ರಾಮನಗರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 53ನೇ ವಯಸ್ಸಿನಲ್ಲಿ ಫಿಟ್ ಎಂಡ್ ಫೈನ್ ಆಗಿದ್ದಾರೆ. ದಕ್ಷಿಣದಿಂದ ಉತ್ತರದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ ನಡೆಸಿದ ಅವರು, ಇದೀಗ ಪೂರ್ವದಿಂದ ಪಶ್ಚಿಮದ ಕಡೆಗೆ ಮತ್ತೊಂದು ಯಾತ್ರೆಗೆ ಸಜ್ಜಾಗಿದ್ದಾರೆ. ಇಂಥ ಎಲಿಜಿಬಲ್ ಬ್ಯಾಚುಲರ್ ಆಗಿರುವ ರಾಹುಲ್ ಗಾಂಧಿ ಮದುವೆ ಯಾಕೆ ಆಗಲ್ಲ ಎನ್ನುವ ಪ್ರಶ್ನೆ ಆಗಾಗ ಎದ್ದು ಬರುತ್ತದೆ. ಅದಕ್ಕೆ ಅವರೂ ಆಗಾಗ ಉತ್ತರ ಕೊಟ್ಟಿದ್ದಾರೆ. ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಇದಕ್ಕೆ ಒಂದು ವಿವಾದಾತ್ಮಕ ಕಾರಣವನ್ನು ನೀಡಿದ್ದಾರೆ.
ರಾಮನಗರದ ಬಿಡದಿಯಲ್ಲಿ ಸಾಗುತ್ತಿರುವ ಬಿಜೆಪಿಯ ವಿಜಯ ಸಂಕಲ್ಪ ರಥಯಾತ್ರೆಯ ಸಂದರ್ಭದಲ್ಲಿ ವೀರಾವೇಶದ ಮಾತುಗಳನ್ನಾಡಿದ ನಳಿನ್ ಕುಮಾರ್ ಕಟೀಲ್ ಅವರು ವಿವಾದಾತ್ಮಕ ಹೇಳಿಕೆ ನೀಡಿದರು.
ನಳಿನ್ ಕುಮಾರ್ ಕಟೀಲ್ ಹೇಳಿದ್ದೇನು?
ʻʻಇಡೀ ಜಗತ್ತಿನಲ್ಲಿ ಕೊರೊನಾ ಹರಡಿತ್ತು. ಆಗ ಪ್ರಧಾನಿ ನರೇಂದ್ರ ಮೋದಿಯವರು ಲಸಿಕೆ ಕೊಟ್ಟಿದ್ದರಿಂದಾಗಿ ಇವತ್ತು ಮಾಸ್ಕ್ ಇಲ್ಲದೆ ಕುಳಿತಿದ್ದೇವೆ. ಆಗ ಜಗತ್ತಿನ ಯಾವ ದೇಶದಲ್ಲೂ ಕೊರೊನಾ ಲಸಿಕೆ ಕಂಡುಹಿಡಿದಿರಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿಯವರ ಪ್ರೇರಣೆಯಿಂದ ದೇಶದಲ್ಲಿ ಲಸಿಕೆ ಕಂಡುಹಿಡಿಯಲಾಗಿತ್ತು. ಎಲ್ಲರಿಗೂ ಲಸಿಕೆ ನೀಡಲಾಯಿತು. ಎರಡನೇ ಹಂತದಲ್ಲಿ ಮೋದಿಯವರು ಲಸಿಕೆ ಪಡೆದರು. ಆಗ ರಾಹುಲ್ ಗಾಂಧಿ, ಸಿದ್ದರಾಮಯ್ಯ ಅವರೆಲ್ಲ ʻಲಸಿಕೆ ಪಡೆದರೆ ಮಕ್ಕಳಾಗಲ್ಲʼ ಅಂತ ಹೇಳಿಕೊಂಡು ತಿರುಗಿದರು. ಆದರೆ, ರಾತ್ರಿ ಕದ್ದು ಹೋಗಿ ಅವರಿಬ್ಬರೂ ಲಸಿಕೆ ಪಡೆದರುʼʼ ಎಂದು ಹೇಳಿದರು ನಳಿನ್ ಕುಮಾರ್ ಕಟೀಲ್.
ಅಷ್ಟು ಹೇಳಿದ ಬಳಿಕ ಹೇಳಿದ ಮಾತು ವಿವಾದಾತ್ಮಕವಾಗಿದೆ. ʻʻಕೋವಿಡ್ ಲಸಿಕೆ ತೆಗೆದುಕೊಳ್ಳಬೇಡಿ, ಮಕ್ಕಳಾಗಲ್ಲ ಎಂದು ಕಾಂಗ್ರೆಸ್‌ನವರು ಹೇಳಿಕೊಂಡಿದ್ದರು. ರಾಹುಲ್ ಗಾಂಧಿ ರಾತ್ರಿ ಹೋಗಿ ಲಸಿಕೆ ತೆಗೆದುಕೊಂಡಿದ್ರಲ್ಲ… ಅವರಿಗೆ ಮಕ್ಕಳಾಗಲ್ಲ ಅಂತ ಅನಿಸಿದೆ. ಹಾಗಾಗಿ ರಾಹುಲ್ ಗಾಂಧಿ ಮದುವೆ ಆಗಿಲ್ಲ ಅಂತ ಜನ ಮಾತನಾಡಿಕೊಳ್ತಾರೆʼʼ ಎಂದು ಹೇಳಿದರು ನಳಿನ್.
ತಾಕತ್ತಿದ್ದರೆ ಬಿಜೆಪಿ ಅಶ್ವಮೇಧ ತಡೆಯಿರಿ
ʻʻಎರಡು ದಿನದ ಹಿಂದೆ ಮೂರು ರಾಜ್ಯದ ಫಲಿತಾಂಶ ಬಂತು. ಮೂರೂ ರಾಜ್ಯದಲ್ಲಿ ಭಾರತಿಯ ಜನತಾ ಪಾರ್ಟಿ ಗೆದ್ದಿದೆ. ಮತ್ತೆ ಕರ್ನಾಟಕದಲ್ಲಿ ಗೆದ್ದು ಅಧಿಕಾರಕ್ಕೆ ಬರುತ್ತೆ. ಭಾರತಾದ್ಯಂತ ಕಾಂಗ್ರೆಸ್ ಮುಕ್ತವಾಗಿದೆ. ಡಿಕೆಶಿವಕುಮಾರ್, ಕುಮಾರಣ್ಣ ನಿರುದ್ಯೋಗಿ ಆಗ್ತಾರೆ. ನಾನು ಕಾಂಗ್ರೆಸ್, ಜೆಡಿಎಸ್‌ಗೆ ಚಾಲೆಂಜ್ ಮಾಡ್ತೇನೆ. ತಾಕತ್ ಇದ್ರೆ ಬಿಜೆಪಿಯ ಅಶ್ವಮೇಧ ಕುದುರೆಯನ್ನು ನಿಲ್ಲಿಸಿʼʼ ಎಮದು ಸವಾಲು ಹಾಕಿದರು ನಳಿನ್ ಕುಮಾರ್ ಕಟೀಲ್.
ʻʻಚನ್ನಪಟ್ಟಣದಲ್ಲಿ ಜೆಡಿಎಸ್ ಧೂಳೀಪಟ ಆಗಿದೆ. ಮಾಗಡಿಯಲ್ಲಿ ಜೆಡಿಎಸ್ ಅರಬ್ಬೀ ಸಮುದ್ರ ಸೇರುತ್ತೆ. ರಾಮನಗರದಲ್ಲೂ ಅಷ್ಟೆ. ಕುಮಾರಣ್ಣ.. ನಾನು ಹೇಳ್ತೇನೆ ಈ ಮೂರೂ ಕ್ಷೇತ್ರಗಳು ಈಗ ನಿಮ್ಮದಲ್ಲ. ಈ ಮೂರು ಕಡೆ ಬಿಜೆಪಿ ಧ್ವಜ ಹಾರುತ್ತೆʼʼ ಎಂದರು ನಳಿನ್ ಕುಮಾರ್ ಕಟೀಲ್.
ʻʻಜಗತ್ತಿನಲ್ಲಿ ಯಾವ ದೇಶದಲ್ಲೂ ಕೊರೊನಾ ಲಸಿಕೆ ಇಲ್ಲದಿದ್ದಾಗ ವಿಜ್ಞಾನಿಗಳ ಮೂಲ ಲಸಿಕೆ ಕಂಡುಕೊಂಡು ಹೊರದೇಶಕ್ಕೂ ಲಸಿಕೆ ಕೊಟ್ಟಿದ್ದು ಭಾರತ. ನರೇಂದ್ರ ಮೋದಿ ಅವರು ಲಸಿಕೆಯನ್ನು ಮೊದಲು ತಾವೇ ತೆಗೆದುಕೊಳ್ಳಲಿಲ್ಲ. ಹಂತ ಹಂತವಾಗಿ ಲಸಿಕೆ ಕೊಟ್ಟರು. ಮನಮೋಹನ್ ಸಿಂಗ್ ಅವರೇನಾದರೂ ಪ್ರಧಾನಿ ಆಗಿದ್ದಿದ್ದರೆ ಮೊದಲ ಲಸಿಕೆಯನ್ನು ಸೋನಿಯಾ ಗಾಂಧಿ ಅವರಿಗೆ, ಎರಡನೆಯದು ಪ್ರಿಯಾಂಕಾ ಗಾಂಧಿಗೆ, ನಂತರ ರಾಹುಲ್ ಗಾಂಧಿಗೆ, ಬಳಿಕ ವಾದ್ರಾಗೆ ಕೊಡಿಸುತ್ತಿದ್ದರು. ಉಳಿದರೆ ತಾವೊಂದು ತೆಗೆದುಕೊಳ್ಳುತ್ತಿದ್ದರು. ನಂತರ ಡಿಕೆಶಿಗೆ ಸಿದ್ದರಾಮಯ್ಯ ಕೊಡ್ತಾ ಇದ್ರುʼʼ ಎಂದು ಗೇಲಿ ಮಾಡಿದರು.
ಇದನ್ನೂ ಓದಿ : ಇಂಗ್ಲೆಂಡ್ಗೆ ಹೋಗಿ ಚೀನಾವನ್ನು ಹೊಗಳಿದ ರಾಹುಲ್ ಗಾಂಧಿ; ಪಡೆದ ದೇಣಿಗೆಯ ಋಣ ತೀರಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ ಬಿಜೆಪಿ