Site icon Vistara News

Karnataka Election: ಆ ಸ್ಥಾನವಾ? ಅಯ್ಯೋ, ಬೇಡಪ್ಪಾ ಬೇಡ ಅಂತಿದಾರೆ ಶಾಸಕರು!

Speaker

ಬೆಂಗಳೂರು: ಸರ್ಕಾರದಲ್ಲಿ ಯಾವುದೇ ಜವಾಬ್ದಾರಿ ನಿರ್ವಹಿಸುತ್ತೇವೆ; ಆದರೆ ಅದೊಂದು ಸ್ಥಾನ ಮಾತ್ರ ಬೇಡ. ನಮಗೆ ಸಚಿವಗಿರಿ ಕೊಡಿ. ಇಲ್ಲಾ ಅಂದರೆ ಶಾಸಕರಾಗಿಯೇ ಇರುತ್ತೇವೆ. ಆ ಸ್ಥಾನ ಮಾತ್ರ ನಮಗೆ ಬೇಡ!

ಇದು ಕಾಂಗ್ರೆಸ್‌ನ ಹೆಚ್ಚುಕಡಿಮೆ ಎಲ್ಲ ಶಾಸಕರ ಅಹವಾಲು. ಯಾವುದು ಆ ಸ್ಥಾನ? ಅದೇನೂ ಚಿಲ್ಲರೆ ಸ್ಥಾನವಲ್ಲ. ಇಡೀ ಶಾಸಕಾಂಗದ ಸಂಪೂರ್ಣ ಜವಾಬ್ದಾರಿ ನಿರ್ವಹಿಸುವ, ಕಲಾಪಗಳ ಸುಗಮ ನಿರ್ವಹಣೆ ನೋಡಿಕೊಳ್ಳುವ ಅತ್ಯುನ್ನತ ಸ್ಥಾನ. 224 ಶಾಸಕರ ನಿಯಂತ್ರಣದ ಜವಾಬ್ದಾರಿ ಹೊಂದಿರುವ ಹೊಣೆಗಾರಿಕೆ. ಅದೇ ವಿಧಾನಸಭೆಯ ಸ್ಪೀಕರ್‌ (Speaker) ಸ್ಥಾನ!

ಸ್ಪೀಕರ್‌ ಸ್ಥಾನ ಸ್ವೀಕರಿಸಲು ಯಾಕೆ ಇಷ್ಟೊಂದು ಹಿಂದೇಟು ಎಂದಿರಾ? ಇಲ್ಲಿದೆ ಅದಕ್ಕೆ ಉತ್ತರ. 2004ರಿಂದಲೂ ವಿಧಾನಸಭೆ ಸ್ಪೀಕರ್ ಆದವರು ಬಳಿಕ ನಡೆದ ಚುನಾವಣೆಯಲ್ಲಿ ಸೋಲು ಕಾಣುತ್ತಿದ್ದಾರೆ. ಇದರ ಇತಿಹಾಸವನ್ನು ಗಮನಿಸಬಹುದು- ಕೆ.ಆರ್ ಪೇಟೆ ಕೃಷ್ಣ 2008ರಲ್ಲಿ ಸೋಲುಂಡಿದ್ದಾರೆ. 2013ರಲ್ಲಿ ಸ್ಪೀಕರ್ ಆಗಿದ್ದ ಕಾಗೋಡು ತಿಮ್ಮಪ್ಪ 2018ರಲ್ಲಿ ಸೋತಿದ್ದಾರೆ. ಕಾಗೋಡು ಸಚಿವರಾದ ಬಳಿಕ 2017ರಲ್ಲಿ ಸ್ಪೀಕರ್ ಆದ ಕೋಳಿವಾಡ 2018ರ ಚುನಾವಣೆಯಲ್ಲಿ ಸೋಲು ಕಂಡರು. ಬಳಿಕ ನಡೆದ ಉಪಚುನಾವಣೆಯಲ್ಲೂ ಸೋತರು. 2018ರಲ್ಲಿ ಸ್ಪೀಕರ್ ಆದ ರಮೇಶ್ ಕುಮಾರ್ ನಂತರ ಸೋತರು. 2019ರಲ್ಲಿ ಸ್ಪೀಕರ್ ಆದ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ!

ಈ ಭಯ ಹಿರಿಯ ಶಾಸಕರನ್ನು ಆವರಿಸಿಕೊಂಡಿದೆ. ಹೀಗಾಗಿ, ನಮಗೆ ಸಚಿವ ಸ್ಥಾನವೇ ಬೇಕು, ಸ್ಪೀಕರ್ ಸ್ಥಾನ ಬೇಡ ಎಂದು ಹಿರಿಯ ಶಾಸಕರು ಪಟ್ಟು ಹಿಡಿದಿದ್ದಾರೆ. ಟಿ.ಬಿ ಜಯಚಂದ್ರ, ಎಚ್.ಕೆ ಪಾಟೀಲ್, ಬಿ.ಆರ್ ಪಾಟೀಲ್, ಎನ್.ವೈ ಗೋಪಾಲಕೃಷ್ಣ ಅವರನ್ನು ಸ್ಪೀಕರ್‌ ಮಾಡಲು ಪಕ್ಷ ಮುಂದಾಗಿದ್ದು, ಎಲ್ಲರೂ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಈ ಸ್ಥಾನದಲ್ಲಿ ಯಾರು ಕೂರಲಿದ್ದಾರೋ ಕಾದು ನೋಡಬೇಕಿದೆ.

ಇದನ್ನೂ ಓದಿ: Karnataka Election: ಚುನಾವಣೆ ಸೋಲಿಗೆ ಕಾರಣವನ್ನು ಬಿಚ್ಚಿಟ್ಟ ನಿರ್ಗಮಿತ ಸಿಎಂ ಬೊಮ್ಮಾಯಿ

Exit mobile version