Site icon Vistara News

Karnataka Elections 2023 : ನಮ್ಮಲ್ಲಿ ಸಿಕ್ಕಾಪಟ್ಟೆ ಲೀಡರ್‌ಗಳಿದ್ದಾರೆ, ನಾನು ಯಾರಿಗೂ ಪ್ರತಿಸ್ಪರ್ಧಿ ಅಲ್ಲ ಎಂದ ಬಿ.ಎಲ್‌. ಸಂತೋಷ್‌

bl santhosh bjp

ಮೈಸೂರು: ʻನಮ್ಮಲ್ಲಿ ಸಿಕ್ಕಾಪಟ್ಟೆ ಲೀಡರ್‌ಗಳಾಗಿದ್ದಾರೆ. ನಾನು ಯಾರಿಗೂ ಪ್ರತಿಸ್ಪರ್ಧಿ ಆಗಲು ಬಯಸುವುದಿಲ್ಲʼʼ- ಹೀಗೊಂದು ಮಾರ್ಮಿಕ ಮಾತನ್ನು ಆಡಿದ್ದಾರೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್.

ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿದ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರು ಇತ್ತೀಚೆಗೆ ಬಿ.ಎಲ್‌. ಸಂತೋಷ್‌ ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದರು. ಈ ಬಗ್ಗೆ ಸಂತೋಷ್‌ ಅವರು ಏನು ಹೇಳುತ್ತಾರೆ ಎಂಬ ಕುತೂಹಲವಿತ್ತು. ಅಂದೇ ʻಚರೈವೇತಿ, ಚರೈವೇತಿʼ (ನಡೆಯೋಣ, ನಡೆಯುತ್ತಲೇ ಇರೋಣ) ಎಂದು ಎರಡು ಶಬ್ದಗಳಲ್ಲಿ ಉತ್ತರಿಸಿದ್ದರು.

ಶುಕ್ರವಾರ ಅವರು ಮೈಸೂರು ವಿಭಾಗದ ಡಿಜಿಟಲ್ ಕಾರ್ಯಕರ್ತರ ಸಮ್ಮೇಳನಕ್ಕಾಗಿ ಮೈಸೂರಿಗೆ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳಿಗೆ ಎದುರಾದ ಅವರು, ಇತ್ತೀಚಿನ ವಿದ್ಯಮಾನಗಳಿಗೆ ಸ್ಪಷ್ಟೀಕರಣ ಕೊಡಲು ನಿರಾಕರಿಸಿ ಮಾರ್ಮಿಕವಾಗಿ ಮಾತನಾಡಿ ಸುಮ್ಮನಾದರು.

ʻʻಮಾಧ್ಯಮದವರು ನನ್ನನ್ನು 100 ಬಾರಿ ಮಾತಾಡಿಸಲು ಯತ್ನಿಸಿದ್ದಾರೆ. ನಾನು ಮಾತಾಡಿಲ್ಲ. ನಮ್ಮಲ್ಲಿ ಮಾತಾಡಲು ಪ್ರತಾಪ್ ಸಿಂಹ ಥರದವರು ಇದ್ದಾರೆ. ಅವರೇ ಮಾತಾಡಲಿ. ನಾನು ಮಾತಾಡಿ ಯಾರಿಗೆ ಯಾಕೆ ಪ್ರತಿ ಸ್ಪರ್ಧಿಯಾಗಲಿʼʼ ಎಂದು ಕೇಳಿದರು ಬಿ.ಎಲ್‌. ಸಂತೋಷ್.‌

ಡಿಜಿಟಲ್‌ ಕಾರ್ಯಕರ್ತರ ಸಮ್ಮೇಳನದಲ್ಲಿ ಸಂತೋಷ್‌ ಅವರು ಕಾರ್ಯಕರ್ತರಿಗೆ ಮಾಧ್ಯಮ ನಿರ್ವಹಣೆಯ ಪಾಠ ಮಾಡಿದರು. ಬಳಿಕ ಸಂಸದ ಪ್ರತಾಪ ಸಿಂಹ ಅವರು ಮೈಸೂರು ಜಿಲ್ಲೆಯಲ್ಲಿ ಅದರಲ್ಲೂ ಮುಖ್ಯವಾಗಿ ವರುಣ ಕ್ಷೇತ್ರದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ವಿವರಣೆ ನೀಡಿದರು.

ಬಿ.ಎಲ್‌. ಸಂತೋಷ್‌ ಅವರು ಆಡಿದ ಪ್ರತಿಸ್ಪರ್ಧಿಯ ಮಾತು ಯಾರ ಬಗ್ಗೆ ಎನ್ನುವುದು ನಿಗೂಢವಾಗಿದೆ. ಆದರೆ, ರಾಜ್ಯದ ಮುಖ್ಯಮಂತ್ರಿ ಹುದ್ದೆಗೆ ಬಿ.ಎಲ್‌. ಸಂತೋಷ್‌ ಮತ್ತು ಪ್ರಲ್ಹಾದ್‌ ಜೋಶಿ ಅವರು ಸ್ಪರ್ಧೆಯಲ್ಲಿದ್ದಾರೆ. ಅವರನ್ನು ಬಿಟ್ಟು ಬೇರೆಯವರಿಗೆ ಸಿಗುವುದಿಲ್ಲ ಎಂದು ಜೆಡಿಎಸ್‌ ನಾಯಕ ಎಚ್.ಡಿ ಕುಮಾರಸ್ವಾಮಿ ಅವರು ಹೇಳಿದ್ದರು. ಈ ಬಗ್ಗೆ ಬಿಜೆಪಿಯೊಳಗೂ ಚರ್ಚೆ ನಡೆದಿರುವ ಸಾಧ್ಯತೆಗಳಿವೆ. ಹಾಗಾಗಿ ಅವರ ಮಾತು ಗಮನ ಸೆಳೆದಿದೆ.

ಜಗದೀಶ್‌ ಶೆಟ್ಟರ್‌ ಸಂತೋಷ್‌ ಬಗ್ಗೆ ಹೇಳಿದ್ದೇನು?

ಕೆಲವು ದಿನಗಳ ಹಿಂದೆ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ್ದ ಜಗದೀಶ್‌ ಶೆಟ್ಟರ್‌ ಅವರು ಬಿ.ಎಲ್‌. ಸಂತೋಷ್‌ ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದರು. ತನಗೆ ಟಿಕೆಟ್‌ ತಪ್ಪಲು ಅವರೇ ಕಾರಣ ಎನ್ನುವಲ್ಲಿಂದ ರಾಜ್ಯದಲ್ಲಿ ಬಿಜೆಪಿ ಮುಳುಗಲು ಅವರೇ ಕಾರಣ ಎಂದು ಹೇಳಿದ್ದರು.

ನಳಿನ್‌ ಕುಮಾರ್‌ ಕಟೀಲ್‌, ಅಣ್ಣಾಮಲೈ ಅವರೆಲ್ಲ ಸಂತೋಷ್‌ ಅವರ ಜನಗಳು. ನಳಿನ್‌ ಕುಮಾರ್‌ ಕಟೀಲ್‌ ಕೆಲವು ತಿಂಗಳ ಹಿಂದೆಯೇ ಬಿಜೆಪಿಯ ಹಿರಿಯ ನಾಯಕರನ್ನು ತೆಗೆದುಹಾಕುವ ಬಗ್ಗೆ ಮಾತನಾಡಿದ್ದರು. ಒಂದೇ ಒಂದು ಚುನಾವಣೆ ಎದುರಿಸಿ ಗೊತ್ತಿಲ್ಲದ ಅಣ್ಣಾಮಲೈ ಚುನಾವಣೆ ಗೆಲ್ಲುವ ಬಗ್ಗೆ ನಮಗೆ ಪಾಠ ಹೇಳುತ್ತಾರೆ ಎಂದು ವ್ಯಂಗ್ಯ ವಾಡಿದ್ದರು.

ಇದನ್ನೂ ಓದಿ : Karnataka Elections 2023: ನನಗೆ ಟಿಕೆಟ್‌ ತಪ್ಪಿಸಿದ್ದು ಬಿ.ಎಲ್‌ ಸಂತೋಷ್‌, ಇವರಿಂದ್ಲೇ ಬಿಜೆಪಿ ಮುಳುಗೋದು; ಶೆಟ್ಟರ್‌ ಚಾರ್ಜ್‌ಶೀಟ್‌

Exit mobile version