ರಮೇಶ ದೊಡ್ಡಪುರ ಬೆಂಗಳೂರು
ರಾಜ್ಯದಲ್ಲಿ ಕಾಂಗ್ರೆಸ್ ವತಿಯಿಂದ ನಾ ನಾರಿ ಸಮಾವೇಶದ ಜತೆಗೆ, ರಾಜಕೀಯದಲ್ಲಿ ಮಹಿಳೆಯರ ಪ್ರಾತಿನಿಧ್ಯದ (Women Representation) ಕುರಿತು ಚರ್ಚೆಗಳು ಗರಿಗೆದರಿವೆ. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಂತೂ, ತಮ್ಮ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ವಿಧಾನಸಭೆಯಲ್ಲಿ ಶೇ.33 ಮಹಿಳಾ ಮೀಸಲಾತಿ ನೀಡುವುದಾಗಿಯೇ ಘೋಷಿಸಿದರು. ಆದರೆ ನಿಜವಾಗಿಯೂ ರಿಯಾಲಿಟಿ ಬೇರೆಯೇ ಇದೆ.
ರಾಜ್ಯದಲ್ಲಿ ಮಹಿಳೆಯರ ಪ್ರಾತಿನಿಧ್ಯಕ್ಕೆ ಅನೇಕ ವರ್ಷಗಳಿಂದ ಕೂಗು ಕೇಳಿಬರುತ್ತಿದೆ. ಈ ಹಿಂದೆ ರೌಡಿಗಳ ಹಿಡಿತದಲ್ಲಿದ್ದ ಚುನಾವಣೆ ವ್ಯವಸ್ಥೆಯಲ್ಲಿ ಮಹಿಳೆಯರು ಸ್ಪರ್ಧೆ ಮಾಡುವುದು ಕಷ್ಟವಾಗಿತ್ತು. ಇದೀಗ ದಿನೇದಿನೇ ರಾಜಕಾರಣ ಎನ್ನುವುದು ಹಣದ ಹೊಳೆಯನ್ನು ಹರಿಸುವ ಅನಿವಾರ್ಯತೆಯನ್ನು ಸೃಷ್ಟಿಸಿದ್ದು, ಚುನಾವಣಾ ಕಣದಲ್ಲಿ ಬಹುತೇಕರು ಸೋಲುತ್ತಿದ್ದಾರೆ.
ನಾ ನಾಯಕಿ ಸಮಾವೇಶದ ಮೂಲಕ ಮಹಿಳಾ ಪರ ರಾಜಕಾರಣ ಮಾಡುವುದಾಗಿ ಅತ್ತ ಕಾಂಗ್ರೆಸ್ ಘೋಷಣೆ ಮಾಡಿದರೆ, ಇತ್ತ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವೂ ಜಾಹೀರಾತುಗಳ ಮೂಲಕ ಮಹಿಳೆಯರ ಕುರಿತು ಬದ್ಧತೆಯನ್ನು ಘೋಷಿಸಿದೆ.
ನಿಧಾನವಾಗಿ ಏರಿದ ಸ್ಪರ್ಧೆ
1994ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 104 ಮಹಿಳೆಯರು ಸ್ಪರ್ಧಿಸಿದ್ದರೆ ನಂತರ 1999ರಲ್ಲಿ ದಿಢೀರನೆ 62ಕ್ಕೆ ಕುಸಿಯಿತು. ಆದರೆ ನಂತರ 2004, ೨೦೦೮, 2013ರಲ್ಲಿ ನಿಧಾನವಾಗಿ ಏರಿಕೆಯಾಗುತ್ತಲೇ ಬಂದು 2018 ರ ಚುನಾವಣೆಯಲ್ಲಿ 219 ಮಹಿಳೆಯರು ಸ್ಪರ್ಧಿಸಿದ್ದರು. ಮಹಿಳೆಯರು ಚುನಾವಣೆಯಲ್ಲಿ ಸ್ಪರ್ಧಿಸುವ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಇದು ತೋರಿಸುತ್ತದೆ.
ಠೇವಣಿ ಜಪ್ತಿಯಲ್ಲಿ ಮುಂದು !
ಹಾಗೂ ಹೀಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಬಹುತೇಕ ಮಹಿಳೆಯರು ಸೋಲುತ್ತಿದ್ದಾರೆ. ಅದರಲ್ಲೂ ಹೆಚ್ಚಿನ ಜನರು ಠೇವಣಿಯನ್ನೇ ಕಳೆದುಕೊಂಡು ಹೀನಾಯ ಸೋಲು ಕಾಣುತ್ತಿದ್ದಾರೆ. 1997ರಲ್ಲಿ ಸ್ಪರ್ಧಿಸಿದ್ದ 104 ಮಹಿಳೆಯರಲ್ಲಿ 7 ಜನರು ಮಾತ್ರ ಶಾಸಕಿಯರಾಗಿ ಆಯ್ಕೆಯಾದರೆ 97 ಜನರು ಠೇವಣಿ ನಷ್ಟ ಮಾಡಿಕೊಂಡಿದ್ದರು. 1999ರಲ್ಲಿ ಆರು ಜನರು ಆಯ್ಕೆಯಾಗಿ 44 ಅಭ್ಯರ್ಥಿಗಳ ಠೇವಣಿ ನಷ್ಟವಾಗಿತ್ತು. 2004ರಲ್ಲೂ 6 ಜನರು ಗೆದ್ದು 84 ಅಭ್ಯರ್ಥಿಗಳ ಠೇವಣಿ ಜಪ್ತಿ ಆಗಿತ್ತು. 2008ರಲ್ಲಿ ಶಾಸಕರಾದವರ ಸಂಖ್ಯೆ ಅತ್ಯಂತ ಕಡಿಮೆ ಅಂದರೆ ಕೇವಲ ಮೂರಕ್ಕೆ ಕುಸಿದು, ಸ್ಪರ್ಧಿಸಿದ್ದ 89 ಅಭ್ಯರ್ಥಿಗಳ ಠೇವಣಿ ನಷ್ಟವಾಯಿತು. ನಂತರದ ಎರಡು ಚುನಾವಣೆಗಳಲ್ಲಿ ಮಹಿಳೆಯರ ಪ್ರತಿನಿಧ್ಯ ಹೆಚ್ಚುತ್ತಲೇ ಸಾಗುತ್ತಿದೆ. 2013ರಲ್ಲಿ ಸ್ಪರ್ಧಿಸಿದ್ದ 175 ಮಹಿಳೆಯರಲ್ಲಿ ಆರು ಶಾಸಕಿಯರಾಗಿ ಆಯ್ಕೆಯಾದರು,2018 ರಲ್ಲಿ ಸ್ಪರ್ಧಿಸಿದ್ದ 219 ಮಹಿಳೆಯರಲ್ಲಿ 7 ಜನರು ಶಾಸಕಿಯರಾದರು.
ಮಹಿಳಾ ಅಭ್ಯರ್ಥಿಗಳ ಸ್ಪರ್ಧೆ
ಕಾಂಗ್ರೆಸ್ ಮುಂಚೂಣಿಯಲ್ಲಿ
ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವಲ್ಲಿ ಬಹುತೇಕ ಎಲ್ಲ ಪಕ್ಷಗಳೂ ನಿರ್ಲಕ್ಷ್ಯ ಮುಂದುವರಿಸಿವೆ. ಆದರೆ ಇದ್ದದ್ದರಲ್ಲಿ ಕಾಂಗ್ರೆಸ್ ಪಕ್ಷ ಮುಂದಿದೆ ಎನ್ನುವುದನ್ನು ಕಳೆದ ಎರಡು ಚುನಾವಣೆಗಳ ಅಂಕಿ ಅಂಶಗಳು ತೋರಿಸುತ್ತವೆ. ಬಿಜೆಪಿಯಿಂದ 2013ರಲ್ಲಿ 7 ಹಾಗೂ 2018ರಲ್ಲಿ 8 ಸೇರಿ ಒಟ್ಟು 15 ಮಹಿಳೆಯರಿಗೆ ಅವಕಾಶ ನೀಡಲಾಗಿತ್ತು. ಜೆಡಿಎಸ್‌ನಿಂದ 12 ಹಾಗೂ 7 ಸೇರಿ ಒಟ್ಟು 19 ಮಹಿಳೆಯರಿಗೆ ಸ್ಪರ್ಧೆಯ ಅವಕಾಶ ನೀಡಲಾಗಿತ್ತು. ಕಾಂಗ್ರೆಸ್‌ನಲ್ಲಿ 10 ಹಾಗೂ 14 ಸೇರಿ ಒಟ್ಟು 24 ಮಹಿಳೆಯರಿಗೆ ಅವಕಾಶ ನೀಡಲಾಗಿತ್ತು. ಒಟ್ಟು ಗೆಲುವಿನ ವಿಚಾರದಲ್ಲಿಯೂ ಎರಡೂ ಚುನಾವಣೆಯಲ್ಲಿ ಬಿಜೆಪಿಯಿಂದ 5 ಶಾಸಕಿಯರಿದ್ದರೆ, ಕಾಂಗ್ರೆಸ್‌ನಿಂದ 7 ಶಾಸಕಿಯರಾಗಿದ್ದಾರೆ. ಜೆಡಿಎಸ್‌ನಿಂದ 2013ರಲ್ಲಿ ಒಬ್ಬರು ಶಾಸಕಿ ಇದ್ದರು ಎನ್ನುವುದನ್ನು ಬಿಟ್ಟರೆ 2018ರಲ್ಲಿ ಯಾರೂ ಆಯ್ಕೆ ಆಗಿಲ್ಲ.
ಕಾಂಗ್ರೆಸ್‌ನಲ್ಲಿ ಹೆಚ್ಚು ಬೆಂಬಲ
ಚುನಾವಣೆಯಲ್ಲಿ ಟಿಕೆಟ್ ನೀಡಿದ ನಂತರ ಅವರಿಗೆ ಬೆಂಬಲ ನೀಡುವಲ್ಲಿಯೂ ಕಾಂಗ್ರೆಸ್ ಮುಂಚೂಣಿಯಲ್ಲಿದೆ. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ಹೆಚ್ಚಿನ ಮಹಿಳೆಯರು ಠೇವಣಿ ಉಳಿಸಿಕೊಳ್ಳುವಲ್ಲಿ ಸಫಲರಾಗುತ್ತಿರುವುದು, ಉಳಿದ ಪಕ್ಷಗಳಿಗೆ ಹೋಲಿಸಿದರೆ ಕಾಂಗ್ರೆಸ್ ಪಕ್ಷದಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ದೊರಕುತ್ತಿರುವ ಬೆಂಬಲ ಹೆಚ್ಚು ಎನ್ನುವುದನ್ನು ತೋರಿಸುತ್ತಿದೆ.
2013ರಲ್ಲಿ ಬಿಜೆಪಿ ಟಿಕೆಟ್ ಪಡೆದಿದ್ದ ಏಳು ಮಹಿಳೆಯರದಲ್ಲಿ ಇಬ್ಬರು ಗೆದ್ದರೆ ಉಳಿದ ಐವರೂ ಠೇವಣಿ ಕಳೆದುಕೊಂಡರು. 2018ರಲ್ಲಿ ಬಿಜೆಪಿ ಟಿಕೆಟ್ ಪಡೆದ ಎಂಟು ಮಹಿಳೆಯರಲ್ಲಿ ಮೂವರು ಗೆದ್ದು ನಾಲ್ವರು ಠೇವಣಿ ಕಳೆದುಕೊಂಡರು. ಒಬ್ಬರು ಮಾತ್ರ ಠೇವಣಿ ಉಳಿಸಿಕೊಂಡಿದ್ದರು.
ಆದರೆ ಕಾಂಗ್ರೆಸ್‌ನಲ್ಲಿ 2013ರಲ್ಲಿ ಟಿಕೆಟ್ ಪಡೆದ 10 ಮಹಿಳೆಯರಲ್ಲಿ ಮೂವರು ಮಾತ್ರ ಠೇವಣಿ ಕಳೆದುಕೊಂಡರೆ ನಾಲ್ವರು ಠೇವಣಿ ಉಳಿಸಿಕೊಂಡಿದ್ದರು. 2018ರಲ್ಲಿ 14 ಮಹಿಳೆಯರು ಸ್ಪರ್ಧಿಸಿದರೆ ಕೇವಲ ಒಬ್ಬರು ಠೇವಣಿ ಕಳೆದುಕೊಂಡು ಒಂಭತ್ತು ಜನರು ಠೇವಣಿ ಉಳಿಸಿಕೊಂಡಿದ್ದರು.
ಜೆಡಿಎಸ್‌ನಿಂದ 2013ರಲ್ಲಿ ಸ್ಪರ್ಧಿಸಿದ್ದ 12ಮಹಿಳೆಯರಲ್ಲಿ 9 ಠೇವಣಿ ನಷ್ಟವಾಗಿದ್ದರೆ 2018ರಲ್ಲಿ ಸ್ಪರ್ಧಿಸಿದ್ದ 7 ಮಹಿಳೆಯರಲ್ಲಿ ಎಲ್ಲರೂ ಸೋತರು. ಅದರಲ್ಲಿ ಆರು ಜನರು ಠೇವಣಿ ಕಳೆದುಕೊಂಡರು. ಅತಿ ಹೆಚ್ಚಿನ ಶಾಸಕರನ್ನು ಹೊಂದಿದ್ದರೂ ಬಿಜೆಪಿಯಲ್ಲಿ ಮಹಿಳಾ ಪ್ರಾತಿನಿಧ್ಯ ಅತ್ಯಂತ ಕಡಿಮೆಯಿದೆ. ಸ್ವತಃ ತೆನೆ ಹೊತ್ತ ಮಹಿಳೆಯ ಲಾಂಛನವನ್ನು ಹೊಂದಿರುವ ಜೆಡಿಎಸ್‌ನಲ್ಲಂತೂ ತೀರಾ ಕಡೆಗಣಿಸಲ್ಪಟ್ಟಿದೆ ಎನ್ನುವುದು ಅಂಕಿ ಅಂಶಗಳಿಂದ ತಿಳಿದುಬರುತ್ತದೆ.
ಒಟ್ಟು ಸ್ಪರ್ಧೆ ಮಾಡುವವರಲ್ಲಿ ಶೇಕಡಾ 8 ಆಸುಪಾಸು ಮಹಿಳೆಯರಿದ್ದಾರಾದರೂ, ಅಂತಿಮವಾಗಿ ಗೆಲ್ಲುವವರ ಸಂಖ್ಯೆ ಕೇವಲ ಶೇಕಡಾ 3ರ ಆಸುಪಾಸು ಇದೆ.
ಇದನ್ನೂ ಓದಿ | Karnataka Election | ಮಹಿಳಾ ಘಟಕದ ಬಲವರ್ಧನೆಗೆ ಕಾಂಗ್ರೆಸ್‌ನಿಂದ ‘ನಾರಿ ಶಕ್ತಿ, ಮನೆ ಮನೆಗೆ ಮಹಿಳಾ ಕಾಂಗ್ರೆಸ್’: ಪುಷ್ಪ