನಿ ಲಕ್ಷ್ಮೀಅರುಣಾ, ಮಗಳು ಬ್ರಹ್ಮಣಿ ಹಾಗೂ ಅಳಿಯ ರಾಜೀವರೆಡ್ಡಿಯೊಂದಿಗೆ ನಾಮಪತ್ರ ಸಲ್ಲಿಸಿದರು.
ಶೆಟ್ಟರ್ ಆರೋಪಕ್ಕೆ ಕಟೀಲ್ ತಿರುಗೇಟು
ಬಿಜೆಪಿಯಲ್ಲಿ ಯಾರೋ ಒಬ್ಬರು ಟಿಕೆಟ್ ಹಂಚಿಕೆಯ ಕುರಿತು ತೀರ್ಮಾನ ಮಾಡುವುದಿಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ತಮಗೆ ಟಿಕೆಟ್ ತಪ್ಪಲು ಬಿ.ಎಲ್. ಸಂತೋಷ್ ಕಾರಣ ಎಂದು ಶೆಟ್ಟರ್ ಆರೋಪಿಸಿದ್ದರು. ಬಿ. ಎಲ್. ಸಂತೋಷ್ ಸಂಘಟನಾ ಕಾರ್ಯದರ್ಶಿಯಾಗಿದ್ದಾರೆ. ಅವರು ಪಕ್ಷ ಸಂಘಟಿಸುವ ಕೆಲಸ ಮಾಡುತ್ತಾರೆ ಎಂದಿರುವ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಶೆಟ್ಟರ್ ಗೆ ಪಕ್ಷದಲ್ಲಿ ಅಭ್ಯರ್ಥಿಗಳ ಆಯ್ಕೆ ಹೇಗೆ ನಡೆಯುತ್ತದೆ ಎಂದು ಗೊತ್ತಿದ್ದರೂ ಈ ರೀತಿ ಆರೋಪ ಮಾಡಿದ್ದು ಸರಿಯಲ್ಲ ಎಂದಿದ್ದಾರೆ.
ವಿಯಯ್ ಕುಲಕರ್ಣಿಗೆ ನಿರ್ಬಂಧ ವಿನಾಯಿತಿ ಇಲ್ಲ
ಧಾರವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿಗೆ ಧಾರವಾಡ ಪ್ರವೇಶಕ್ಕೆ ವಿಧಿಸಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಜಾಗೊಂಡಿದೆ.
ಸುಪ್ರೀಂಕೋರ್ಟ್ ಈ ನಿರ್ಬಂಧ ವಿಧಿಸಿತ್ತು. ಷರತ್ತು ಸಡಿಲಿಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಒಪ್ಪಿಲ್ಲ. ಹೀಗಾಗಿ ಅವರು ಚುನಾವಣಾ ಪ್ರಚಾರಕ್ಕೆ ಧಾರವಾಡಕ್ಕೆ ಹೋಗುವಂತಿಲ್ಲ.
ಪ್ರಚಾರಕ್ಕೆ ಬಂದ ದೇವೇಗೌಡರು
ಚುನಾವಣಾ ರಣರಂಗವನ್ನು ಮಾಜಿ ಪ್ರಧಾನಿ ದೇವೇಗೌಡರು ಇಂದು ಪ್ರವೇಶಿಸಿದ್ದಾರೆ. ಕಡೂರು ಕ್ಷೇತ್ರದಿಂದ ಜಿಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ತಮ್ಮ ಮಾನಸ ಪುತ್ರ ವೈಎಸ್‌ವಿ ದತ್ತಾ ನಾಮ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಅವರು ಉಪಸ್ಥಿತರಿದ್ದರು.
ನಾಮ ಪತ್ರ ಸಲ್ಲಿಸುವುದಕ್ಕೂ ಮೊದಲು ನಡೆದ ಮೆರವಣಿಗೆಯಲ್ಲಿ ಜೆಡಿಎಸ್ ನಾಯಕರಾದ ಮಾಜಿ ಸಚಿವ ರೇವಣ್ಣ, ಮಾಜಿ ಸಂಸದ ಪ್ರಜ್ವಲ್ ಭಾಗವಹಿಸಿದ್ದರು.
ಮಾಜಿ ಸಿಎಂ ಸಿದ್ದರಾಮಯ್ಯಗೆ ಜ್ವರ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜ್ವರದಿಂದ ಬಳಲುತ್ತಿದ್ದಾರೆ. ಈ ವಿಷಯವನ್ನು ಮೈಸೂರಿನಲ್ಲಿ ಅವರೇ ತಿಳಿಸಿದ್ದಾರೆ.
ಪ್ರಚಾರದಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ ಎಡಗೈಗೆ ಗಾಯವಾಗಿತ್ತು. ಇದರ ನಂಜು ಹೆಚ್ಚಾಗಿ ಜ್ವರ ಬಂದಿದೆ.
ʻʻಜ್ವರ ಚುನಾವಣಾ ಸಮಯ ಇದು ಎಂದು ಹೇಳಿಕೊಂಡು ಬಾರದೇ ಇರುವುದಿಲ್ಲ. ಇವೆಲ್ಲಾ ನಿಸರ್ಗದ ನಿಯಮ. ಇನ್ನೂ ನಾಲ್ಕೈದು ದಿನ ಸ್ವಲ್ಪ ರೆಸ್ಟ್ ಬೇಕು. ಆಮೇಲೆ ಸರಿ ಹೋಗುತ್ತೇನೆʼʼ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.