ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೋದಲ್ಲೆಲ್ಲ ಆಪ್ತರಿಗೆ ಟಿಕೆಟ್ (Karnataka election) ಘೋಷಿಸುವುದು ಕಂಡುಬರುತ್ತಿದೆ. ಈ ನಡುವೆ ಜಿಲ್ಲೆಯಲ್ಲೂ ಕಾಂಗ್ರೆಸ್ ನಾಯಕರ ಟಿಕೆಟ್ ಘೋಷಣೆ ಪ್ರಹಸನ ಮುಂದುವರಿದಿದೆ. ಚಾಮರಾಜ ಕ್ಷೇತ್ರದಲ್ಲಿ ತಮ್ಮ ಆಪ್ತನಿಗೆ ಮಾಜಿ ಸಿಎಂ ವೀರಪ್ಪ ಮೊಯ್ಲಿ ಟಿಕೆಟ್ ಘೋಷಣೆ ಮಾಡಿದ್ದು, ಕ್ಷೇತ್ರದ ಅಭ್ಯರ್ಥಿಯಾಗಿ ಮಾಜಿ ಶಾಸಕ ವಾಸು ಆಯ್ಕೆಯಾಗುವುದು ಖಚಿತ. ವಾಸು ಬಲಿಷ್ಠವಾದ ಅಭ್ಯರ್ಥಿ, ಮೊದಲ ಪಟ್ಟಿಯಲ್ಲಿ ಅವರ ಹೆಸರು ಇರುತ್ತದೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಜತೆ ಮುನಿಸಿಕೊಂಡು ಅಂತರ ಕಾಯ್ದುಕೊಂಡಿದ್ದ ಹಾಗೂ ಚಾಮರಾಜ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಮಾಜಿ ಶಾಸಕ ವಾಸು ನಿವಾಸಕ್ಕೆ ಶನಿವಾರ ವೀರಪ್ಪ ಮೊಯ್ಲಿ ಭೇಟಿ ನೀಡಿ ಮುನಿಸು ಶಮನ ಮಾಡಲು ಯತ್ನಿಸಿದರು.
ಟಿಕೆಟ್ ಕೈ ತಪ್ಪುವ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ನಾಯಕರಿಂದ ವಾಸು ಅಂತರ ಕಾಯ್ದುಕೊಂಡಿದ್ದರು. ವಾಸು ಅವರ ಪುತ್ರ ಕವೀಶ್‌ಗೌಡ ಈಗಾಗಲೇ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಸಿದ್ದರಾಮಯ್ಯ ಮೂಲಕ ಕಾಂಗ್ರೆಸ್ ಟಿಕೆಟ್‌ಗೆ ಮತ್ತೊಬ್ಬ ಮುಖಂಡ ಹರೀಶ್ ಗೌಡ ಲಾಬಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವೀರಪ್ಪ ಮೊಯ್ಲಿ ಅವರು, ಜಯಲಕ್ಷ್ಮಿಪುರಂನ ವಾಸು ಅವರ ನಿವಾಸಕ್ಕೆ ಭೇಟಿ ನೀಡಿ, ಉಪಾಹಾರ ಸೇವನೆ ಮಾಡಿ ಮಾತುಕತೆ ನಡೆಸಿದರು.
ಮೂಲ ಕಾಂಗ್ರೆಸ್ಸಿಗರನ್ನು ಕಾಯುವುದೇ ನನ್ನ ಕೆಲಸ. ನಾನು ಮತ್ತು ಮಾಜಿ ಶಾಸಕ ವಾಸು ಮೂಲ ಕಾಂಗ್ರೆಸ್ಸಿಗರು.
ಯಾರಿಗೆ ಯಾರೂ ಟಿಕೆಟ್ ತಪ್ಪಿಸಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಬಣ ಇಲ್ಲ, ಇದು ಕಾಂಗ್ರೆಸ್ ಬಣ. ತನ್ವೀರ್ ಸೇಠ್ ಅವರು ಅನೇಕ ಬಾರಿ ಶಾಸಕರಾಗಿ, ಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಅವರ ಬೇರು ಕಾಂಗ್ರೆಸ್‌ನಲ್ಲಿ ಬಲವಾಗಿದೆ ಎಂದು ಹೇಳಿದರು.
ಟಿಕೆಟ್ ಘೋಷಣೆಯಾಗುವರೆಗೆ ಸಿದ್ದರಾಮಯ್ಯ ಕೂಡ ಆಕಾಂಕ್ಷಿಯೇ
ಸಿಡಿ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೆಸರು ಪ್ರಸ್ತಾಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಡಿ.ಕೆ.ಶಿವಕುಮಾರ್ ಸಮರ್ಥವಾಗಿ ಉತ್ತರ ಕೊಟ್ಟಿದ್ದಾರೆ. ಸಾಕಷ್ಟು ಸಿಡಿಗಳಿವೆ, ಚುನಾವಣೆ ಸಂದರ್ಭದಲ್ಲಿ ಇಂತಹ ಸಿಡಿಗಳು ಸಾಕಷ್ಟು ಬರುತ್ತವೆ. ಸಿಡಿ ವಿಚಾರ ಇಟ್ಟುಕೊಂಡು ಡಿಕೆಶಿ ಬ್ಲ್ಯಾಕ್‌ಮೇಲ್ ಮಾಡಲ್ಲ, ಬಿಜೆಪಿ ಬ್ಲ್ಯಾಕ್ ಮೇಲ್ ಮಾಡಬಹುದು. ವೈಯುಕ್ತಿಕ ವಿಚಾರವನ್ನು ಸಿಬಿಐಗೆ ಕೊಡಲು ಬರುವುದಿಲ್ಲ. ಟಿಕೆಟ್ ಘೋಷಣೆಯಾಗುವರೆಗೂ ಸಿದ್ದರಾಮಯ್ಯ ಅವರೂ ಆಕಾಂಕ್ಷಿ. ಎಐಸಿಸಿ ಟಿಕೆಟ್ ಘೋಷಣೆ ಮಾಡುವುದಕ್ಕಿಂತ ಮುನ್ನ ಎಲ್ಲರೂ ಆಕಾಂಕ್ಷಿಗಳೇ. ಎರಡು ಕ್ಷೇತ್ರಗಳಿಗೆ ಯಾರು ಟಿಕೆಟ್ ಆಕಾಂಕ್ಷಿಗಳಿಲ್ಲ. ಎರಡು ಕ್ಷೇತ್ರಗಳ ಸ್ಪರ್ಧೆ ಬಗ್ಗೆ ಯಾರು ಕೂಡ ಯೋಚನೆ ಮಾಡಿಲ್ಲ. ಪರೋಕ್ಷವಾಗಿ ಸಿದ್ದರಾಮಯ್ಯ ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಿದರು.
ಪರಮೇಶ್ವರ್ ರಾಜೀನಾಮೆ ಕೊಟ್ಟಿಲ್ಲ
ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಡಾ.ಜಿ.ಪರಮೇಶ್ವರ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಚುನಾವಣೆ ಪ್ರಣಾಳಿಕೆ ಸಿದ್ಧವಾಗುತ್ತಿದೆ. ಪ್ರದೇಶವಾರು ಪ್ರಣಾಳಿಕೆ ಸಿದ್ಧಪಡಿಸಲಾಗುತ್ತಿದೆ. ಡಾ.ಪರಮೇಶ್ವರ ಅವರ ಅಧ್ಯಕ್ಷತೆಯಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ. ಪರಮೇಶ್ಚರ್ ರಾಜೀನಾಮೆ ಕೊಟ್ಟಿಲ್ಲ. ನಾನು ಅವರ ಜತೆ ಮಾತನಾಡಿದ್ದೇನೆ ಎಂದು
ಸ್ಪಷ್ಟನೆ ನೀಡಿದರು.
ಇದನ್ನೂ ಓದಿ | BJP Karnataka: ಈ ಸಾರಿ ಜೆಡಿಎಸ್ ಜತೆ ಬಿಲ್ಕುಲ್ ಒಳ ಒಪ್ಪಂದ ಇಲ್ಲ; ಪಕ್ಕಾ ಫೈಟ್: ಬಿಜೆಪಿ ಪಾಳೆಯದಲ್ಲಿ ಖಡಕ್ ಮಾತು
ಕಾಂಗ್ರೆಸ್ ಮಹಾಸಾಗರ ಇದ್ದ ಹಾಗೆ
ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ನಮ್ಮಲ್ಲಿ ಸಾವಿರಾರು ಬಣ ಇದೆ. ಸಣ್ಣ ಸಣ್ಣ ನದಿಗಳು ಸೇರಿ ಸಮುದ್ರ ಸೇರುತ್ತವೆ. ಸಮುದ್ರ ಸೇರಿದ ಕೂಡಲೇ ಯಾವ ಬಣ ಇರುವುದಿಲ್ಲ. ಕೆಲವು ಸಣ್ಣ ಸಣ್ಣ ನದಿಗಳು ಹಾರಿ ಹೋಗುತ್ತವೆ. ಕಾಂಗ್ರೆಸ್ ಮಹಾಸಾಗರ ಇದ್ದ ಹಾಗೆ ಎಂದು ಪರೋಕ್ಷವಾಗಿ ಪಕ್ಷ ವಿರೋಧಿ ಚಟುವಟಿಕೆ ಮಾಡುವವರಿಗೆ ಎಚ್ಚರಿಕೆ ನೀಡಿದರು.
ನನಗೆ ಯಾವುದೇ ಅಸಮಾಧಾನ ಇಲ್ಲ. ಕೇಂದ್ರೀಯ ಚುನಾವಣೆ ಸಮಿತಿಯಲ್ಲಿ ರಾಜ್ಯದಿಂದ ನಾನೊಬ್ಬನೇ ಸದಸ್ಯ. ಸಕ್ರಿಯವಾಗಿ ಕಾಂಗ್ರೆಸ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದೇನೆ. ಬಣ ರಾಜಕೀಯ ಕಾಂಗ್ರೆಸ್‌ನಲ್ಲಿ ಇಲ್ಲ. ಯಾರಿಗೆ ಅರ್ಹತೆ ಇದೆಯೋ ಅವರಿಗೆ ಟಿಕೆಟ್ ಸಿಗುತ್ತದೆ ಎಂದು ತಿಳಿಸಿದರು.