ಬೆಂಗಳೂರು: ರಾಜ್ಯದಲ್ಲಿ ಚುನಾವಣೆ ಘೋಷಣೆಗೆ ವೇದಿಕೆ (Karnataka Election announced) ಸಿದ್ಧವಾಗಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮೂರೂ ಪಕ್ಷಗಳು ಈಗಾಗಲೇ ಚುನಾವಣೆಯನ್ನು ಎದುರಿಸಲು ಸಕಲ ರೀತಿಯಲ್ಲಿ ಸಜ್ಜಾಗಿವೆ. ಮೂರೂ ಪಕ್ಷಗಳು ರಾಜ್ಯಾದ್ಯಂತ ಒಂದು ಸುತ್ತಿನ ಪ್ರಚಾರ ಕಾರ್ಯವನ್ನೂ ಮುಗಿಸಿವೆ. ಆದರೆ, ಚುನಾವಣೆಯಲ್ಲಿ ಅತ್ಯಂತ ನಿರ್ಣಾಯಕವೆನಿಸುವ ಟಿಕೆಟ್ ಘೋಷಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಒಂದು ಹೆಜ್ಜೆ ಮುಂದಿವೆ. ಆಡಳಿತಾರೂಢ ಬಿಜೆಪಿ ಇನ್ನೂ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವ ಧೈರ್ಯವನ್ನು ತೋರಿಸಿಲ್ಲ.
ಸಾಮಾನ್ಯವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವಲ್ಲಿ ಮೀನ ಮೇಷ ಎಣಿಸುತ್ತಿದ್ದವು. ಬಿಜೆಪಿ ಅದರಲ್ಲಿ ಮುಂಚೂಣಿಯಲ್ಲಿತ್ತು. ಈ ಬಾರಿ ಇದು ತದ್ವಿರುದ್ಧವಾಗಿದೆ. ಜೆಡಿಎಸ್ ತನ್ನ ಮೊದಲ ಪಟ್ಟಿಯನ್ನು 2022ರ ಡಿಸೆಂಬರ್ 19ರಂದು ಬಿಡುಗಡೆ ಮಾಡಿತ್ತು. ಬರೋಬ್ಬರಿ 93 ಅಭ್ಯರ್ಥಿಗಳ ಹೆಸರು ಮೊದಲ ಲಿಸ್ಟ್‌ನಲ್ಲೇ ಇತ್ತು.
ಇನ್ನು ಕಾಂಗ್ರೆಸ್ ಆರಂಭಿಕ ಹಂತದಲ್ಲಿ ಸಂಕ್ರಾಂತಿಯ ಹೊತ್ತಿಗೆ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡುವುದಾಗಿ ಹೇಳಿತ್ತಾದರೂ ಯುಗಾದಿಯ ಹೊತ್ತಿಗೆ ಅದು ನಿಜವಾಯಿತು. ಮಾರ್ಚ್ 25ರಂದು ಪ್ರಕಟಿಸಿದ ಮೊದಲ ಪಟ್ಟಿಯಲ್ಲಿ 124 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಇದೆ. ಅಂದರೆ ಇನ್ನು ಬಾಕಿ ಉಳಿರುವುದು ಕೇವಲ 100 ಮಾತ್ರ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಜೆಡಿಎಸ್‌ನ್ನೂ ಮೀರಿಸಿದೆ. ಅಚ್ಚರಿ ಎಂದರೆ ಹಿಂದೆಲ್ಲ ಕಾಂಗ್ರೆಸ್‌ನ ಟಿಕೆಟ್ ಬಿಡುಗಡೆಯಾದಾಗ ಬೀದಿ ಹೋರಾಟಗಳು, ಸಂಘರ್ಷಗಳು ನಡೆಯುತ್ತಿದ್ದವು. ಆದರೆ ಈ ಬಾರಿ ಅದು ಕೆಲವೇ ಕ್ಷೇತ್ರಗಳಲ್ಲಿ ಸಣ್ಣಪುಟ್ಟ ಘಟನೆಗಳಿಗೆ ಸೀಮಿತವಾಗಿದೆ.
ಜೆಡಿಎಸ್ ತನ್ನ ಭದ್ರಕೋಟೆಯಾಗಿರುವ ಹಾಸನ ಮತ್ತು ಮಂಡ್ಯದಲ್ಲಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಇನ್ನೂ ಗಟ್ಟಿ ಮನಸು ಮಾಡಿಲ್ಲ, ಅದರಲ್ಲೂ ಹಾಸನ ಕ್ಷೇತ್ರದಲ್ಲಿ ಎಚ್.ಡಿ. ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡಬೇಕೋ ಅಥವಾ ಎಚ್.ಪಿ. ಸ್ವರೂಪ್ ಅವರಿಗೆ ಟಿಕೆಟ್ ನೀಡಬೇಕೋ ಎನ್ನುವ ವಿಚಾರದಲ್ಲಿ ಗೊಂದಲವಿದೆ. ಇದರಲ್ಲಿ ಸಣ್ಣ ಪ್ರಮಾಣದ ಎಡವಟ್ಟು ಸಂಭವಿಸಿದರೂ ದೇವೇಗೌಡರ ಕುಟುಂಬವೇ ಒಡೆದು ಹೋಗಬಹುದು ಎಂಬಷ್ಟು ಆತಂಕದ ವಾತಾವರಣವಿದೆ.
ಕಾಂಗ್ರೆಸ್ ಬಿಡುಗಡೆ ಮಾಡಿರುವ ಮೊದಲ ಪಟ್ಟಿ ಹಾಲಿ ಶಾಸಕರು ಮತ್ತು ಯಾವುದೇ ಗೊಂದಲವಿಲ್ಲದ ಒಬ್ಬರೇ ಅಭ್ಯರ್ಥಿ ಅರ್ಜಿ ಸಲ್ಲಿಸಿರುವ ಕ್ಷೇತ್ರಗಳು. ಹೀಗಾಗಿ ಹೆಚ್ಚು ಗೊಂದಲ ಕಂಡುಬರಲಿಲ್ಲ. ಇನ್ನು ಉಳಿದಿರುವುದು ಎರಡಕ್ಕಿಂತ ಹೆಚ್ಚು ಆಕಾಂಕ್ಷಿಗಳು ಇರುವ ಕಣಗಳು. ಇದರಲ್ಲಿ ಟಿಕೆಟ್ ಹಂಚಿಕೆ ಸ್ವಲ್ಪ ಸಂಕೀರ್ಣವಾಗಿದೆ ಎನ್ನಲಾಗಿದೆ. ಈ ನಡುವೆ ಕಾಂಗ್ರೆಸ್ ಈ ಹಿಂದೆ ಪಕ್ಷದಲ್ಲಿದ್ದು, ಬಿಜೆಪಿಗೆ ವಲಸೆ ಹೋಗಿ ಅಲ್ಲಿ ಮಂತ್ರಿಯಾಗಿರುವ ಕೆಲವು ನಾಯಕರ ಕ್ಷೇತ್ರಗಳನ್ನು ಖಾಲಿಬಿಟ್ಟು ಕಾಯುತ್ತಿದೆ ಎನ್ನಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಕೂಡಾ ಈ ವಿಚಾರವನ್ನು ಹೇಳಿದ್ದಾರೆ.
ಇತ್ತ ಬಿಜೆಪಿಗೆ ಟಿಕೆಟ್ ಫೈನಲ್ ಮಾಡುವುದು ಕಷ್ಟಕರವಾಗಿದೆ ಎಂದು ಹೇಳಲಾಗಿದೆ. ಟಿಕೆಟ್ ಹಂಚಿಕೆಗೆ ಯಾವ ನಿಯಮವನ್ನು ಅನುಸರಿಸಬೇಕು ಎನ್ನುವುದು ಸ್ಪಷ್ಟವಾಗಿಲ್ಲದೆ ಇರುವುದು ಗೊಂದಲಕ್ಕೆ ಕಾರಣವಾಗಿದೆ. ಹಿರಿಯ ಸಚಿವರಾದ ವಿ. ಸೋಮಣ್ಣ, ಕೆ.ಸಿ. ನಾರಾಯಣ ಗೌಡರು ಸೇರಿದಂತೆ ಹಲವರು ಅಡ್ಡ ಬೇಲಿಯಲ್ಲಿ ಕುಳಿತಿದಿದ್ದಾರೆ. ಈಗಾಗಲೇ ಕೆಲವು ಶಾಸಕರೇ ಪಕ್ಷ ಬಿಟ್ಟು ಹೋಗಿದ್ದಾರೆ. ಕೆಲವು ಎಂಎಲ್‌ಸಿಗಳು ಪಕ್ಷ ಬಿಟ್ಟು ಕಾಂಗ್ರೆಸ್‌ನಲ್ಲಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಹೀಗಿರುವಾಗ ಯಾರನ್ನು ನಂಬಬೇಕು, ಬಿಡಬೇಕು ಎನ್ನುವ ಗೊಂದಲವಿದೆ.
ಇನ್ನು ಬಿಜೆಪಿಯ 122 ಶಾಸಕರ ಪೈಕಿ ಎಂಟು ಸಚಿವರೂ ಸೇರಿದಂತೆ 35 ಮಂದಿಯ ರಿಪೋರ್ಟ್ ಕಾರ್ಡ್ ಅಷ್ಟೇನೂ ಚೆನ್ನಾಗಿಲ್ಲ ಎಂಬ ವರದಿಗಳಿವೆ. ಹೀಗಾಗಿ ಅವರಿಗೆ ಟಿಕೆಟ್ ನಿರಾಕರಣೆ ಮಾಡುವುದು, ಗುಜರಾತ್ ಮಾದರಿಯಲ್ಲಿ ಹಳಬರನ್ನು ಬಿಟ್ಟು ಹೊಸಬರಿಗೆ ಅವಕಾಶ ನೀಡುವುದು ಮೊದಲಾದ ಚರ್ಚೆಗಳಿವೆ. ಈ ವಿಚಾರಗಳೆಲ್ಲವೂ ರಾಜ್ಯ ಮಟ್ಟವನ್ನು ಮೀರಿ ಹೈಕಮಾಂಡ್ ಕೈಯಲ್ಲಿ ಇರುವುದರಿಂದ ಅಲ್ಲಿಂದ ಸೂಚನೆ ಬರುವವರೆಗೆ ಕಾಯುವುದು ಅನಿವಾರ್ಯವಾಗಿದೆ.
ಟಿಕೆಟ್ ಹಂಚಿಕೆಯ ಬಳಿಕ ಬಿಜೆಪಿಯಲ್ಲಿ ಅತಿ ಹೆಚ್ಚು ಗೊಂದಲ ಕಾಣಿಸಿಕೊಳ್ಳುವ ಸಾಧ್ಯತೆ ಕಾಣಿಸಿದೆ. ಕಾಂಗ್ರೆಸ್‌ನಲ್ಲಿ ಒಂದಷ್ಟು ಸಮನ್ವಯದ ಕೆಲಸ ನಡೆದಿದ್ದರೂ ಕೊನೆಯ ಹಂತದಲ್ಲಿ ಮೂಲಪ್ರವೃತ್ತಿ ಕಾಣಿಸಿಕೊಳ್ಳುವುದು ಖಚಿತ. ಜೆಡಿಎಸ್ ಪಾಲಿಗೆ ಮಾತ್ರ ಇದು ಪಕ್ಷವೇ ಒಡೆದು ಹೋಗಬಹುದು ಎಂಬಷ್ಟು ಆತಂಕಕಾರಿ ಸನ್ನಿವೇಶ. ಪಕ್ಷಗಳು ಇದನ್ನು ಹೇಗೆ ನಿಭಾಯಿಸುತ್ತವೆ ಎನ್ನುವುದು ಕುತೂಹಲಕಾರಿ ಸಂಗತಿ.
ಇದನ್ನೂ ಓದಿ : Karnataka Elections 2023 : 8 ಸಚಿವರ ಸಹಿತ 35 ಶಾಸಕರಿಗೆ ಸೋಲಿನ ಭೀತಿ, ಈ ಬಾರಿ ಬಿಜೆಪಿಯಲ್ಲಿ 50 ಹೊಸ ಮುಖ?