ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಡೆಯುತ್ತಿರುವ ಅಕ್ರಮ ಹಣ ಹಾಗೂ ವಸ್ತುಗಳ ಬಗ್ಗೆ ಚುನಾವಣಾ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದು, ಇದುವರೆಗೆ ದಾಖಲೆ ಪ್ರಮಾಣದ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಚುನಾವಣೆಗೆ ಮುಂಚಿತವಾಗಿ ಬೆಂಗಳೂರು ನಗರದಲ್ಲಿ ಚುನಾವಣಾ ಅಧಿಕಾರಿಗಳು ಭರ್ಜರಿ ಬೇಟೆ ನಡೆಸಿದ್ದು, ನಗರದಲ್ಲಿ ಈವರೆಗೆ 53.83 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳು, ನಗದು ಹಣ, ಉಡುಗೊರೆಗಳು ಜಪ್ತಿಯಾಗಿವೆ. ಚುನಾವಣೆ ಅಕ್ರಮಗಳ ಬಗ್ಗೆ ಬರೋಬ್ಬರಿ 1187 ಎಫ್ಐಆರ್ ದಾಖಲಾಗಿವೆ.
ನಗದು ಹಣ 8.26 ಕೋಟಿ, ಮದ್ಯ 22.16 ಕೋಟಿ ಮೌಲ್ಯ, ಡ್ರಗ್ಸ್ 9.51 ಕೋಟಿ ಮೌಲ್ಯ, ಗೃಹೋಪಯೋಗಿ ವಸ್ತುಗಳು 4.73 ಕೋಟಿ, ಉಡುಗೊರೆ 4.87 ಕೋಟಿ, ವಾಹನಗಳು 4.27 ಕೋಟಿ ಮೌಲ್ಯದ್ದಾಗಿವೆ. ಈ ಬಗ್ಗೆ 1187 ಎಫ್ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
ಚುನಾವಣಾ ಅಕ್ರಮಗಳ ಬಗ್ಗೆ ನಿಗಾ ಇಟ್ಟಿರುವ ಎಂಸಿಸಿ ಸ್ವ್ಕಾಡ್ ಮತ್ತು ಪೊಲೀಸರು ಮಾರ್ಚ್ 29ರಿಂದ ಈವರೆಗೆ ದಾಖಲೆ ಪ್ರಮಾಣದ ಹಣ, ಮದ್ಯ, ಉಡುಗೊರೆ, ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಚುನಾವಣೆ ಸಮೀಪಿಸುತ್ತಿರುವಂತೆ ಇನ್ನಷ್ಟು ಹೆಚ್ಚಿನ ನಿಗಾ ಇಡಲು ಸೂಚಿಸಲಾಗಿದೆ.
100 ಕೋಟಿ ಗಡಿ ದಾಟಿದ ಅಕ್ರಮ ವಸ್ತುಗಳ ಮೌಲ್ಯ
ಚುನಾವಣೆ ನೀತಿ ಸಂಹಿತೆ ಜಾರಿಯಾದ ಮಾ.29ರಿಂದ ಈವರೆಗೆ ಪೊಲೀಸರು ಹಾಗೂ ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿರುವ ನಗದು ಸೇರಿ ವಿವಿಧ ವಸ್ತುಗಳ ಮೌಲ್ಯ 100 ಕೋಟಿ ರೂಪಾಯಿ ಗಡಿ ದಾಡಿದೆ.
ಚುನಾವಣಾ ಆಯೋಗದ ಮಾಹಿತಿಯಂತೆ ಏ.9ರವರೆಗೆ 11 ದಿನಗಳಲ್ಲಿ ಬರೋಬ್ಬರಿ 99.18 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಅದೇ ರೀತಿ ಸೋಮವಾರ ಕೂಡ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರಿಂದ ಜಪ್ತಿ ಮಾಡಿರುವ ವಸ್ತುಗಳ ಮೌಲ್ಯ ಸುಮಾರು 100 ಕೋಟಿ ರೂಪಾಯಿ ಮೀರಿದೆ.
ಒಟ್ಟು 11 ದಿನಗಳಲ್ಲಿ 36.8 ಕೋಟಿ ರೂಪಾಯಿ ನಗದು, 15.46 ಕೋಟಿ ರೂ. ಮೌಲ್ಯದ ಉಡುಗೊರೆಗಳು, 30 ಕೋಟಿ ರೂಪಾಯಿ ಮೌಲ್ಯದ 5.2 ಲಕ್ಷ ಲೀಟರ್ ಮದ್ಯ, 15 ಕೋಟಿ ರೂ. ಮೌಲ್ಯದ ಚಿನ್ನ ಹಾಗೂ 2.5 ಕೋಟಿ ರೂಪಾಯಿ ಮೌಲ್ಯದ ಬೆಳ್ಳಿ ಆಭರಣಗಳು ಸೇರಿ ಒಟ್ಟು 99.18 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ವಶಕ್ಕೆ ಪಡೆಯಲಾಗಿದೆ ಎಂದು ಭಾನುವಾರ ಚುನಾವಣಾ ಆಯೋಗ ಮಾಹಿತಿ ನೀಡಿತ್ತು.
ಇದನ್ನೂ ಓದಿ: Karnataka Election: ಚುನಾವಣಾ ಅಕ್ರಮ; ನಗದು ಸೇರಿ 100 ಕೋಟಿ ರೂ. ದಾಟಿದ ಜಪ್ತಿ ವಸ್ತುಗಳ ಮೌಲ್ಯ!