ಮಂಡ್ಯ: ಮಾತೆತ್ತಿದರೆ ನಾವು 123 ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳುತ್ತಿದ್ದಾರೆ. ಜೆಡಿಎಸ್ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲು ಸಾಧ್ಯವೇ ಇಲ್ಲ. ನಾವಿದ್ದಾಗಲೇ 59 ಸ್ಥಾನ ಗೆದ್ದಿತ್ತು, ನಾವು ಬಿಟ್ಟ ಮೇಲೆ 29 ಸ್ಥಾನ ಬಂದಿತ್ತು. ಈ ಬಾರಿಯ ಚುನಾವಣೆಯಲ್ಲಿ (Karnataka Election) 20 ರಿಂದ 22 ಜನ ಗೆದ್ದರೆ ಅದೇ ಹೆಚ್ಚು. ಇಂಥವರ ಕೈಗೆ ಅಧಿಕಾರ ಕೊಡುತ್ತೀರಾ? ಖಂಡಿತಾ ಕೊಡಬೇಡಿ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಮಂಡ್ಯದಲ್ಲಿ ಶುಕ್ರವಾರ (ಜ.೨೭) ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಜೆಡಿಎಸ್ ಅನ್ನು ನಂಬಬೇಡಿ, ಇಲ್ಲಿ ನಮಗೆ ಮತ್ತು ಜೆಡಿಎಸ್‌ಗೆ ಹೋರಾಟ ಇದೆ. ನಾವು ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದ್ದೆವು. ಅವರಿಂದ ಶಾಸಕರನ್ನು ಸರಿಯಾಗಿ ನೋಡಿಕೊಳ್ಳಲು ಆಗದೆ ಹೋಗಿದ್ದಕ್ಕೆ 17 ಜನ ಬಿಜೆಪಿಗೆ ಹೋದರು. ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರ ಬೀಳಲು ನಾನು ಕಾರಣ ಎಂದು ಹೇಳುತ್ತಿದ್ದಾರೆ, ನಮ್ಮ ಶಾಸಕರನ್ನು ನಾನು ಕಳಿಸಿದ್ದಾದರೆ, ಜೆಡಿಎಸ್ ಶಾಸಕರನ್ನು ಕಳಿಸಿದ್ದು ಯಾರಪ್ಪ? ನೀವೇ ಕಳಿಸಿದ್ರಾ? ನೀವು ವೆಸ್ಟೆಂಡ್ ಹೋಟೆಲ್‌ನಲ್ಲಿ ಉಳಿದುಕೊಂಡು ಅಧಿಕಾರ ಮಾಡಲು ಆಗುತ್ತಾ? ಜನರು, ಮಂತ್ರಿಗಳು, ಅಧಿಕಾರಿಗಳು, ಶಾಸಕರನ್ನು ಭೇಟಿ ಮಾಡಿದರೆ ಮಾತ್ರ ಒಳ್ಳೆ ಅಧಿಕಾರ ನೀಡಲು ಸಾಧ್ಯವಾಗುತ್ತದೆ. ಗಾಜಿನ ಮನೆಯಲ್ಲಿ ಕುಳಿತು ಅಧಿಕಾರ ನಡೆಸಲು ಹೊರಟಿದ್ದೆ ಕುಮಾರಸ್ವಾಮಿ ತಪ್ಪು ಎಂದು ಕಿಡಿಕಾರಿದರು.
ನಮ್ಮ ಪಕ್ಷದಿಂದ 80 ಶಾಸಕರು ಆಯ್ಕೆಯಾಗಿದ್ದರೂ, 37 ಜನ ಶಾಸಕರು ಇದ್ದ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದೆವು, ಇದಕ್ಕೆ ಕಾರಣ ಕೋಮುವಾದಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಬಾರದು ಎಂಬುದು. ಆದರೆ, ಕುಮಾರಸ್ವಾಮಿ ಕೈಲಿ ಅಧಿಕಾರ ಉಳಿಸಿಕೊಳ್ಳಲು ಆಗಲಿಲ್ಲ. ಕೊಟ್ಟ ಕುದುರೆ ಏರಲಾರದವ ವೀರನೂ ಅಲ್ಲ, ಶೂರನೂ ಅಲ್ಲ ಎಂಬ ಅಲ್ಲಮಪ್ರಭುಗಳ ಮಾತುಗಳು ಅವರಿಗೆ ಹೊಂದಿಕೆಯಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: Urfi Javed: ಐಸ್ ಕ್ರೀಮ್ ಕೋನ್ ಬ್ರ್ಯಾಲೆಟ್ ಧರಿಸಿ ಕ್ಯಾಮೆರಾಗೆ ಪೋಸ್ ನೀಡಿದ ಉರ್ಫಿ
ಮಂಡ್ಯದಲ್ಲಿ ರಾಜಕೀಯ ಬದಲಾವಣೆ ಆದರೆ ಇಡೀ ರಾಜ್ಯದಲ್ಲಿ ಬದಲಾವಣೆ ಆಗುತ್ತದೆ. ಕಳೆದ ಬಾರಿ 7 ಸ್ಥಾನಗಳಲ್ಲಿ ನಮಗೆ ಒಂದೂ ಸ್ಥಾನ ಸಿಗಲಿಲ್ಲ, ಈ ಬಾರಿ 7 ಸ್ಥಾನಗಳಲ್ಲಿ ಕನಿಷ್ಠ 5 ರಿಂದ 6 ಸ್ಥಾನಗಳನ್ನು ಗೆಲ್ಲಿಸಿಕೊಡುವ ಕೆಲಸ ಮಾಡಿ. ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ, ನಾವು ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ, ಇದನ್ನು ನಾನು ನಾಡಿನ ಜನರ ನಾಡಿ ಮಿಡಿತವನ್ನು ನೋಡಿ ಹೇಳುತ್ತಿದ್ದೇನೆ. ನಾವು ಅಧಿಕಾರಕ್ಕೆ ಬಂದ ವೇಳೆ ಈ ಭಾಗದಿಂದಲೂ ಶಾಸಕರು ನಮ್ಮ ಜೊತೆ ಇರಬೇಕು, ನಿಮಗೆ ಯಾವುದೇ ಕಷ್ಟ ಬಂದರೂ ನಾವು ನಿಮ್ಮ ಜತೆ ಇರುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಮುಖ್ಯಮಂತ್ರಿ ಬೊಮ್ಮಾಯಿ ಅವರು ಕಳೆದ ವರ್ಷ ಮೈಶುಗರ್ ಸಕ್ಕರೆ ಕಾರ್ಖಾನೆಗೆ 50 ಕೋಟಿ ರೂ. ಅನುದಾನ ನೀಡುವುದಾಗಿ ಹೇಳಿದ್ದರು. ಆದರೆ, ಈ ವರೆಗೆ ನೀಡಿರುವುದು ಕೇವಲ 30 ಕೋಟಿ ರೂ. ಮಾತ್ರ. ಉಳಿದ 20 ಕೋಟಿ ರೂ. ಕೊಡಿ ಎಂದು ಕೇಳಿದರೆ ಸಾಲ ತೆಗೆದುಕೊಳ್ಳಲು ಹೇಳಿದ್ದಾರಂತೆ. ಅವರೇ ಸಾಲ ಮಾಡುವುದಾದರೆ ಬೊಮ್ಮಾಯಿ ಯಾಕಿದ್ದಾರೆ? ನಾವು ಅಧಿಕಾರಕ್ಕೆ ಬಂದ ಮೇಲೆ ಈ ಕಾರ್ಖಾನೆಯನ್ನು ಆಧುನೀಕರಣಗೊಳಿಸಿ, ಈ ಭಾಗದ ಎಲ್ಲ ರೈತರ ಕಬ್ಬನ್ನು ಅರೆಯಲು ಎಷ್ಟೇ ಹಣ ಖರ್ಚಾದರೂ ನಾವು ಈ ಕೆಲಸ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಘೋಷಿಸಿದರು.
ಮಂಡ್ಯದ ಸಕ್ಕರೆ ಕಾರ್ಖಾನೆಗೆ ನಾನು ಮುಖ್ಯಮಂತ್ರಿಯಾಗಿರುವಾಗ ಸರ್ಕಾರದಿಂದ ಹಣ ನೀಡಿ ಪ್ರತಿ ವರ್ಷ ಕಾರ್ಖಾನೆ ನಡೆಸಲು ಅವಕಾಶ ಮಾಡಿಕೊಟ್ಟಿದ್ದೆ. ಕುಮಾರಸ್ವಾಮಿ ಬಂದ ಮೇಲೆ ಅನುದಾನ ನೀಡದೆ ನಿಂತುಹೋಗಿತ್ತು. ಈ ಬಿಜೆಪಿಯವರು ಅತ್ತುಕರೆದು ಈಗ ಆರಂಭ ಮಾಡಿದ್ದಾರೆ. ಆದರೆ, ಈವರೆಗೆ ಕಬ್ಬು ಅರೆದಿರುವುದು 9000 ಮೆಟ್ರಿಕ್ ಟನ್ ಮಾತ್ರ. ಈ ಭಾಗದಲ್ಲಿ ಮೂರೂವರೆ ಲಕ್ಷ ಮೆಟ್ರಿಕ್ ಟನ್ ಕಬ್ಬನ್ನು ಬೆಳೆಯುತ್ತಾರೆ. ಇಲ್ಲಿ ಕಬ್ಬು ಅರೆಯಲಾಗದೆ ಬೇರೆ ಕಡೆಗಳಲ್ಲಿರುವ ಖಾಸಗಿ ಸಕ್ಕರೆ ಕಾರ್ಖಾನೆಗಳಿಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ನಷ್ಟವಾಗುತ್ತಿದೆ. ಯಾವುದೇ ಕಾರಣಕ್ಕೂ ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಖಾಸಗೀಕರಣ ಮಾಡಬಾರದು. ಈ ಕಾರ್ಖಾನೆಯನ್ನು ಆಧುನೀಕರಣ ಮಾಡಿ ಇಲ್ಲಿನ ರೈತರ ಕಬ್ಬನ್ನು ಕೊಂಡು ಇಲ್ಲಿಯೇ ಅರೆಯುವ ಕೆಲಸ ಆಗಬೇಕು ಎಂದು ಬೊಮ್ಮಾಯಿ ಅವರ ಬಳಿ ನಾವು ಒತ್ತಾಯ ಮಾಡಿದೆವು. ಅಲ್ಲದೆ, ರೈತ ಸಂಘಗಳು ಪ್ರತಿಭಟನೆ ಮಾಡಿವೆ. ಇಷ್ಟೆಲ್ಲ ಆದ ಮೇಲೆ ನಾವು ಈ ಕಾರ್ಖಾನೆಯನ್ನು ಮಾರುವುದಿಲ್ಲ ಎಂದು ಬೊಮ್ಮಾಯಿ ಹೇಳಿಕೆ ನೀಡಿದರು. ಮುರುಗೇಶ್ ನಿರಾಣಿ ಈ ಕಾರ್ಖಾನೆಯನ್ನು ಖರೀದಿ ಮಾಡಲು ಕಾಯುತ್ತಾ ಕುಳಿತಿದ್ದರು. ಸರಿಯಾದ ಕ್ರಮದಲ್ಲಿ ಈ ಕಾರ್ಖಾನೆಯನ್ನು ನಡೆಸಿದರೆ ಎಂದಿಗೂ ನಷ್ಟವಾಗುವುದಿಲ್ಲ. ಕೋ ಜನರೇಷನ್ ಮಾಡಬೇಕು, ಲಿಕ್ಕರ್ ಮತ್ತು ಎಥೆನಾಲ್ ತಯಾರು ಮಾಡಿದಾಗ ಮಾತ್ರ ಸಕ್ಕರೆ ಕಾರ್ಖಾನೆ ಲಾಭದಲ್ಲಿ ನಡೆಯಲು ಸಾಧ್ಯವಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
ನಾವು ಈ ಬಾರಿ ಕೂಡ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುತ್ತೇವೆ. ಪ್ರತಿ ಮನೆಯ ಯಜಮಾನಿಗೆ ತಿಂಗಳಿಗೆ 2000 ರೂಪಾಯಿಯಂತೆ ವರ್ಷಕ್ಕೆ 24,000 ರೂ. ನೀಡುತ್ತೇವೆ ಎಂಬ ಭರವಸೆ ನೀಡಿದ್ದೇವೆ. ಮುಂದೆ ನಾವು ಅಧಿಕಾರಕ್ಕೆ ಬಂದ ಮೇಲೆ ಪ್ರತಿ ಬಡವನಿಗೆ ತಲಾ 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ. ಇವುಗಳ ಜತೆ ಇನ್ನೂ ಕೆಲವು ಭರವಸೆಗಳನ್ನು ನೀಡುತ್ತೇವೆ. ಜತೆಗೆ ಈಡೇರಿಸುವ ಕೆಲಸ ಮಾಡುತ್ತೇವೆ. ಮುಂದೆ ನಾವು ಅಧಿಕಾರಕ್ಕೆ ಬಂದ ಮೊದಲ ದಿನವೇ, ಸಂಪುಟ ಸಭೆ ಮಾಡಿ ಈಗ ನೀಡಿರುವ ಮೂರೂ ಭರವಸೆಗಳನ್ನು ಈಡೇರಿಸುತ್ತೇವೆ. ಇಲ್ಲದಿದ್ದರೆ ರಾಜಕೀಯ ಸನ್ಯಾಸತ್ವ ತೆಗೆದುಕೊಳ್ಳುತ್ತೇವೆ. ರಾಜಕಾರಣ ಮಾಡುವುದು ಜನರಿಗೆ ಟೋಪಿ ಹಾಕುವುದಕ್ಕಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: Ola Cab Compensation: ಓಲಾ ಕ್ಯಾಬ್‌ನಲ್ಲಿ ಎಸಿ ಇಲ್ಲದ್ದಕ್ಕೆ ದೂರು, ಬೆಂಗಳೂರು ವ್ಯಕ್ತಿಗೆ 15 ಸಾವಿರ ರೂ. ಪರಿಹಾರ
ಮಂಡ್ಯದಲ್ಲಿ 4 ಲಕ್ಷದ 80 ಸಾವಿರ ಜಾನುವಾರುಗಳಿವೆ. ಚರ್ಮಗಂಟು ರೋಗದಿಂದ ಮಂಡ್ಯದಲ್ಲಿ ಸುಮಾರು 5000 ಜಾನುವಾರುಗಳು ನರಳುತ್ತಿವೆ. ವೈದ್ಯರು, ಔಷಧಿ, ಲಸಿಕೆ ಈ ಯಾವುದೂ ಇಲ್ಲದೆ ಹಾಲಿನ ಉತ್ಪಾದನೆಯ ಪ್ರಮಾಣ ಕಡಿಮೆಯಾಗಿದೆ. ಜೂನ್‌ನಲ್ಲಿ ರಾಜ್ಯದಲ್ಲಿ ನಿತ್ಯ ಉತ್ಪಾದನೆಯಾಗುತ್ತಿದ್ದ ಹಾಲು 94 ಲಕ್ಷ ಲೀಟರ್, ಈಗ ಅದು 76 ಲಕ್ಷ ಲೀಟರ್‌ಗೆ ಇಳಿಕೆ ಕಂಡಿದೆ. ಮಂಡ್ಯ ಜಿಲ್ಲೆಯೊಂದರಲ್ಲೇ ಒಂದು ಲಕ್ಷ ಲೀಟರ್ ಹಾಲಿನ ಉತ್ಪಾದನೆ ಕಡಿಮೆಯಾಗಿದೆ. ಬೊಮ್ಮಾಯಿ ಸರ್ಕಾರದ ಪಶುಸಂಗೋಪನಾ ಸಚಿವರಿಗೆ ಈ ಯಾವ ಲೆಕ್ಕವೂ ಗೊತ್ತಿಲ್ಲ. ಸದನದಲ್ಲಿ ಪ್ರಶ್ನೆ ಕೇಳಿದರೆ ಉತ್ತರ ಕೊಡದೆ ತಪ್ಪಿಸಿಕೊಂಡು ಓಡಿಹೋದರು. ಹಿಂದೆ ನಾವು ಅಧಿಕಾರದಲ್ಲಿದ್ದಾಗ ಒಂದು ಲೀಟರ್ ಹಾಲಿಗೆ 5 ರೂ. ಪ್ರೋತ್ಸಾಹ ಧನವನ್ನು ನೀಡುತ್ತಿದ್ದೆವು, ಕುಮಾರಸ್ವಾಮಿ ಬಂದ ಮೇಲೆ ಇದನ್ನು ಹೆಚ್ಚು ಮಾಡಿಲ್ಲ, ಮತ್ತೆ ನಾವು ಅಧಿಕಾರಕ್ಕೆ ಬಂದ ಮೇಲೆ 6 ರೂ. ಗೆ ಹೆಚ್ಚು ಮಾಡುತ್ತೇವೆ ಎಂದು ಹೇಳಿದರು.
ಮಂಡ್ಯದಲ್ಲಿ ಏಳೂ ಕ್ಷೇತ್ರ ಗೆಲ್ಲಿಸಿ, ನನ್ನ ಕೈ ಬಲಪಡಿಸಿ: ಡಿಕೆಶಿ
ಮಂಡ್ಯ ಮತದಾರರೇ, ನೀವು ಜೆಡಿಎಸ್ ಪಕ್ಷವನ್ನು ಗೆಲ್ಲಿಸಿದರೆ ಯಾವುದೇ ಪ್ರಯೋಜನ ಇಲ್ಲ. ನಿಮ್ಮ ಮನೆ ಮಗನಾದ ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದೇನೆ. ನೀವು ಏಳಕ್ಕೆ ಏಳೂ ಕ್ಷೇತ್ರವನ್ನು ಗೆಲ್ಲಿಸಿ, ನನ್ನ ಕೈಯನ್ನು ಬಲಪಡಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನವಿ ಮಾಡಿದರು.
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಯಾರು ಮಾಡಿದ್ದು? ಅದನ್ನು ಈಗ ಬಿಜೆಪಿಯವರು ಉದ್ಘಾಟನೆ ಮಾಡುತ್ತಾರಂತೆ. ಆದರೆ, ಇದು ಆಗಿದ್ದು ಕಾಂಗ್ರೆಸ್ ಕಾಲದಲ್ಲಿ ಎಂಬುದನ್ನು ಹೇಳುವುದಿಲ್ಲ. 14 ಸಾವಿರ ಕೋಟಿ ರೂಪಾಯಿ ಯೋಜನೆಯನ್ನು ಜಾರಿ ಮಾಡಿದ್ದು ನಾವಾಗಿದ್ದೇವೆ. ನೀವು ಜೆಡಿಎಸ್ ಗೆಲ್ಲಿಸಿದರೆ ಯಾವುದೇ ಪ್ರಯೋಜನ ಇಲ್ಲ. ನಮಗೆ ಅಧಿಕಾರ ಕೊಡಿ, ನನ್ನನ್ನು ಬಲಪಡಿಸಿ ಎಂದು ಡಿ.ಕೆ. ಶಿವಕುಮಾರ್ ಹೇಳುವ ಮೂಲಕ ಪರೋಕ್ಷವಾಗಿ ತಾವು ಮುಂದಿನ ಸಿಎಂ ಅಭ್ಯರ್ಥಿ ಎಂಬ ಸಂದೇಶವನ್ನು ರವಾನಿಸದ್ದಾರೆಂದೇ ವಿಶ್ಲೇಷಣೆ ಮಾಡಲಾಗುತ್ತಿದೆ. ಕೈ ಹಿಡಿದು ನಡೆಯೋಣ, ಕೈ ಹಿಡಿದು ಬೆಳೆಯೋಣ, ಕೈಗೆ ಕೈ ಜೋಡಿಸೋಣ ಎಂದು ಹೇಳುವ ಮೂಲಕ ಡಿಕೆಶಿ ತಮ್ಮ ಮಾತನ್ನು ಸಮಾಪ್ತಿಗೊಳಿಸಿದರು.
ಡಿಕೆನೂ ಬೇಡ, ಬಂಡೆಯೂ ಬೇಡ, ಏಳೂ ಕ್ಷೇತ್ರ ಗೆಲ್ಲಿಸಿಕೊಡಿ
ವೇದಿಕೆ ಮುಂಭಾಗದಲ್ಲಿದ್ದ ಡಿ.ಕೆ. ಶಿವಕುಮಾರ್ ಅಭಿಮಾನಿಗಳು, ಡಿಕೆ, ಡಿಕೆ, ಬಂಡೆ… ಬಂಡೆ ಎಂದು ಘೋಷಣೆ ಕೂಗಿದರು. ಆಗ ವೇದಿಕೆಯಲ್ಲಿದ್ದ ಕೆಪಿಸಿಸಿ ವಕ್ತಾರ ಚಲುವರಾಯಸ್ವಾಮಿ, ಘೋಷಣೆ ಕೂಗದಂತೆ ತಡೆಯಲು ಯತ್ನಿಸಿದರು. ಅದಕ್ಕೂ ಜನರು ಸುಮ್ಮನಾಗದಿದ್ದಾಗ ಸ್ವತಃ ಡಿ.ಕೆ. ಶಿವಕುಮಾರ್ ವೇದಿಕೆಗೆ ಬಂದು, “ನಿಮ್ಮೆಲ್ಲರ ಅಭಿಮಾನಕ್ಕೆ ನನ್ನ ಸಾಷ್ಟಾಂಗ ನಮಸ್ಕಾರಗಳು. ಗೂಳಿ ಕೊಟ್ಟಿ ಭತ್ತ ಕೊಡಿ ಸಾಕು. ಡಿಕೆನೂ ಬೇಡ, ಯಾವ ಬಂಡೆ ಅಂತಲೂ ಕೂಗುವುದು ಬೇಡ, ಏಳಕ್ಕೆ ಏಳೂ ಸ್ಥಾನಗಳನ್ನು ಗೆಲ್ಲಲು ಏನು ಬೇಕೋ ಅದನ್ನು ಮಾಡಿಕೊಳ್ಳಿ ಎಂದ ಡಿಕೆಶಿ ಮನವಿ ಮಾಡಿದರು.
ಇದನ್ನೂ ಓದಿ: KPSC Departmental Examination : ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಯ ಪ್ರಮಾಣ ಪತ್ರ ಬಿಡುಗಡೆ
ಸಮಾವೇಶದಲ್ಲಿ ಸಿದ್ದರಾಮಯ್ಯ ಬರುತ್ತಿದ್ದಂತೆ ಶಿಳ್ಳೆ, ಚಪ್ಪಾಳೆ ಹಾಕಿ ಅಭಿಮಾನಿಗಳು ಘೋಷಣೆ ಕೂಗಿದರು. ಹಲವು ನಿಮಿಷಗಳ ವರೆಗೆ ಜೈಕಾರ ಹಾಕಿದರು. ಆಗ ಸಿದ್ದರಾಮಯ್ಯ ಸಾಕು ನಿಲ್ಲಿಸ್ರಯ್ಯ ಎಂದರೂ ಕೇಳಲಿಲ್ಲ. ಭಾಷಣ ಮಧ್ಯೆ ಮಧ್ಯೆ ಹೌದು ಹುಲಿಯಾ ಎಂದು ಕಾರ್ಯಕರ್ತರು ಕೂಗಿದರು.