ಬೆಂಗಳೂರು: 2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಪತನಕ್ಕೆ (Coalition Government) ಕಾರಣವಾದ 17 ಶಾಸಕರ ಪಕ್ಷಾಂತರ ಪ್ರಕರಣಕ್ಕೆ ಸಿದ್ದರಾಮಯ್ಯ ಅವರೇ ಪ್ರೇರಣೆ ಎಂದು ಮಾಜಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ (Dr. K. Sudhakar) ಪರೋಕ್ಷವಾಗಿ ಹೇಳಿದ್ದಾರೆ. ಕಾಂಗ್ರೆಸ್‌ನಿಂದ 14 ಮಂದಿ ಶಾಸಕರು ಬಿಜೆಪಿಗೆ ಪಕ್ಷಾಂತರಗೊಳ್ಳುವಲ್ಲಿ ಸಿದ್ದರಾಮಯ್ಯ ಅವರ ಪಾತ್ರವಿದೆ. ಅವರು ತಮ್ಮ ಆತ್ಮೀಯ ಶಾಸಕರನ್ನು ಬಿಜೆಪಿಗೆ ಕಳುಹಿಸುವ ಮೂಲಕ ಸರ್ಕಾರ ಪತನಕ್ಕೆ ಕಾರಣ ಎಂಬ ವಾದ ಹಿಂದಿನಿಂದಲೂ ಇತ್ತು. ಆದರೆ, ಈಗ ಇದೇ ಮೊದಲ ಬಾರಿಗೆ ಪಕ್ಷಾಂತರಗೊಂಡವರಲ್ಲಿ ಒಬ್ಬರು ನೇರವಾಗಿ ಈ ಮಾತನ್ನು ಆಡಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪ್ರದೀಪ್ ಈಶ್ವರ್ ಅವರ ಎದುರು ಸೋಲು ಕಂಡಿರುವ ಡಾ. ಕೆ ಸುಧಾಕರ್ ಅವರು ಈಗ ತಮ್ಮ ನಡೆಗಳ ಅವಲೋಕನ ನಡೆಸಿದ್ದು, ಈ ಬಗ್ಗೆ ಟ್ವಿಟರ್‌ನಲ್ಲಿ ಕೆಲವು ವಿಚಾರಗಳನ್ನು ಬರೆದುಕೊಂಡಿದ್ದಾರೆ. ಅದರಲ್ಲಿ ಅತ್ಯಂತ ಮುಖ್ಯವಾಗಿರುವುದು ತಮ್ಮ ಪಕ್ಷಾಂತರಕ್ಕೆ ಸಿದ್ದರಾಮಯ್ಯ ಅವರೇ ಪ್ರೇರಣೆ ಎನ್ನುವ ಅಂಶ.
ಹಾಗಿದ್ದರೆ ಡಾ. ಕೆ. ಸುಧಾಕರ್ ಹೇಳಿದ್ದೇನು?
1.2018ರಲ್ಲಿ ಅಂದಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ನಮಗಾಗುತ್ತಿದ್ದ ಅನ್ಯಾಯದ ಬಗ್ಗೆ ಹೇಳಿಕೊಳ್ಳಲು ಶಾಸಕರುಗಳು ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಮಾನ್ಯ ಸಿದ್ದರಾಮಯ್ಯನವರ ಬಳಿ ಹೋದಾಗಲೆಲ್ಲ ಈ ಸರ್ಕಾರದಲ್ಲಿ ನನ್ನದೇ ಏನು ನಡೆಯುತ್ತಿಲ್ಲ, ನನ್ನ ಕ್ಷೇತ್ರದ, ನನ್ನ ಜಿಲ್ಲೆಯ ಕೆಲಸಗಳೇ ಆಗುತ್ತಿಲ್ಲ ಎಂದು ಹೇಳುತ್ತಿದ್ದರು.
2.2019ರ ಲೋಕಸಭೆ ಚುನಾವಣೆವರೆಗೂ ಸಹಿಸಿಕೊಳ್ಳಿ, ಲೋಕಸಭೆ ಚುನಾವಣೆ ಮುಗಿದ ನಂತರ ಯಾವುದೇ ಕಾರಣಕ್ಕೂ ಒಂದು ದಿವಸವೂ ಮಾನ್ಯ ಕುಮಾರಸ್ವಾಮಿ ಅವರ ನೇತೃತ್ವದ ಈ ಸಮ್ಮಿಶ್ರ ಸರ್ಕಾರ ಇರಲು ಬಿಡುವುದಿಲ್ಲ ಎಂದು ಶಾಸಕರುಗಳಿಗೆ ಸಮಾಧಾನ ಮಾಡುತ್ತಿದ್ದರು.
3.ನಮ್ಮ ಕ್ಷೇತ್ರಗಳಲ್ಲಿ ನಮ್ಮನ್ನು ನಂಬಿದ ಕಾರ್ಯಕರ್ತರನ್ನ, ಮುಖಂಡರನ್ನ ಉಳಿಸಿಕೊಳ್ಳಲು ದೊಡ್ಡ ರಿಸ್ಕ್ ತೆಗೆದುಕೊಂಡು ರಾಜೀನಾಮೆ ಕೊಟ್ಟು ಮತ್ತೊಮ್ಮೆ ಜನರಿಂದ ಆರಿಸಿ ಬಂದು ಮಂತ್ರಿಗಳಾದೆವು. ನಮ್ಮ ನಡೆಯಲ್ಲಿ ಮಾನ್ಯ ಸಿದ್ದರಾಮಯ್ಯನವರ ಪ್ರೇರಣೆ, ಪರೋಕ್ಷ ಅಥವಾ ಅಪರೋಕ್ಷ ಪಾತ್ರ ಇಲ್ಲವೆಂದು ಸಿದ್ದರಾಮಯ್ಯನವರು ನಿರಾಕರಿಸಲು ಸಾಧ್ಯವೇ?
ಈ ಮೂರೂ ಸಂಗತಿಗಳು ಒಂದಕ್ಕೊಂದು ಪೂರಕವಾಗಿದ್ದು, ಸಮ್ಮಿಶ್ರ ಸರ್ಕಾರದಿಂದ ತಮಗೆ ಯಾವುದೇ ಲಾಭವಿಲ್ಲ. ತೊಂದರೆಯೇ ಹೆಚ್ಚು. ಈ ಸರ್ಕಾರ ಆದಷ್ಟು ಬೇಗ ಪತನಗೊಂಡರಷ್ಟೇ ತಮಗೆ ಉಳಿವು ಎಂಬುದನ್ನು ಸಿದ್ದರಾಮಯ್ಯ ಅವರು ತಮ್ಮ ಬೆಂಬಲಿಗರ ಮನಸ್ಸಿನಲ್ಲಿ ಬಿತ್ತಿದ್ದರು ಎನ್ನುವುದು ಸುಧಾಕರ್ ಅವರ ಮಾತಿನ ಸಾರ.
ಆವತ್ತು ಕಾಂಗ್ರೆಸ್ ಬಿಟ್ಟುಹೋದ ಅಷ್ಟೂ ಶಾಸಕರು ಎಲ್ಲರೂ ಕೂಡಾ ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲೇ ಗುರುತಿಸಿಕೊಂಡವರು. ಸಿದ್ದರಾಮಯ್ಯ ಒಂದು ಮಾತು ಹೇಳಿದರೆ ಮತ್ತೆ ಬಂದು ಅವರ ಬೆನ್ನಿಗೆ ನಿಲ್ಲಬಲ್ಲವರು ಎಂಬ ಮಾತು ಆಗ ಕೇಳಿಬರುತ್ತಿತ್ತು.
ಇದೀಗ ಸುಧಾಕರ್ ಅವರು ಹೇಳಿರುವ ಮಾತು ಸರ್ಕಾರ ಪತನ ಸಿದ್ದರಾಮಯ್ಯ ಅವರದೇ ಪ್ಲ್ಯಾನ್ ಎಂಬ ವಾದವನ್ನು ಪುಷ್ಟೀಕರಿಸಿದಂತಾಗಿದೆ.
ಡಿ.ಕೆ. ಶಿವಕುಮಾರ್ ಪರವಾಗಿ ಬ್ಯಾಟ್ ಬೀಸಿದರೇ ಕೆ. ಸುಧಾಕರ್
ರಾಜ್ಯದಲ್ಲಿ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿರುವ ಸಂದರ್ಭದಲ್ಲೇ ಸುಧಾಕರ್ ಅವರು ಸಿದ್ದರಾಮಯ್ಯ ಅವರ ವಿರುದ್ಧ ಈ ಬಾಂಬ್ ಸಿಡಿಸಿರುವುದರ ಹಿಂದೆ ಸಿಎಂ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್ ಅವರನ್ನು ಬೆಂಬಲಿಸುವ ಹುನ್ನಾರವೂ ಇದೆ ಎಂಬ ಮಾತು ಕೇಳಿಬರುತ್ತಿದೆ.
ಇದನ್ನೂ ಓದಿ: Karnataka CM: ಇಂದೂ ಮುಂದುವರಿದ ಡಿಕೆಶಿ- ಸಿದ್ದು ಜಿದ್ದು; ರಾಹುಲ್ ಮುಂದೆ ಬಂದ ಬಿಕ್ಕಟ್ಟು