Site icon Vistara News

Karnataka Elections 2023 : ಶುರುವಾಗಲಿದೆ ಮೆಗಾ ರ‍್ಯಾಲಿಗಳ ಅಬ್ಬರ; ವಾರದಲ್ಲಿ ಅಮಿತ್‌ ಶಾ, ರಾಹುಲ್‌ ಗಾಂಧಿ, ನರೇಂದ್ರ ಮೋದಿ ಪ್ರಚಾರ

Amit Shah Rahul Gandi Narendra Modi

#image_title

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ (Karnataka Elections 2023) ನಾಮಪತ್ರ ಸಲ್ಲಿಕೆಯ ಭರಾಟೆ ಅಂತ್ಯಗೊಳ್ಳುತ್ತಿದ್ದಂತೆಯೇ ಚುನಾವಣೆಯ ಮೆಗಾರ‍್ಯಾಲಿಗಳ ಅಬ್ಬರ ಶುರುವಾಗಲಿದೆ. ಅದರಲ್ಲೂ ಮುಖ್ಯವಾಗಿ ಕೇಂದ್ರ ನಾಯಕರ ಆಗಮನಕ್ಕೆ ಆಗಲೇ ಸಿದ್ಧತೆಗಳು ಜೋರಾಗಿ ನಡೆದಿವೆ. ಗೃಹ ಸಚಿವ ಅಮಿತ್‌ ಶಾ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಟೂರ್‌ ಪ್ಲ್ಯಾನ್‌ಗಳು ಈಗಾಗಲೇ ರೆಡಿಯಾಗಿದ್ದರೆ ಇನ್ನೊಂದು ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೂ ರಾಜ್ಯಕ್ಕೆ ಲಗ್ಗೆ ಇಡಲಿದ್ದಾರೆ. ಈಗಾಗಲೇ ಮೂರೂ ಪಕ್ಷಗಳು ಸ್ಟಾರ್‌ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅವರೆಲ್ಲರೂ ಹಂತ ಹಂತವಾಗಿ, ರಾಜ್ಯದ ಬೇರೆ ಬೇರೆ ಭಾಗಗಳನ್ನು ಆಕ್ರಮಿಸಿಕೊಳ್ಳಲಿದ್ದಾರೆ.

ನಾಳೆಯೇ ಬರ್ತಾರೆ ಅಮಿತ್‌ ಶಾ

ಚುನಾವಣಾ ಚಾಣಕ್ಯ ಎಂದೇ ಹೆಸರಾದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಏಪ್ರಿಲ್‌ 21 ಮತ್ತು 22ರಂದು ಬೆಂಗಳೂರಿನಲ್ಲಿ ಇರಲಿದ್ದಾರೆ. ಏಪ್ರಿಲ್‌ 21ರಂದು ಬೆಂಗಳೂರಿಗೆ ಆಗಮಿಸುವ ಅವರು ತಾಜ್‌ ವೆಸ್ಟ್‌ ಎಂಡ್‌ನಲ್ಲಿ ತಂಗುವರು. ಅಂದು ರಾತ್ರಿಯಿಂದಲೇ ವಿವಿಧ ಹಂತಗಳ ಚುನಾವಣಾ ಸಿದ್ಧತಾ ಮೀಟಿಂಗ್‌ಗಳನ್ನು ನಡೆಸಲಿರುವ ಅವರು, ಏಪ್ರಿಲ್‌ 22ರಂದು ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಂದೇ ಸಂಜೆ ದೇವನಹಳ್ಳಿಯಲ್ಲಿ ನಡೆಯುವ ರೋಡ್‌ ಶೋನಲ್ಲಿ ಭಾಗವಹಿಸುತ್ತಾರೆ. ಅಮಿತ್‌ ಶಾ ಅವರು ಏಪ್ರಿಲ್‌ 24 ಮತ್ತು 25ರಂದು ಮರಳಿ ರಾಜ್ಯಕ್ಕೆ ಬರುವ ಕಾರ್ಯಕ್ರಮವಿದೆ. ಆಗ ನಾನಾ ಕಡೆಗಳಲ್ಲಿ ರೋಡ್‌ ಶೋ ಮತ್ತು ರ‍್ಯಾಲಿಯಲ್ಲಿ ಭಾಗವಹಿಸುವರು ಎಂದು ತಿಳಿದುಬಂದಿದೆ.

ರಾಜ್ಯಕ್ಕೆ ಮತ್ತೊಮ್ಮೆ ರಾಹುಲ್ ಗಾಂಧಿ

ಈ ವಾರದ ಆರಂಭದಲ್ಲಿ ಕೋಲಾರ, ಬೀದರ್‌ನಲ್ಲಿ ಭರ್ಜರಿ ಪ್ರಚಾರ ಮಾಡಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಏಪ್ರಿಲ್‌ 23ರಂದು ಮರಳಿ ರಾಜ್ಯಕ್ಕೆ ಬರಲಿದ್ದಾರೆ. ಅವರು ಏಪ್ರಿಲ್‌ 23ರಂದು ವಿಜಯಪುರಕ್ಕೆ ಆಗಮಿಸಲಿದ್ದು, ಆ ಭಾಗದಲ್ಲಿ ಪ್ರಚಾರ ಮಾಡಲಿದ್ದಾರೆ.

ಕೋಲಾರ ಸಮಾವೇಶದಲ್ಲಿ ಅಬ್ಬರಿಸಿದ್ದ ರಾಹುಲ್ ಗಾಂಧಿ ಅವರು ಬಾಲ್ಕಿ, ಮತ್ತು ಹುಮ್ನಾಬಾದ್ ನಲ್ಲಿ ಬಿರುಸಿನ ಪ್ರಚಾರ ನಡೆಸಿ ತೆರಳಿದ್ದರು. ಇದೀಗ ಮತ್ತೊಮ್ಮೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಹುಲ್ ಮತ ಬೇಟೆ ನಡೆಸಲಿದ್ದಾರೆ.

ಮೇ 28ಕ್ಕೆ ರಾಜ್ಯಕ್ಕೆ ಎಂಟ್ರಿ ಕೊಡ್ತಾರಾ ಮೋದಿ?

ರಾಜ್ಯದಲ್ಲಿ ಚುನಾವಣಾ ನಾಮಪತ್ರ ಪ್ರಕ್ರಿಯೆ ಮುಕ್ತಾಯಗೊಂಡ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರ ಆರಂಭಿಸಲಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ. ಒಂದು ಮೂಲದ ಪ್ರಕಾರ, ಏಪ್ರಿಲ್‌ 28ಕ್ಕೆ ಮೋದಿ ಅವರು ರಾಜ್ಯಕ್ಕೆ ಚುನಾವಣಾ ಪ್ರಚಾರದ ಎಂಟ್ರಿ ಕೊಡಲಿದ್ದಾರೆ. ಒಂದೇ ದಿನದಲ್ಲಿ ಅವರು ಮೂರು ಕಡೆ ರೋಡ್ ಶೋ ನಡೆಸಲಿದ್ದಾರೆ.

ಮೇ 10ರ ಚುನಾವಣೆಗೆ ಮುನ್ನ ಅವರು ಆರು ಬಾರಿ ರಾಜ್ಯಕ್ಕೆ ಆಗಮಿಸಲಿದ್ದು, ಒಂದು ದಿನಕ್ಕೆ ಮೂರರಂತೆ ಆರು ರ‍್ಯಾಲಿಗಳಲ್ಲಿ ಭಾಗವಹಿಸುವರು. ಅಂದರೆ ಒಟ್ಟು 18 ರ‍್ಯಾಲಿಗಳನ್ನು ಬಿಜೆಪಿ ಪ್ಲ್ಯಾನ್‌ ಮಾಡಲಿದೆ.

ಮದ್ಯ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ ಕರ್ನಾಟಕ,ಕಲ್ಯಾಣ ಕರ್ನಾಟಕ, ಹಾಗೂ ಬೆಂಗಳೂರು ವಲಯದಲ್ಲಿ ಮೋದಿ ಅವರು ಮಾಡಲಿರುವ ರೋಡ್ ಶೋ ಮತ್ತು ರ‍್ಯಾಲಿಗಳು 224 ಕ್ಷೇತ್ರಗಳಲ್ಲೂ ಪರಿಣಾಮ ಬೀರುವಂತೆ ಪ್ಲ್ಯಾನ್‌ ಮಾಡಲಾಗುತ್ತಿದೆ.

ಇದರ ಜತೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೂ ಆಗಮಿಸಲಿದ್ದು, ಅವರನ್ನು ಒಕ್ಕಲಿಗರೇ ಅಧಿಕವಾಗಿರುವ ಹಳೆ ಮೈಸೂರು ಭಾಗದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಸಲು ಬಿಜೆಪಿ ಪ್ಲ್ಯಾನ್‌ ಮಾಡಿದೆ. ಕಿತ್ತೂರು ಕರ್ನಾಟಕದಲ್ಲಿ ಸ್ಮೃತಿ ಇರಾನಿ ಪ್ರವಾಸ ಮಾಡಿಸಲು ರಾಜ್ಯ ನಾಯಕರು ಸಿದ್ಧತೆ ನಡೆಸಿದ್ದಾರೆ. ಇದರ ಜತೆಗೆ ರಾಜ್ಯ ನಾಯಕರ ಪ್ರವಾಸವೂ ಇರುತ್ತದೆ.

80 ಕ್ಷೇತ್ರಗಳಿಗೆ ಚುನಾವಣಾ ಉಸ್ತುವಾರಿ

ಇದರ ನಡುವೆ, ಇತರೆ ರಾಜ್ಯಗಳಿಂದ ವಿಧಾನ ಸಭಾ ಚುನಾವಣಾ ಉಸ್ತುವಾರಿ ನೋಡಿಕೊಳ್ಳಲು ಬಿಜೆಪಿ ನಾಯಕರ ದಂಡೇ ಆಗಮಿಸಲಿದೆ. 80ಕ್ಕೂ ಅಧಿಕ ಮುಖಂಡರು ರಾಜ್ಯಕ್ಕೆ ಆಗಮಿಸಲಿದ್ದು, ಪ್ರಮುಖ ವಿಧಾನ ಸಭಾ ಕ್ಷೇತ್ರಗಳ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ದೆಹಲಿ, ಗುಜರಾತ್, ಮಧ್ಯ ಪ್ರದೇಶ, ಮಹಾರಾಷ್ಟ್ರ ಮತ್ತು ಗೋವಾದಿಂದ ಆಗಮಿಸುವ ತಂಡಗಳು ಬಹಿರಂಗ ಪ್ರಚಾರ ಮುಗಿಯುವವರೆಗೂ ಇಲ್ಲೇ ಠಿಕಾಣಿ ಹೂಡಲಿವೆ.

ಇದನ್ನೂ ಓದಿ : Karnataka Elections : ಏಪ್ರಿಲ್‌ 24ರ ನಂತರವೇ ರಾಜ್ಯಕ್ಕೆ ಮೋದಿ, ಮಿಲಿಟರಿ ಹೋಟೆಲ್‌ನಿಂದಲೇ ಬಿಜೆಪಿ ಪ್ರಚಾರ ಆರಂಭ!

Exit mobile version