Site icon Vistara News

Karnataka Election: ಮಾಜಿ ಶಾಸಕ ವಾಸು ಪುತ್ರ ಕವೀಶ್‌ ಗೌಡ ಬಿಜೆಪಿ ಸೇರ್ಪಡೆ; ಅಪ್ಪನ ʻಕೈʼಬಿಟ್ಟು ಕಮಲ ಹಿಡಿದ ಮಗ

Former MLA Vasu son Kavish Gowda joins BJP

ಮೈಸೂರು: ಮುಂಬರುವ ವಿಧಾನಸಭಾ ಚುನಾವಣೆಯು (Karnataka Election) ರಾಜ್ಯ ರಾಜಕೀಯದಲ್ಲಿ ರಂಗೇರುತ್ತಿದೆ. ಪಕ್ಷಾಂತರ ಪರ್ವವೂ ಆರಂಭವಾಗಿದೆ. ವಿವಿಧ ಪಕ್ಷಗಳ ನಾಯಕರು, ಯುವ ಮುಖಂಡರು ತಮ್ಮ ತಮ್ಮ ಪಕ್ಷಗಳನ್ನು ಬಿಟ್ಟು ಮತ್ತೊಂದರತ್ತ ಮುಖ ಮಾಡುತ್ತಿದ್ದಾರೆ. ಈಗ ಈ ಸಾಲಿಗೆ ಕಾಂಗ್ರೆಸ್‌ ಹಿರಿಯ ನಾಯಕ, ಮಾಜಿ ಶಾಸಕ ವಾಸು ಪುತ್ರ ಕವೀಶ್‌ ಗೌಡ ಸೇರ್ಪಡೆಯಾಗಿದ್ದಾರೆ. ಇದು ವಾಸು ಅವರಿಗೆ ಇರಿಸುಮುರಿಸು ತಂದಿದೆ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ.

ಬುಧವಾರ (ಜ.೨೫) ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸದಸ್ಯತ್ವ ನೋಂದಣಿ ಮಾಡಿಕೊಂಡಿದ್ದ ಕವೀಶ್‌ ಗೌಡ ಅವರಿಗೆ ಮೈಸೂರು ವಿಭಾಗೀಯ ಉಸ್ತುವಾರಿ ನಿರ್ಮಲ್ ಕುಮಾರ್ ಸುರಾನಾ ನೇತೃತ್ವದಲ್ಲಿ ಬಿಜೆಪಿ ಶಾಲನ್ನು ಹಸ್ತಾಂತರ ಮಾಡಲಾಯಿತು. ಜ.30ರಂದು ಕೇಂದ್ರ ಗೃಹ ಸಚಿವ ಅಮಿತ್ ಷಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ.

ಕವೀಶ್ ಒಕ್ಕಲಿಗ ಸಮುದಾಯದ ಯುವ ನಾಯಕರಾಗಿದ್ದು, ಸಾಕಷ್ಟು ಜನ ಬೆಂಬಲವನ್ನು ಹೊಂದಿದ್ದಾರೆ. ಚಾಮರಾಜ ಕ್ಷೇತ್ರದ ಮಾಜಿ ಶಾಸಕ, ಕಾಂಗ್ರೆಸ್‌ ಮುಖಂಡ ವಾಸು ಅವರ ಪುತ್ರ ಇವರಾಗಿದ್ದು, ಬಿಜೆಪಿಯನ್ನು ಸೇರಿದ್ದಾರೆ. ಇವರಿಗೆ ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆ ಇದೆ. ಮತ್ತೊಂದೆಡೆ ವಾಸು ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ವಾಸು ಮೂರು ದಶಕದಿಂದ ಕಾಂಗ್ರೆಸ್‌ಗೆ ನಿಷ್ಠರಾಗಿದ್ದು, ಈಗಲೂ ಅದೇ ಪಕ್ಷದಲ್ಲಿ ಮುಂದುವರಿದಿದ್ದಾರೆ. ಆದರೆ, ಅವರ ಪುತ್ರ ಈಗ ಬಿಜೆಪಿ ಸೇರ್ಪಡೆಯಾಗಿರುವುದು ಮೈಸೂರು ಜಿಲ್ಲಾ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.

ಕವೀಶ್ ಯಾವುದೇ ಕ್ಷೇತ್ರದ ಅಭ್ಯರ್ಥಿ ಆಗುವುದಿಲ್ಲ- ವಾಸು

ಮಗನಾಗಿ ನಾನು ಕವೀಶ್‌ ಬಗ್ಗೆ ಮಾತನಾಡಬಹುದು. ಆದರೆ, ಈಗ ಅವನು ಬೇರೆ ಪಕ್ಷ ಸೇರಿ ಆಗಿದೆ. ಬೇರೆ ಪಕ್ಷದವರ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ. ನನಗೆ ಗೊತ್ತಿರುವಂತೆ ಕವೀಶ್ ಯಾವುದೇ ಕ್ಷೇತ್ರದ ಅಭ್ಯರ್ಥಿ ಆಗುವುದಿಲ್ಲ ಎಂದು ಮಾಜಿ ಶಾಸಕ ವಾಸು ಸ್ಪಷ್ಟನೆ ನೀಡಿದ್ದಾರೆ.

ಯುವಕರು ನಮಗಿಂತಲೂ ಸ್ಪೀಡ್ ಇರುತ್ತಾರೆ. ಅವರ ನಿರ್ಧಾರ ಅವರಿಗೆ, ನಾನು ಚಾಮರಾಜಕ್ಕೆ ಅರ್ಜಿ ಹಾಕಿದ್ದೇನೆ.
ಅದು ಇನ್ನೂ ಇತ್ಯರ್ಥ ಆಗಿಲ್ಲ. ಟಿಕೆಟ್ ತಪ್ಪಿಸಿದವರು ಗೆದ್ದ ಇತಿಹಾಸ ಇಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬರಬೇಕು.
ಸಿದ್ದರಾಮಯ್ಯ ಅವರೇ ಚಾಮರಾಜಕ್ಕೆ ಬರಲಿ. ನಾನೇ ಬೆಂಬಲ ಕೊಟ್ಟು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ವಾಸು ಹೇಳಿದ್ದಾರೆ.

ಇದನ್ನೂ ಓದಿ: Astro Tips : ಎಂದು ಉಗುರು ಕತ್ತರಿಸಿದರೆ ಶುಭ? ಯಾವಾಗ ಕತ್ತರಿಸಿದರೆ ಧನ ಲಾಭ?

ಕುಟುಂಬದಲ್ಲಿ ರಾಜಕೀಯ ವೈರುದ್ಯ

ರಾಜ್ಯ ರಾಜಕೀಯದಲ್ಲಿ ಈ ರೀತಿಯಾದಂತಹ ಕುಟುಂಬದಲ್ಲಿ ರಾಜಕೀಯ ವೈರುದ್ಯಗಳು ಆಗಾಗ ಕಂಡು ಬರುತ್ತಿವೆ. ಚಿಕ್ಕಬಳ್ಳಾಪುರ ಸಂಸದ ಬಿ.ಎನ್.‌ ಬಚ್ಚೇಗೌಡ ಬಿಜೆಪಿಯಲ್ಲಿ ಅವರ ಪುತ್ರ ಶರತ್‌ ಬಚ್ಚೇಗೌಡ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಜಯಗಳಿಸಿದ್ದಾರೆ. ಇತ್ತ ಬೆಳಗಾವಿಯಲ್ಲಿ ಜಾರಕಿಹೊಳಿ ಸಹೋದರರು ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿದ್ದಾರೆ. ಇನ್ನು ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪುತ್ರರಾದ ಕುಮಾರ ಬಂಗಾರಪ್ಪ ಬಿಜೆಪಿಯಲ್ಲಿ ಶಾಸಕರಾಗಿದ್ದರೆ, ಮಾಜಿ ಶಾಸಕ ಮಧು ಬಂಗಾರಪ್ಪ ಕಾಂಗ್ರೆಸ್‌ನಲ್ಲಿದ್ದಾರೆ.

Exit mobile version