ರಾಮನಗರ: ವಿಧಾನಸಭಾ ಚುನಾವಣೆ (Karnataka Election) ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳು ಹೆಚ್ಚತೊಡಗಿವೆ. ಈಗ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಮಾತನಾಡಿದ್ದು, ಅವರನ್ನು ಕೊಕ್ಕರೆಗೆ ಹೋಲಿಸಿದ್ದಾರೆ. ಈ ಹೇಳಿಕೆಗೆ ಎಚ್‌ಡಿಕೆ ಸಹ ತಿರುಗೇಟು ನೀಡಿದ್ದು, ನಾನು ಕೊಕ್ಕರೆಯಾದರೆ ಯೋಗೇಶ್ವರ್ ಏನು ಮೀನೇ ಎಂದು ಪ್ರಶ್ನೆ ಮಾಡಿದ್ದಾರೆ.
ಚೆನ್ನಪ್ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಪಿ. ಯೋಗೇಶ್ವರ್, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಎಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬುದನ್ನು ಮಾಧ್ಯಮದವರು ಅವರನ್ನೇ ಕೇಳಬೇಕು. ನನ್ನನ್ನು ಕೇಳಬೇಡಿ. ಕುಮಾರಸ್ವಾಮಿ ಅವರದ್ದು ಸ್ವಂತ ಪಕ್ಷವಾಗಿದ್ದರಿಂದ 224 ಕ್ಷೇತ್ರದಲ್ಲಿ ಎಲ್ಲಿ ಬೇಕಾದರೂ ನಿಲ್ಲಬಹುದು ಎಂದು ಹೇಳಿದರು.
ಆದರೆ, ನಮ್ಮದು ರಾಷ್ಟ್ರೀಯ ಪಕ್ಷವಾಗಿದೆ. ವರಿಷ್ಠರು ಎಲ್ಲಿ ಸ್ಪರ್ಧೆ ಮಾಡು ಎಂದು ಹೇಳುತ್ತಾರೋ ಅಲ್ಲಿ ಸ್ಪರ್ಧೆ ಮಾಡಬೇಕು. ಪಕ್ಷಕ್ಕೆ ಎಲ್ಲೆಲ್ಲಿ ತೊಂದರೆ ಆಗುತ್ತದೆಯೋ ಅಲ್ಲಿ ಕುಮಾರಸ್ವಾಮಿ ಸ್ಪರ್ಧೆ ಮಾಡಬಹುದು. ಬಹಳ ಸಲ ಅವರು ಈ ರೀತಿಯಾಗಿ ಹೇಳಿಕೊಂಡಿದ್ದಾರೆ. ಕುಮಾರಸ್ವಾಮಿ ಅವರು ಕೊಕ್ಕರೆ ಇದ್ದ ಹಾಗೆ. ಎಲ್ಲೆಲ್ಲಿ ಮೀನು ಇರುತ್ತದೋ ಅಲ್ಲೆಲ್ಲ ಕಡೆ ಅವರು ಹೋಗುತ್ತಿರುತ್ತಾರೆ. ನನ್ನ ಕರ್ಮ ಭೂಮಿ ಚನ್ನಪಟ್ಟಣ, ರಾಜಕೀಯವಾಗಿ ಜನ್ಮ ನೀಡಿದ್ದು ಇದೇ ಕ್ಷೇತ್ರ. ನಾನು ಮುಂದೆ ಸಹ ಇಲ್ಲೇ ಸೇವೆ ಮಾಡುತ್ತೇನೆ ಎಂದು ಹೇಳಿದರು.
ಮಂಡ್ಯ ಸಂಸದೆ ಸುಮಲತಾ ಅವರು ಆದಷ್ಟು ಬೇಗ ಬಿಜೆಪಿಯನ್ನು ಸೇರಬಹುದು. ನಾನು ಇತ್ತೀಚೆಗೆ ಅವರನ್ನು ಸಂಪರ್ಕ ಮಾಡಿಲ್ಲ. ಮಂಡ್ಯ ಜಿಲ್ಲೆಗೆ ಆರ್. ಅಶೋಕ್ ಅವರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗಿದೆ. ಅವರು ನಮ್ಮ ಪಕ್ಷದ ಹಿರಿಯ ನಾಯಕರಾಗಿದ್ದಾರೆ. ಅಲ್ಲಿ 3-4 ಸ್ಥಾನವನ್ನು ಗೆಲ್ಲಬೇಕಿದೆ. ಹಾಗಾಗಿ ಅವರಿಗೆ ಜವಾಬ್ದಾರಿ ನೀಡಿದ್ದಾರೆ. ನಾನು ಸಹ ಅವರ ಜತೆ ಸೇರಿ ಕೆಲಸ ಮಾಡುತ್ತೇನೆ. ಗೋಪಾಲಯ್ಯ ಅವರಿಗೆ ಎರಡು ಕಡೆ ಉಸ್ತುವಾರಿ ಇತ್ತು. ಹಾಗಾಗಿ ಅಶೋಕ್ ಅವರಿಗೆ ಉಸ್ತುವಾರಿ ನೀಡಿದ್ದಾರೆ. ಹೀಗಾಗಿ ಅಲ್ಲಿ ಸಣ್ಣಪುಟ್ಟ ವಿರೋಧ ಇರಬಹುದು ಎಂದು ಅಶೋಕ್ ಗೋ ಬ್ಯಾಕ್ ಅಭಿಯಾನದ ಬಗ್ಗೆ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ: Karnataka Election: ಯಡಿಯೂರಪ್ಪ ಎಲ್ಲರೂ ಒಪ್ಪಿರುವ ಧೀಮಂತ ನಾಯಕ; ಅವರಿಗೆ ಕಲ್ಲು ಹೊಡೆದರೆ ಬಿಜೆಪಿಗೆ ನಷ್ಟ: ವಿಜಯೇಂದ್ರ
ಸಿ.ಪಿ. ಯೋಗೇಶ್ವರ್ ಏನು ಮೀನಾ?: ಎಚ್‌ಡಿಕೆ
ನನ್ನ ಸ್ಪರ್ಧೆ ಬಗ್ಗೆ ಸಿ.ಪಿ. ಯೋಗೇಶ್ವರ್ ಏನು ಹೇಳುತ್ತಾರೆ? ನಾನು ಕೊಕ್ಕರೆಯಾದರೆ ಅವರೇನು ಮೀನಾ ಎಂದು ಎಚ್.ಡಿ. ಕುಮಾರಸ್ವಾಮಿ ರಾಯಚೂರಿನಲ್ಲಿ ಪ್ರಶ್ನೆ ಮಾಡಿದ್ದಾರೆ.