ಹುಮನಾಬಾದ್ (ಬೀದರ್): ದಯವಿಟ್ಟು ನನ್ನದೊಂದು ಕೆಲಸ ಮಾಡಿಕೊಡುತ್ತೀರಾ? ಹೀಗೊಂದು ಬೇಡಿಕೆಯನ್ನು ಮುಂದಿಟ್ಟಿದ್ದಾರೆ ಪ್ರಧಾನಿ ನರೇಂದ್ರ ಮೋದಿ (Prime minister Narendra Modi). ರಾಜ್ಯ ವಿಧಾನಸಭಾ ಚುನಾವಣೆಯ (Karnataka Election 2023) ಪ್ರಚಾರಕ್ಕಾಗಿ ಬೀದರ್ ಜಿಲ್ಲೆಯ ಹುಮನಾಬಾದ್‌ಗೆ ಆಗಮಿಸಿ ಬೃಹತ್ ಸಮಾವೇಶದಲ್ಲಿ ಭಾಗವಹಿಸಿದ ಅವರು ಭಾಷಣದ ಕೊನೆಯಲ್ಲಿ ಬೇಡಿಕೆಯೊಂದನ್ನು ಇಟ್ಟರು.
ʻʻಇಲ್ಲಿ ಬಂದಿರುವ ಎಲ್ಲರ ಬಳಿ ನನ್ನದೊಂದು ಬೇಡಿಕೆ ಇದೆ. ದಯವಿಟ್ಟು ನನ್ನದೊಂದು ಕೆಲಸ ಮಾಡಿಕೊಡುತ್ತೀರಾʼʼ ಎಂದು ಪ್ರಶ್ನಿಸಿದರು. ʻʻನೀವು ಈ ಕಾರ್ಯಕ್ರಮ ಮುಗಿಸಿ ಹೋಗಿ ನಿದ್ದೆ ಮಾಡಬಾರದು, ಮೇ 10ರೊಳಗೆ ಬೂತ್‌ನಲ್ಲಿರುವ ಪ್ರತಿ ಮನೆಗೆ ಹೋಗಿ, ಮತದಾನಕ್ಕೆ ಕರೆದುಕೊಂಡು ಹೋಗಿ, ಜನರಿಗೆ ಡಬಲ್ ಎಂಜಿನ್ ಸರ್ಕಾರದ ಸಾಧನೆಗಳನ್ನು ತಿಳಿಸಿ ಹೇಳಿ ಎಂದು ನರೇಂದ್ರ ಮೋದಿ ಹೇಳಿದರು. ʻʻಹಾಗೆ ಮನೆ ಮನೆಗೆ ಹೋಗುವಾಗ ನನ್ನದೊಂದು ಕೆಲಸ ಮಾಡಿಕೊಡ್ತೀರಾ?ʼʼ ಎಂದು ಕೇಳಿದರು ಮೋದಿ.
ʻʻನನ್ನದೊಂದು ಕೆಲಸ ಮಾಡಿಕೊಡ್ತೀರಾ? ಮನೆ ಮನೆಗ ಹೋಗಿ ಮಾಡ್ತಿರಾ? ಮೇ 10ರೊಳಗೆ ಪ್ರತಿ ಮತದಾರರ ಮನೆಗೆ ಹೋಗಿ ನಿಮ್ಮ ಸೇವಕ ಮೋದಿಜಿ ನಮ್ಮ ಬೀದರ್ ಜಿಲ್ಲೆಗೆ ಬಂದಿದ್ದರು. ಅವರು ನಿಮಗೆ ನಮಸ್ಕಾರ ಹೇಳಿದ್ದಾರೆ ಎಂದು ನನ್ನ ನಮಸ್ಕಾರವನ್ನು ಅವರಿಗೆ ತಿಳಿಸುತ್ತೀರಾ? ಪ್ರತಿ ಸೋದರಿಯರಿಗೆ ಹೇಳುತ್ತೀರಾ? ಹಾಗೆ ಹೇಳಿದರೆ ಅವರ ಆಶೀರ್ವಾದ ನನಗೆ ಸಿಗುತ್ತದೆ. ಅದರಿಂದ ನನಗೆ ಇನ್ನಷ್ಟು ಕೆಲಸ ಮಾಡಲು ಶಕ್ತಿ ಸಿಗುತ್ತದೆʼʼ ಎಂದು ಹೇಳಿದರು.
ಭಗವಾನ್ ಬಸವೇಶ್ವರರ ಆಶೀರ್ವಾದ ನನಗಿರಲಿ
ʻʻಬೀದರ್‌ನಿಂದ ಚುನಾವಣಾ ಯಾತ್ರೆ ಆರಂಭವಾಗುತ್ತಿರುವುದು ನನ್ನ ಪಾಲಿನ ಸೌಭಾಗ್ಯ. ಭಗವಾನ್ ಬಸವೇಶ್ವರರ ಆಶೀರ್ವಾದ, ನಿಮ್ಮೆಲ್ಲರ ಆಶೀರ್ವಾದ ನನಗಿದೆ. ಕರ್ನಾಟಕದ ಕಿರೀಟ, ಬೀದರ್ ನ ಆಶೀರ್ವಾದ ನನಗೆ ಹಿಂದಿನಿಂದಲೂ ಇತ್ತುʼʼ ಎಂದು ನೆನಪಿಸಿಕೊಂಡರು.
ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ
ರಾಜ್ಯದಲ್ಲಿ ಈ ಬಾರಿ ನಡೆಯುತ್ತಿರುವುದು ಕೇವಲ ಐದು ವರ್ಷದ ಸರ್ಕಾರ ರಚನೆಗಾಗಿ ಮಾತ್ರವಲ್ಲ, ಇದು ಕರ್ನಾಟಕವನ್ನು ದೇಶದಲ್ಲೇ ನಂಬರ್ ಒನ್ ಮಾಡುವುದಕ್ಕೆ ಎಂದು ಹೇಳಿದರು ನರೇಂದ್ರ ಮೋದಿ.
ʻʻನಾವು ಯಾವ ಕರ್ನಾಟಕವನ್ನು ನೋಡಬಯಸುತ್ತೇವೆ ಎಂದರೆ ಎಕ್ಸ್‌ಪ್ರೆಸ್ ಹೈವೇಗಳಾಗಬೇಕು, ಮೆಟ್ರೋಗಳು ಬರಬೇಕು, ಪ್ರತಿ ಗದ್ದೆಯಲ್ಲೂ ಆಧುನಿಕ ತಂತ್ರಜ್ಞಾನದ ಬಳಕೆಯಾಗಬೇಕು. ಕಳೆದ ಮೂರು ವರ್ಷಗಳಿಂದ ಆಗಿರುವ ಅಭಿವೃದ್ಧಿ ಮುಂದುವರಿಯನೇಕು. ಕರ್ನಾಟಕವನ್ನು ದೇಶದ ನಂಬರ್ ವನ್ ರಾಜ್ಯ ಮಾಡಬೇಕು ಎಂದರೆ ಡಬಲ್ ಎಂಜಿನ್ ಸರ್ಕಾರ ಅಗತ್ಯʼʼ ಎಂದು ನರೇಂದ್ರ ಮೋದಿ ವಿವರಿಸಿದರು.
ಡಬಲ್ ಎಂಜಿನ್ ಸರ್ಕಾರ ಯಾಕೆ ಬೇಕೆಂದರೆ..
ʻʻಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಡಬಲ್ ಶಕ್ತಿ ಜತೆಯಾದರೆ ಕರ್ನಾಟಕವನ್ನು ನಂಬರ್ ಒನ್ ಆಗುವುದರಿಂದ ಯಾರೂ ತಡೆಯಲಾಗದು. ಡಬಲ್ ಎಂಜಿನ್‌ನಿಂದ ಏನು ಪ್ರಯೋಜನ ಎನ್ನುವುದಕ್ಕೆ ಒಂದು ಉದಾಹರಣೆ ಕರ್ನಾಟಕಕ್ಕೆ ಬಂದಿರುವ ವಿದೇಶಿ ಹೂಡಿಕೆ. ಇದರಲ್ಲಿ ದಾಖಲೆಯೇ ನಿರ್ಮಾಣವಾಗಿದೆ. ಕಾಂಗ್ರೆಸ್ ಸರ್ಕಾರವಿದ್ದಾಗ 3೦000 ಕೋಟಿ ನಿಧಿ ಬರುತ್ತಿತ್ತು. ಈಗ 9000 ಕೋಟಿ ರೂ. ವಿದೇಶಿ ಹೂಡಿಕೆ ಬಂದಿದೆ. ಅಂದರೆ ಮೂರು ಪಟ್ಟು ಹೆಚ್ಚಾಗಿದೆ. ಕೊರೊನಾ ವಿರುದ್ಧ ದೊಡ್ಡ ಯುದ್ಧ ನಡೆಯುತ್ತಿದ್ದರೂ ಇದನ್ನೂ ಸಾಧಿಸಲಾಗಿದೆʼʼ ಎಂದು ನರೇಂದ್ರ ಮೋದಿ ನುಡಿದರು.
ಡಬಲ್ ಎಂಜಿನ್, ಡಬಲ್ ಬೆನಿಫಿಟ್, ಡಬಲ್ ಸ್ಪೀಡ್
ʻʻಡಬಲ್ ಎಂಜಿನ್ ಸರ್ಕಾರ ಬರುವ ಮೊದಲು ಸಣ್ಣ ಪುಟ್ಟ ಕೆಲಸ ಮಾಡಲು ಕೂಡಾ ವರ್ಷಗಳೇ ಬೇಕಾಗುತ್ತಿದ್ದವು. ಇಲ್ಲಿನ ಸಣ್ಣ ಪುಟ್ಟ ನೀರಾವರಿ ಯೋಜನೆಗಳು ಕೂಡಾ ದಶಕದಿಂದ ಬಾಕಿ ಇದ್ದವು. ಆದರೆ, ಕಳೆದ ಒಂದು ಒಂಬತ್ತು ವರ್ಷಗಳಲ್ಲಿ ದಶಕದಿಂದ ಬಾಕಿ ಇದ್ದ 80ಕ್ಕೂ ಹೆಚ್ಚು ಯೋಜನೆಗಳನ್ನು ಪೂರೈಸಿದ್ದೇವೆ. ಬೀದರ್‌ನ ಮೆಹಕರ್ ನೀರಿನ ಯೋಜನೆಯ ಕೆಲಸವೂ ವೇಗ ಪಡೆದಿದೆ. ಇದಕ್ಕೆ ನಾವು ಡಬಲ್ ಎಂಜಿನ್ ಸರ್ಕಾರ ಬೇಕು ಎನ್ನುವುದುʼʼ ಎಂದರು ಪ್ರಧಾನಿ ನರೇಂದ್ರ ಮೋದಿ.
ಕಾಂಗ್ರೆಸ್ ಪಿಎಂ ಕಿಸಾನ್ ಸಮ್ಮಾನ್‌ಗೆ ಪಟ್ಟಿಯನ್ನೇ ಕೊಡಲಿಲ್ಲ.
ʻʻಪಿಎಂ ಕಿಸಾನ್ ಸಮ್ಮಾನ್ ನಿಧಿಯ ಹಣ ಈಗ ಅವರವರ ಖಾತೆಗೇ ಬಂದು ಬೀಳುತ್ತದೆ. ನಾವು ಈ ಕಾರ್ಯಕ್ರಮ ಆರಂಭಿಸಿದಾಗ ರಾಜ್ಯದಲ್ಲಿ ಜೆಡಿಎಸ್, ಕಾಂಗ್ರೆಸ್ ಸರ್ಕಾರ ಇತ್ತು. ಆಗ ಅವರು ನಮಗೆ ರೈತರ ಪಟ್ಟಿ ಕಳುಹಿಸಲೂ ಹಿಂದೆ ಮುಂದೆ ನೋಡಿದ್ದರು. ಹಣ ನಾವೇ ಕೇಂದ್ರದಿಂದ ಕೊಡುತ್ತಿದ್ದೆವು. ಆದರೆ ಇವರು ಹೆಸರು ನೀಡಲೂ ತಯಾರಿರಲಿಲ್ಲ. ಯಾಕೆಂದರೆ ಅವರಿಗೆ ತಿನ್ನಲು ಏನೂ ಸಿಗುತ್ತಿಲ್ಲವಲ್ಲ. ಈಗ ಕೇಂದ್ರದ ಆರು ಸಾವಿರದ ಜತೆ ರಾಜ್ಯದ ನಾಲ್ಕು ಸಾವಿರವನ್ನೂ ಸೇರಿಸಿ ಕೊಡುತ್ತಿದ್ದಾರೆʼʼ ಎಂದು ನೆನಪಿಸಿದರು ನರೇಂದ್ರ ಮೋದಿ.
ಸಾಲ ಮನ್ನಾ, ಉಚಿತ ಭರವಸೆಗಳು ಬೋಗಸ್
ʻʻಕಾಂಗ್ರೆಸ್, ಜೆಡಿಎಸ್ ಸರ್ಕಾರಗಳು ರೈತರಿಗೆ ಸಾಲ ಮನ್ನಾದ ನಾಟಕ ಮಾಡುತ್ತಿದ್ದವು. ಅದರೆ, ಸಾಲ ಮನ್ನಾ ಯಾರಿಗೂ ಆಗುತ್ತಿರಲಿಲ್ಲ. ಛತ್ತೀಸ್‌ಗಢ, ರಾಜಸ್ಥಾನ, ಹಿಮಾಚಲದಲ್ಲಿ ನೀಡಿದ ಯಾವ ಭರವಸೆಯೂ ಈಡೇರಿಲ್ಲ. ಸಾಲ ಮನ್ನಾದ ಲಾಭ ಪಕ್ಷದ ಕೆಲವರಿಗೆ ಮಾತ್ರ ಸಿಗುತ್ತಿತ್ತು ಅಷ್ಟೆ. ಆದರೆ, ಕೋಟ್ಯಂತರ ಬಡ ರೈತರಿಗೆ ನೆರವು ಸಿಗಲಿಲ್ಲ. ಹೆಚ್ಚಿನ ಬಡ ರೈತರಿಗೆ ಬ್ಯಾಂಕ್ ಖಾತೆ ಇರಲಿಲ್ಲ, ಲೋನ್ ಸಿಗುತ್ತಿರಲಿಲ್ಲ, ಹೀಗಾಗಿ ಅವರು ಕೈಸಾಲ ಮಾಡುತ್ತಿದ್ದರು. ಅವರ ಸಾಲ ಎಲ್ಲಿ ಮನ್ನಾ ಆಗುತ್ತದೆʼʼ ಎಂದು ಕೇಳಿದರು ನರೇಂದ್ರ ಮೋದಿ.
ಗೃಹಿಣಿಯರೆಲ್ಲ ಲಕ್ಷಾಧೀಶರಾಗಿದ್ದು ಹೇಗೆ ಗೊತ್ತಾ?
ʻʻಕಾಂಗ್ರೆಸ್ ನಕಾರಾತ್ಮಕತೆಯಿಂದ ತುಂಬಿ ಹೋಗಿದೆ. ಬಡವರಿಗೆ ಮನೆ ಕೊಡುವ ಯೋಜನೆಯಡಿ ಕಾಂಗ್ರೆಸ್ ಮನೆ ಕಟ್ಟಿ ಕೊಟ್ಟಿಲ್ಲ. ಡಬಲ್ ಎಂಜಿನ್ ಸರ್ಕಾರ ಬಂದ ಮೇಲೆ ಮನೆ ಕಟ್ಟಿಕೊಡುವ ಯೋಜನೆಗೆ ವೇಗ ಸಿಕ್ಕಿತು. ನಾವು ಬಂದ ಮೇಲೆ 9 ಲಕ್ಷ ಮನೆಗಳು ನಿರ್ಮಾಣವಾದವು. ಬೀದರ್ ಒಂದರಲ್ಲೇ 30 ಸಾವಿರ ಮನೆ ಕಟ್ಟಲಾಗಿದೆ. ಮತ್ತು ನಾವು ಮನೆಯನ್ನು ಮನೆಯ ಹೆಣ್ಮಕ್ಕಳ ಹೆಸರಿನಲ್ಲಿ ನೀಡಿದ್ದೇವೆ. ಅಂದರೆ ನಾವು 30 ಸಾವಿರ ಸೋದರಿಯರನ್ನು ಲಕ್ಷಾಧಿಪತಿಗಳನ್ನಾಗಿ ಮಾಡಿದ್ದೇವೆ. ಪ್ರತಿ ಮನೆಗೂ ನೀರಿನ ಸಂಪರ್ಕ ನೀಡಿದ್ದೇವೆʼʼ ಎಂದು ಹೇಳಿದರು.
ಬಂಜಾರ ಸಮುದಾಯದವರಿಗೆ ಆಸ್ತಿ ಹಕ್ಕುಗಳನ್ನು ನೀಡಿದ್ದೇವೆ. ಕಾಂಗ್ರೆಸ್ ಅವರನ್ನು ಯಾವತ್ತೂ ಕಡೆಗಣಿಸುತ್ತಲೇ ಬಂದಿತ್ತು ಎಂದು ಹೇಳುವ ಮೂಲಕ ಬಂಜಾರಾ ಮತ ಬ್ಯಾಂಕ್ ಭದ್ರಪಡಿಸಿಕೊಳ್ಳುವ ಪ್ರಯತ್ನ ನಡೆಸಿದರು ಮೋದಿ.
ನಾವು ಇಷ್ಟು ಮಾಡಿದ್ದೇವೆ, ಕಾಂಗ್ರೆಸ್ ಮಾಡಿದ್ದೇನು?
ʻʻನಾವು ಇಷ್ಟೆಲ್ಲ ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಆದರೆ ಕಾಂಗ್ರೆಸ್ ಏನು ಮಾಡಿದೆ? ಜಾತಿ ಮತ ಪಂಥಗಳ ಆಧಾರದಲ್ಲಿ ಸಮಾಜವನ್ನು ಒಡೆಯಲು ಯತ್ನಿಸಿತು. ಬಿದರಿ ಕಲೆಯ ಅಹಮದ್ ಖಾದ್ರಿ ಅವರಿಗೆ ನಾವು ಪದ್ಮಭೂಷಣ ನೀಡಿದೆವು. ಆದರೆ, ಕಾಂಗ್ರೆಸ್ ಅವರಿಗೆ ಕೊಟ್ಟಿದ್ದು ಕಷ್ಟ ಮಾತ್ರʼʼ ಎಂದರು.
ರಾಜ್ಯದಲ್ಲಿ ಪೂರ್ಣ ಬಹುಮತದ ಸರ್ಕಾರದ ಅಗತ್ಯತೆಯನ್ನು ಒತ್ತಿ ಹೇಳಿದ ಅವರು, ʻʻಅಸ್ಥಿರ ಸರ್ಕಾರದ ಗುರಿ ಜನರ ಸೇವೆ ಆಗಿರುವುದಿಲ್ಲ. ಕಾಂಗ್ರೆಸ್-ಜೆಡಿಎಸ್ ಸರ್ಕಾರ ಇತ್ತಲ್ಲ. ಅದು ಕಾಂಗ್ರೆಸ್‌ನ ದಯೆಯಿಂದ ನಡೆಯುತ್ತಿತ್ತು. ಅದು ಜನರ ಸರ್ಕಾರ ಆಗಿರಲಿಲ್ಲ. ಅದು ಜನರಿಗಾಗಿ ಕೆಲಸ ಮಾಡಲು ಸಾಧ್ಯವಿಲ್ಲʼʼ ಎಂದರು ನರೇಂದ್ರ ಮೋದಿ ಹೇಳಿದರು.
ಇದನ್ನೂ ಓದಿ : Modi in Karnataka: ಅಂಬೇಡ್ಕರ್‌ಗೇ ರಾಕ್ಷಸ ಅಂದೋರು ನನ್ನನ್ನು ಬಿಡ್ತಾರಾ?: ಖರ್ಗೆ ವಿಷದ ಹಾವು ಹೇಳಿಕೆಗೆ ಮೋದಿ ಉತ್ತರ