ಬೆಳಗಾವಿ: ಕರ್ನಾಟಕದಲ್ಲಿ ಚುನಾವಣೆ (Karnataka Election) ಸಮೀಪಿಸುತ್ತಿರುವ ಹೊತ್ತಿನಲ್ಲಿಯೇ ರಾಜಕೀಯ ನಾಯಕರ ವಾಗ್ವಾದಗಳೂ ತಾರಕಕ್ಕೇರಿದೆ. ಬಿಜೆಪಿ ನಾಯಕರ ಮನೆ ನಾಯಿಯೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿರುಗೇಟು ನೀಡಿದ್ದು, ದೇಶ ವಿರೋಧಿ ಇಟಲಿ ನಾಯಿಯನ್ನು ಈಗಿನ ಕಾಂಗ್ರೆಸ್ ಸಾಕುತ್ತಿದೆ ಎಂದು ಕಿಡಿಕಾರಿದ್ದಾರೆ. ಈ ಮೂಲಕ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಪರೋಕ್ಷವಾಗಿ ಟೀಕಿಸುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯ ಒಂದು ನಾಯಿಯೂ ಭಾಗವಹಿಸಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆಯವರು ಹೇಳಿದ್ದಾರೆ. ಭಾರತೀಯ ಜನಸಂಘ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದೆ. ಸರ್ವಾಧಿಕಾರಿಯಾಗಿದ್ದ ಆಗಿನ ಪ್ರಧಾನಿ ಇಂದಿರಾ ಗಾಂಧಿಯನ್ನು ಗಾದಿಯಿಂದ ಕೆಳಗೆ ಇಳಿಸಲಾಗಿತ್ತು. ಖರ್ಗೆಯವರು ಅಂದಿನ ದಿನವನ್ನು ನೆನಪಿಸಿಕೊಳ್ಳಲಿ ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆಯವರಿಗೆ ನಾನು ಪ್ರಶ್ನೆ ಕೇಳಬಯಸುತ್ತೇನೆ, ಸ್ವತಂತ್ರ ಸಿಕ್ಕಿರುವುದು ದೇಶವನ್ನು ಲೂಟಿ ಹೊಡೆಯಲಿಕ್ಕಾ? ಕಾಂಗ್ರೆಸ್ ನಾಯಿಗಳಿಗೂ ಫೈವ್ ಸ್ಟಾರ್ ಟ್ರೀಟ್ಮೆಂಟ್ ಸಿಗಬೇಕೆಂದು ಲೂಟಿ ಮಾಡಿದ್ದೀರಾ? ಸ್ವತಂತ್ರ ಹೋರಾಟದ ಕಾಂಗ್ರೆಸ್ ಬೇರೆ, ಈಗಿನ ಕಾಂಗ್ರೆಸ್ ಬೇರೆ. ಈಗಿರುವುದು ಇಟಲಿ ಕಾಂಗ್ರೆಸ್ ಆಗಿದೆ. ಇಟಲಿ ಕಾಂಗ್ರೆಸ್‌ನ ಒಂದು ನಾಯಿಯೂ ಭಾರತದ ಪರವಾಗಿ ಬೊಗಳಿಲ್ಲ. ಈಗಿರುವ ಇಟಲಿ ಕಾಂಗ್ರೆಸ್ ನಾಯಿ ಚೀನಾ, ಪಾಕಿಸ್ತಾನದ ಪರ ಬೊಗಳುತ್ತದೆ. ಇಟಲಿ ನಾಯಿ ನಮ್ಮ ಸೈನಿಕರ ವಿರುದ್ಧ ಬೊಗಳುತ್ತದೆ ಎಂದು ಸಿ.ಟಿ. ರವಿ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ | Congress Vs BJP | ಮೋದಿ ನಿಂದನೆ, ಬಿಜೆಪಿ ನಾಯಕರ ಮೇಲೆ ಹಲ್ಲೆ ಯತ್ನ: ಶಾಸಕ ರಾಮಲಿಂಗಾ ರೆಡ್ಡಿ ಬೆಂಬಲಿಗರ ಮೇಲೆ ಕೇಸು
ಮೀಸಲಾತಿ ಸಂವಿಧಾನದ ಇತಿಮಿತಿಯಲ್ಲಿ ಕೆಲಸ. ಉಪಸಮಿತಿ ವರದಿ ಆಧಾರದಲ್ಲಿ ಮೀಸಲಾತಿ ನೀಡಲಾಗುವುದು. ಕುಂಚಟಿಗ, ಮಾದಿಗ, ಪಂಚಮಸಾಲಿ, ಕುರುಬ, ಒಕ್ಕಲಿಗ ಸಮಾಜದ ಬೇಡಿಕೆಗಳಿವೆ. ಎಲ್ಲರಿಗೂ ಹೇಗೆ ನ್ಯಾಯ ಕೊಡಬೇಕು ಎಂದು ಯೋಚಿಸಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ವಿವಾದಕ್ಕೆ ಆಸ್ಪದವಿಲ್ಲದೆ ಮೀಸಲಾತಿ ಹೆಚ್ಚಿಸಿದ್ದೇವೆ. ಬದ್ಧತೆ ಇರುವ ಸರ್ಕಾರ ನಮ್ಮದು. ಜಾಣ್ಮೆಯಿಂದ ಕೆಲಸ ಮಾಡುತ್ತಿದ್ದೇವೆ. ತುಳಿತಕ್ಕೆ ಒಳಗಾದ ಸಮಾಜಗಳಿಗೆ ನ್ಯಾಯ ಕೊಡುವ ಬದ್ಧತೆ ಇದ್ದು, ಸಂಶಯವೇ ಬೇಡ ಎಂದು ಸಿ.ಟಿ. ರವಿ ಹೇಳಿದರು.
ಗಡಿ ವಿಚಾರದಲ್ಲಿ ಪ್ರಚೋದನೆ ಮಾಡುವ ಕೆಲಸ ನಡೆಯುತ್ತಿದೆ. ಕರ್ನಾಟಕ-ಮಹಾರಾಷ್ಟ್ರ ನಡುವೆ ಸಾಂಸ್ಕೃತಿಕ ಹೊಂದಾಣಿಕೆ ಇದೆ. ಕನ್ನಡಿಗರು-ಮರಾಠಿಗರು ಒಂದೇ ಸಂಸ್ಕೃತಿಯವರಾಗಿದ್ದಾರೆ. ಕರ್ನಾಟಕ ಸೌಹಾರ್ದತೆಯ ರಾಜ್ಯವಾಗಿದೆ. ನಮ್ಮತನವನ್ನು ಉಳಿಸಿಕೊಂಡು ಸೌಹಾರ್ದತೆಯನ್ನು ಕಾಪಾಡುತ್ತೇವೆ. ರಾಜಕೀಯಕ್ಕೆ ಬೇಕಾದವರು ಬೇಕಾದಂತೆ ಹೇಳುತ್ತಾರೆ. ಯಾರೋ ಹೇಳಿದ ಮಾತ್ರಕ್ಕೆ ನಮ್ಮ ಮುಖ್ಯಮಂತ್ರಿಯವರ ಗೌರವ ಕಡಿಮೆ ಆಗುವುದಿಲ್ಲ. ಕರ್ನಾಟಕದ ಸಾರ್ವಭೌಮತೆ ಉಳಿಸಿಕೊಂಡು ಅನ್ಯ ಭಾಷಿಕ ರಾಜ್ಯಗಳ ಜತೆ ಸಂಬಂಧವನ್ನು ಗಟ್ಟಿಗೊಳಿಸುತ್ತೇವೆ ಎಂದು ಗಡಿ ವಿವಾದದ ಬಗ್ಗೆ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮನೆಯಲ್ಲಿ ಐಟಿ, ಇಡಿ, ಸಿಬಿಐ ಕಚೇರಿ ಮಾಡಿ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು, ಸುರ್ಜೆವಾಲ ಹೇಳಿಕೆಯನ್ನು ಡಿಕೆಶಿ ಗಮನಿಸಬೇಕು. ಡಿ.ಕೆ. ಶಿವಕುಮಾರ್ ಎಚ್ಚರಿಕೆಯಿಂದ ಇರಬೇಕು. ದುಷ್ಮನ್ ಪಾರ್ಟಿ ಮೇ ಹೈ, ಬಗಲ್ ಮೇ ಹೈ ಎಂದು ಸಿ.ಟಿ. ರವಿ ವ್ಯಂಗ್ಯವಾಡಿದರು.
ಇದನ್ನೂ ಓದಿ | South Indian Cinema | ನಯನತಾರಾರಿಂದ ಕಾಜಲ್ ಅಗರ್ವಾಲ್‌ವರೆಗೆ: 2022ರಲ್ಲಿ ತಾಯಿಯಾದ ಸೆಲೆಬ್ರೆಟಿಗಳಿವರು!