Site icon Vistara News

Karnataka Election : ರಾಣೆಬೆನ್ನೂರು ಬಂಡಾಯ; MLC ಸ್ಥಾನಕ್ಕೆ ಆರ್‌ ಶಂಕರ್‌ ರಾಜೀನಾಮೆ, ಬಿಎಸ್‌ವೈ ಶಿಷ್ಯನೂ ಗುಡ್‌ಬೈ

R Shankar Aruna poojara

#image_title

ಬೆಂಗಳೂರು/ರಾಣೆಬೆನ್ನೂರು: ಹಾವೇರಿ ಜಿಲ್ಲೆ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ (Karnataka Elections) ಹಾಲಿ ಶಾಸಕ ಅರುಣ್‌ ಕುಮಾರ್‌ ಪೂಜಾರ ಅವರಿಗೆ ಬಿಜೆಪಿ ಟಿಕೆಟ್‌ ನೀಡಿರುವುದು ಭಾರಿ ಭಿನ್ನಮತಕ್ಕೆ ಕಾರಣವಾಗಿದೆ. ಒಂದು ಕಡೆ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮೇಲ್ಮನೆ ಸದಸ್ಯ ಆರ್‌. ಶಂಕರ್‌ (MLC R Shankar) ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ಇನ್ನೊಂದು ಕಡೆ ಮತ್ತೊಬ್ಬ ಟಿಕೆಟ್‌ ಅಕಾಂಕ್ಷಿ, ಬಿ.ಎಸ್.‌ ಯಡಿಯೂರಪ್ಪ ಅವರ ಅತ್ಯಾಪ್ತ ಮಾಜಿ ಜಿಲ್ಲಾ ಪಂಚಾಯತ್‌ ಸದಸ್ಯ ಸಂತೋಷ ಕುಮಾರ್ ಪಾಟೀಲ ಬಿಜೆಪಿಗೆ ಗುಡ್ ಬೈ ಹೇಳಿದ್ದು, ಪಕ್ಷೇತರನಾಗಿ ಕಣಕ್ಕಿಳಿಯಲಿದ್ದಾರೆ.

ಎಂಎಲ್‌ಸಿ ಸ್ಥಾನಕ್ಕೆ ಆರ್‌ ಶಂಕರ್‌ ರಾಜೀನಾಮೆ

ರಾಣೆಬೆನ್ನೂರು ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಆರ್‌. ಶಂಕರ್‌ ಅವರು ತಮ್ಮ ಮೇಲ್ಮನೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. 2018ರ ಚುನಾವಣೆಯಲ್ಲಿ ಪಕ್ಷೇತರನಾಗಿ ಗೆದ್ದಿದ್ದ ಅವರು 2019ರಲ್ಲಿ ಆಪರೇಷನ್‌ ಕಮಲದ ಮೂಲಕ ಬಿಜೆಪಿ ಸೇರಿದ್ದರು. ಆರ್‌. ಶಂಕರ್‌ ಅವರು ತೆರವುಗೊಳಿಸಿದ ಕ್ಷೇತ್ರಕ್ಕೆ ಮರುಚುನಾವಣೆ ನಡೆದ ಸಂದರ್ಭದಲ್ಲಿ ಬಿಜೆಪಿ ನಾಯಕರು ಆರ್‌ ಶಂಕರ್‌ಗೆ ಎಂಎಲ್‌ಸಿ ಹುದ್ದೆ ನೀಡಿ ಸ್ಪರ್ಧೆಯಿಂದ ಹೊರಗುಳಿಸಿದ್ದರು. ಅರುಣ್‌ ಕುಮಾರ್‌ ಪೂಜಾರ ಅವರಿಗೆ ಟಿಕೆಟ್‌ ನೀಡಿದ್ದು ಅವರು ಗೆದ್ದಿದ್ದರು. ಈ ಬಾರಿ ತನಗೆ ಟಿಕೆಟ್‌ ಬೇಕು ಎಂದು ಆರ್‌ ಶಂಕರ್‌ ಅವರು ಮನವಿ ಮಾಡಿದ್ದರು. ಆದರೆ ಪಕ್ಷ ಮತ್ತೆ ಅರುಣ್‌ ಕುಮಾರ್‌ ಪೂಜಾರ್‌ ಅವರಿಗೇ ಟಿಕೆಟ್‌ ನೀಡಿದೆ.

ಇದರಿಂದ ಬೇಸರಗೊಂಡ ಆರ್‌ ಶಂಕರ್‌ ಅವರು, ವಿಧಾನ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದರು. ವಿಧಾನಸೌಧದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿದ ಅವರು ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು.

ರಾಜೀನಾಮೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಮುಂದಿನ ನಡೆ ಬಗ್ಗೆ ಒಂದೆರಡು ದಿನದಲ್ಲಿ ತೀರ್ಮಾನ ಮಾಡುತ್ತೇನೆ. ಪಕ್ಷೇತರನಾಗಿ ಕಣಕ್ಕಿಳಿಯುವ ಚಿಂತನೆ ಇದೆ ಎಂದು ಹೇಳಿದರು. ನನಗೆ ಮುಖ್ಯಮಂತ್ರಿ ಸೇರಿದಂತೆ ಯಾರೂ ಕರೆ ಮಾಡಿಲ್ಲ. ಜೆಡಿಎಸ್‌ ನಾಯಕರು ಕೂಡಾ ಸಂಪರ್ಕ ಮಾಡಿಲ್ಲ. ಪಕ್ಷೇತರನಾಗಿ ಕಣಕ್ಕೆ ಇಳಿಯುತ್ತೇನೆ ಎಂದು ಹೇಳಿದರು.

ಸಭಾಪತಿ ಬಸವರಾಜು ಹೊರಟ್ಟಿಯವರು ʻಕಾದು ನೋಡುʼ ಎಂದು ಹೇಳಿದರು. ಅದರೆ, ಇಷ್ಟರ ತನಕ ಕಾದಿದ್ದೇನೆ. ಏನೂ ಆಗಲಿಲ್ಲ. ಹಾಗಾಗಿ ರಾಜೀನಾಮೆ ನೀಡುತ್ತೇನೆ ಎಂದು ಆರ್‌ ಶಂಕರ್‌ ಹೇಳಿದರು.

ಸಿಎಂ ಬೊಮ್ಮಾಯಿ ಅವರು ಮಾತನಾಡಿಲ್ಲ. ಮಾತನಾಡಿದ್ರೆ ಏನಾದರೂ ಆಗಬಹುದಿತ್ತು. ಇಲ್ಲಿ ತನಕ ಮಾತನಾಡಿಲ್ಲ. 10 ನಿಮಿಷದ ಹಿಂದೆ ಮಾತಾನಾಡಿದ್ರೆ ಏನಾದ್ರು ಮಾಡಬಹುದಿತ್ತು ಎಂದು ಹೇಳಿದರು ಆರ್‌. ಶಂಕರ್‌.

ʻʻನನಗೆ ಯಾರ ಮೇಲೂ ಸಿಟ್ಟಿಲ್ಲ, ಹೀಗಾಯ್ತಲ್ಲಾ ಅಂತ ವೈಯಕ್ತಿಕ ಬೇಜಾರು ಅಷ್ಟೆ. ಮನೆಗೆ ಬಂದು ಕರೆದುಕೊಂಡು ಹೋಗಿ ಹೀಗೆ ಮಾಡಿದ್ರು ಅನ್ನೋ ನೋವಿದೆ. ತಾಲೂಕಿನ ಜನರ ಸೇವೆ ಮಾಡುವ ಆಸೆ ಇದೆ. ಈ ಹಿಂದೆ ದುಡುಕಿ ಅವರು ಹೇಳಿದ ಹಾಗೇ ಕೇಳಿದೆ. ಅದಕ್ಕೆ ಹೀಗೆ ಆಗಿದೆ. ಜನರ ಮಾತಿಗೆ ಬೆಲೆ ಕೊಟ್ಟು ರಾಜೀನಾಮೆ ನೀಡಿದ್ದೇನೆ. ನನ್ನ ಜನ ಕೈ ಹಿಡಿಯುವ ನಿರೀಕ್ಷೆ ಇದೆʼʼ ಎಂದು ಹೇಳಿದರು.

ʻʻಇಕ್ಕಟ್ಟಿನ ಪರಿಸ್ಥಿಯಲ್ಲಿ ರಾಜಕೀಯ ಮಾಡುವ ಪರಿಸ್ಥಿತಿ ಇತ್ತು. ಸದ್ಯ ಆಚೆ ಬಂದಿದ್ದೇನೆ.. ಮುಂದಿನ ಎರಡು ಮೂರು ದಿನದಲ್ಲಿ ಹೇಗೆ ನಿಲ್ಲಬೇಕು ಅನ್ನೋದನ್ನ ಯೋಚನೆ ಮಾಡ್ತೇನೆ. ಏನೇ ಆದರೂ ಆರ್ ಶಂಕರ್ ಗೆಲ್ತಾನೆʼʼ ಎಂದು ಧೈರ್ಯವಾಗಿ ಹೇಳಿದರು.

ಸಂತೋಷ್‌ ಕುಮಾರ್‌ ಪಾಟೀಲ್‌ ರಾಜೀನಾಮೆ

ಶಾಸಕ ಅರುಣ ಕುಮಾರ ಪೂಜಾರ ಅವರಿಗೇ ಮತ್ತೆ ಟಿಕೆಟ್‌ ನೀಡಿದ್ದನ್ನು ವಿರೋಧಿಸಿ ಮಾಜಿ ಜಿಲ್ಲಾ ಪಂಚಾಯತ್‌ ಸದಸ್ಯ ಸಂತೋಷ ಕುಮಾರ್ ಪಾಟೀಲ್ ಬಿಜೆಪಿಗೆ ಗುಡ್ ಬೈ‌ ಹೇಳಿದ್ದಾರೆ.

ಬಿಜೆಪಿ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದ ಸಂತೋಷಕುಮಾರ್ ಪಾಟೀಲ್‌ ಅವರು ಬಿಎಸ್ ಯಡಿಯೂರಪ್ಪನವರ ಶಿಷ್ಯ. ಪಕ್ಷೇತರ ಅಭ್ಯರ್ಥಿಯಾಗಿ ಸಂತೋಷ ಕುಮಾರ್ ಪಾಟೀಲ ಕಣಕ್ಕೆ ಇಳಿಯಲಿದ್ದು, ಏಪ್ರಿಲ್ 14ರಂದು 150ಕ್ಕೂ ಹೆಚ್ಚು ಬಿಜೆಪಿ ಪದಾಧಿಕಾರಿಗಳು ರಾಜೀನಾಮೆ ನೀಡುತ್ತಾರೆ ಎಂದರು.

ಬಜರಂಗ ದಳದ ಕಾರ್ಯಕರ್ತರ ಮೇಲೆ ಕೇಸು ಹಾಕಿದವರು, ಮಠವನ್ನು ಕೆಡವಿದವರಿಗೆ ಟಿಕೆಟ್ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ʻʻ20೧8, 2019ರಲ್ಲಿಯು ಟಿಕೆಟ್ ಕೇಳಿದ್ದೆ. ನವಯುಗ ಸಂಘಟನೆ ಮೂಲಕ ಸಾಕಷ್ಟು ತಯಾರಿಕೆ ಮಾಡಲಾಗಿದೆ. ಪಕ್ಷ ಟಿಕೆಟ್ ಕೊಟ್ಟರೂ ಅಭ್ಯರ್ಥಿ ಕೊಡದಿದ್ದರೂ ಅಭ್ಯರ್ಥಿ ಅಂತ ಹೇಳಿದ್ದೆ. ಏಪ್ರಿಲ್ 17 ಅಥವಾ 19ಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡುತ್ತೇನೆʼʼ ಎಂದು ಹೇಳಿದರು.

ಇದನ್ನೂ ಓದಿ : Karnataka Election 2023 : ಬಿಜೆಪಿ ಸೇರಿದ ಡಾ.ರಾಜನಂದಿನಿ; ಮಗಳು ಎದೆಗೇ ಚೂರಿ ಹಾಕಿದ್ದಾಳೆ ಎಂದ ಕಾಗೋಡು ತಿಮ್ಮಪ್ಪ

Exit mobile version