ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ (karnataka Election 2023) ಅಂತಿಮ ಹಂತದಲ್ಲಿರುವ ಹೊತ್ತಿನಲ್ಲಿ ಕಾಂಗ್ರೆಸ್‌ನ ಇಬ್ಬರು ಪ್ರಮುಖ ನಾಯಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (siddaramaiah) ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಅವರ ಸಂಬಂಧದಲ್ಲಿ ಹುಳಿ ಹಿಂಡುವ ಮತ್ತೊಂದು ಪ್ರಯತ್ನ ನಡೆದಿದೆ. ಆದರೆ, ಸಿದ್ದರಾಮಯ್ಯ ಅವರು ಈ ಪತ್ರ ನಕಲಿ, ಬಿಜೆಪಿಯ ಅಪಪ್ರಚಾರ ಎಂದು ಹೇಳುವ ಮೂಲಕ ಡ್ಯಾಮೇಜ್ ಆಗದಂತೆ ನೋಡಿಕೊಂಡಿದ್ದಾರೆ.
ಕಾಂಗ್ರೆಸ್‌ನ ಈ ಇಬ್ಬರು ನಾಯಕರ ನಡುವೆ ನಾಯಕತ್ವದ ಪೈಪೋಟಿ ಇರುವುದಂತೂ ನಿಜ. ಅದನ್ನು ಅವರಿಬ್ಬರೂ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ನಾನೂ ಮುಖ್ಯಮಂತ್ರಿ ಅಭ್ಯರ್ಥಿ ಎಂದಿರುವ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರೂ ಆಕಾಂಕ್ಷೆ ಹೊಂದಿದ್ದರೆ ತಪ್ಪೇನಿಲ್ಲ ಎಂದಿದ್ದಾರೆ. ಅಂತಿಮವಾಗಿ ಶಾಸಕರು ಮತ್ತು ಹೈಕಮಾಂಡ್ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಅವರಿಬ್ಬರೂ ಒಪ್ಪಿಕೊಂಡಿದ್ದಾರೆ. ಹೀಗಾಗಿ ತಮ್ಮ ಕಡೆಯವರಿಗೆ ಹೆಚ್ಚು ಟಿಕೆಟ್ ಕೊಡಿಸಲು ಮತ್ತು ಗೆಲ್ಲಿಸಿಕೊಂಡು ಬರಲು ಪ್ರಯತ್ನ ನಡೆಸುತ್ತಿರುವುದು ಕೂಡಾ ಸುಳ್ಳಲ್ಲ.
ಈ ನಡುವೆ, ಅವರಿಬ್ಬರ ನಡುವೆ ಯಾವುದೇ ಗೊಂದಲವಿಲ್ಲ. ಅವರಿಬ್ಬರೂ ಆತ್ಮೀಯವಾಗಿದ್ದಾರೆ ಎಂದು ಬಿಂಬಿಸಲು ಕಾಂಗ್ರೆಸ್ ಅವರಿಬ್ಬರ ನಡುವಿನ ಆತ್ಮೀಯ ಮಾತುಕತೆಯ ವಿಡಿಯೊವನ್ನು ಕೂಡಾ ಹರಿಬಿಟ್ಟಿದೆ. ಅದು ಸಾಕಷ್ಟು ಕುತೂಹಲವನ್ನು ಕೆರಳಿಸಿದೆ.
ಇದರ ನಡುವೆಯೇ ಸಿದ್ದರಾಮಯ್ಯ ಅವರ ವಿರುದ್ಧ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಭಾರಿ ಸದ್ದು ಮಾಡಿದೆ. ಮೇ 8ರಂದು ಬರೆದಿದೆ ಎನ್ನಲಾದ ಈ ಪತ್ರದಲ್ಲಿ ಶಿವಕುಮಾರ್ ಅವರು ತನ್ನನ್ನು ತಾನೇ ಮುಂದಿನ ಸಿಎಂ ಎಂದು ಬಿಂಬಿಸಿಕೊಳ್ಳುತ್ತಿರುವುದು, ತನ್ನ ಜತೆ ಮಾತನಾಡದೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು, ಜೆಡಿಎಸ್ ಜತೆಗೆ ಮೈತ್ರಿಗೆ ಈಗಾಗಲೇ ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿರುವುದು ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ.
ಎಲ್ಲರೂ ಸೇರಿಕೊಂಡು ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರಚಾರ ನಡೆಸುತ್ತಿರುವ ಹೊತ್ತಿನಲ್ಲಿ, ಜನರು ಕಾಂಗ್ರೆಸ್ ಮೇಲೆ ನಂಬಿಕೆ ಇಟ್ಟು ಮತ ಚಲಾವಣೆಗೆ ಮುಂದಾಗಿರುವ ಹೊತ್ತಿನಲ್ಲಿ ಡಿ.ಕೆ. ಶಿವಕುಮಾರ್ ಅವರು ತಾನೇ ಮುಂದಿನ ಸಿಎಂ ಎಂದು ಬಿಂಬಿಸಿಕೊಳ್ಳುತ್ತಾ ನನ್ನ ಅಭಿಮಾನಿಗಳಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಪತ್ರದಲ್ಲಿ ಬರೆಯಲಾಗಿದೆ.
ಆದರೆ, ಇದೊಂದು ನಕಲಿ ಪತ್ರ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ʻʻಸೋಲಿನ ಭೀತಿಯಿಂದ ಹತಾಶೆಗೀಡಾಗಿರುವ ಬಿಜೆಪಿ ಪಕ್ಷ ನನ್ನ ಹೆಸರಿನ ಖೊಟ್ಟಿ ಪತ್ರವನ್ನು ರಚಿಸಿ ಅಪಪ್ರಚಾರ ಮಾಡುತ್ತಿದೆ. ಇಂತಹ ಯಾವ ಪತ್ರವನ್ನೂ ನಾನು ಬರೆದಿಲ್ಲ. ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಈ ಸುಳ್ಳು ಪ್ರಚಾರಕ್ಕೆ ಬಲಿಯಾಗಬಾರದು. ನನ್ನ ಮತ್ತು ಡಿ.ಕೆ ಶಿವಕುಮಾರ್ ಸಂಬಂಧ ಸೌಹಾರ್ದಯುತವಾಗಿದೆ, ಇದಕ್ಕೆ ಹುಳಿ ಹಿಂಡುವ ಪ್ರಯತ್ನ ಯಶಸ್ಸು ಕಾಣಲಾರದು. ಶೀಘ್ರದಲ್ಲಿಯೇ ಪೊಲೀಸರಿಗೆ ದೂರು ನೀಡಿ ಈ ಕಿಡಿಗೇಡಿತನದ ಪತ್ರ ಸೃಷ್ಟಿಸಿ ಹಂಚುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಲು ಒತ್ತಾಯಿಸಲಿದ್ದೇನೆʼʼ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ : Karnataka Election : 100ಕ್ಕೂ ಅಧಿಕ ಲಿಂಗಾಯತ ಸ್ವಾಮೀಜಿಗಳಿಂದ ಕಾಂಗ್ರೆಸ್‌ಗೆ ಬೆಂಬಲ ಎಂದ ಡಿಕೆಶಿ