Site icon Vistara News

Karnataka Elections 2023: ಜಗದೀಶ್‌ ಶೆಟ್ಟರ್‌ಗೆ ಟಿಕೆಟ್‌ ತಪ್ಪಲು ನಾನು ಕಾರಣ ಅಲ್ಲ; ಸಿಎಂ ಬಸವರಾಜ ಬೊಮ್ಮಾಯಿ

CM Bommai in temple

#image_title

ಹುಬ್ಬಳ್ಳಿ: ರಾಜ್ಯದ ಮಾಜಿ ಮುಖ್ಯಮಂತ್ರಿ, ಧಾರವಾಡ ಸೆಂಟ್ರಲ್‌ ಶಾಸಕ ಜಗದೀಶ್‌ ಶೆಟ್ಟರ್‌ ಅವರಿಗೆ ಬಿಜೆಪಿ ಟಿಕೆಟ್‌ ಕೈ ತಪ್ಪಲು ನಾನು ಕಾರಣ ಅಲ್ಲ (Karnataka Elections 2023) ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಅವರು ಶನಿವಾರ ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಈ ಆರೋಪ ಶುದ್ಧ ಸುಳ್ಳು. ಇದರಲ್ಲಿ ಯಾವುದೇ ಹುರುಳಿಲ್ಲ. ಯಾರೂ ಈ ರೀತಿ ಹೇಳಬಾರದು. ಯಾಕೆಂದರೆ, ಶೆಟ್ಟರ್‌ ಅವರನ್ನು ಉಳಿಸಿಕೊಳ್ಳಲು ನಾವು ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ. ಹೇಳುವವರು ನೂರಾರು ಹೇಳುತ್ತಾರೆ. ಶೆಟ್ಟರ್ ಮತ್ತು ನಾವು ಆತ್ಮೀಯರು ಎಂದು ಹೇಳಿದರು.

ಜಗದೀಶ್ ಶೆಟ್ಟರ್ ಮನವೊಲಿಕೆ ಪ್ರಯತ್ನ

“ಜಗದೀಶ ಶೆಟ್ಟರ್ ಅವರ ಮನವೊಲಿಕೆಗೆ ಇಂದಿಗೂ ಪ್ರಯತ್ನ ನಡೆಯುತ್ತಿದ್ದು, ನಿನ್ನೆ ಧರ್ಮೇಂದ್ರ ಪ್ರಧಾನ ಅವರ ಬಳಿ ಚರ್ಚೆ ಮಾಡಲಾಗಿದೆ” ಎಂದು ಅವರು ತಿಳಿಸಿದರು.

ಜಗದೀಶ್ ಶೆಟ್ಟರ್ ಅವರನ್ನು ಉಳಿಸಿಕೊಳ್ಳುವ ವಿಶ್ವಾಸ

ʻʻಜಗದೀಶ್ ಶೆಟ್ಟರ್ ಅವರದ್ದು, ಜನಸಂಘ ಕಾಲದ ಮನೆತನ. ಬಿಜೆಪಿಗೆ ಅವರು ಅತ್ಯಂತ ನಿಷ್ಠರು.
ಉತ್ತರ ಕರ್ನಾಟಕ ಭಾಗಕ್ಕೆ ಅತ್ಯಂತ ಅವಶ್ಯಕವಾಗಿದ್ದಾರೆ. ಅತ್ಯಂತ ಅವಶ್ಯ ಇರೋ ನಾಯಕ.ಅವರನ್ನು ಉಳಿಸಿಕೊಳ್ಳಬೇಕೆಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಮಾತನಾಡಿದ್ದು, ಅವರನ್ನು ಉಳಿಸಿಕೊಳ್ಳುವ ವಿಶ್ವಾಸ ಇದೆʼʼ ಎಂದರು.

ವಿಧಾನಸಭಾ ಚುನಾವಣೆಯ ಟಿಕೆಟ್‌ ಘೋಷಣೆ ಬೆನ್ನಿಗೇ ಹೊತ್ತಿಕೊಂಡಿರುವ ಭಿನ್ನಮತದ ಬೆಂಕಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಸಹಜ. ಎರಡು ದಿನಗಳಲ್ಲಿ ಭಿನ್ನಮತದ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದರು.

ಶಾಸಕ ನೆಹರೂ ಓಲೇಕಾರ್ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಿ ಅವರು ಆರೋಪಗಳಿಗೆ ದಾಖಲೆ ಕೊಡಲಿ‌. ನೆಹರೂ ಒಲೆಕಾರ್ ಅವರಿಗೆ ಪ್ರಕರಣವೊಂದರಲ್ಲಿ ಅಪರಾಧ ಸಾಬೀತಾಗಿದೆ ಎಂದರು.

ಬಹುಮತದ ದೊರೆಯುವ ಆತ್ಮವಿಶ್ವಾಸ

ಇಂದು ಇಡೀ ದಿನ ಕ್ಷೇತ್ರದಲ್ಲಿ ಇರುವುದಾಗಿ ತಿಳಿಸಿದ ಅವರು, ರಾಜ್ಯದಲ್ಲಿ ಚುನಾಚಣೆ ಕಣ ಸಿದ್ದವಾಗಿದೆ. ಸಂಪೂರ್ಣ ಬಹುಮತ ದೊರೆಯಲಿದೆ ಎಂಬ ಆತ್ಮವಿಶ್ವಾಸ ನಮಗಿದೆ ಎಂದರು. ಉಳಿದ ಕ್ಷೇತ್ರಗಳಿಗೆ ಇನ್ನೆರಡು ದಿನಗಳಲ್ಲಿ ಕೇಂದ್ರ ಚುನಾವಣೆ ಸಮಿತಿ ತೀರ್ಮಾನ ಮಾಡಲಿದ್ದು, ಹನ್ನೆರಡು ಕ್ಷೇತ್ರಗಳ ಬಗ್ಗೆ ಚರ್ಚೆಯಾಗಿದೆ ಎಂದರು.

ಶಿಗ್ಗಾಂವಿಯಲ್ಲಿ ನಾಮಪತ್ರ ಸಲ್ಲಿಕೆ

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Elections 2023) ಶಿಗ್ಗಾಂವಿ ಮತ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ನಾಮಪತ್ರ (CM Bommai Nomination) ಸಲ್ಲಿಸಿದರು. ಶ್ರೀ ಸಿದ್ಧಾರೂಢ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸಣ್ಣ ಮೆರವಣಿಗೆಯಲ್ಲಿ ತಾಲೂಕು ಕಚೇರಿಗೆ ತೆರಳಿದ ಬಸವರಾಜ ಬೊಮ್ಮಾಯಿ ಅವರು ಅಲ್ಲಿ ತಹಸೀಲ್ದಾರ್‌ ಅವರಿಗೆ ನಾಮಪತ್ರ ಸಲ್ಲಿಸಿದರು.

ಬಿಜೆಪಿಯ ಮೊದಲ ಪಟ್ಟಿಯಲ್ಲಿ ಮೊದಲ ಹೆಸರಾಗಿ ಬಸವರಾಜ ಬೊಮ್ಮಾಯಿ ಅವರ ಹೆಸರನ್ನು ಪ್ರಕಟಿಸಲಾಗಿತ್ತು. ಶನಿವಾರ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದರೂ ಏಪ್ರಿಲ್‌ 19ರಂದು ದೊಡ್ಡ ಮಟ್ಟದ ರ‍್ಯಾಲಿ ಏರ್ಪಡಿಸಿ ಇನ್ನೊಂದು ಸುತ್ತು ನಾಮಪತ್ರ ಸಲ್ಲಿಸಲಿದ್ದಾರೆ ಸಿಎಂ ಬೊಮ್ಮಾಯಿ.

Exit mobile version