ಧಾರವಾಡ: ಮಾಜಿ ಮುಖ್ಯಮಂತ್ರಿ, ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ, ಆರು ಬಾರಿ ಶಾಸಕರಾಗಿದ್ದ ಜಗದೀಶ್ ಶೆಟ್ಟರ್ ಅವರು ಹೈಕಮಾಂಡ್‌ಗೆ ಮತ್ತೊಂದು ಡೆಡ್‌ಲೈನ್ ಕೊಟ್ಟಿದ್ದಾರೆ!
ಧಾರವಾಡ ಸೆಂಟ್ರಲ್ ಶಾಸಕರಾಗಿರುವ ಜಗದೀಶ್ ಶೆಟ್ಟರ್ ಅವರಿಗೆ ಈ ಬಾರಿ ಟಿಕೆಟ್ ನಿರಾಕರಿಸಲಾಗಿತ್ತು. ಅವರನ್ನು ಸ್ವಯಂ ನಿವೃತ್ತಿ ಘೋಷಿಸುವಂತೆ ಹೈಕಮಾಂಡ್ ಸೂಚಿಸಿತ್ತು. ಆದರೆ, ನಿವೃತ್ತಿ ಸ್ವೀಕರಿಸಲು ಒಪ್ಪದ ಜಗದೀಶ್ ಶೆಟ್ಟರ್ ಅವರು ಹೈಕಮಾಂಡ್‌ಗೆ ಸಡ್ಡು ಹೊಡೆದಿದ್ದರು. ತನಗೇ ಟಿಕೆಟ್ ನೀಡುವ ಭರವಸೆಯೊಂದಿಗೆ ಹೈಕಮಾಂಡ್‌ಗೆ ಮಧ್ಯಾಹ್ನ 12 ಗಂಟೆ ಮತ್ತು ಸಂಜೆ 6.30ರ ಎರಡು ಗಡುವುಗಳನ್ನು ನೀಡಿದ್ದ ಶೆಟ್ಟರ್ ಅವರು ಈಗ ಅದನ್ನು ಇನ್ನೂ ಎರಡು ಗಂಟೆಗಳ ಕಾಲ ವಿಸ್ತರಿಸಿದ್ದಾರೆ.
ಶನಿವಾರ ಸಂಜೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾತ್ರಿ 8.30ಕ್ಕೆ ಅಂತಿಮ ತೀರ್ಮಾನವನ್ನು ಪ್ರಕಟಿಸುವುದಾಗಿ ಹೇಳಿದರು. ಯಾವ ಕಾರಣಕ್ಕೂ ಇನ್ನೊಂದು ಡೆಡ್‌ಲೈನ್ ನೀಡುವುದಿಲ್ಲ ಎಂದು ಘೋಷಿಸಿದರು.
ಶೆಟ್ಟರ್‌ಗೆ ಅವರಿಗೆ ಆಫರ್ ಬಂದಿದೆಯಾ?
ಶನಿವಾರ ಸಂಜೆ ಮಾತನಾಡಿದ ಜಗದೀಶ್ ಶೆಟ್ಟರ್ ತಮ್ಮ ಹಳೆ ಮಾತುಗಳನ್ನೆ ಪುನರಾವರ್ತಿಸಿದರು. ಮುಂದಿನ ಒಂದು ಅವಧಿಗೆ ತನಗೆ ಅವಕಾಶ ಕೊಡಲೇಬೇಕು. ಬಿಜೆಪಿ ತನಗೆ ಸ್ಪರ್ಧೆಗೆ ಅವಕಾಶ ನೀಡದೆ ಇದ್ದರೂ ತಾನು ಕಣಕ್ಕಿಳಿಯುವುದು ಖಚಿತ ಎಂದರು.
ಈ ನಡುವೆ ಹೈಕಮಾಂಡ್ ಜಗದೀಶ್ ಶೆಟ್ಟರ್ ಅವರ ಬದಲು ಅವರ ಕುಟುಂಬದ ಸದಸ್ಯರ ಸ್ಪರ್ಧೆಗೆ ಅವಕಾಶ ನೀಡುವ ಆಫರ್ ನೀಡಿದಂತೆ ಕಾಣುತ್ತಿದೆ. ನನ್ನನ್ನು ಬಿಟ್ಟು ಬೇರೆ ಯಾರಿಗೇ ಅವಕಾಶ ನೀಡಿದರೂ ನಾನು ಒಪ್ಪುವುದಿಲ್ಲ ಎಂದು ಶೆಟ್ಟರ್ ಸ್ಪಷ್ಟಪಡಿಸಿದರು. ಚುನಾವಣೆಯಲ್ಲಿ ನಾನೇ ಸ್ಪರ್ಧಿಸಬೇಕು, ನನ್ನ ಕುಟುಂಬದ ಬೇರೆ ಯಾರೋ ಸ್ಪರ್ಧಿಸುವುದೆಲ್ಲ ನಡೆಯಲ್ಲ. ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಶೆಟ್ಟರ್ ಹೇಳಿದರು.
ಏನು ಮಾಡಲಿದೆ ಹೈಕಮಾಂಡ್?
ಹೈಕಮಾಂಡ್ ಸ್ವಯಂನಿವೃತ್ತಿ ಪಡೆಯುವಂತೆ ಸೂಚನೆ ನೀಡಿದ ಮರುದಿನವೇ ಜಗದೀಶ್ ಶೆಟ್ಟರ್ ಅವರು ದಿಲ್ಲಿಗೆ ಹೋಗಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿದ್ದರು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಸಮ್ಮುಖದಲ್ಲಿ ಹಿರಿಯ ನಾಯಕರನ್ನೆಲ್ಲ ಭೇಟಿಯಾಗಿ ಮರಳಿದ್ದರು. ತಮ್ಮ ನಿಲುವುಗಳನ್ನು ಸ್ಪಷ್ಟಪಡಿಸಿದ್ದ ಶೆಟ್ಟರ್ ಅವರಿಗೆ ಒಂದೆರಡು ದಿನ ಕಾಯುವಂತೆ ಹೈಕಮಾಂಡ್ ಸೂಚಿಸಿತ್ತು. ಆದರೆ, ಎರಡು ದಿನ ಕಳೆದರೂ ಯಾವುದೇ ಧನಾತ್ಮಕ ತೀರ್ಮಾನವನ್ನು ಹೇಳಿರಲಿಲ್ಲ. ಎರಡನೇ ಪಟ್ಟಿ ಬಿಡುಗಡೆಯಾದರೂ ಅದರಲ್ಲಿ ಶೆಟ್ಟರ್ ಹೆಸರಿಲಿಲ್ಲ. ಇದೀಗ ಮೂರನೇ ಪಟ್ಟಿ ಯಾವುದೆ ಕ್ಷಣವಾದರೂ ಬಿಡುಗಡೆಯಾಗುವಂತಿದೆ. ಈ ಹಂತದಲ್ಲಿ ಶೆಟ್ಟರ್ ಒತ್ತಡ ತಂತ್ರ ಹೆಚ್ಚಾದಂತೆ ಕಂಡುಬರುತ್ತಿದೆ.
ರಾಜ್ಯದ ಹಲವು ನಾಯಕರು, ಕೇಂದ್ರದ ನಾಯಕರು ಶೆಟ್ಟರ್ ಅವರ ವಿಚಾರದಲ್ಲಿ ವರಿಷ್ಠರು ತಮ್ಮ ತೀರ್ಮಾನವನ್ನು ಹಿಂಪಡೆಯಬಹುದು ಎಂಬ ಸಲಹೆಯನ್ನು ನೀಡಿದ್ದಾರೆ ಎನ್ನಲಾಗಿದೆ. ಅದರೆ, ಒಂದೊಮ್ಮೆ ಶೆಟ್ಟರ್ ಅವರಿಗೆ ಟಿಕೆಟ್ ನೀಡಿದರೆ ಈಶ್ವರಪ್ಪ ಸೇರಿದಂತೆ ಇತರ ನಾಯಕರ ಮೇಲೂ ಅದು ಪರಿಣಾಮ ಬೀರಲಿದೆ ಎಂಬ ಕಾರಣಕ್ಕಾಗಿ ತೀರ್ಮಾನ ಬದಲಿಸುವ ಸಾಧ್ಯತೆಗಳು ಕಡಿಮೆ ಎನ್ನಲಾಗಿದೆ.
ಹೀಗಾಗಿ ಜಗದೀಶ್ ಶೆಟ್ಟರ್ ಅವರು ಬಿಜೆಪಿ ತ್ಯಜಿಸುವ ಅನಿವಾರ್ಯ ಎಂಬ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ. ಅವರು ಮುಂದೆ ಪಕ್ಷೇತರನಾಗಿ ಕಣಕ್ಕಿಳಿಯುವ ಸಾಧ್ಯತೆ ಒಂದೆಡೆಯಾದರೆ ಇನ್ನೊಂದೆಡೆ ಕಾಂಗ್ರೆಸ್‌ಗೆ ಸೇರ್ಪಡೆಯಾದರೂ ಅಚ್ಚರಿ ಇಲ್ಲ ಎಂಬ ಮಾತೂ ಕೇಳಿಬರುತ್ತಿದೆ.
ಇದನ್ನೂ ಓದಿ : Karnataka Elections 2023: ಜಗದೀಶ್ ಶೆಟ್ಟರ್‌ಗೆ ಟಿಕೆಟ್ ತಪ್ಪಲು ನಾನು ಕಾರಣ ಅಲ್ಲ; ಸಿಎಂ ಬಸವರಾಜ ಬೊಮ್ಮಾಯಿ