ಮಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ವನ್ನು ಕೇಂದ್ರ ಸರ್ಕಾರ ನಿಷೇಧಿಸಿದ ಬಳಿಕ ಅದರ ರಾಜಕೀಯ ಮುಖವಾಗಿರುವ ಎಸ್‌ಡಿಪಿಐಯ ಭವಿಷ್ಯದ ಬಗ್ಗೆ ಚರ್ಚೆ ನಡೆದಿತ್ತು. ಇದೀಗ ಎಸ್‌ಡಿಪಿಐ ವಿಧಾನಸಭಾ ಚುನಾವಣೆಯ(Karnataka Election) ಬಗ್ಗೆ ಸಮಗ್ರ ಚರ್ಚೆ ನಡೆಸಿ ಪುತ್ತೂರಿನಿಂದ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿರುವ, ಪ್ರಸಕ್ತ ಜೈಲಿನಲ್ಲಿರುವ ಶಾಫಿ ಬೆಳ್ಳಾರೆ ಅವರನ್ನು ಕಣಕ್ಕಿಳಿಸುವುದಾಗಿ ಘೋಷಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಶಾಫಿ ಬೆಳ್ಳಾರೆ ಅವರು ಕಣಕ್ಕಿಳಿಯಲಿದ್ದಾರೆ ಎಂದು ಪುತ್ತೂರಿನಲ್ಲಿ ನಡೆದ ಎಸ್‌ಡಿಪಿಐ ಕಾರ್ಯಕರ್ತರ ಸಮಾವೇಶದಲ್ಲಿ ಘೋಷಣೆ ಮಾಡಲಾಗಿದೆ. ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಖಾನ್ ಅವರು ಈ ಘೋಷಣೆ ಮಾಡಿದ್ದಾರೆ.
ಜೈಲಿನಿಂದಲೇ ಸ್ಪರ್ಧಿಸಲಿದ್ದಾರೆ ಶಾಫಿ ಬೆಳ್ಳಾರೆ
ನಿಜವೆಂದರೆ ಶಾಫಿ ಬೆಳ್ಳಾರೆ ಅವರು ೨೦೨೨ರ ಜುಲೈ ೨೬ರಂದು ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಜೈಲಿನಲ್ಲಿದ್ದಾರೆ. ಈ ಕೊಲೆಯಲ್ಲಿರುವ ಶಾಮೀಲಾತಿಯ ಮಾಹಿತಿ ಪಡೆದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅವರನ್ನು ಬಂಧಿಸಿತ್ತು. ಈಗ ಶಾಫಿ ಜೈಲಿನಲ್ಲಿದ್ದಾರೆ.
ಅವರನ್ನು ಪುತ್ತೂರು ಕ್ಷೇತ್ರದ ಅಭ್ಯರ್ಥಿ ಎಂದು ಘೋಷಣೆ ಮಾಡಿರುವುದರಿಂದ ಅವರೀಗ ಜೈಲಿನಿಂದಲೇ ಕಣಕ್ಕೆ ಇಳಿಯಬೇಕಾಗಿದೆ. ಪ್ರವೀಣ ನೆಟ್ಟಾರ್ ಕೊಲೆ ಪ್ರಕರಣದಲ್ಲಿ ಶಾಫಿ ಬೆಳ್ಳಾರೆ ಮೇಲೆ ನೇರವಾದ ಆರೋಪಗಳಿವೆ ಎಂದು ಎನ್‌ಐಎ ಹೇಳಿತ್ತು.
ಪಿಎಫ್‌ಐ ಬ್ಯಾನ್, ಪ್ರವೀಣ್ ನೆಟ್ಟಾರ್ ಕೊಲೆ ಮತ್ತು ಬೆಂಗಳೂರಿನ ಕೆಜಿ ಹಳ್ಳಿ, ಡಿಜಿ ಹಳ್ಳಿ ಘಟನೆಗಳಿಗೆ ಸಂಬಂಧಿಸಿ ಎಸ್‌ಡಿಪಿಐನ ಹಲವು ಕಚೇರಿಗಳ ಮೇಲೆ ಪೊಲೀಸ್ ಹಾಗೂ ಎನ್‌ಐಎ ದಾಳಿ ನಡೆದಿತ್ತು. ಹಲವು ಕಚೇರಿಗಳನ್ನು ಮುಚ್ಚಲಾಗಿತ್ತು, ದಾಖಲೆಗಳನ್ನು ವಶಕ್ಕೆ ಪಡೆಯಲಾಗಿತ್ತು. ಹಲವಾರು ನಾಯಕರನ್ನ ಬಂಧಿಸಲಾಗಿತ್ತು.
ಇದನ್ನೂ ಓದಿ : SDPI office raid : ಎಸ್‌ಡಿಪಿಐ ಕಚೇರಿ ದಾಳಿಗೆ ಕೇಂದ್ರ ಸರ್ಕಾರದ ನಿರ್ದೇಶನವಿತ್ತೇ?: ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ