Site icon Vistara News

Karnataka Election Results: ಪಕ್ಷವನ್ನು ಗೆಲ್ಲಿಸಿದರೂ ಸಿಎಂ ಸ್ಥಾನಕ್ಕೆ ಮೀನಮೇಷ: ಡಿ.ಕೆ. ಸಹೋದರರ ಅಸಮಾಧಾನ

karnataka election results DK Brothers upset over cm selection process

#image_title

ಬೆಂಗಳೂರು: ಪಕ್ಷವನ್ನು ಸಂಘಟನಾತ್ಮಕವಾಗಿ ವ್ಯವಸ್ಥಿತವಾಗಿ ಮುನ್ನಡೆಸಿದರೂ ಇದೀಗ ಗೆದ್ದ ನಂತರ ಸಿಎಂ ಸ್ಥಾನ ನೀಡಲು ಮೀನ ಮೇಷ ಎಣಿಸುತ್ತಿರುವ ಕಾಂಗ್ರೆಸ್‌ ಹೈಕಮಾಂಡ್‌ ನಡೆಗೆ ಡಿ.ಕೆ. ಸಹೋದರರು ಅಸಮಾಧಾನ ಹೊರಹಾಕಿದ್ದಾರೆ.

ಪಕ್ಷದಲ್ಲಿ ಸಾಕಷ್ಟು ಒಡಕು, ಭೀನ್ನಾಭಿಪ್ರಾಯಗಳಿದ್ದವು. ಡಿ.ಕೆ. ಶಿವಕುಮಾರ್‌ ಹಗಲಿರುಳೂ ಶ್ರಮಿಸಿ ಸಂಘಟನೆಯನ್ನು ಬಲಪಡಿಸಿದರು. ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿ ಸಮನ್ವಯತೆ ಮಾಡಿಕೊಂಡು ಯಾವುದೇ ಗೊಂದಲಗಳು ಆಗದಂತೆ ನೋಡಿಕೊಂಡರು.

ಸಿದ್ದರಾಮಯ್ಯ ಬೆಂಬಲಿಗರು ಸಿದ್ದರಾಮೋತ್ಸವ ಮಾಡಿ ಸಿಎಂ ಗಾದಿಗೆ ಅರ್ಜಿ ಹಾಕಿದಾಗಲೂ ಯಾವುದೇ ಅಸಮಾಧಾನ ಹೊರಹಾಕದೇ ಭಾಗವಹಿಸಿ ಒಗ್ಗಟ್ಟಿನ ಸಂದೇಶ ನೀಡಿದರು. ಇಷ್ಟೆಲ್ಲದರ ಜತೆಗೆ ರಾಜ್ಯ ಸರ್ಕಾರದ ವಿರುದ್ಧ ಜನಾಭಿಪ್ರಾಯವನ್ನು ಮೂಡಿಸಿ ಬಿಜೆಪಿಯ ಅನೇಕ ಅಸ್ತ್ರಗಳನ್ನು ಕಸಿದುಕೊಳ್ಳುವಲ್ಲಿ ಯಶಸ್ವಿಯಾದರು.

ಇದೀಗ ಹೈಕಮಾಂಡ್‌ ಸಿಎಂ ಸ್ಥಾನ ನೀಡುವ ಬದಲಿಗೆ, ಒಂದು ಸಾಲಿನ ನಿರ್ಣಯವನ್ನು ಕೈಗೊಂಡು ಸಂಪೂರ್ಣ ಅಧಿಕಾರವನ್ನು ಹೈಕಮಾಂಡ್‌ಗೆ ನೀಡಲಾಗಿದೆ. ಹೀಗೆ ಮಾಡಿದರೆ ಕಾರ್ಯಕರ್ತರಿಗೆ ಬೇಸರವಾಗುತ್ತದೆ. ಏನಾದರೂ ಮಾಡಿ, ನಾನು ನನ್ನ ಪಾಡಿಗೆ ಇರುತ್ತೇನೆ. ಪಕ್ಷ ಸಂಘಟನೆ ಮಾಡಿದ್ದೇನೆ, ಏನು ಕೊಡುತ್ತೀರ ಕೊಡಿ ಎಂದು, ಸಭೆಗಳು ನಡೆಯುತ್ತಿರುವ ಶಾಂಗ್ರಿಲಾ ಹೋಟೆಲ್‌ನಿಂದ ಶಿವಕುಮಾರ್‌ ಹೊರನಡೆದಿದ್ದಾರೆ.

ಆದರೆ ಡಿ.ಕೆ. ಶಿವಕುಮಾರ್‌ ಸಹೋದರ ಡಿ.ಕೆ. ಸುರೇಶ್‌ ಮಾತ್ರ ಪ್ರಯತ್ನವನ್ನು ನಿಲ್ಲಿಸಿಲ್ಲ. ಇಲ್ಲಿವರೆಗೆ ನಡೆಸಿದ ಹೋರಾಟಗಳೆಲ್ಲವನ್ನೂ ನೆನಪಿಸುವ ಮೂಲಕ ಪಕ್ಷವು ಅಧಿಕಾರಕ್ಕೆ ಬರಲು ಡಿ.ಕೆ. ಶಿವಕುಮಾರ್‌ ಪಾತ್ರವನ್ನು ಹೈಕಮಾಂಡ್‌ಗೆ ತಿಳಿಸುತ್ತಿದ್ದಾರೆ. ಡಿ.ಕೆ. ಶಿವಕುಮಾರ್‌ ಅವರನ್ನು ಮತ್ತೆ ಕರೆದ ರಣದೀಪ್‌ ಸಿಂಗ್‌ ಸುರ್ಜೆವಾಲ, ಸಮಾಧಾನಪಡಿಸುವ ಪ್ರಯತ್ನದಲ್ಲಿದ್ದಾರೆ ಎಂದು ಮೂಲಗಳು ಹೇಳಿವೆ.

ಹೈಕಮಾಂಡ್‌ ಎದುರು ಎರಡು ಆಯ್ಕೆಗಳು:

ಇಬ್ಬರೂ ಘಟಾನುಘಟಿ ನಾಯಕರು ಒಟ್ಟಾಗಿ ಸೆಣೆಸಿದ್ದರಿಂದ ಕಾಂಗ್ರೆಸ್‌ ಭರ್ಜರಿ ಬಹುಮತ ಗಳಿಸಿದೆ. ಆದರೆ ಇದೀಗ ಸಿಎಂ ಆಯ್ಕೆಯ ಕಗ್ಗಂಟು ಕಾಂಗ್ರೆಸ್‌ ಹೈಕಮಾಂಡ್‌ಗೆ ಎದುರಾಗಿದೆ. ದೆಹಲಿಗೆ ಆಗಮಿಸುವಂತೆ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್‌ ಹೇಳಿದೆ. ಆದರೆ ತಾವು ಎಲ್ಲಿಗೂ ಹೋಗುವುದಿಲ್ಲ, ಇನ್ನೂ ಅನೇಕ ದೇವಸ್ಥಾನಗಳ ಭೇಟಿ ಮಾಡುವುದಿದೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಇದೇ ವೇಳೆ ಕಾಂಗ್ರೆಸ್‌ ಹೈಕಮಾಂಡ್‌ ಎರಡು ಆಯ್ಕೆಗಳನ್ನು ತನ್ನ ಮುಂದೆ ಇರಿಸಿಕೊಂಡಿದೆ.

ಆಯ್ಕೆ 1: ಸಿದ್ದರಾಮಯ್ಯ- ಸಿಎಂ
ಡಿಕೆ ಶಿವಕುಮಾರ್, ಡಾ.ಜಿ. ಪರಮೇಶ್ವರ್, ಎಂ ಬಿ ಪಾಟೀಲ್- ಡಿಸಿಎಂ

ಆಯ್ಕೆ 2: ಡಿಕೆ ಶಿವಕುಮಾರ್ – ಸಿಎಂ

ಡಾ.ಜಿ. ಪರಮೇಶ್ವರ್, ಎಂ.ಬಿ. ಪಾಟೀಲ್, ಸಿದ್ದರಾಮಯ್ಯ ಆಪ್ತರೊಬ್ಬರು- ಡಿಸಿಎಂ

ಇದನ್ನೂ ಓದಿ: Karnataka CM: ದಿಲ್ಲಿಗೆ ಹೋಗಲ್ಲ, ನಿರ್ಧಾರ ಹೈಕಮಾಂಡ್‌ಗೆ ಎಂದ ಡಿಕೆಶಿ; ದಿಲ್ಲಿಗೆ ತೆರಳಲು ಸಿದ್ದರಾಮಯ್ಯ ರೆಡಿ

Exit mobile version