Site icon Vistara News

Karnataka Elections : ಅವನ್ಯಾರು, ಇವನ್ಯಾರು ಅನ್ನೋ ಡೈಲಾಗೆಲ್ಲ ಬೇಡ, ನೋಡ್ಕೊಂಡು ಮಾತಾಡಿದ್ರೆ ಒಳ್ಳೆಯದು; ಸಿದ್ದುಗೆ ಸೋಮಣ್ಣ ವಾರ್ನಿಂಗ್‌

siddaramaiah somanna

#image_title

ಚಾಮರಾಜನಗರ: ʻʻಅವರು ಈಗ ವಿರೋಧ ಪಕ್ಷದ ನಾಯಕರೂ ಅಲ್ಲ, ನಾನು ಮಂತ್ರಿನೂ ಅಲ್ಲ. ನಾನೂ ಅಭ್ಯರ್ಥಿ , ಅವರೂ ಅಭ್ಯರ್ಥಿ ಅಷ್ಟೆ. ನಾನು ಅವರನ್ನು ಮುತ್ಸದ್ದಿ ನಾಯಕ ಎಂದು ಭಾವಿಸಿದ್ದೆ. ಅವನ್ಯಾರು, ಇವನ್ಯಾರು ಅನ್ನೋ ಡೈಲಾಗ್ ಕಡಿಮೆ ಮಾಡಿದ್ರೆ ಒಳ್ಳೇದು. ರಾಜಕೀಯದಲ್ಲಿ ತಾಳ್ಮೆ ಮುಖ್ಯʼʼ- ಹೀಗೆಂದು ನಯವಾಗಿ ಎಚ್ಚರಿಕೆ ನೀಡಿದ್ದಾರೆ ವರುಣ ಮತ್ತು ಚಾಮರಾಜ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ. ಇದು ವರುಣ ಕ್ಷೇತ್ರದ (Karnataka Elections) ಕಾಂಗ್ರೆಸ್‌ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಮಣ್ಣ ಅವರು ನೀಡಿದ ತಿರುಗೇಟು.

ಸೋಮಣ್ಣ ಯಾರು? ಎನ್ನುವ ಪ್ರಶ್ನೆಗೆ ಉತ್ತರ ನೀಡಿರುವ ಅವರು, ʻʻ2006ರ ಚಾಮುಂಡೇಶ್ವರಿ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರಿಗೋಸ್ಕರ ಒದೆ ತಿಂದಿದ್ದೇನೆ. ಬರಿಮೈಯಲ್ಲಿ ದೇವಾಲಪುರದಿಂದ ಮೈಸೂರಿಗೆ ಹೋಗಿದ್ದೇನೆ. ನನ್ನ ಕಾರಿನ ಗ್ಲಾಸ್ ಒಡೆದಿದ್ದರು, ಪ್ಯಾಂಟ್ ಹರಿದು ಹಾಕಿದ್ದರು. ಆವತ್ತು ನನ್ನ ಸಮಾಜವನ್ನು ಎದುರು ಹಾಕಿಕೊಂಡು ಅವರುಗೋಸ್ಕರ ಕೆಲ್ಸ ಮಾಡಿದ್ದೆ. ಇದೆಲ್ಲಾ ಸಿದ್ದರಾಮಯ್ಯ ಸಾಹೇಬರ ತಲೇಲಿ ಇಲ್ಲ. ನಾನು ಅವರನ್ನು ಸಾಹೇಬ್ರೆ ಅಂತೀನಿ, ಅವರು ಏಕ ವಚನದಲ್ಲಿ ಮಾತನಾಡ್ತಾರೆ. ಇದೆ ನನಗೂ ಅವರಿಗು ಇರೋ ವ್ಯತ್ಯಾಸʼʼ ಎಂದು ಹೇಳಿದ್ದಾರೆ ಸೋಮಣ್ಣ.

ʻʻನಾನು ವರುಣ ಕ್ಷೇತ್ರದಲ್ಲಿ ಸ್ಪರ್ಧೆ ಮಾಡ್ತಿರೋದು ವಿಧಿನಿಯಮ. ಎಲ್ಲ ವಿಧಿ ನಿಯಮ ಅನ್ಸುತ್ತೆ, ಯಾರ ಬಾಯಲ್ಲಿ ಏನು ಹೇಳ್ಬೇಕೋ ಅದನ್ನು ಹೇಳಿಸ್ತಿದೆʼʼ ಎಂದು ಹೇಳಿದ ಸೋಮಣ್ಣ, ಇದು ನನಗೆ ಪಕ್ಷ ಕೊಟ್ಟ ಟಾಸ್ಕ್‌ ಇದು. ಸಿದ್ದರಾಮಯ್ಯ ಅವರನ್ನು ಎದುರುಹಾಕಿಕೊಳ್ಳಬೇಕು ಎಂದು ಬಂದವನಲ್ಲ ಎಂದರು.

ಇಲ್ಲಿ ಯಾರೂ ಶಾಶ್ವತರಲ್ಲ

ʻʻಇಲ್ಲಿ ಯಾರೂ ಶಾಶ್ವತರಲ್ಲ, ಒಂದಲ್ಲ ಒಂದು ದಿನ ನಾವೆಲ್ಲ ಹೋಗಲೇಬೇಕು. ಅವನ್ಯಾರು, ಇವನ್ಯಾರು ಅನ್ನೋ ಡೈಲಾಗ್ ನ ಸ್ವಲ್ಪ ಕಡಿಮೆ ಮಾಡ್ಕೋಬೇಕು. ಅವರು ಮನಸ್ಥಿತಿ ಸರಿ ಮಾಡ್ಕೋಬೇಕು. ಗಾಂಭೀರ್ಯತೆಯಿಂದ ಹೆಜ್ಜೆ ಹಾಕಬೇಕು ಅಂತ ಮಾತ್ರ ಹೇಳ್ತೀನಿʼʼ ಎಂದು ಚಾಮರಾಜನಗರದಲ್ಲಿ ಹೇಳಿದರು ಸೋಮಣ್ಣ.

ʻʻಈಗಲೂ ಯಾವುದೇ ಹಳ್ಳಿಗೆ ಹೋದ್ರೆ ನಾನು ನಾಲ್ಕು ಜನರ ಹೆಸರು ಹೇಳ್ತೀನಿ. ಆ ಮಟ್ಟಿಗೆ ನನಗೆ ಸಂಪರ್ಕ ಇದೆʼʼ ಎಂದು ಸೋಮಣ್ಣ ಹೇಳಿಕೊಂಡರು. ಮೈಸೂರು, ಚಾಮರಾಜ ನಗರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಂದೇ ರೀತಿ ಅಭಿವೃದ್ಧಿ ಆಗಬೇಕಾಗಿತ್ತು. ಆದರೆ, ಏನಾಗಿದೆʼʼ ಎಂದು ಸೋಮಣ್ಣ ಪ್ರಶ್ನಿಸಿದರು.

ಸಿದ್ದರಾಮಯ್ಯ ಸೋಲಿಸಲು ಕೈಜೋಡಿಸಿದ ಬಿಎಸ್‌ಪಿ

ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಬಿಜೆಪಿ- ಜೆಡಿಎಸ್ ಜತೆ ಬಿಎಸ್ಪಿ ಕೂಡಾ ಕೈಜೋಡಿಸಿದೆ. ಬಿ.ಎಸ್.ಪಿ. ರಾಜ್ಯಾಧ್ಯಕ್ಷ ಡಾ. ಎಂ. ಕೃಷ್ಣಮೂರ್ತಿ ಅವರು ಕೊನೇ ಕ್ಷಣದಲ್ಲಿ ವರುಣ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

ಕ್ಷೇತ್ರದಲ್ಲಿರುವ ಸುಮಾರು 60 ಸಾವಿರಕ್ಕೂ ಅಧಿಕವಿರುವ ದಲಿತ ಮತದಾರರನ್ನು ಟಾರ್ಗೆಟ್‌ ಮಾಡಿಕೊಂಡು ಬಿಎಸ್‌ಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.
ಕಳೆದ ಮೂರು ಅವಧಿಯಲ್ಲೂ ಕಾಂಗ್ರೆಸ್‌ಗೆ ಈ ಕ್ಷೇತ್ರದಲ್ಲಿ ದಲಿತ ವರ್ಗ ಬೆನ್ನೆಲುಬಾಗಿದೆ. ಹೀಗಾಗಿ ಈ ಬಾರಿ ದಲಿತ ಮತಗಳು ಕಾಂಗ್ರೆಸ್ ನತ್ತ ಕ್ರೋಢೀಕರಣವಾಗದಂತೆ ತಡೆಯಲು ಬಿ.ಎಸ್.ಪಿ. ರಾಜ್ಯಾಧ್ಯಕ್ಷರು ಸ್ವತಃ ಕಣಕ್ಕಿಳಿದಿದ್ದಾರೆ ಎನ್ನಲಾಗಿದೆ.
ಜೆಡಿಎಸ್ ಈಗಾಗಲೇ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಡಾ. ಭಾರತಿ ಶಂಕರ್ ಅವರನ್ನು ಕಣಕ್ಕಿಳಿಸಿದೆ. ಬಿಎಸ್ಪಿ-ಜೆಡಿಎಸ್ ನಿಂದ ಒಂದೇ ಸಮುದಾಯದ ಅಭ್ಯರ್ಥಿಗಳು ಕಣಕ್ಕೆ ಇಳಿದಿರುವುದು ಸಿದ್ದು ಮೇಲೆ ಯಾವ ಪರಿಣಾಮ ಬೀರಲಿದೆ ಎಂದು ಕಾದು ನೋಡಬೇಕು.

ಇದನ್ನೂ ಓದಿ : Karnataka Elections 2023 : ಸಿದ್ದರಾಮಯ್ಯ ಸ್ಪರ್ಧಾ ಕಣ ವರುಣದ ಅಖಾಡಕ್ಕೆ ಎಂಟ್ರಿ ಕೊಡಲಿದ್ದಾರೆ ಬಿ.ವೈ ವಿಜಯೇಂದ್ರ

Exit mobile version