ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ಪ್ರಸಾದ ಪಡೆದು ಬಳಿಕ ವರುಣ ಕ್ಷೇತ್ರದ ಸಿದ್ದರಾಮನಹುಂಡಿ ಮತಗಟ್ಟೆ ಸಂಖ್ಯೆ 86ರಲ್ಲಿ ಮತದಾನ ಮಾಡಿದರು. ಈ ವೇಳೆ ಅವರು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 130 ಸೀಟು ಬರುವುದು ಗ್ಯಾರಂಟಿ, 150 ಸೀಟು ಬಂದರೂ ಅಚ್ಚರಿ ಇಲ್ಲ ಎಂದು ಹೇಳಿದರು.
ಪುತ್ರ ಯತೀಂದ್ರ ಸಿದ್ದರಾಮಯ್ಯ ಮತ್ತು ಸೊಸೆ ಸ್ಮಿತಾ ಅವರ ಜತೆ ಸಿದ್ದರಾಮನಹುಂಡಿಯ ಮನೆಗೆ ಆಗಮಿಸಿದ ಸಿದ್ದರಾಮಯ್ಯ ಅವರು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದರು. ಬಳಿಕ ಅವರು ಸಿದ್ದರಾಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಅರ್ಚಕರು ಪೂಜೆ ಮಾಡಿದ ಬಳಿಕ ಹಣೆಗೆ ತಿಲಕವನ್ನಿಟ್ಟರು. ಸಿದ್ದರಾಮಯ್ಯ ಅವರು ತೀರ್ಥ ಪ್ರಸಾದ ಸ್ವೀಕರಿಸಿ ಬಳಿಕ ಮತಗಟ್ಟೆಗೆ ತೆರಳಿದರು.
ಸಿದ್ದರಾಮನಹುಂಡಿ ಗ್ರಾಮದಲ್ಲಿ ಬಿರುಸಿನ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ದೊಡ್ಡ ಸಂಖ್ಯೆಯಲ್ಲಿ ಜನರು ಮತದಾನ ಕೇಂದ್ರದತ್ತ ಬರುತ್ತಿದ್ದಾರೆ. ಮಹಿಳೆಯರು, ಯುವಕರು, ಹಿರಿಯ ನಾಗರಿಕತು ಮತದಾನದಲ್ಲಿ ಭಾಗಿಯಾಗಿದ್ದಾರೆ.
ಮತಗಟ್ಟೆಗೆ ಬಂದ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ʻʻನಾನು ವರುಣ ಕ್ಷೇತ್ರದಲ್ಲಿ ನೂರಕ್ಕೆ ನೂರರಷ್ಟು ಗೆದ್ದೇ ಗೆಲ್ಲುತ್ತೇನೆ. ಶೇ. 5೦ಕ್ಕಿಂತ ಹೆಚ್ಚು ಮತ ಪಡೆಯಲಿದ್ದೇನೆʼʼ ಎಂದು ಸಿದ್ದರಾಮಯ್ಯ ಹೇಳಿದರು.
ಸಿಎಂ ಆಗುವ ಅವಕಾಶವಿದೆ ಎಂದ ಸಿದ್ದರಾಮಯ್ಯ
ʻʻʻಮೈಸೂರು ಜನತೆಗೆ ಸಿಹಿ ಸುದ್ದಿ ಸಿಗುವ ನಿರೀಕ್ಷೆ ಇದೆʼʼ ಎಂದು ಮುಖ್ಯಮಂತ್ರಿ ಹುದ್ದೆಯ ವಿಚಾರದಲ್ಲಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.
ʻʻಸಿಎಂ ಮಾಡುವುದು ಬಿಡುವುದು ಹೈಕಮಾಂಡ್ ಹಾಗೂ ನೂತನವಾಗಿ ಆಯ್ಕೆಯಾದ ಶಾಸಕರಿಗೆ ಬಿಟ್ಟದ್ದು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ. ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಬಹುಮತ ಬರಲಿದೆ. ಈ ಬಾರಿ 130 ಸೀಟು ಬರುವುದು ಗ್ಯಾರಂಟಿ. 150 ಸೀಟು ಬಂದರೂ ಅಚ್ಚರಿ ಇಲ್ಲʼʼʼ ಎಂದು ಸಿದ್ದರಾಮಯ್ಯ ಹೇಳಿದರು.
ʻʻಸಿಎಂ ಆಗುವ ಬಹುದೊಡ್ಡ ಅವಕಾಶ ಇದೆಯಲ್ವಾ?ʼ ಎಂಬ ಪ್ರಶ್ನೆಗೆ ಹೌದು ಎಂದು ಉತ್ತರಿಸಿದರು ಸಿದ್ದರಾಮಯ್ಯ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೊದಲ ಸಂಪುಟ ಸಭೆಯಲ್ಲೇ ನಾವು ಕೊಟ್ಟ ಗ್ಯಾರಂಟಿಗಳನ್ನು ಘೋಷಣೆ ಮಾಡುತ್ತೇವೆʼʼ ಎಂದು ಪ್ರಕಟಿಸಿದರು.
ಇದನ್ನೂ ಓದಿ : Karnataka Election: ಕುಟುಂಬ ಸಮೇತರಾಗಿ ಬಂದು ಮತ ಹಾಕಿದ ಬಿಎಸ್‌ವೈ: ಬಿಜೆಪಿ ಸರ್ಕಾರ ಸ್ಥಾಪನೆ ವಿಶ್ವಾಸ