Site icon Vistara News

Karnataka Election : ಮೋದಿ ಅಂದ್ರೆ ವಿಷದ ಹಾವಿದ್ದಂತೆ; ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆ

Karnataka Election 2023

Karnataka Election 2023

ಗದಗ: ನರೇಂದ್ರ ಮೋದಿ ಅಂದರೆ ವಿಷದ ಹಾವಿದ್ದಂತೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ. ವಿಧಾನಸಭಾ ಚುನಾವಣೆಯ (Karnataka Election) ಸನಿಹದಲ್ಲಿ ಖರ್ಗೆ ನೀಡಿದ ಹೇಳಿಕೆ ಸಾಕಷ್ಟು ಸದ್ದು ಮಾಡಿದೆ. ಕಳೆದ ಗುಜರಾತ್‌ ಚುನಾವಣೆಯ ಸಂದರ್ಭದಲ್ಲೂ ಮಲ್ಲಿಕಾರ್ಜುನ ಖರ್ಗೆ ಅವರು ನರೇಂದ್ರ ಮೋದಿ ಅವರನ್ನು ರಾವಣನಿಗೆ ಹೋಲಿಸಿ ವಿವಾದಕ್ಕೆ ಗುರಿಯಾಗಿದ್ದರು.

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದಲ್ಲಿ ನಡೆದ ಕಾಂಗ್ರೆಸ್‌ನ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು.

ಮೋದಿ ಒಬ್ಬನೇ ಸಾಕು ದೇಶ ಹಾಳು ಮಾಡೋಕೆ

ʻʻಕೆಲವರು ಹೇಳುತ್ತಾರೆ, ಇಡೀ ವಿರೋಧ ಪಕ್ಷಗಳೆಲ್ಲ ಒಂದು ಕಡೆ, ಮೋದಿ ಅವರೊಬ್ಬರೇ ಒಂದು ಕಡೆ. ಮೋದಿ ಒಬ್ಬರೇ ಸಾಕು ಎಲ್ಲರಿಗೂ ಅಂತ. ಹೌದು ಮೋದಿ ಒಬ್ಬರೇ ಸಾಕು, ಮೋದಿ ಒಬ್ಬರೇ ಸಾಕು ದೇಶ ಹಾಳು ಮಾಡುವುದಕ್ಕೆ. ಎಷ್ಟೇ ಹಾಲಿದ್ದರೂ ಒಂದು ತೊಟ್ಟು ಹುಳಿ ಅದನ್ನು ಹಾಳು ಮಾಡಬಲ್ಲದು, ಅದೇ ರೀತಿ ಇವರ ಸಿದ್ಧಾಂತ ಒಂದೇ ಸಾಕು, ದೇಶ ಹಾಳು ಮಾಡುವುದಕ್ಕೆʼʼ ಎಂದರು ಮಲ್ಲಿಕಾರ್ಜುನ ಖರ್ಗೆ.

ʻʻಮೋದಿ ಒಬ್ಬರು ವಿಷದ ಹಾವಿದ್ದಂತೆ. ಹಾಗಂತ ವಿಷ ಇದೆಯಾ ಅಂತ ಏನಾದರೂ ನೆಕ್ಕಲು ಹೋದರೆ ಅವನು ಸತ್ತಂತೆ. ಯಾವ ಕಾರಣಕ್ಕೂ ನೆಕ್ಕಲು ಹೋಗಬೇಡಿ, ಒಳ್ಳೆ ಮನುಷ್ಯ ಇರ್ಬೋದಾ ನೋಡೋಣ ಅಂತ ಪ್ರಯತ್ನ ಮಾಡಬೇಡಿ, ನೆಕ್ಕಲು ಹೋದರೆ ನೀವು ಮಲಗೇ ಬಿಡ್ತೀರಿʼʼ ಎಂದು ಮಲ್ಲಿಕಾರ್ಜುನ ಖರ್ಗೆ ಎಚ್ಚರಿಸಿದರು.

ಕರ್ನಾಟಕ ಗೆದ್ದರೆ ದೇಶ ಗೆದ್ದಂತೆ

ʻʻಈ ಚುನಾವಣೆ ಮಹತ್ವದ ಚುನಾವಣೆಯಾಗಿದೆ. ನಾವು ಕರ್ನಾಟಕದಲ್ಲಿ ಗೆದ್ದರೆ ದೇಶವನ್ನೇ ಗೆಲ್ಲುತ್ತೇವೆ ಎನ್ನುವುದು ಖಚಿತ. ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ ಅವರನ್ನು ದ್ವೇಷ ರಾಜಕಾರಣ ಬಳಸಿ ಅನರ್ಹರನ್ನಾಗಿ ಮಾಡಿ ರಸ್ತೆ ಮೇಲೆ ಹಾಕಿದ್ದಾರೆ. ಹಿಂದೆ 1977ರಲ್ಲಿ ಇಂದಿರಾ ಗಾಂಧಿಯವರನ್ನೂ ಇದೇ ರೀತಿ ಅನರ್ಹಗೊಳಿಸಲಾಗಿತ್ತು. ಅದಾದ ಬಳಿಕ ಅವರಿಗೆ ಚಿಕ್ಕಮಗಳೂರು ಪುನರ್ಜನ್ಮ ನೀಡಿತ್ತು. ಅದೇ ರೀತಿ ಈ ಬಾರಿಯೂ 2024ರಲ್ಲಿ ಬಿಜೆಪಿ ಸೋಲುತ್ತದೆʼʼ ಎಂದು ಹೇಳಿದರು.

ಮನ್‌ ಕಿ ಬಾತ್‌ನಲ್ಲಿ ಲಂಚದ ಮಾತೇಕಿಲ್ಲ?

ʻʻಈಗಿನ ಸರಕಾರ 40% ಕಮೀಷನ್ ಸರಕಾರ. ಇವರಿಗೆ ಪಾಠ ಕಲಿಸಬೇಕುʼʼ ಎಂದು ಹೇಳಿದ ಅವರು, ಮನ್ ಕಿ ಬಾತ್, ಘರ್ ಕಿ ಬಾತ್‌ನಲ್ಲಿ ಹೆಣ್ಮಕ್ಕಳ ಬಗ್ಗೆ, ಸುಸೈಡ್ ಮಾಡಿಕೊಳ್ಳುವವರ ಬಗ್ಗೆ ಮಾತನಾಡುತ್ತಾರೆ. ಆದರೆ, ಲಂಚ ತೆಗೆದುಕೊಂಡವರ ಬಗ್ಗೆ ಮಾತನಾಡಲ್ಲ. ಅದರ ಬದಲು 40% ತೆಗೆದುಕೊಂಡವರನ್ನೇ ಪಕ್ಕದಲ್ಲಿ ಕೂರಿಸಿಕೊಳ್ಳುತ್ತಾರೆʼʼ ಎಂದು ಲೇವಡಿ ಮಾಡಿದರು.

ʻʻಕರ್ನಾಟಕದಲ್ಲಿ ಇಷ್ಟೊಂದು ಲಂಚ ಹೊಡೆಯುತ್ತಿದ್ದಾರೆ. ರಾಷ್ಟ್ರಪತಿಗೆ. ರಾಜ್ಯಪಾಲರಿಗೆ. ಪ್ರಧಾನಿಗೆ ಬರವಣಿಗೆ ಮೂಲಕ ಪತ್ರ ಬರೆದರೂ ಕ್ರಮ ಕೈಗೊಂಡಿಲ್ಲ. ಎಲ್ಲಿದೆ ನಿಮ್ಮ ಈಡಿ, ಸಿಬಿಐ, ಇನ್ಕಮ್ ಟ್ಯಾಕ್ಸ್ ಇಲಾಖೆʼʼ ಎಂದು ಪ್ರಶ್ನಿಸಿದರು ಖರ್ಗೆ.

70 ವರ್ಷದಲ್ಲಿ ನಾವು ಮಾಡಿದ್ದೇನೆಂದರೆ..

ʻʻ70 ವರ್ಷದಿಂದ ಕಾಂಗ್ರೆಸ್ ಏನ್ ಮಾಡಿದೆ ಅಂತ ಕೇಳುತ್ತಾರೆ. 70 ವರ್ಷದಿಂದ ನಾವು ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಿದ್ದರಿಂದಾಗಿಯೇ ನಿಮ್ಮಂತ ಚಹ ಮಾರೋವವನೂ ಪ್ರಧಾನಿಯಾಗಿದ್ದಾನೆ. ನನ್ನಂತ ಕೂಲಿ ಕಾರ್ಮಿಕನ ಮಗ ವಿರೋಧ ಪಕ್ಷದ ನಾಯಕನಾಗಿದ್ದೇನೆʼʼ ಎಂದು ಹೇಳಿದರು ಮಲ್ಲಿಕಾರ್ಜುನ ಖರ್ಗೆ.

ʻʻಗಾಂಧಿಜಿಯವರನ್ನ ಇಡೀ ಜಗತ್ತು ಪ್ರೀತಿ ಮಾಡಿದ್ರೆ ನೀವು ಗೋಡ್ಸೆಯನ್ನು ಪ್ರೀತಿ ಮಾಡ್ತೀರಿ. ಇತ್ತೀಚೆಗೆ ಅಂಬೇಡ್ಕರ್ ಪೋಟೊ ಯಾಕೆ ಹಾಕ್ತಿದ್ದೀರಿ ಅಂದರೆ ದಲಿತರ ಓಟು ಸಿಗ್ತದೆ ಅಂತ. ದಲಿತರ ನಡುವೆ ಲೆಫ್ಟ್ ರೈಟ್ ಅಂತ ಮಾಡಿ ಜಗಳ ಹಚ್ಚೋದೇ ನಿಮ್ಮ ಕೆಲಸʼʼ ಎಂದು ಖರ್ಗೆ ಕೆಂಡ ಕಾರಿದರು.

ಅಮಿತ್‌ ಶಾ ಮೇಲೂ ಕೆಂಡಾಮಂಡಲ

ʻʻಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕೋಮುಗಲಭೆಗಳಾಗುತ್ತವೆ, ದಂಗೆಗಳಾಗುತ್ತವೆ ಎಂದು ಅಮಿತ್ ಶಾ ಹೇಳುತ್ತಾರೆ. ಕಾಂಗ್ರೆಸ್ ಅವಧಿಯಲ್ಲಿ ಗುಜರಾತ್ ನಂತೆ ದೇಶದಲ್ಲಿ ಎಲ್ಲಿಯಾದರೂ ದಂಗೆಯಾಗಿದೆಯಾ?ʼʼ ಎಂದು ಖರ್ಗೆ ಪ್ರಶ್ನಿಸಿದರು. ಕಾಂಗ್ರೆಸ್‌ನ ಅನೇಕ ನಾಯಕರು, ದೇಶಕ್ಕಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಬಿಜೆಪಿಯ ಒಂದು ನಾಯಿ ಕೂಡಾ ದೇಶಕ್ಕಾಗಿ ಸತ್ತಿಲ್ಲ. ಆರೆಸ್ಸೆಸ್‌ನವರೂ ಸತ್ತಿಲ್ಲ.ʼʼ ಎಂದು ಖರ್ಗೆ ನುಡಿದರು.

ಕಾರ್ಪೊರೇಷನ್‌ನಲ್ಲೂ ಮೋದಿಗೆ ಮತ ಹಾಕಬೇಕಾ?

ನರೇಂದ್ರ ಮೋದಿ ಅವರು ಒಬ್ಬ ದೇಶದ ಪ್ರಧಾನಿಯಾಗಿ ಹಳ್ಳಿ ಹಳ್ಳಿ ತಾಲೂಕಿಗೆ ಅಡ್ಡಾಡುತ್ತಾರೆ. ಮೋದಿ ಮುಖ ನೋಡಿ‌ ಮತ ಕೊಡಿ ಅಂತ ಹೇಳ್ತಿದ್ದಾರೆ. ಎಂಎಲ್.ಎ ಇಲೆಕ್ಷನ್‌ ಮಾತ್ರವಲ್ಲ, ಕಾರ್ಪೊರೇಷನ್ ಇಲೆಕ್ಷನ್‌ನಲ್ಲಿಯೂ ಮೋದಿ ನೋಡಿ ಮತ ಕೊಡಿ ಅಂತ ಹೇಳಿದ್ರು. ಎಷ್ಟು ಮುಖ ಇದ್ದಾವೆ ನಿಮ್ಮವು ಎಂದು ಖರ್ಗೆ ಪ್ರಶ್ನಿಸಿದರು. ಇವರು ಬರೀ ಆಸೆಬುರುಕರು, ಕುರ್ಚಿ ವ್ಯಾಮೋಹಿಗಳು. ಯಾವುದಾದರೂ ಒಂದು ಖುರ್ಚಿ ಖಾಲಿ ಇದ್ರೆ ಅವರೇ ಬಂದು ಕೂರ್ತಾರೆ ಎಂದು ಗೇಲಿ ಮಾಡಿದರು.

ಎಲ್ಲಿದೆ ಕಪ್ಪು ಹಣ, ಎಲ್ಲಿದೆ ಉದ್ಯೋಗ?

ʻʻಕಪ್ಪು ಹಣ ತಂದು ಪ್ರತಿಯೊಬ್ಬರಿಗೂ 15 ಲಕ್ಷ ರೂ. ಕೊಡ್ತೇವೆ ಅಂದ್ರು. ಈ ಕಪ್ಪು ಹಣ ತಂದು ಅದಾನಿ ಬಳಿ ಇಟ್ಟಿದ್ದಾರೆನೋ…? ಯುವಕರಿಗೆ ವರ್ಷಕ್ಕೆ 2 ಕೋಟಿ ನೌಕರಿ ಕೊಡ್ತೇವೆ ಅಂದ್ರು. 9 ವರ್ಷದಿಂದ 18 ಕೋಟಿ ಜನರಿಗೆ ನೌಕರಿಗೆ ಕೊಡಬೇಕಿತ್ತು. ಹೇಳೋದೆಲ್ಲ ಬರೀ ಸುಳ್ಳು ಎಂದು ಜನರಿಗೆ ಗೊತ್ತಾಗಿದೆ. 30 ಲಕ್ಷ ಸರಕಾರಿ ನೌಕರಿ ಖಾಲಿ ಇದೆ. ಅವುಗಳನ್ನಾದರೂ ತುಂಬಿ. ಕರ್ನಾಟಕದಲ್ಲಿ ನೌಕರಿ ಖಾಲಿ ಬಿದ್ದಿವೆ. ಇಲ್ಲಿ ಬೊಮ್ಮಾಯಿನೂ ತುಂಬ್ತಿಲ್ಲ ಅಲ್ಲಿ‌ ಮೋದಿನೂ ತುಂಬ್ತಿಲ್ಲʼ ಎಂದು ಆಕ್ಷೇಪಿಸಿದರು.

ಮೋದಿ ದೊಡ್ಡ ಸುಳ್ಳುಗಾರ

ʻʻಎಲ್ಲದಕ್ಕೂ ಮೋದಿ ಮೋದಿ ಅಂತ ಘೋಷಣೆ ಕೂಗ್ತಾರೆ. ಮೋದಿ ಕರ್ನಾಟಕಕ್ಕೆ ಏನ್ಮಾಡಿದ್ದಾರೆ ಹೇಳಿ.. ನಾವು ಲಕ್ಷಾಂತರ ಎಕರೆ ಪ್ರದೇಶಕ್ಕೆ ನೀರಾವರಿ ಮಾಡಿದ್ದೇವೆ. 70 ವರ್ಷದಿಂದ 70% ಜನ ಶಿಕ್ಷಣ ಪಡೆಯುವ ಹಾಗೆ ಮಾಡದ್ದೇವೆ. ಅದರಲ್ಲಿ ಮೋದಿ, ಯೋಗಿ ಭೋಗಿ ಎಲ್ಲರೂ ಇದ್ದಾರೆ. ಇಂದಿರಾ ಗಾಂಧಿ ಅವರು ಮೊದಲ ಬಾರಿಗೆ ರಾಕೆಟ್ ಹಾರಿಸಿದ್ರು. ಅವರೇನಾದರೂ ಹೇಳಿಕೊಂಡು ಬಂದ್ರಾ? ಈಗ ಎಲ್ಲಿಯಾದರೂ ರಾಕೆಟ್ ಹಾರಿದ್ರೆ ಏ ಮೇರಾ ಕಾಮ್ ಹೈ ಅಂತ ಮೋದಿ ಮುಂದೆ ಬರ್ತಾರೆʼʼ ಎಂದು ಕಟಕಿಯಾಡಿದರು ಖರ್ಗೆ.

ಎಲ್ಲ ಬಂದರು, ವಿಮಾನ ನಿಲ್ದಾಣಗಳು ಅದಾನಿಗೆ!

ʻʻಅದಾನಿ ಕಂಪನಿಗೆ ಇವರದ್ದೇ ಎಲ್ಲ ರೀತಿಯ ಬೆಂಬಲ. 2014ರಲ್ಲಿ ಅವರ ಸಂಪತ್ತು 50 ಸಾವಿರ ಕೋಟಿ. ಅದು 2020ರಲ್ಲಿ‌ 2 ಲಕ್ಷ ಕೋಟಿ ಆಯ್ತು. 2023ರಲ್ಲಿ‌ 12 ಲಕ್ಷ ಕೋಟಿ ಆಯ್ತು. ಇಷ್ಟೊಂದು ಹಣ ಮಾಡಬೇಕಾದರೆ ಎಷ್ಟು ಸರಕಾರಿ ದುಡ್ಡು ಹೊಡೆದಿರಬೇಕು. ಎಲ್ಐಸಿ ದುಡ್ಡನ್ನು ಕೂಡಾ ಸಾಲದ ರೂಪದಲ್ಲಿ ಅವರಿಗೆ ನೀಡಲಾಗಿದೆ. ಎಸ್‌ಬಿಐನವರೂ ಅವರಿಗೇ ಸಾಲ ಕೊಡುವುದು. ಬಂದರುಗಳು, ವಿಮಾನ ನಿಲ್ದಾಣಗಳು ಎಲ್ಲವನ್ನೂ ಅವರಿಗೇ ಕೊಟ್ಟಿದ್ದಾರೆ.

ನಿಮ್ಮ ಎದೆ ಅಳತೆ ತಗೊಂಡು ನಾವು ಏನು ಮಾಡೋಣ?

ಮಾತೆತ್ತಿದ್ದರೆ ಐವತ್ತಾರು ಇಂಚಿನ ಎದೆ ಇರುವ ಮೋದಿ ಅಂತಾರೆ. ನಿಮ್ಮ ಎದೆ ಅಳತೆ ಹಿಡಿದುಕೊಂಡು ನಾವೇನು ಮಾಡೋಣ? 750 ಜನ ರೈತರು ದಿಲ್ಲಿಯಲ್ಲಿ ಸತ್ತರು. ಕೇಂದ್ರ ಸಚಿವರೊಬ್ಬರ ಮಗ ಜೀಪ್ ಹಾಯಿಸಿ ನಾಲ್ಕು ಜನ ರೈತರನ್ನ ಸಾಯಿಸಿದ. ಆಗ ಈ ಎದೆ ಯಾವ ರೀತಿಯಲ್ಲೂ ಕೆಲಸ ಮಾಡಲಿಲ್ಲʼʼ ಎಂದ ಖರ್ಗೆ, ದೇಶ ಮುಗಿಸೋಕೆ ನೀನೊಬ್ಬನೇ ಸಾಕು ಎಂದರು.

ನಾವು ಯಾರಿಗೂ ಬಗ್ಗೋದಿಲ್ಲ

ʻʻಕರ್ನಾಟಕದಲ್ಲಿ ನಾವು ಯಾರಿಗೂ ಬಗ್ಗೋದಿಲ್ಲ. ಮಣ್ಣಿನ ಮಕ್ಕಳು ನಾವು, ನಮಗೂ ಕನ್ನಡ ಅಭಿಮಾನ ಇದೆ.
ಯಾವನೋ ಗುಜರಾತ್‌ನಿಂದಾರ ಬರಲಿ, ಅಹ್ಮದಾಬಾದ್‌ನಿಂದಲಾದರೂ ಯಾರಿಗೂ ಬಗ್ಗೋದು ಬೇಡʼʼ ಎಂದು ಜನರಿಗೆ ಕರೆ ನೀಡಿದರು.

ಇದನ್ನೂ ಓದಿ : Modi virtual Samvada : ಕರ್ನಾಟಕದ ವಿಕಾಸವೇ ಭಾರತದ ವಿಕಾಸ; ಮೋದಿ ಹೇಳಿದ ಆರು ಸಂಗತಿಗಳು

Exit mobile version