ಹಾಸನ: ವಿಧಾನಸಭಾ ಚುನಾವಣೆಗೆ (Karnataka Election) ಇನ್ನು ೨ ತಿಂಗಳು ಬಾಕಿ ಇರುವ ಬೆನ್ನಲ್ಲೇ ರಾಜಕೀಯ ಚಿತ್ರಣಗಳು ಬದಲಾಗುತ್ತಾ ಹೊರಟಿದೆ. ಈ ನಡುವೆ ಹಾಸನ ವಿಧಾನಸಭಾ ಕ್ಷೇತ್ರ ಹಲವು ವಿಚಾರಗಳಿಗೆ ರಾಜ್ಯದ ಗಮನ ಸೆಳೆದಿದೆ. ಜೆಡಿಎಸ್ ಕುಟುಂಬ ಕಲಹ ಬೀದಿಗೆ ಬಂದಿದ್ದು, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ರೇವಣ್ಣ ಕುಟುಂಬ ತಿರುಗಿಬಿದ್ದಿದೆ. ಇದರ ಬೆನ್ನಲ್ಲೇ ಈಗ ಈ ಕ್ಷೇತ್ರದ ಜೆಡಿಎಸ್ ಟಿಕೆಟ್ ಮೇಲೆ ಕಣ್ಣಿಟ್ಟಿರುವ ಭವಾನಿ ರೇವಣ್ಣ ಹಾಗೂ ಮಾಜಿ ಶಾಸಕ ದಿ. ಎಚ್.ಎಸ್. ಪ್ರಕಾಶ್ ಪುತ್ರ ಎಚ್.ಪಿ. ಸ್ವರೂಪ್ ನಡುವೆ ಪೈಪೋಟಿ ಏರ್ಪಟ್ಟಿದೆ. ಇಬ್ಬರ ಪರ ಕಾರ್ಯಕರ್ತರು ತಮ್ಮ ನಾಯಕರ ಪರವಾಗಿ ಟಿಕೆಟ್ ನೀಡುವಂತೆ ಆಗ್ರಹಿಸುತ್ತಿದ್ದಾರೆ. ಈ ಮೂಲಕ ಜೆಡಿಎಸ್‌ನ ಮೂಲ ಸ್ಥಾನ ಹಾಸನದಲ್ಲಿಯೇ ಪಕ್ಷ ಎರಡು ಬಣವಾಗಿ ರೂಪುಗೊಂಡಿದೆ.
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರ ಮಾತೇ ಪಕ್ಷದಲ್ಲಿ ಫೈನಲ್ ಆಗಿದೆ. ಅಲ್ಲದೆ, ಹಾಸನದಲ್ಲಿ ಯಾರಿಗೆ ಟಿಕೆಟ್ ನೀಡಬೇಕೆಂಬ ಬಗ್ಗೆ ಅಳೆದೂ ತೂಗಿ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತಿತ್ತು. ಈ ನಡುವೆ ಬೇರೆ ಬೇರೆ ಕಾರಣಗಳಿಗೆ ಎಚ್.ಡಿ. ರೇವಣ್ಣ ಹಾಗೂ ಎಚ್.ಡಿ. ಕುಮಾರಸ್ವಾಮಿ ಕುಟುಂಬಗಳ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿತ್ತು. ಇದರ ಹೊರತಾಗಿ ಹಾಸನದಲ್ಲಿ ಜಾತಿ ಲೆಕ್ಕಾಚಾರಗಳ ಆಧಾರದಲ್ಲಿಯೂ ಜೆಡಿಎಸ್ ಕಾರ್ಯತಂತ್ರವನ್ನು ಹೆಣೆದಿತ್ತು. ಇದರ ಭಾಗವಾಗಿಯೇ ದಾಸಗೌಡ ಸಮುದಾಯಕ್ಕೆ ಸೇರಿದ ಎಚ್.ಎಸ್. ಪ್ರಕಾಶ್‌ಗೆ ಹಾಸನದಲ್ಲಿ ಟಿಕೆಟ್ ನೀಡುತ್ತಾ ಬರಲಾಗಿತ್ತು. ಈ ಮೂಲಕ ಮುಳ್ಳುಗೌಡ ಸಮುದಾಯಕ್ಕೆ ಸೇರಿದ ದೇವೇಗೌಡ ಕುಟುಂಬದವರು ಹಾಸನದ ಉಳಿದ ಕಡೆ ಸರ್ಧಿಸುವುದು ಹಾಗೂ ಬೇಕಾದವರಿಗೆ ಟಿಕೆಟ್ ನೀಡುವ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ಈ ಮೂಲಕ ಹೆಚ್ಚು ಮತಗಳನ್ನು ಹೊಂದಿರುವ ದಾಸಗೌಡ ಸಮುದಾಯದವರನ್ನು ಸಮಾಧಾನಪಡಿಸಲಾಗಿತ್ತು. ಆದರೆ, ಈಗ ಭವಾನಿ ರೇವಣ್ಣ ಅವರು ಹಾಸನದ ಮೇಲೆ ಕಣ್ಣಿಟ್ಟಿರುವುದು ಜೆಡಿಎಸ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಈಗಾಗಲೇ ಭವಾನಿ ರೇವಣ್ಣ ಅವರು ಕ್ಷೇತ್ರ ಸಂಚಾರವನ್ನು ಕೈಗೊಂಡಿದ್ದಾರೆ. ಈಚೆಗೆ ತಾವೇ ಹಾಸನಕ್ಕೆ ಮುಂದಿನ ಅಭ್ಯರ್ಥಿಯಾಗಲಿದ್ದು, ಶೀಘ್ರವೇ ಘೋಷಣೆಯಾಗಲಿದೆ ಎಂದು ಹೇಳಿದ್ದೇ ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಮಾಜಿ ಸಿಎಂ ಕುಮಾರಸ್ವಾಮಿ, ಹಾಸನಕ್ಕೆ ಸೂಕ್ತ ಅಭ್ಯರ್ಥಿ ಇದ್ದಾರೆ ಎಂದು ಸ್ವರೂಪ್ ಪರ ಬ್ಯಾಟ್ ಬೀಸಿದ್ದರು. ಈಗ ಪಕ್ಷದ ಕಾರ್ಯಕರ್ತರಲ್ಲಿಯೂ ಎರಡು ಬಣವಾಗಿದ್ದು, ಒಂದು ಗುಂಪು ಭವಾನಿ ರೇವಣ್ಣ ಅವರನ್ನೇ ಅಭ್ಯರ್ಥಿ ಮಾಡಬೇಕು ಎಂದು ಸಂಸದ ಪ್ರಜ್ವಲ್ ರೇವಣ್ಣ ಅವರ ಮನೆ ಮುಂದೆ ಜಮಾಯಿಸಿ ಒತ್ತಾಯಿಸಿದರೆ, ದಾಸಗೌಡ ಸಮುದಾಯದವರು ಸ್ವರೂಪ್ ಬೆನ್ನಿಗೆ ನಿಂತಿದ್ದಾರೆ.
ಸ್ವರೂಪ್ ಮನೆ ಮುಂದೆ ಸೇರಿದ ಕಾರ್ಯಕರ್ತರು
ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ ಶನಿವಾರ (ಜ.೨೮) ಪ್ರಜ್ವಲ್ ರೇವಣ್ಣ ಅವರ ಮನೆ ಮುಂದೆ ಕಾರ್ಯಕರ್ತರು ಪ್ರತಿಭಟಿಸಿದ ಬೆನ್ನಲ್ಲೇ, ಹಾಸನ ನಗರದ ಹೇಮಾವತಿ ನಗರದಲ್ಲಿರುವ ಸ್ವರೂಪ್ ಮನೆ ಮುಂದೆ ಸಾಕಷ್ಟು ಕಾರ್ಯಕರ್ತರು ಜಮಾಯಿಸಿದ್ದಾರೆ. ಮನೆ ಮುಂದೆ ಶಾಮಿಯಾನ ಹಾಕಿ ಮೌನ ಧರಣಿ ನಡೆಸಿದ್ದಾರೆ.
ಸಂಸದರ ಮನೆಗೆ ಕಾರ್ಯಕರ್ತರ ಭೇಟಿ
ಹಾಸನದಲ್ಲಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿ ಜೆಡಿಎಸ್ ಕಾರ್ಯಕರ್ತರು ಸಂಸದ ಪ್ರಜ್ವಲ್ ರೇವಣ್ಣ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಎಲ್ಲರೂ ಭವಾನಿ ರೇವಣ್ಣ ಅವರ ಪ್ಲೆಕಾರ್ಡ್ ಹಿಡಿದುಕೊಂಡು ಹೋಗಿದ್ದಾರೆ. ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾಯಿಸಿದ್ದು, ಪ್ರತಿಭಟನೆಗೆ ವೇದಿಕೆಯನ್ನು ಸಹ ಸಿದ್ಧಪಡಿಸಲಾಗಿತ್ತು. ಕೆಲವು ಸಮಯಗಳ ಬಳಿಕ ಅಲ್ಲಿಗೆ ಭೇಟಿ ನೀಡಿದ ಭವಾನಿ ರೇವಣ್ಣ, ಪ್ರತಿಭಟನೆ ಮಾಡುವುದು ಬೇಡ ಎಂದು ಕೈಮುಗಿದು ಮನವಿ ಮಾಡಿ ಅಲ್ಲಿಂದ ತೆರಳಿದ್ದಾರೆ.