Site icon Vistara News

Karnataka Election : ಮೋದಿ, ಶಾ, ಪ್ರಿಯಾಂಕಾ ಗಾಂಧಿ ಆಟ ಇಲ್ಲಿ ನಡೆಯಲ್ಲ; ಕುಮಾರಸ್ವಾಮಿ

H D Kumaraswamy press conference during Mysore Election rally.

ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Election) ಕೇಂದ್ರದ ನಾಯಕರಾದ ನರೇಂದ್ರ ಮೋದಿ (Narendra Modi), ಅಮಿತ್ ಶಾ (Amit Shah), ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi) ಆಟ ನಡೆಯುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ನಾಯಕ ಎಚ್.ಡಿ. ಕುಮಾರಸ್ವಾಮಿ (H D Kumaraswamy) ಹೇಳಿದ್ದಾರೆ.

ಮೈಸೂರಿನಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಮೋದಿ, ಅಮಿತ್ ಶಾ, ಪ್ರಿಯಾಂಕಾ ಗಾಂಧಿ ಆಟ ರಾಜ್ಯದಲ್ಲಿ ನಡೆಯುವುದಿಲ್ಲ. ಯಾಕೆಂದರೆ, ಕನ್ನಡ ನಾಡಿಗೆ ಅವರ ಕೊಡುಗೆ ಏನೂ ಇಲ್ಲ. ಅಮಿತ್ ಶಾಗೆ ರಾಜ್ಯದಲ್ಲಿ ಜನಬೆಂಬಲ ವ್ಯಕ್ತವಾಗುತ್ತಿಲ್ಲ. ಅವರ ರ‍್ಯಾಲಿಗೆ ಹೆಚ್ಚಿನ ಜನರು ಬರುತ್ತಿಲ್ಲ ಎಂದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಜನಬೆಂಬಲ ಕಳೆದುಕೊಂಡಿದ್ದಾರೆ ಎಂದು ಹೇಳಿದರು.

ʻʻಅಮಿತ್ ಶಾ ಬಂದ ಮೇಲೆ ಬಿಜೆಪಿಯವರು ಮೈಸೂರು ಭಾಗದಲ್ಲಿ ಲಗ್ಗೆ ಇಟ್ಟರು ಅಂತ ಅರ್ಥವೇ? ಅದೆಲ್ಲ ಮತವಾಗಿ ಬದಲಾಗಬೇಕಲ್ಲ. ಅಮಿತ್ ಶಾ ಅವರ ಕಾರ್ಯಕ್ರಮ ನೋಡಿದ್ದೇನೆ. ನನಗೆ ಬಂದಷ್ಟು ಜನ ಅವರಿಗೆ ಬಂದಿಲ್ಲ. ಅವರು ರೋಡ್ ಶೋ ಮಾಡಿದಾಕ್ಷಣ ಭದ್ರಕೋಟೆ ಲಗ್ಗೆ ಹಾಕಿದ್ರು ಅನ್ನುವ ಭ್ರಮೆ ಬೇಡ.
ನಮಗೆ ಸಿಕ್ಕ ಸ್ಪಂದನೆ ಬಿಜೆಪಿ, ಕಾಂಗ್ರೆಸ್ ಗೆ ಸಿಕ್ಕಲ್ಲʼʼ ಎಂದು ಮಾಜಿ ಸಿಎಂ ಹೇಳಿದರು.

ʻʻಕೇಂದ್ರ ನಾಯಕರು ಬರ್ತಾರೆ ಹೋಗುತ್ತಾರೆ. ಅವರಿಗೂ ಕನ್ನಡ ನಾಡಿಗೂ ಸಂಬಂಧ ಏನಿದೆ?ʼ ಎಂದು ಅವರು ಪ್ರಶ್ನಿಸಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕುಮಾರಸ್ವಾಮಿ ನನ್ನನ್ನು ಬೆಂಬಲಿಸಿದ್ದಾರೆ ಎಂಬ ಕಾಂಗ್ರೆಸ್‌ ಅಭ್ಯರ್ಥಿ ಸಿದ್ದೇಗೌಡ ಅವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ನನ್ನ ಹೆಸರು ದುರ್ಬಳಕೆ ಮಾಡಿಕೊಳ್ಳುವುದನ್ನು ಅವರು ನಿಲ್ಲಿಸಬೇಕು. ಕಾಂಗ್ರೆಸ್ ಅಭ್ಯರ್ಥಿ ಸಿದ್ದೇಗೌಡಗೆ ನಾನ್ಯಾಕೆ ಬೆಂಬಲ ನೀಡಲಿ? ಒಕ್ಕಲಿಗರು ಸಿದ್ದೇಗೌಡ ಮಾತಿಗೆ ಕಿವಿಗೊಡಬೇಡಿ. ಸುಳ್ಳು ಹೇಳಿಕೊಂಡು ಓಡಾಡುತ್ತಿರುವವರನ್ನು ತಾಯಿ ಚಾಮುಂಡೇಶ್ವರಿ ‌ನೋಡಿಕೊಳ್ಳುತ್ತಾಳೆ. ಜಿ.ಟಿ.ದೇವೇಗೌಡ 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಎಂದರು.

ವರುಣ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದೆ ಎಂಬ ಆರೋಪವನ್ನೂ ಅವರು ನಿರಾಕರಿಸಿದರು. ʻʻಯಾವುದೇ ಕಾರಣಕ್ಕೂ ಆ ರೀತಿಯ ತೀರ್ಮಾನ ತೆಗೆದುಕೊಂಡಿಲ್ಲ. ನಮಗೆ ಇನ್ನೊಬ್ಬ ಅಭ್ಯರ್ಥಿಯನ್ನು ಸೋಲಿಸುವುದು ಮುಖ್ಯವಲ್ಲ. ನಮಗೆ ನಮ್ಮ ಅಭ್ಯರ್ಥಿ ಗೆಲುವೇ ಮುಖ್ಯ. ಭಾರತಿಶಂಕರ್ ಅವರು ಒಳ್ಳೆಯ ಅಭ್ಯರ್ಥಿ. ಈ ಹಿಂದೆ ಶಾಸಕರಾಗಿದ್ದಾಗ ಆ ಕ್ಷೇತ್ರದ 3 ಹೋಬಳಿಗಳನ್ನು ಪ್ರತಿನಿಧಿಸಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿ ಸಮರ್ಥರಾಗಿದ್ದಾರೆ ಎಂದು ಅವರು ಹೇಳಿದರು.

ʻʻಜೆಡಿಎಸ್ ಯಾರೊಂದಿಗೂ ಒಳ‌ಒಪ್ಪಂದ ಮಾಡಿಕೊಂಡಿಲ್ಲ. ಜೆಡಿಎಸ್ ನ ಸ್ವತಂತ್ರ ಸರ್ಕಾರ ಬರುವುದು ನಿಶ್ಚಿತ. ಹೊಸದಾಗಿ ಪಕ್ಷಕ್ಕೆ ಬಂದಿರುವವರ 28 ನಾಯಕರ ಪೈಕಿಯೇ 20 ಮಂದಿ ಗೆಲ್ಲಲಿದ್ದಾರೆ.. ಜೆಡಿಎಸ್ ಇಟ್ಟಿರುವ ನಿಗದಿತ ಗುರಿ ತಲುಪಿ ಯಾರ ಹಂಗೂ ಇಲ್ಲದೇ ಸರ್ಕಾರ ರಚಿಸಲಿದ್ದೇವೆʼʼ ಎಂದು ಕುಮಾರಸ್ವಾಮಿ ನುಡಿದರು.

ಇದನ್ನೂ ಓದಿ : Karnataka Election : ವೈದ್ಯರು ವಿಶ್ರಾಂತಿಗೆ ಸೂಚಿಸಿದರೂ ಮತ್ತೆ ಪ್ರಚಾರಕ್ಕೆ ಹೊರಟ ಎಚ್‌.ಡಿ ಕುಮಾರಸ್ವಾಮಿ

Karnataka Election: Narendra Modi, Amit Shah, Priyanka Gandhi have no impact on Karnataka Elections, Says H D Kumaraswamy

Exit mobile version