ಬೆಂಗಳೂರು: ರಾಜ್ಯದ ಲೋಕಸಭಾ ಕ್ಷೇತ್ರಗಳಲ್ಲಿ (Karnataka election results 2024) ಕುತೂಹಲ ಕೆರಳಿಸಿರುವ ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಭರ್ಜರಿ ಮುನ್ನಡೆ ಸಾಧಿಸಿದ್ದು, ಸಮೀಪದ ಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರಿಗಿಂತ 1,58,559 ಮತಗಳ ಮುನ್ನಡೆಯಲ್ಲಿದ್ದಾರೆ. ಇನ್ನು ಬಿಜೆಪಿ ಅಭ್ಯರ್ಥಿಗಳಾದ ತೇಜಸ್ವಿ ಸೂರ್ಯ, ಡಾ.ಸಿ.ಎನ್.ಮಂಜುನಾಥ್, ವಿಶ್ವೇಶ್ವರ ಹೆಗಡೆ ಕಾಗೇರಿ, ಬಿ.ವೈ.ರಾಘವೇಂದ್ರ ಅವರು 1ಲಕ್ಷಕ್ಕಿಂತ ಅಧಿಕ ಮತಗಳ ಮುನ್ನಡೆಯಲ್ಲಿದ್ದಾರೆ.
ಗೆಲುವಿನ ವಿಶ್ವಾಸದಲ್ಲಿ ಕುಮಾರಸ್ವಾಮಿ
ಮಂಡ್ಯ ಫಲಿತಾಂಶದ ಬಗ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಈಗ ಆರಂಭಿಕ ಮುನ್ನಡೆಯಲ್ಲಿದ್ದೇವೆ. ಕೊನೆ ಹಂನತದವರೆಗೆ ಇದು ಹೀಗೆ ಇರಲಿದೆ. ದೇಶದಲ್ಲಿ ಎನ್‌ಡಿಎ ಬಹುಮತ ಪಡೆಯುವ ವಿಶ್ವಾಸವಿದೆ. ರಾಜ್ಯದಲ್ಲಿ 25ಕ್ಕೂ ಹೆಚ್ಚು ಸೀಟ್ ಎನ್‌ಡಿಎ ಗೆಲ್ಲುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಮಂಡ್ಯ ಕ್ಷೇತ್ರಕ್ಕೆ ಸೇವೆ ಮಾಡಲು ಅವಕಾಶ ನನಗೆ ಸಿಗುತ್ತೆ. ನಾನು ಮಂಡ್ಯದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ. ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲುವುದು ನಿಶ್ಚಿತ. ಬೆಂಗಳೂರು ಗ್ರಾಮಾಂತರದಲ್ಲೂ ನಾವು ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ | Election Results 2024: ಆರಂಭಿಕ ಹಿನ್ನಡೆ ಬಳಿಕ ವಾರಾಣಸಿಯಲ್ಲಿ ಪುಟಿದೆದ್ದ ಮೋದಿ; 18 ಸಾವಿರ ಮತಗಳ ಲೀಡ್
ಉತ್ತರ ಕನ್ನಡದಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ 1,22,671 ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ 1,36,459 ಮತ ಲೀಡ್ ಇದ್ದು, ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ 10,59,27 ಮತಗಳ ಮುನ್ನಡೆಯಲ್ಲಿದ್ದಾರೆ. ಇನ್ನು ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್, ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ವಿರುದ್ಧ 1,15,945 ಮತಗಳ ಭರ್ಜರಿ ಮುನ್ನಡೆಯಲ್ಲಿದ್ದಾರೆ.
ಬೀದರ್ ಕ್ಷೇತ್ರದಲ್ಲಿ ಸಚಿವ ಈಶ್ವರ ಖಂಡ್ರೆ ಪುತ್ರ, ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ 56,234 ಮುನ್ನಡೆ ಇದ್ದು, ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ 68880 ಮತಗಳ ಮುನ್ನಡೆ ಇದ್ದಾರೆ. ಇನ್ನು ಹಾಸನ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ 10187 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಉತ್ತರ ಕನ್ನಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ 1,57,138 ಮತಗಳ ಲೀಡ್ ಪಡೆದಿದ್ದಾರೆ.