Site icon Vistara News

Karnataka Election Results: ಸಿದ್ದರಾಮಯ್ಯ ಪರ ಅಹಿಂದ ಸಂಘಟನೆಗಳ ಲಾಬಿ: ಮತ್ತೊಮ್ಮೆ ಸಿದ್ದರಾಮಯ್ಯ ಎಂದ ನಾಯಕರು

karnataka election results ahinda communities batting for siddaramaiah

#image_title

ಬೆಂಗಳೂರು: ಕಾಂಗ್ರೆಸ್‌ ಸರಳ ಬಹುಮತ ಪಡೆದಿರುವ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನೇ ಮತ್ತೆ ಸಿಎಂ ಮಾಡಬೇಕು ಎಂದು ಅಹಿಂದ ಸಮುದಾಯಗಳ ನಾಯಕರು ಆಗ್ರಹಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ, ಸಿದ್ದರಾಮಯ್ಯ ಅವರನ್ನೇ ಸಿಎಂ ಮಾಡಬೇಕು ಎಂದಿದೆ.

ದಲಿತ ಮುಖಂಡ ಮಾವಳ್ಳಿ ಶಂಕರ್ ಮಾತನಾಡಿ, ಇದು ದೇಶದ ಗಮನ ಸೆಳೆದ ಚುನಾವಣೆ. ಕರ್ನಾಟಕದ ಜನ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸುವಲ್ಲಿ ಪ್ರಬುದ್ಧತೆ ಮೆರೆದಿದ್ದಾರೆ. ಇದೊಂದು ಸರ್ವಜನಾಂಗದ ಶಾಂತಿಯ ತೋಟ. ಪ್ರತಿಯೊಬ್ಬರೂ ಬದಲಾವಣೆ ಬಯಸಿ ಕಾಂಗ್ರೆಸ್ ಆಯ್ಕೆ ಮಾಡಿದ್ದೇವೆ. ಸ್ಥಿರ ಸರ್ಕಾರ ಆಯ್ಕೆ ಮಾಡಿ, ಆಗುವ ಅನಾಹುತ ತಪ್ಪಿಸಿದ್ದಾರೆ.

ಯಾವುದೇ ರೀತಿ ಕೋಮು ಗಲಭೆಗೆ ಅವಕಾಶ ಕೊಡದೇ ಜನರ ಅಶೋತ್ತರ ಈಡೇರಿಸಬೇಕು. ಸಿದ್ದರಾಮಯ್ಯ 5 ವರ್ಷ ದೇಶ ಮೆಚ್ಚುವ ರೀತಿಯಲ್ಲಿ ಸರ್ಕಾರ ಕೊಟ್ಟರು. ಬಡವರ ಶೋಷಿತರ ಪರ ಅನೇಕ ಕಾರ್ಯಕ್ರಮ ಕೊಟ್ಟರು. ಅವರ ಬಗ್ಗೆ ಯಾವುದೇ ರೀತಿಯ ಕಪ್ಪು ಚುಕ್ಕೆ ಇಲ್ಲದೆ ಆಡಳಿತ ಮಾಡಿದ್ದರು.

ಮತ್ತೊಮ್ಮೆ ಕರ್ನಾಟಕ ಜನ ಸಿದ್ದರಾಮಯ್ಯ ನಾಯಕತ್ವ ಆಸೆ ಪಡುತ್ತಾ ಇದ್ದಾರೆ. ಅವರು ಮಂಡಿಸಿದ ಬಜೆಟ್ ಅನೇಕರು ನೆನಪಿಟ್ಟುಕೊಂಡಿದ್ದಾರೆ ಎಂದರು.

ಕೆ.ಎಂ. ರಾಂಚಂದ್ರಪ್ಪ ಮಾತನಾಡಿ, ಸಿದ್ದರಾಮಯ್ಯ ಅವರನ್ನೇ ಮುಂದಿನ ಸಿಎಂ ಮಾಡಬೇಕು. ಯಾವುದೇ ಬಲಿಷ್ಠ ಸಮುದಯದವರು ಸಿಎಂ ಆದರೆ ಶೋಷಿತರ ಕಷ್ಟ ಅವರಿಗೆ ಗೊತ್ತಿರುವುದಿಲ್ಲ. ಸಿದ್ದರಾಮಯ್ಯ ಅವರ ಬಜೆಟ್ ಅಹಿಂದ ಬಜೆಟ್ ರೀತಿ ಇರುತ್ತಿತ್ತು. ಹಾಗಾಗಿ ಮತ್ತೊಮ್ಮೆ ನಾವು ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಲ್ಲಿ ನೋಡಬೇಕು. ಮುಂದಿನ ಲೋಕಸಭಾ ಚುನಾವಣೆ ಮತ್ತು, ಬಿಬಿಎಂಪಿ ಚುನಾವಣೆ ಎದುರಿಸಲು ಸಿದ್ದರಾಮಯ್ಯ ನಾಯಕತ್ವ ಮುಖ್ಯ ಎಂದು ಹೇಳಿದರು.

ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಮಾತನಾಡಿ, ಫಲಿತಾಂಶದಿಂದ ತುಂಬಾ ಖುಷಿ ಆಗ್ತಾ ಇದೆ. ಮತ್ತೆ ಸ್ವತಂತ್ರ ಪಡೆದುಕೊಂಡಿದ್ದೇವೆ ಎಂಬಂತೆ ಅನಿಸುತ್ತಿದೆ. ಹಿಂದಿನ ಸರ್ಕಾರದಲ್ಲಿ ನಡೆದ ಅಕ್ರಮ ನಿಭಾಯಿಸಿಕೊಂಡು ಹೋಗುವ ಶಕ್ತಿ ಸಿದ್ದರಾಮಯ್ಯ ಅವರಿಗೆ ಇದೆ. ಎಲ್ಲ ವ್ಯವಸ್ಥಿತವಾಗಿ ನಡೆಯಬೇಕು ಎಂದರೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಬೇಕು. ಎಲ್ಲ ಸ್ವಾಮೀಜಿಗಳು ಸಹ ಇದನ್ನೇ ಹೇಳುತ್ತಿದ್ದಾರೆ. ನಮಗೆ ಯಾರ ಮೇಲೆ ಯಾವುದೇ ಜಿದ್ದು ಇಲ್ಲ. ಎಲ್ಲರು ಕಷ್ಟ ಪಟ್ಟು ಸರ್ಕಾರ ಕಟ್ಟಿದ್ದಾರೆ. ಸಿದ್ದರಾಮಯ್ಯ ಅವರಿಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: Karnataka CM: ದಿಲ್ಲಿಗೆ ಹೋಗಲ್ಲ, ನಿರ್ಧಾರ ಹೈಕಮಾಂಡ್‌ಗೆ ಎಂದ ಡಿಕೆಶಿ; ದಿಲ್ಲಿಗೆ ತೆರಳಲು ಸಿದ್ದರಾಮಯ್ಯ ರೆಡಿ

Exit mobile version