ಪರಶುರಾಮ್ ತಹಸೀಲ್ದಾರ್ ವಿಸ್ತಾರ ನ್ಯೂಸ್ ಹುಬ್ಬಳ್ಳಿ
ರಾಜ್ಯ ವಿಧಾನಸಬಾ ಚುನಾವಣೆಗೆ ದಿನಾಂಕ (Karnataka Elections 2023) ಘೋಷಣೆ ಆಗುತ್ತಿದ್ದಂತೆಯೇ ಬಿಜೆಪಿ ಟಿಕೆಟ್ ಫೈಟ್ ರೋಚಕತೆ ಪಡೆದುಕೊಳ್ಳುತ್ತಿದೆ. ಹುಬ್ಬಳ್ಳಿ- ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿರುವವರಿಗೆ ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ್ ಶೆಟ್ಟರ್ ಖಡಕ್ ತಿರುಗೇಟು ಕೊಟ್ಟಿದ್ದಾರೆ. ಚುನಾವಣಾ ಹೊಸ್ತಿಲಲ್ಲಿ ಒಳಹೊಡೆತ ಸಹಿಸಲ್ಲ ಎನ್ನುವ ಸ್ಟ್ರಾಂಗ್ ಮೆಸೇಜ್ ರವಾನಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಟಿಕೆಟ್ ಫೈಟ್ ತೀವ್ರ ಕುತೂಹಲ ಕೆರಳಿಸಿತ್ತು. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪ್ರತಿನಿಧಿಸುವ ಕ್ಷೇತ್ರದಲ್ಲಿ ಅಭ್ಯರ್ಥಿ ಬದಲಾವಣೆ ಆಗುತ್ತದೆ ಎನ್ನುವ ವದಂತಿ ಜೋರಾಗಿತ್ತು. ಅದಕ್ಕೆ ಪೂರಕ ಎಂಬಂತೆ ಶೆಟ್ಟರ್ ಅವರನ್ನು ಪ್ರಮುಖ ಕಾರ್ಯಕ್ರಮಗಳಿಂದ ದೂರ ಇಡುವ ಪ್ರಯತ್ನಗಳು ನಡೆದಿದ್ದವು.
ಬಿಜೆಪಿ ಟಿಕೆಟ್‌ಗಾಗಿ ಲಾಬಿ ನಡೆಸುತ್ತಿರುವ ಇನ್ನೊಂದು ಬಣ ಶೆಟ್ಟರ್ ಅವರನ್ನು ಮೂಲೆಗುಂಪು ಮಾಡುತ್ತಿದೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಆದರೆ, ಅದಕ್ಕೆಲ್ಲಾ ತಿರುಗೇಟು ಕೊಡುವ ಕೆಲಸವನ್ನು ಜಗದೀಶ್ ಶೆಟ್ಟರ್ ಮಾಡಿದ್ದಾರೆ. ಚುನಾವಣೆ ದಿನಾಂಕ ಘೋಷಣೆ ಆಗುತ್ತಿದಂತೆ ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿರುವವರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ. ಮುಂದಿನ ಅಭ್ಯರ್ಥಿ ನಾನೇ ಎಂದು ಪುನರುಚ್ಚರಿಸುವ ಮೂಲಕ ಬಿಜೆಪಿ ಟಿಕೆಟ್‌ಗಾಗಿ ಕಾಯ್ದು ಕುಳಿತವರಿಗೆ ಟಾಂಗ್ ಕೊಟ್ಟಿದ್ದಾರೆ.
ಜಗದೀಶ್ ಶೆಟ್ಟರ್ ಹೇಳಿದ್ದೇನು?
ʻʻನಾನು ಪದೇಪದೆ ಹೇಳಿದ್ದನ್ನೇ ಹೇಳವುದಿಲ್ಲ. ನಾನೂ ಈಗಾಗಲೇ ಹಲವು ಬಾರಿ ಹೇಳಿದ್ದೇನೆ. ಹಗಲೆಲ್ಲಾ ರಿಪೀಟ್ ಮಾಡಲು, ನಾನು ಸಣ್ಣ ವ್ಯಕ್ತಿ ಅಲ್ಲ. ಒಂದು ಸಾರಿ ಚುನಾವಣೆ ಸ್ಪರ್ಧೆಗೆ ಮಾಡುತ್ತೇನೆ ಅಂತ ಹೇಳಿದ್ಮೇಲೆ ಅದೇ ಫೈನಲ್. ರಾಷ್ಟ್ರಪತಿಗಳು ಬಂದಾಗ ಮತ್ತು ಮೋದಿ ಅವರ ಕಾರ್ಯಕ್ರಮದಲ್ಲಿ ನನ್ನನ್ನು ಕಡೆಗಣನೆ ಮಾಡಲಾಗಿತ್ತು ಅನ್ನೋದೆಲ್ಲಾ ಈಗ ಮುಗಿದ ವಿಚಾರ. ಅದೆಲ್ಲಾ ಆದ ಮೇಲೂ ಮತ್ತೆ ಪಕ್ಷ ನನಗೆ ಏನು ಗೌರವ ಕೊಡಬೇಕೋ ಅದನ್ನು ಕೊಡುತ್ತಿದೆʼʼ ಎಂದು ಜಗದೀಶ್ ಶೆಟ್ಟರ್ ಹೇಳಿದರು.
ʻʻಆಗಿದ್ದೆಲ್ಲಾ ಆಗಿದೆ, ಮೊನ್ನೆ ಅಮಿತ್ ಶಾ ಅವರೇ ನನಗೆ ಮೊದಲು ಮಾತನಾಡಲು ಅವಕಾಶ ಮಾಡಿಕೊಟ್ಟರು. ಪಕ್ಷದ ಸ್ಥಿತಿಗತಿ ಯಾವ ಕ್ಷೇತ್ರದಲ್ಲಿ ಏನೂ ಇದೆ ಎಂಬುದನ್ನು ನಾನು ವಿವರಿಸಿದ್ದೇನೆ. ಪಕ್ಷದ ವೇದಿಕೆಯಲ್ಲಿ ಏನೂ ವಿಚಾರ ಮಂಡಿಸಬೇಕೋ ಅದನ್ನೆಲ್ಲಾ ಮಾತನಾಡಿದ್ದೇನೆʼʼ ಎನ್ನುವ ಮೂಲಕ ತಾವು ಇನ್ನು ವಿರೋಧಿ ಬಣದ ಚಟುವಟಿಕೆ ಸಹಿಸುವುದಿಲ್ಲ ಎನ್ನುವ ಸೂಚನೆ ನೀಡಿದ್ದಾರೆ.
ಶೆಟ್ಟರ್ ವಿರುದ್ಧ ಆಕಾಂಕ್ಷಿಗಳು ಯಾರು?
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ ಸೆಂಟ್ರಲ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕಾಂಗ್ರೆಸ್ ತೊರೆದು ಪ್ರಲ್ಹಾದ್ ಜೋಶಿಯವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆ ಆಗಿರುವ ಡಾ. ಮಹೇಶ್ ನಾಲವಾಡ್ ಕೂಡ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ತೆರೆಮರೆಯಲ್ಲಿ ಇನ್ನೂ ಹಲವರು ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದರು. ಹೀಗಾಗಿ ತಮಗೆ ಟಿಕೆಟ್ ತಪ್ಪಿಸಲು ಹೊರಟವರ ವಿರುದ್ಧ ಅಮಿತ್ ಶಾ ಬಳಿ ದೂರು ನೀಡಿರುವುದಾಗಿ ಶೆಟ್ಟರ್ ಸುಳಿವು ನೀಡಿದ್ದಾರೆ. ಹೀಗಾಗಿ ಶೆಟ್ಟರ್ ಹೊಡೆತ ವಿರೋಧಿ ಬಣವನ್ನು ತಣ್ಣಗಾಗಿಸಿದೆ. ಒಳಪೆಟ್ಟು ಕೊಡುವುದರಲ್ಲಿ ಎಕ್ಸ್‌ಪರ್ಟ್ ಅನ್ನಿಸಿಕೊಂಡಿರುವ ಶೆಟ್ಟರ್ ವಿರೋಧಿಗಳು ಮುಂದೆ ಯಾವ ನಡೆ ಅನುಸರಿಸುತ್ತಾರೆ ಎಂದು ಕಾದು ನೋಡಬೇಕು.
ಇದನ್ನೂ ಓದಿ : Priyank Kharge: ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿಕೆ ಆಧರಿಸಿ ಸರ್ಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ 40% ಟೀಕೆ