ಕರ್ನಾಟಕ ವಿಧಾನಸಭೆ ಚುನಾವಣೆ (karnataka election 2023) ಗರಿಗೆದರಿದೆ. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯ ಕ್ಷಣ ಕ್ಷಣ ಸುದ್ದಿಗೆ (Karnataka Election Live Updates) ವಿಸ್ತಾರ ನ್ಯೂಸ್ ಲೈವ್ ಅಪ್‌ಡೇಟ್ ನೋಡ್ತಾ ಇರಿ.
ಹತ್ತನೇ ಬಾರಿ ಆರಗ ಜ್ಞಾನೇಂದ್ರ ನಾಮಪತ್ರ ಸಲ್ಲಿಕೆ
ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹತ್ತನೇ ಬಾರಿಗೆ ಒಂದೇ ಪಕ್ಷ ಒಂದೇ ಚಿಹ್ನೆಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಅವರು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದ್ದಾರೆ. ಕಳೆದ 9 ಚುನಾವಣೆಯಲ್ಲಿ 4 ಬಾರಿ ಅವರು ಗೆದ್ದಿದ್ದಾರೆ. ಬೃಹತ್ ಮೆರವಣಿಗೆಯಲ್ಲಿ ಆಗಮಿಸಿದ ಅವರು ನಾಮಪತ್ರ ಸಲ್ಲಿಸಿದ್ದಾರೆ.
ಇದೇ ಸಂದರ್ಭದಲ್ಲಿ ಅವರ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಅಭ್ಯರ್ಥಿಯಾಗಿರುವ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಕೂಡ ನಾಮಪತ್ರ ಸಲ್ಲಿಸಿದರು. ಅವರೊಂದಿಗೆ ಪಕ್ಷದ ನಾಯಕ ಮಂಜುನಾಥ ಗೌಡ ಇದ್ದರು.
ಕಾಂಗ್ರೆಸ್‌ನ ಲಿಂಗಾಯಿತ ನಾಯಕನಿಗೆ ಬಿಜೆಪಿ ಗಾಳ
ಉತ್ತರ ಕರ್ನಾಟಕದ ಹಿರಿಯ ಲಿಂಗಾಯತ ನಾಯಕ, ಕಾಂಗ್ರೆಸ್‌ನ ಎಸ್ ಆರ್ ಪಾಟೀಲ್ ಅವರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸಿದೆ. ಬಿಜೆಪಿ ನಾಯಕ ಮುರುಗೇಶ್ ನಿರಾಣಿ ಎಸ್ ಆರ್. ಪಾಟೀಲ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ಮುಧೋಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಇದನ್ನು ಒಪ್ಪಿಕೊಂಡಿರುವ ಮುರುಗೇಶ್ ನಿರಾಣಿ, ಎಸ್ ಆರ್ ಪಾಟೀಲ್ ಅವರನ್ನ ಸಂಪರ್ಕ ಮಾಡಿದ್ದು ನಿಜ. ಎರಡು ದಿನ ಸಮಯ ಕೊಡಿ ತಿಳಿಸುತ್ತೇನೆ ಎಂದಿದ್ದಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಎಸ್ ಆರ್ ಪಾಟೀಲ್ ಟಿಕೆಟ್ ತಪ್ಪಿದ್ದರಿಂದ ಅಸಮಾಧಾನಗೊಂಡಿದ್ದರು.
ಕಾಂಗ್ರೆಸ್ ನಾಯಕರಿಗೆ ಇಡಿ ದಾಳಿಯ ಬೆದರಿಕೆ
ಪಕ್ಷದ ಅಭಿಮಾನಿಗಳಿಗೆ ಹಾಗೂ ಕಾಂಗ್ರೆಸ್ ನಾಯಕರ ಸ್ನೇಹಿತರಿಗೆ ಇಡಿ ದಾಳಿ ನಡೆಸುವ ಬೆದರಿಕೆ ಹಾಕಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ನೀವು ಸಹಾಯ ಮಾಡಬಾರದು ಎಂದು ಬಿಜೆಪಿ ನಾಯಕರು ಹಾಗೂ ಐಟಿ ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿದ ಅವರು, ಎಲ್ಲ ಬಿಸ್ನೆಸ್‌ಮೆನ್‌ಗಳಿಗೆ ಈ ಸಂಬಂಧ ಕರೆ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಜನತೆಯ ಆಶೀರ್ವಾದ ಪಡೆದು ನಿವೃತ್ತಿ
ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವುದು ನನ್ನ ಮುಂದಿನ ಗುರಿ. ನಾನು ಜನತೆಯ ಆಶೀರ್ವಾದ ಪಡೆದು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಜಗದೀಶ್ ಶೆಟ್ಟರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಅಧಿಕಾರದ ಆಸೆಯಿಂದ ನಾನು ಪಕ್ಷ ಬದಲಾಯಿಸಿಲ್ಲ. ಮೂಲ ಬಿಜೆಪಿಗರಿಗೆ ಆಗುತ್ತಿರುವ ಅನ್ಯಾಯದಿಂದಾಗಿ ನಾನೇ ಪಕ್ಷ ಬಿಡುವಂತಾಯಿತು ಎಂದು ಹೇಳಿದ ಜಗದೀಶ್ ಶೆಟ್ಟರ್ ಪಕ್ಷದಲ್ಲಿನ ಎಲ್ಲ ಬೆಳವಣಿಗೆಗಳ ಬಗ್ಗೆ ಪಕ್ಷದ ನಾಯಕ ಬಿ ಎಸ್ ಯಡಿಯೂರಪ್ಪ ಆವರಿಗೆ ಚೆನ್ನಾಗಿ ಗೊತ್ತಿದೆ ಎಂದಿದ್ದಾರೆ.
ಹೈಕಮಾಂಡ್ ಮುಂದೆ ಜೋಶಿ ಮಾತನಾಡಲಿಲ್ಲ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಗೆಲ್ಲಿಸಲು ನಾನು ಶ್ರಮಿಸಿದ್ದೇನೆ. ಆದರೆ ನನ್ನ ಪರವಾಗಿ ಅವರು ಪಕ್ಷದ ಹೈಕಮಾಂಡ್ ಮುಂದೆ ಗಟ್ಟಿ ದನಿಯಲ್ಲಿ ಮಾತನಾಡಲಿಲ್ಲ ಎಂದು ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.