Site icon Vistara News

Karnataka Election : ಹನೂರಿನಲ್ಲಿ ಬುಡಕಟ್ಟು ಮಹಿಳೆಯರ ಜತೆ ಆತ್ಮೀಯವಾಗಿ ಬೆರೆತ ಪ್ರಿಯಾಂಕಾ, ಅಪ್ಪುಗೆಯ ಸಾಂತ್ವನ

karnataka election-priyanka gandhi migles with adivasi women in hanur

karnataka-election-priyanka gandhi migles with adivasi women in hanur

ಹನೂರು (ಚಾಮರಾಜನಗರ) : ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi) ವಾದ್ರಾ ಅವರು ಮಂಗಳವಾರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Election) ಕಾಂಗ್ರೆಸ್‌ ಪರ ಪ್ರಚಾರ ನಡೆಸಲು ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗೆ ಆಗಮಿಸಿದರು. ಈ ಸಂದರ್ಭದಲ್ಲಿ ಅವರು ಹನೂರಿನ ಆರ್.ಎಸ್ ದೊಡ್ಡಿಯ ಜಿ.ವಿ.ಗೌಡ ಕಾಲೇಜು ಆವರಣದಲ್ಲಿ ಆಯೋಜನೆ ಮಾಡಿರುವ ಬುಡಕಟ್ಟು ಹಾಗೂ ಬೇಡಗಂಪಣ ಸಮುದಾಯದ ಮಹಿಳೆಯರ ಜೊತೆ ಸಂವಾದ ನಡೆಸಿದರು.

ಆದಿವಾಸಿ ಮಹಿಳೆಯರ ಜತೆ ಆತ್ಮೀಯವಾಗಿ ಬೆರೆತ ಪ್ರಿಯಾಂಕಾ ಗಾಂಧಿ (Priyanka Gandhi) ಅವರು ಕೆಲವರನ್ನು ಪ್ರೀತಿಯಿಂದ ಅಪ್ಪಿಕೊಂಡರು. ಸಂವಾದದ ವೇಳೆ ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಿಳೆಯೊಬ್ಬರು ತಮ್ಮ ಕಷ್ಟ ಹೇಳಿಕೊಂಡರು. ಹನೂರು ತಾಲೂಕಿನ ಹೊಸಪೊಡಿನ ನಿವಾಸಿ ತಿರುವಮ್ಮ ಅವರು ʻʻನಮ್ಮ ಊರಿನಲ್ಲಿ ಕರೆಂಟ್ ಇಲ್ಲ. ರಸ್ತೆ ಇಲ್ಲ, ಕುಡಿಯುವ ನೀರಿಲ್ಲ. 5ನೇ ತರಗತಿ ನಂತರ ನಮ್ಮ ಮಕ್ಕಳಿಗೆ ಶಾಲೆ ಇಲ್ಲ. ಮೂಲಭೂತ ಸೌಕರ್ಯಗಳಿಲ್ಲʼʼ ಎಂದು ತಮ್ಮ ಕಷ್ಟ ಹೇಳಿಕೊಂಡರು. ಕಷ್ಟ ಕೇಳಿದ ತಕ್ಷಣ ಅವರು ವೇದಿಕೆಯಿಂದ ಕೆಳಗಿಳಿದು ತಿರುವಮ್ಮನನ್ನು ಅಪ್ಪಿಕೊಂಡರು.

ಪ್ರಿಯಂಕಾ ಅವರು ಅಪ್ಪಿಕೊಂಡಿದ್ದಕ್ಕೆ ಖುಷಿಪಟ್ಟ ಮಹಿಳೆ, ʻʻನಾನು ಪ್ರಿಯಾಂಕಾ ಗಾಂಧಿಯಲ್ಲಿ (Priyanka Gandhi) ಇಂದಿರಾ ಗಾಂಧಿ ಅವರನ್ನು ನೋಡುತ್ತಿದ್ದೇನೆ. ನಮಗೆ ಶಾಲೆ, ರಸ್ತೆ ಮೂಲಭೂತ ಸೌಕರ್ಯ‌ ಕೊರತೆ ಇದೆ ಎಂದು ಹೇಳಿಕೊಂಡೆ. ಎಲ್ಲ ಕೆಲಸವನ್ನು ಮಾಡಿಕೊಡುತ್ತೇವೆ ಎಂದು ಹೇಳಿದರು. ಇಂದಿರಾ ಗಾಂಧಿ ನಮಗೆ ಜಮೀನನ್ನು ಕೊಡಿಸಿದರು. ನಾವು ಬೇರೆಯವರ ಮನೆಯಲ್ಲಿ ಕೆಲಸ ಮಾಡುತ್ತಿದ್ದೆವು. ಅದೀಗ ತಪ್ಪಿದ್ದಂತಾಗಿದೆʼʼ ಎಂದು ಹೇಳಿದರು.

ಮಹಿಳೆಯರ ಕಷ್ಟದ ಬದುಕು ನನಗೆ ಗೊತ್ತು

ಸಂವಾದದಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ ಅವರು, ʻʻನೀವು ಎಷ್ಟೊಂದು ಕಷ್ಟಪಡುತ್ತಿದ್ದೀರಿ ಎನ್ನುವುದು ನನಗೆ ಗೊತ್ತು. ಮನೆಯಲ್ಲೂ ಕೆಲಸ ಮಾಡಿಕೊಂಡು ಹೊರಗೂ ಕೆಲಸ ಮಾಡಿ ಮನೆಯನ್ನು ಸಂಭಾಳಿಸುವವಳು ಮಹಿಳೆ. ಮಹಿಳೆಯರದು ಯಾವತ್ತೂ ಸಂಘರ್ಷದ ಬದುಕುʼʼ ಎಂದರು.

ʻʻಮಹಿಳೆಯರು ಎಷ್ಟು ಕೆಲಸ ಮಾಡಿದರೂ ಅವಳಿಗೆ ಪ್ರತಿಫಲ ಸಿಗುತ್ತಿಲ್ಲ. ಅವರ ಕಷ್ಟಗಳಿಗೆ ಸಣ್ಣ ಮಟ್ಟದ ಪರಿಹಾರವಾಗಿ ಕಾಂಗ್ರೆಸ್ ಪಕ್ಷ ಎರಡು ಸಾವಿರ ರೂಪಾಯಿಯನ್ನು ಮಹಿಳೆಗೆ ಕೊಡುತ್ತಿದೆ. ಯಾವುದೇ ಮಧ್ಯವರ್ತಿಗಳಿಲ್ಲದೆ ಅದು ಅವರ ಖಾತೆಯನ್ನು ಸೇರಲಿದೆ. ಮಹಿಳೆಯರು ಸುಖವಾಗಿರಬೇಕು ಎಂದು ನಾವು ಈ ಭರವಸೆ ಕೊಟ್ಟಿದ್ದೇವೆʼʼ ಎಂದು ಪ್ರಿಯಾಂಕಾ ಹೇಳಿದರು.

ʻʻನಾನು ಒಬ್ಬಳು ಹೆಣ್ಣು, ನನಗೂ ಹೆಣ್ಣು ಮಕ್ಕಳಿದ್ದಾರೆ. ಹೆಣ್ಣಿನ ಸವಾಲುಗಳು ನನಗೆ ಗೊತ್ತಿದೆʼʼ ಎಂದು ಪ್ರಿಯಾಂಕಾ ನುಡಿದರು.

ʻʻನನಗೆ ನೀವು ಇಷ್ಟೊಂದು ಪ್ರೀತಿ ಕೊಟ್ಟಿದ್ದೀರಿ. ಈ ಪ್ರೀತಿಯನ್ನು ನಾನು ಕರ್ನಾಟಕ ಕಟ್ಟಲು‌ ಉಪಯೋಗಿಸುತ್ತೇನೆʼʼ ಎಂದರು ಪ್ರಿಯಾಂಕಾ.

ಹನೂರಿನ ಈ ಸಮುದಾಯ ರಾಜಕೀಯ ಪಕ್ಷಗಳ ಟಾರ್ಗೆಟ್‌

ಹನೂರಿನಲ್ಲಿರುವ ಬುಡಕಟ್ಟು ಹಾಗೂ ಬೇಡಗಂಪಣ ಸಮುದಾಯ ರಾಜಕೀಯ ಪಕ್ಷಗಳ ಪ್ರಮುಖ ಟಾರ್ಗೆಟ್ ಆಗಿದೆ. 30 ಸಾವಿರಕ್ಕು ಹೆಚ್ಚು ಮತಗಳನ್ನ ಹೊಂದಿರುವ ಬೇಡಗಂಪಣ ಹಾಗೂ ಬುಡಕಟ್ಟು ಸಮುದಾಯದ ಮತಗಳು ಇಲ್ಲಿ ನಿರ್ಣಾಯಕ. ಹೀಗಾಗಿ ಈ ಸಮುದಾಯಗಳ ಮೇಲೆ ರಾಜಕೀಯ ಪಕ್ಷಗಳ ಕಣ್ಣು ನೆಟ್ಟಿದೆ.

ಕಳೆದ 15 ವರ್ಷಗಳಿಂದಲೂ ಹನೂರಿನಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದೆ. ಮತ್ತೆ ಹನೂರಿನಲ್ಲಿ ತನ್ನ ಪ್ರಾಬಲ್ಯ ಸಾಧಿಸಲು ಹೊರಟಿರುವ ಕಾಂಗ್ರೆಸ್ ಪ್ರಿಯಾಂಕಾ ಗಾಂಧಿ ಅವರನ್ನು ಕರೆದುಕೊಂಡು ಬಂದಿದೆ.

ಈ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕೂಡ ಬುಡಕಟ್ಟು ಹಾಗೂ ಬೇಡಗಂಪಣ ಸಮುದಾಯದ ಜೊತೆ ಸಂವಾದ ನಡೆಸಿದ್ದರು.

ಪ್ರಿಯಾಂಕಾ ಗಾಂಧಿ ಹೆಲಿಕಾಪ್ಟರ್‌ ತಪಾಸಣೆ

ಬೇಡಗಂಪಣ ಮತ್ತು ಬುಡಕಟ್ಟು ಮಹಿಳೆಯರೊಂದಿಗೆ ಸಂವಾದ ನಡೆಸಲು ಆಗಮಿಸಿದ ಪ್ರಿಯಾಂಕಾ ಗಾಂಧಿ ಅವರ ಹೆಲಿಕಾಪ್ಟರನ್ನು ಚುನಾವಣಾಧಿಕಾರಿಗಳು ತಪಾಸಣೆಗೆ ಒಳಪಡಿಸಿದರು.

ಪ್ರಿಯಾಂಕಾ ರೋಡ್‌ ಶೋಗೆ ಭರ್ಜರಿ ರೆಸ್ಪಾನ್ಸ್‌

ಮೈಸೂರು ಕೆ.ಆರ್‌. ನಗರ ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿ ಅವರು ಸುಮಾರು ಎರಡು ಕಿಲೋಮೀಟರ್‌ ರೋಡ್‌ ಶೋ ನಡೆಸಿದರು. ಇದಕ್ಕೆ ಸಾರ್ವಜನಿಕರಿಂದ ಭರ್ಜರಿ ರೆಸ್ಪಾನ್ಸ್‌ ದೊರಕಿತು.

Priyanka Gandhi

ತೋಪಮ್ಮ ದೇವಾಲಯ ವೃತ್ತದಿಂದ ಆರಂಭಗೊಂಡ ರೋಡ್‌ ಶೋ ಪುರಸಭೆ ವೃತ್ತದ ಬಳಿ ಅಂತ್ಯಗೊಂಡಿತು. ರೋಡ್ ಶೋನಲ್ಲಿ ಕೆ.ಆರ್.ನಗರ ಅಭ್ಯರ್ಥಿ ಡಿ.ರವಿಶಂಕರ್, ಹುಣಸೂರು ಅಭ್ಯರ್ಥಿ ಎಚ್‌.ಪಿ.ಮಂಜುನಾಥ್ ಭಾಗಿಯಾದರು.
ಪ್ರಿಯಾಂಕಾ ಗಾಂಧಿಯನ್ನು ನೋಡಿ ಕೈ ಕಾರ್ಯಕರ್ತರು ಫುಲ್ ಖುಷ್ ಆಗಿದ್ದು, ದಾರಿ ಉದ್ದಕ್ಕೂ ಕಾಂಗ್ರೆಸ್ ಪಾರ್ಟಿ ಹಾಗೂ ಪ್ರಿಯಾಂಕ ಪರ ಘೋಷಣೆ ಕೂಗಿದರು.

ಮೈಸೂರು ಮಲ್ಲಿಗೆ ಘಮ ಹೀರಿದ ಪ್ರಿಯಾಂಕಾ ಗಾಂಧಿ

ರೋಡ್‌ ಶೋ ಸಂದರ್ಭದಲ್ಲಿ ಕೆ.ಆರ್.ನಗರ ಬಸ್ ನಿಲ್ದಾಣ ಸಮೀಪದಲ್ಲಿ ಮಹಿಳೆಯೊಬ್ಬರು ಕೈಯಲ್ಲಿ ಹೂವು ಹಿಡಿದು ನಿಂತಿದ್ದರು. ಇದನ್ನು ಗಮನಿಸಿದ ಪ್ರಿಯಾಂಕಾ ಹೂವು ನೀಡುವಂತೆ ಕೈಯಿಂದ ಸಂಜ್ಞೆ ಮಾಡಿದರು.
ಹೂವು ಪಡೆದು ಪ್ರಿಯಾಂಕಾ ಖುಷಿಪಟ್ಟರೆ, ಹೂವು ಕೊಟ್ಟ ಮಹಿಳೆಯೂ ಸಂಭ್ರಮಿಸಿದರು. ಇದು ಮೈಸೂರು ಮಲ್ಲಿಗೆ ಎಂದು ಮಾಹಿತಿ ನೀಡಿದರು ಶಾಸಕ ಎಚ್.ಪಿ.ಮಂಜುನಾಥ್. ಪ್ರಿಯಾಂಕಾ ಅವರು ಎರಡು ಬಾರಿ ಮಲ್ಲಿಗೆಯ ಘಮ ಸವಿದರು.

ಇದನ್ನೂ ಓದಿ : Priyanka Gandhi: ಬಿಜೆಪಿ ಲೂಟಿ ಮಾಡಿದ್ದು ₹1.5 ಲಕ್ಷ ಕೋಟಿ: 100 ಏಮ್ಸ್‌ ಕಟ್ಟಬಹುದಿತ್ತು ಎಂದ ಪ್ರಿಯಾಂಕಾ ಗಾಂಧಿ

Exit mobile version