Site icon Vistara News

Karnataka Election | ವರುಣ ಕ್ಷೇತ್ರವೇ ಗಟ್ಟಿ ಮಾಡಿಕೊಂಡರಾ ಸಿದ್ದರಾಮಯ್ಯ?; ಕುತೂಹಲ ಮೂಡಿಸಿದ ಮಾಜಿ ಸಿಎಂ ನಡೆ

siddaramaiah

ಮೈಸೂರು: 2023ರ ವಿಧಾನಸಭಾ ಚುನಾವಣೆಗೆ (Karnataka Election) ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವರುಣ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವುದು ಬಹುತೇಕ ಅಂತಿಮವೇ ಎಂಬ ಚರ್ಚೆ ಈಗ ಎಲ್ಲೆಡೆ ಹರಿದಾಡುತ್ತಿದೆ. ಸಿದ್ದರಾಮಯ್ಯ ಅವರ ವರುಣ ಕ್ಷೇತ್ರ ಸಂಚಾರ ಈ ಎಲ್ಲ ಅಂಶವನ್ನು ಪುಷ್ಟೀಕರಿಸುತ್ತಿದೆ.

ಕಳೆದೆರಡು ಮೂರು ದಿನಗಳಿಂದ ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರು ಸಂಚಾರವನ್ನು ಹೆಚ್ಚು ಮಾಡಿದ್ದಾರೆ. ಅಲ್ಲದೆ, ಶಾಸಕನಾಗಿ ಪುತ್ರ ಯತೀಂದ್ರ ಮಾಡಿದ ಕೆಲಸಗಳಿಗೆ ಸಿದ್ದರಾಮಯ್ಯ ಅವರೇ ಉದ್ಘಾಟನೆ ಮಾಡುತ್ತಿದ್ದಾರೆ. ಎರಡು ತಿಂಗಳ ಅಂತರದಲ್ಲಿ‌ ವರುಣ ಕ್ಷೇತ್ರದ 30ಕ್ಕೂ ಹೆಚ್ಚು ಹಳ್ಳಿಗಳಿಗೆ ಭೇಟಿ ನೀಡಿದ್ದಾರೆ.

ಅಂಬೇಡ್ಕರ್ ಭವನ, ಕನಕ ಭವನ, ಕನಕ ಜಯಂತಿ, ಭಗೀರಥ ಭವನ, ಸೇತುವೆಗಳು, ಸರ್ಕಾರಿ ಕಟ್ಟಡಗಳ ಉದ್ಘಾಟನೆಗೆ ನೆಪದಲ್ಲಿ ಇಡೀ ಕ್ಷೇತ್ರದಲ್ಲಿ ಸಂಚಾರ ಮಾಡಿದ್ದಾರೆ. ಈ ಮೂಲಕ ಮತದಾರರ ಗಮನ ಸೆಳೆದಿದ್ದಾರೆ. ಅಕ್ಟೋಬರ್ ತಿಂಗಳಿಂದ ಎರಡು ಬಾರಿ, ಮೂರು ದಿನಗಳ ಸಂಚಾರ ಮಾಡಿದ್ದ ಸಿದ್ದರಾಮಯ್ಯ ಅವರಿಗೆ ಹೋದಲೆಲ್ಲ ವರುಣದಿಂದ ಸ್ಪರ್ಧೆ ಮಾಡುವಂತೆ ಕಾರ್ಯಕರ್ತರು ಒತ್ತಡ ಹೇರಿದ್ದಾರೆ.

ಇದನ್ನೂ ಓದಿ | Karnataka Elections | ಒಂದೇ ತಿಂಗಳ ಅವಧಿಯಲ್ಲಿ ರಾಜ್ಯಕ್ಕೆ ನಡ್ಡಾ, ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್‌

ಈ ನಡುವೆ ತಂದೆಗಾಗಿ ಕ್ಷೇತ್ರ ಬಿಡಲು ಸಿದ್ಧ ಎಂದು ಹಾಲಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅನೇಕ ಬಾರಿ ಹೇಳಿಕೆಯನ್ನು ನೀಡುತ್ತಲೇ ಬಂದಿದ್ದಾರೆ. ಇದರ ಜತೆಗೆ ವರುಣ ಕ್ಷೇತ್ರವು ಸಿದ್ದರಾಮಯ್ಯ ಅವರಿಗೆ ಅದೃಷ್ಟದ ಕ್ಷೇತ್ರ ಎಂದೂ ಹೇಳಲಾಗುತ್ತಿರುವುದರಿಂದ ಇಲ್ಲಿಂದಲೇ ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾದಂತಾಗಿದೆ.

ಕ್ಷೇತ್ರದ ಜನರು ಸಿದ್ದರಾಮಯ್ಯ ಜತೆಗೆ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದಾರೆ. ಈಗ ಸ್ವತಃ ಪುತ್ರನೇ ಶಾಸಕರಾಗಿರುವುದರಿಂದ ಚುನಾವಣೆಯಲ್ಲಿ ಓಡಾಟ ಸುಲಭವಾಗಲಿದೆ. ಇನ್ನು ವರುಣ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೆ ಗೆಲುವು ಕಟ್ಟಿಟ್ಟ ಬುತ್ತಿ. ಜತೆಗೆ ಮಗ ಪ್ರಚಾರದ ಕಾರ್ಯವನ್ನು ನೋಡಿಕೊಳ್ಳುತ್ತಾರೆ. ತಾವು ಆರಾಮವಾಗಿ ರಾಜ್ಯಾದ್ಯಂತ ಸಂಚಾರ ಮಾಡಿ, ತಮ್ಮ ಬೆಂಬಲಿಗ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಬಹುದು ಎಂಬ ಲೆಕ್ಕಾಚಾರದಲ್ಲಿ ಸಿದ್ದರಾಮಯ್ಯ ಇದ್ದಾರೆ ಎಂದು ಹೇಳಲಾಗಿದೆ.

ವರುಣದಲ್ಲಿಯೇ ಏಕೆ?
ಮುಖ್ಯಮಂತ್ರಿ ಆಗಿದ್ದ ವೇಳೆ ಮಾಡಿರುವ ಅಭಿವೃದ್ಧಿ ಕಾರ್ಯಗಳ‌ ಶ್ರೀರಕ್ಷೆಯಾಗಿದೆ. ವರುಣ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ಸಹ ಇಲ್ಲ. ಇನ್ನು ಈ ಭಾಗದಲ್ಲಿ ಬಿಜೆಪಿಗೆ ನಾಯಕತ್ವ ಇಲ್ಲ, ಜೆಡಿಎಸ್‌ಗೆ ನೆಲೆಯೇ ಇಲ್ಲ ಎಂಬ ಸ್ಥಿತಿ ಇದೆ. ಹಿಂದುಳಿದ ವರ್ಗಗಳ ಮತ ಹೆಚ್ಚು ಇರುವುದೂ ಸಹ ಇದೇ ಕ್ಷೇತ್ರದತ್ತ ಸಿದ್ದರಾಮಯ್ಯ ಹೆಚ್ಚಿನ ಒಲವು ಹೊಂದಿದ್ದಾರೆ. ಆದರೆ, ಇದರ ಹೊರತಾಗಿಯೂ ಬೇರೆ ಕೋಲಾರ ಹಾಗೂ ಚಾಮರಾಜಪೇಟೆ ಕ್ಷೇತ್ರಗಳತ್ತ ಕಣ್ಣಿಟ್ಟಿರುವ ಸಿದ್ದರಾಮಯ್ಯ ಅವರು ಅಂತಿಮ ಕ್ಷಣದಲ್ಲಿ ಕ್ಷೇತ್ರವನ್ನು ಬಹಿರಂಗ ಪಡಿಸಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ | Janhvi Kapoor | ಪುಷ್ಪ-2 ಐಟಂ ಸಾಂಗ್‌ನಲ್ಲಿ ಜಾಹ್ನವಿ ಕಪೂರ್?

Exit mobile version