ಕರ್ನಾಟಕ ವಿಧಾನಸಭೆ ಚುನಾವಣೆ (karnataka election 2023) ಗರಿಗೆದರಿದೆ. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯ ಕ್ಷಣ ಕ್ಷಣ ಸುದ್ದಿಗೆ (Karnataka Election Live Updates) ವಿಸ್ತಾರ ನ್ಯೂಸ್ ಲೈವ್ ಅಪ್‌ಡೇಟ್ ನೋಡ್ತಾ ಇರಿ.
ಬಿ. ಎಲ್. ಸಂತೋಷ್ ಟಿಕೆಟ್ ತಪ್ಪಿಸಿದರು!
ನನಗೆ ಟಿಕೆಟ್ ತಪ್ಪಲು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಕಾರಣ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಜಗದೀಶ್ ಶೆಟ್ಟರ್ ನೇರವಾಗಿ ಆರೋಪಿಸಿದ್ದಾರೆ.
ಹುಬ್ಬಳ್ಳಿ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜಗದೀಶ್ ಶೆಟ್ಟರ್, ಬಿಜೆಪಿಯ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಬಿ.ಎಲ್. ಸಂತೋಷ್ ಅವರ ಮಾನಸ ಪುತ್ರ ಎಂದು ಹೇಳಿದರು. ತಮ್ಮ ಮಾನಸ ಪುತ್ರನಿಗೆ ಟಿಕೆಟ್ ನೀಡಲು ಸಂತೋಷ್ ನನ್ನಂತ ಹಿರಿಯ ಲೀಡರ್‌ನನ್ನು ಪಕ್ಷದಿಂದ ಹೊರಹಾಕಿದರು ಎಂದು ಶೆಟ್ಟರ್ ಆರೋಪಿಸಿದ್ದಾರೆ.
ಹುಬ್ಬಳ್ಳಿ- ಧಾರವಾಡ ಸೇರಿದಂತೆ ಅಕ್ಕ ಪಕ್ಕದ ಜಿಲ್ಲೆಗಳ ಮೇಲೆ ಈ ಬೆಳವಣಿಗೆ ಪರಿಣಾಮ ಬೀರಲಿದೆ ಎಂದು ಶೆಟ್ಟರ್ ಹೇಳಿದ್ದಾರೆ.
ಖ್ಯಾತ ನಟಿ ರಮ್ಯಾ ಮಂಡ್ಯದಿಂದ ಸ್ಪರ್ಧೆ?
ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಂಡ್ಯದಿಂದಲೂ ಸ್ಪರ್ಧೆ ನಡೆಸಲಿದ್ದಾರೆ ಎಂಬ ವರದಿಗಳಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಮಂಡ್ಯದ ಅಭ್ಯರ್ಥಿಯನ್ನು ಬದಲಾಯಿಸಲು ಚಿಂತಿಸುತ್ತಿದೆ ಎಂದು ತಿಳಿದುಬಂದಿದೆ.
ಹೀಗಾಗಿಯೇ ಮಂಡ್ಯ ಕ್ಷೇತ್ರದ ಘೋಷಿತ ಕೈ ಅಭ್ಯರ್ಥಿ ರವಿ ಗಣಿಗ ಅವರಿಗೆ ಇನ್ನೂ ಬಿ ಫಾರಂ ನೀಡಲಾಗಿಲ್ಲ. ಕುಮಾರಸ್ವಾಮಿ ಸ್ಪರ್ಧಿಸಿದರೆ ನಟಿ ರಮ್ಯಾರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಯೋಚಿಸುತ್ತಿದೆ ಎಂದು ಹೇಳಲಾಗುತ್ತಿದ್ದು, ಇದು ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.
ಜೆಡಿಎಸ್ ಕೂಡ ಘೋಷಿತ ಅಭ್ಯರ್ಥಿ ಎಂ.ಶ್ರೀನಿವಾಸ್‌ಗೆ ಇನ್ನೂ ಬಿ ಫಾರಂ ನೀಡಿಲ್ಲ. ಈ ನಡುವೆ ಪಕ್ಷ ಸೂಚಿಸಿದರೆ ಮಂಡ್ಯದಿಂದ ಸ್ಪರ್ಧಿಸಲು ತಾವೂ ಸಿದ್ಧ ಎಂದು ಸಂಸದೆ, ನಟಿ ಸುಮಲತಾ ಅಂಬರೀಷ್ ಪ್ರಕಟಿಸಿದ್ದಾರೆ. ಹೀಗಾಗಿ ಮಂಡ್ಯ ಕ್ಷೇತ್ರದ ಚುನಾವಣೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ತೇರದಾಳ ಕ್ಷೇತ್ರದಿಂದ ಸ್ವಾಮೀಜಿ ಕಣಕ್ಕೆ
ಖ್ಯಾತ ನಟಿ ಉಮಾಶ್ರೀ ಸ್ಪರ್ಧೆಯಿಂದ ಗಮನ ಸೆಳೆಯುತ್ತಿದ್ದ ತೇರದಾಳ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ನೇಕಾರರ ಪೀಠದ ಅಂದರೆ ಕುರುಹಿನಶೆಟ್ಟಿ ಪೀಠದ ಜಗದ್ಗುರು ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ಕಣಕ್ಕಿಳಿಯಲಿದ್ದಾರೆ.
ಚುನಾವಣಾ ಕಣಕ್ಕೆ ನೇಕಾರ ಜಗದ್ಗುರು ಇಳಿಸಲು ಸಿದ್ಧತೆ ನಡೆದಿದ್ದು, ಎಲ್ಲ ನೇಕಾರರು ನೇತಾರರು ಸೇರಿ ಸ್ವಾಮೀಜಿ ಅವರನ್ನ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾಳೆಯೇ ಸ್ವಾಮೀಜಿ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.
ಸೊಗಡು ಶಿವಣ್ಣ ಪಕ್ಷೇತರ ಅಭ್ಯರ್ಥಿ
ಮಾಜಿ ಸಚಿವ ಸೊಗಡು ಶಿವಣ್ಣ ಪಕ್ಷೇತರ ಅಭ್ಯರ್ಥಿಯಾಗಿ ತುಮಕೂರು ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಬಿಜೆಪಿ ತೊರೆದ ಬಳಿಕ ಜೆಡಿಎಸ್ ಸೇರುವ ಪ್ರಯತ್ನ ನಡೆಸಿದ್ದರು. ಆದರೆ ಜೆಡಿಎಸ್ ಟಿಕೆಟ್ ನೀಡಲು ನಿರಾಕರಿಸಿತ್ತು. ಹೀಗಾಗಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ.
ಸದ್ಯವೇ ಕಾಂಗ್ರೆಸ್‌ನ 4 ನೇ ಪಟ್ಟಿ
ಕಾಂಗ್ರೆಸ್‌ನ ಬಾಕಿ ಇರುವ 14 ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಸದ್ಯವೇ ಪ್ರಕಟವಾಗಲಿದೆ.
ಕಾಂಗ್ರೆಸ್ ಬಾಕಿ ಉಳಿಸಿಕೊಂಡಿರುವ ಕ್ಷೇತ್ರಗಳು ಇಂತಿವೆ : ಪುಲಕೇಶಿ ನಗರ, ಸಿವಿ ರಾಮನ್ ನಗರ, ಮುಳಬಾಗಿಲು, ರಾಯಚೂರು ಸಿಟಿ, ಶಿಗ್ಗಾವಿ, ಶ್ರವಣಬೆಳಗೊಳ, ಅರಕಲಗೂಡು, ಲಿಂಗಸೂರು.