Site icon Vistara News

Karnataka Election : ಪಂಚರತ್ನ ಯಾತ್ರೆಯಲ್ಲಿ ಕಾಣಿಸದ ರೇವಣ್ಣ ಕುಟುಂಬ; ಭಿನ್ನರ ಜತೆ ಶಕ್ತಿ ಪ್ರದರ್ಶನ ಮಾಡಿದ ಸೂರಜ್‌ ರೇವಣ್ಣ!

hdk and hd revanna ಕೆ.ಆರ್. ಪೇಟೆ ಸೂರಜ್‌ ರೇವಣ್ಣ ಎಚ್.ಡಿ. ಕುಮಾರಸ್ವಾಮಿ ಜೆಡಿಎಸ್

ಮಂಡ್ಯ: ವಿಧಾನಸಭಾ ಚುನಾವಣೆ (Karnataka Election) ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಪಂಚರತ್ನ ಯಾತ್ರೆಯಲ್ಲಿ ಅವರ ಸಹೋದರ, ಮಾಜಿ ಸಚಿವ ಎಚ್‌.ಡಿ. ರೇವಣ್ಣ ಅವರ ಕುಟುಂಬದವರು ಒಂದು ದಿನವೂ ಕಾಣಿಸಿಕೊಂಡಿಲ್ಲ. ಈ ಸಂದರ್ಭದಲ್ಲಿಯೇ ಈಗ ಎಚ್‌ಡಿಕೆ ವಿರುದ್ಧ ತಿರುಗಿಬಿದ್ದಿರುವ ಕೆ.ಆರ್. ಪೇಟೆಯ ಜೆಡಿಎಸ್‌ ಭಿನ್ನಮತೀಯ ಬಣದೊಂದಿಗೆ ಸೂರಜ್‌ ರೇವಣ್ಣ ಕಾಣಿಸಿಕೊಂಡಿದ್ದು, ಸನ್ಮಾನ ಸ್ವೀಕರಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಈಗಾಗಲೇ ಜೆಡಿಎಸ್‌ನಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ವಿವಿಧೆಡೆ ಸ್ಪರ್ಧೆ ಮಾಡುವ ೯೩ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ ಕೆ.ಆರ್.‌ ಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಎಚ್.ಟಿ. ಮಂಜುಗೆ ಟಿಕೆಟ್‌ ಹಂಚಿಕೆಯಾಗಿತ್ತು. ಇದು ಸ್ಥಳೀಯ ಟಿಕೆಟ್‌ ಆಕಾಂಕ್ಷಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಅಸಮಾಧಾನವನ್ನು ಹೊರಹಾಕಿದ್ದಾರೆ. ಬಹಿರಂಗವಾಗಿಯೇ ಪ್ರತಿಭಟಿಸಿದ್ದಾರೆ. ಆದರೆ, ಇದಕ್ಕೆ ಜೆಡಿಎಸ್‌ ವರಿಷ್ಠರು ಸೊಪ್ಪು ಹಾಕಲಿಲ್ಲ. ಈ ಹಿನ್ನೆಲೆಯಲ್ಲಿ ಭಿನ್ನರು ತಿರುಗಿಬಿದ್ದಿದ್ದು, ಶಕ್ತಿ ಪ್ರದರ್ಶನ ಮಾಡಿದ್ದಾರೆ.

ಕಳೆದ ಸಾರಿ ಪರಾಜಿತ ಅಭ್ಯರ್ಥಿ ಬಿ.ಎಲ್. ದೇವರಾಜು ಸೇರಿದಂತೆ ಬಸ್ ಕೃಷ್ಣೇಗೌಡ, ಬಸ್ ಸಂತೋಷ್ ಎಂಬುವವರು ಸ್ಪರ್ಧಾಕಾಂಕ್ಷಿಗಳಾಗಿದ್ದು, ಪಕ್ಷದ ವರಿಷ್ಠರ ನಡೆ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ. ತಮಗೇ ಟಿಕೆಟ್‌ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಅಲ್ಲದೆ, ಪಂಚರತ್ನ ರಥಯಾತ್ರೆ ಜಿಲ್ಲೆಯಲ್ಲಿ ೫ ದಿನ ನಡೆದರೂ ಇವರ‍್ಯಾರೂ ಭಾಗಿಯಾಗಿರಲಿಲ್ಲ.

ಇದನ್ನೂ ಓದಿ | Panchamasali Reservation | ನಿರಾಣಿ-ಯತ್ನಾಳ್‌ ವಾಕ್ಸಮರ: ಅಪ್ಪನಿಗೆ ಹುಟ್ಟಿದ್ರೆ ಸಿಡಿ ಬಿಡುಗಡೆ ಮಾಡ್ಲಿ ಎಂದ ಬಸನಗೌಡ ಪಾಟೀಲ್‌

ಪ್ರತಿತಂತ್ರ ಹೆಣೆದ ಭಿನ್ನಮತೀಯರು
ತಮ್ಮ ಮಾತನ್ನು ವರಿಷ್ಠರು ಕೇಳುತ್ತಿಲ್ಲವೆಂದು ಆಕ್ರೋಶಗೊಂಡಿರುವ ಭಿನ್ನಮತೀಯರು, ಈಗ ದೇವೇಗೌಡ ಕುಟುಂಬದವರನ್ನೇ ತಮ್ಮ ಬೆಂಬಲಕ್ಕೆ ಹಾಗೂ ವಿಶ್ವಾಸಕ್ಕೆ ಪಡೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇದರ ಭಾಗವಾಗಿ ಪಂಚರತ್ನ ರಥಯಾತ್ರೆಯಲ್ಲಿ ಒಂದು ದಿನವೂ ಭಾಗಿಯಾಗದ ರೇವಣ್ಣ ಅವರ ಕುಟುಂಬ ಕಂಡಿದ್ದು, ಸೂರಜ್‌ ರೇವಣ್ಣ ಅವರನ್ನು ಕೆ.ಆರ್. ಪೇಟೆಗೆ ಕರೆಸಿಕೊಂಡಿದ್ದಾರೆ. ಅವರಿಗೆ ಹುಟ್ಟುಹಬ್ಬ ಆಚರಣೆ ನೆಪದಲ್ಲಿ ಭಿನ್ನಮತೀಯರು ಶಕ್ತಿ ಪ್ರದರ್ಶನ ಮಾಡಿದ್ದಾರೆ.

ಭುಗಿಲೆದ್ದ ಭಿನ್ನಮತ, ಭಿನ್ನರು ಮನೆ ಮನೆಯತ್ತ
ಸದ್ಯ ಕೆ.ಆರ್. ಪೇಟೆ ತಾಲೂಕಿನಲ್ಲಿ ಜೆಡಿಎಸ್‌ನ ಕೆಲವು ಮುಖಂಡರು ಮತ್ತು ಕಾರ್ಯಕರ್ತರ ನಡುವೆ ಭಿನ್ನಮತ ಭುಗಿಲೆದ್ದಿದ್ದು, ಚುನಾವಣೆ ಘೋಷಣೆಗೂ ಮುನ್ನವೇ ಪಕ್ಷ ವಿರೋಧಿ ಚಟುವಟಿಕೆ ಪ್ರಾರಂಭವಾಗಿದೆ. ಜೆಡಿಎಸ್‌ನ ಹಲವು ಮುಖಂಡರು ಸಡ್ಡು ಹೊಡೆದಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ವಿರುದ್ಧವೇ ಬಂಡಾಯ ಸ್ಪರ್ಧೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬಂಡಾಯ ಸ್ಪರ್ಧೆಗಾಗಿ ತಾಲೂಕಿನ ಪ್ರತಿ ಹಳ್ಳಿಗೂ ತೆರಳಿ ಮತದಾರರನ್ನು‌ ಭೇಟಿ ಮಾಡುತ್ತಿರುವ ಭಿನ್ನಮತೀಯ ನಾಯಕರು, ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ.

ಹುಟ್ಟುಹಬ್ಬದ ನೆಪ
ಈಗ ಎಚ್‌.ಡಿ. ರೇವಣ್ಣ ಅವರ ಪುತ್ರ ಸೂರಜ್‌ ರೇವಣ್ಣ ಅವರ ಹುಟ್ಟುಹಬ್ಬ ಸಮಾರಂಭದ ನೆಪ ಮಾಡಿಕೊಂಡಿರುವ ಭಿನ್ನಮತೀಯ ನಾಯಕರು, ಅವರನ್ನು ಕೆ.ಆರ್. ಪೇಟೆ ಕ್ಷೇತ್ರಕ್ಕೆ ಕರೆಸಿಕೊಂಡಿದ್ದಾರೆ. ಅವರ ಜತೆ ಮೆರವಣಿಗೆ ಹೋಗಿ ಬಳಿಕ ಸನ್ಮಾನವನ್ನೂ ಮಾಡಿದ್ದಾರೆ. ಈಗ ಸೂರಜ್‌ ನಡೆ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ | No Karnataka Tableau | ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಸ್ತಬ್ಧಚಿತ್ರವಿಲ್ಲ! ಕಾರಣ ಏನು?

Exit mobile version