ಬೆಂಗಳೂರು: ವಿಧಾನಸಭಾ ಚುನಾವಣೆ (Karnataka Election) ಸಮೀಪಿಸುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಡುವಿನ ವಾಕ್ಸಮರ ತಾರಕಕ್ಕೇರಿದ್ದು, ಈಗ ವೈಯಕ್ತಿಕ ಟೀಕೆಗೆ ಇಳಿದಿದೆ. ತಮ್ಮ ಮೇಲೆ ಸಿಬಿಐ ತನಿಖೆ ಮಾಡುವಂತೆ ಆಗ್ರಹಿಸಿದ್ದ ರಮೇಶ್ ಜಾರಕಿಹೊಳಿ ಬಗ್ಗೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಡಿಕೆಶಿ, ಅವನಿಗೆ ಪ್ಯಾಂಟ್ ಬಿಚ್ಚೋಕೆ ನಾನು ಹೇಳಿದ್ನಾ? ಎಂದು ಏಕವಚನದಲ್ಲಿಯೇ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ದುಡ್ಡು ಹಂಚಿಕೆ ವಿಚಾರವಾಗಿ ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆ ವಿರುದ್ಧ ಹೈಗ್ರೌಂಡ್ ಪೊಲೀಸ್ ಠಾಣೆಗೆ ಕಾಂಗ್ರೆಸ್ ದೂರು ನೀಡಿದೆ.
ಹಿಂದಿನ ಸರ್ಕಾರದಲ್ಲಿ ಡಿ.ಕೆ. ಶಿವಕುಮಾರ್ ಅಕ್ರಮ ಮಾಡಿದ್ದು, ಅದನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ರಮೇಶ್ ಜಾರಕಿಹೊಳಿ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಡಿ.ಕೆ. ಶಿವಕುಮಾರ್, ಅವನ ಪ್ಯಾಂಟ್ ಬಿಚ್ಚಲು ನಾನು ಹೇಳಿದ್ದೆನಾ? ನಮ್ಮ ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡಿದ್ದೇ ಅವನು. ಆಪರೇಷನ್ ಕಮಲ ಮಾಡಿ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಿದ್ದು ಯಾರು ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ: ಟಿಪ್ಪು ವಿವಾದ : ಬಜರಂಗ ದಳ ಪ್ರತಿಭಟನೆ ಬಳಿಕ ಶಿವಮೊಗ್ಗ ಪಾಲಿಕೆ ಕಚೇರಿಯಲ್ಲಿ ಹಾಕಿದ್ದ ಟಿಪ್ಪು ಫೋಟೊ ತೆರವು
ನನ್ನ ಮೇಲೆ ಅದೇನೋ ತನಿಖೆ ಮಾಡಿಸುತ್ತೇನೆ ಎಂದು ಹೇಳಿದ್ದಾನಲ್ಲವೇ? ಅವನಿಗೆ ತನಿಖೆ ಮಾಡಿಸಲು ಹೇಳಿ, ಸಿಬಿಐ ತನಿಖೆಯೇ ನಡೆಯಲಿ ಎಂದು ಡಿಕೆಶಿ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ರಮೇಶ್ ಜಾರಕಿಹೊಳಿ, ಸಿಎಂ, ಕಟೀಲ್ ವಿರುದ್ಧ ದೂರು
ಬೆಳಗಾವಿಯಲ್ಲಿ ಮಂಗಳವಾರ (ಜ.೨೪) ಸುದ್ದಿಗೋಷ್ಠಿ ನಡೆಸಿದ್ದ ರಮೇಶ್ ಜಾರಕಿಹೊಳಿ, ಅಲ್ಲಿನ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಹರಿಹಾಯ್ದಿದ್ದರು. ಮತದಾರರಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಕುಕ್ಕರ್ ಸಹಿತ ವಿವಿಧ ಸಾಮಗ್ರಿಗಳನ್ನು ನೀಡಿದ್ದಾರೆ. ಅವರು ಮೂರು ಸಾವಿರ ರೂಪಾಯಿ ಕೊಟ್ಟರೆ ನಾನು ೬ ಸಾವಿರ ರೂಪಾಯಿ ಕೊಡುತ್ತೇನೆ ಎಂದು ಹೇಳಿದ್ದರು. ಇದು ರಾಜ್ಯಾದ್ಯಂತ ಸಂಚಲನವನ್ನು ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಿಯೋಗವು ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ರಮೇಶ್ ಜಾರಕಿಹೊಳಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ದೂರು ನೀಡಿದೆ.
ಜಾರಕಿಹೊಳಿ ಚುನಾವಣಾ ಅಕ್ರಮಗಳಿಗೆ ಸಿಎಂ ಬೊಮ್ಮಾಯಿ ಹಾಗೂ ಕಟೀಲ್ ಇಬ್ಬರೂ ಸಹಕರಿಸುತ್ತಿದ್ದಾರೆ. ಹಾಗಾಗಿ ಮೂವರ ಮೇಲೆ ಕ್ರಮ ಆಗಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿ.ಎಸ್. ಉಗ್ರಪ್ಪ, ಶಾಸಕ ಶ್ರೀನಿವಾಸ್ ಮಾನೆ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಡಿ.ಕೆ. ಶಿವಕುಮಾರ್, ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಕೂಡಲೇ ತನಿಖೆ ಮಾಡಬೇಕು. ಈಗಾಗಲೇ ಜಾರಕಿಹೊಳಿಯವರನ್ನು ಬಂಧಿಸಬೇಕಿತ್ತು. ಆರು ಸಾವಿರ ರೂಪಾಯಿ ಕೊಟ್ಟು ಕೊಂಡುಕೊಳ್ಳಲು ಹೊರಟಿದ್ದಾರೆ. ನಾವು ಆ ಸಂದರ್ಭದಲ್ಲಿ ಪ್ರವಾಸದಲ್ಲಿದ್ದೆವು. ಇಂದು (ಜ.೩೫) ಮತದಾರರ ದಿನವಾಗಿದ್ದು, ದೂರು ಕೊಟ್ಟಿದ್ದೇವೆ. ಸೂಕ್ತ ತನಿಖೆಯಾಗಿ ಕ್ರಮವಾಗಲಿ ಎಂದು ಆಗ್ರಹಿಸಿದ್ದಾರೆ.