ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೊಮ್ಮಗ ಧವನ್ ರಾಕೇಶ್ ಈಗ ಸ್ಟಾರ್ ಅಟ್ರಾಕ್ಷನ್ ಪಡೆದುಕೊಂಡಿದ್ದಾರೆ. ಮಂಗಳವಾರ ಸಿದ್ದರಾಮಯ್ಯ ಅವರ ಜತೆ ವಿಮಾನದಿಂದ ಇಳಿದ ಬಳಿಕ ಎಲ್ಲರ ಕಣ್ಣು ಈ 17 ವರ್ಷದ ಹುಡುಗನ ಮೇಲೆ ಬಿದ್ದಿದೆ. ಹೊರಗಡೆಯ ಆಕರ್ಷಣೆ ಒಂದಾದರೆ ಸಿದ್ದರಾಮಯ್ಯ ಅವರ ಊರಾದ ಸಿದ್ದರಾಮನ ಹುಂಡಿಯಲ್ಲಂತೂ ಜನ ಹುಚ್ಚೆದಿದ್ದಾರೆ.
ಧವನ್ ರಾಕೇಶ್ ಮಂಗಳವಾರ ರಾತ್ರಿ ಸಿದ್ದರಾಮನ ಹುಂಡಿಯ ಮನೆಯಲ್ಲಿ ಉಳಿದಿದ್ದು, ಬೆಳಗ್ಗೆ ಎದ್ದು ನೋಡಿದರೆ ಮನೆಯ ಮುಂದೆ ಭಾರಿ ಜನಸಂದಣಿಯೇ ನೆರೆದಿದೆ. ಅವರೆಲ್ಲರಿಗೆ ಸಿದ್ದರಾಮಯ್ಯ ಅವರಿಗಿಂತಲೂ ಧವನ್ ರಾಕೇಶ್ ಅವರೇ ಆಕರ್ಷಣೆ. ವಸ್ತುಶಃ ಮನೆಗೆ ಮುತ್ತಿಗೆ ಹಾಕಿದ ಜನರು ಒಳಗೆ ನುಗ್ಗುವುದಕ್ಕೇ ಮುಂದಾದರು.
ಈ ಹಂತದಲ್ಲಿ ಧವನ್ ರಾಕೇಶ್ ಮನೆಯಿಂದ ಹಜಾರಕ್ಕೆ ಬರುತ್ತಿದ್ದಂತೆಯೇ ಊರಿನ ಜನರು ಅವರ ಜತೆಗೆ ಫೋಟೊ ಕ್ಲಿಕ್ಕಿಸಿಕೊಳ್ಳಲು ನಾ ಮುಂದು ತಾಮುಂದು ಎಂದು ಜಗ್ಗಾಡಿದರು. ಎಲ್ಲರ ಜತೆಗೆ ಅನುಭವಿಯಂತೆ ಮಾತನಾಡಿದ ಧವನ್ ಅದೇ ಹೊತ್ತಿಗೆ ಫೋಟೊ ತೆಗೆಸಿಕೊಳ್ಳುವಾಗ ಚೇಷ್ಟೆಗಳಿಂದಲೂ ಗಮನ ಸೆಳೆದರು. ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತಾ, ಜೋಕ್ ಮಾಡುತ್ತಾ ಧವನ್ ಎಲ್ಲರ ಜತೆಗೆ ಚೆನ್ನಾಗಿ ಬೆರೆತರು.
ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ, ಸೊಸೆ ಸ್ಮಿತಾ ರಾಕೇಶ್, ಮೊಮ್ಮಗ ಧವನ್ ರಾಕೇಶ್ ಅವರನ್ನೂ ಗ್ರಾಮಸ್ಥರು ಸುತ್ತುವರಿದರು. ಸಿದ್ದರಾಮಯ್ಯ ಕುಟುಂಬಸ್ಥರು ಕೂಡಾ ಊರಿನ ಜನರೊಂದಿಗೆ ಖುಷಿಯಿಂದ ಮಾತನಾಡಿದರು.
ಈ ನಡುವೆ ವಿಸ್ತಾರ ನ್ಯೂಸ್ ಜತೆಗೂ ಧವನ್ ರಾಕೇಶ್ ಅವರು ಮಾತನಾಡಿದರು.
ತಾತನೇ ನನಗೆ ಸ್ಫೂರ್ತಿ, ಮುಂದೆ ರಾಜಕೀಯಕ್ಕೆ ಬರುತ್ತೇನೆ
ಮನೆಯಲ್ಲಿ ವಿಸ್ತಾರ ನ್ಯೂಸ್‌ಗೆ ಜತೆ ಮಾತನಾಡಿದ ಧವನ್ ರಾಕೇಶ್ ಅವರು, ತಾತನೇ ನನಗೆ ಸ್ಫೂರ್ತಿ, ಮುಂದೆ ರಾಜಕೀಯಕ್ಕೆ ಬರುತ್ತೇನೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರ ಜತೆಗಿನ ಒಡನಾಟದ ಬಗ್ಗೆ ಮಾತನಾಡಿದ ಧವನ್ ಅವರು, ʻʻತಾತನೊಂದಿಗೆ ಸಂವಿಧಾನ, ಕಾನೂನು ಬಗ್ಗೆ ಮಾತನಾಡುತ್ತೇನೆ. ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ತುಂಬಾ ಹೇಳುತ್ತಿರುತ್ತಾರೆʼʼ ಎಂದು ಧವನ್ ಹೇಳಿದರು.
ರಾಜಕೀಯಕ್ಕೆ ಬರುತ್ತೇನೆ ಎಂದ ಧವನ್
17 ವರ್ಷದ ಧವನ್ ಈಗಲೇ ರಾಜಕೀಯದ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಸಿದ್ದರಾಮಯ್ಯ ಅವರ ಹಿರಿಯ ಪುತ್ರ ರಾಕೇಶ್ ಅವರ ಪುತ್ರನಾಗಿರುವ ಧವನ್, ʻʻನಾನು ಸ್ವ ಇಚ್ಛೆಯಿಂದ ರಾಜಕಾರಣಕ್ಕೆ ಬರುತ್ತಿದ್ದೇನೆ. ಈ ಬಾರಿಯೂ ತಾತನ ಪತವಾಗಿ ಪ್ರಚಾರ ಮಾಡುತ್ತೇನೆ. ನಾಮಪತ್ರ ಸಲ್ಲಿಕೆ ವೇಳೆ ಕೂಡ ಭಾಗವಹಿಸುತ್ತೇನೆʼʼ ಎಂದರು.
ʻʻಮೊದಲಿನಿಂದಲೂ ನನಗೆ ರಾಜಕೀಯ ಅಂದ್ರೆ ಬಹಳ ಆಸಕ್ತಿ. ತಂದೆ ರಾಕೇಶ್ ಮನೆಯಲ್ಲಿ ರಾಜಕೀಯದ ಬಗ್ಗೆ ಮಾತನಾಡುವಾಗ ಆಸಕ್ತಿಯಿಂದ ಕೇಳುತ್ತಿದ್ದೆ. ನನ್ನ ತಂದೆಯನ್ನು ಸದಾ ಮಿಸ್ ಮಾಡಿಕೊಳ್ಳುತ್ತಿದ್ದೇನೆʼʼ ಎಂದರು ಧವನ್.
25 ವರ್ಷ ತುಂಬಿದ ಬಳಿಕವೇ ರಾಜಕೀಯ
ʻʻʻನನಗೆ 25 ವರ್ಷ ತುಂಬಲಿ. ಆಗ ಚುನಾವಣೆ, ರಾಜಕೀಯ ನೋಡೋಣ. ನಂತರ ಅದರ ಬಗ್ಗೆ ಚರ್ಚೆ ಮಾಡೋಣ ಈಗ ಬೇಡ ಎಂದು ಎಲ್ಲರೂ ಹೇಳಿದ್ದಾರೆ. ʻʻತಾತ (ಸಿದ್ದರಾಮಯ್ಯ) ಹಾಗೂ ಚಿಕ್ಕಪ್ಪ (ಡಾ. ಯತೀಂದ್ರ) ಅವರು ಮೊದಲು ಓದುವಂತೆ ಹೇಳಿದ್ದಾರೆʼʼ ಎಂದರು.
ʻʻತಾತನಂತೆ ನಾನೂ ಕಾನೂನು ಪದವಿ ಮಾಡುತ್ತೇನೆ. ತಾತ ನನಗೆ ಸಂವಿಧಾನದ ಬಗ್ಗೆ ಹೆಚ್ಚು ಹೇಳಿಕೊಡುತ್ತಿದ್ದಾರೆʼʼ ಎಂದು ವಿವರಿಸಿದರು.
ಬಾಹುಬಲಿ ಸಿನಿಮಾಗೆ ಕರೆದುಕೊಂಡು ಹೋದ ಸಿದ್ದರಾಮಯ್ಯ!ಈ ನಡುವೆ ಧವನ್ ರಾಕೇಶ್ ಅವರು ಕುತೂಹಲಕಾರಿಯಾದ ಇನ್ನೊಂದು ಮಾಹಿತಿ ಬಿಚ್ಚಿಟ್ಟಿದ್ದಾರೆ. ಅದೇನೆಂದರೆ ಸಿದ್ದರಾಮಯ್ಯ ಅವರು ಮೊಮ್ಮಗನನ್ನು ಸಿನಿಮಾಗೆ ಕರೆದುಕೊಂಡು ಹೋಗಿದ್ದು! ʻʻಕೆಲವು ವರ್ಷಗಳ ಹಿಂದೆ ನಾನು ಬಾಹುಬಲಿ ಸಿನಿಮಾ ನೋಡಬೇಕು ಅಂದೆ. ಆಗ ತಾತ ಅವರು ಎಲ್ಲೋ ಇದ್ದರು. ನಮ್ಮ ಮನೆಗೆ ಬಂದು ನನ್ನನ್ನು ಕರೆದುಕೊಂಡು ಹೋಗಿ ಬಾಹುಬಲಿ ಸಿನಿಮಾ ತೋರಿಸಿದರುʼʼ ಎಂದು ಧವನ್ ವಿವರಿಸಿದರು.
ಸಿದ್ದರಾಮನ ಹುಂಡಿಗೆ ಬಂದು ತುಂಬಾ ದಿನವಾಗಿತ್ತು. ಇಲ್ಲಿನ ಜನರನ್ನು ನೋಡಿ ಖುಷಿಯಾಗಿದೆ ಎಂದು ಧವನ್ ಹೇಳಿದರು.
ಧವನ್ ಈಗೇನು ಮಾಡುತ್ತಿದ್ದಾರೆ?
ರಾಕೇಶ್ ಅವರ ಮಗ ಧವನ್ ರಾಕೇಶ್ ಅವರಿಗೆ ಈಗ 17 ವರ್ಷ. ಅವರು ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಓದಿನ ಕಡೆ ಹಾಗೂ ಕುಟುಂಬಕ್ಕಷ್ಟೇ ಸೀಮಿತವಾಗಿದ್ದ ಧವನ್ ಈಗ ಚುನಾವಣೆ ಸಮಯದಲ್ಲಿ ಏಕಾಏಕಿ ಸಿದ್ದರಾಮಯ್ಯ ಅವರ ಜತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಮುಂದಿನ ಚುನಾವಣೆ ಸಂದರ್ಭದಲ್ಲಿ ಪರಿಪೂರ್ಣವಾಗಿ ರಾಜಕೀಯ ಕ್ಷೇತ್ರದಲ್ಲಿ ತೊಡಗಿಕೊಳ್ಳುವ ಮುನ್ಸೂಚನೆಯನ್ನು ನೀಡಿದ್ದಾರೆನ್ನಲಾಗಿದೆ.