Site icon Vistara News

Karnataka Election : ಬಿಜೆಪಿ ವರಿಷ್ಠರು ಫುಲ್‌ ಆಕ್ಟಿವ್‌, ನಿದ್ದೆ ಮಾಡುತ್ತಿದೆಯಾ ಕಾಂಗ್ರೆಸ್‌ ಹೈಕಮಾಂಡ್‌?

BJP Congress Elections

#image_title

ಮಾರುತಿ ಪಾವಗಡ, ವಿಸ್ತಾರ ನ್ಯೂಸ್‌ ಬೆಂಗಳೂರು

ರಾಜ್ಯದಲ್ಲಿ ಇನ್ನು ಒಂದೆರಡು ತಿಂಗಳಲ್ಲೇ ಚುನಾವಣೆ (Karnataka Election) ನಡೆಯಲಿದೆ. ಭಾರತೀಯ ಜನತಾ ಪಕ್ಷ ತನ್ನ ವರಿಷ್ಠ ನಾಯಕರ ಮೂಲಕ ಈಗಾಗಲೇ ಹವಾ ಎಬ್ಬಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಸಾಲು ಸಾಲು ಕೇಂದ್ರ ನಾಯಕರು ಈಗಾಗಲೇ ಹಲವು ಸುತ್ತಿನ ಓಡಾಟ ಮಾಡಿದ್ದಾರೆ, ಇನ್ನಷ್ಟು ಕಾರ್ಯಕ್ರಮಗಳು ಫಿಕ್ಸ್‌ ಆಗಿವೆ. ಬಿಜೆಪಿ ಹೈಕಮಾಂಡ್‌ ರಾಜ್ಯದಲ್ಲಿ ದೊಡ್ಡ ಮಟ್ಟದ ಹಲ್‌ಚಲ್ ಕ್ರಿಯೇಟ್‌ ಮಾಡುತ್ತಿದ್ದರೂ ಪ್ರತಿಪಕ್ಷ ಕಾಂಗ್ರೆಸ್‌ನ ಹೈಕಮಾಂಡ್‌ ಮಾತ್ರ ಇನ್ನೂ ನಿದ್ದೆಯಿಂದ ಎದ್ದಂತೆ ಕಾಣುತ್ತಿಲ್ಲ. ಪ್ರಿಯಾಂಕಾ ಗಾಂಧಿ ಅವರು ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಬಿಟ್ಟರೆ ಬೇರೆ ಯಾವುದೇ ಚಟುವಟಿಕೆಗಳು ಕಾಂಗ್ರೆಸ್‌ ಹೈಕಮಾಂಡ್‌ ಮೂಲಕ ನಡೆಯುತ್ತಿರುವುದು ಕಾಣುತ್ತಿಲ್ಲ.

ಐದು ಬಾರಿ ಭೇಟಿ ನೀಡಿದ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಐದು ಬಾರಿ ರಾಜ್ಯದಲ್ಲಿ ಸುತ್ತಾಡಿದ್ದಾರೆ. ರಾಜ್ಯದ ಮೂಲೆ ಮೂಲೆಗಳಲ್ಲಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಬಿಜೆಪಿಯ ಟಾರ್ಗೆಟ್‌ ಪ್ಲೇಸ್‌ ಎಲ್ಲಿ ಎನ್ನುವುದನ್ನು ಗುರುತಿಸಿಕೊಂಡು ಸರ್ಕಾರಿ ಕಾರ್ಯಕ್ರಮದ ನೆಪದಲ್ಲೂ ಪ್ರಚಾರ ಮಾಡಿ ಹೋಗುವ ಚತುರತೆಯನ್ನು ತೋರಿದ್ದಾರೆ. ಮೈಸೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಕಾರ್ಯಕ್ರಮದಿಂದಲೇ ಅವರ ಚಟುವಟಿಕೆ ಶುರುವಾಗಿದೆ. ಬೆಂಗಳೂರಿನಲ್ಲಿನಡೆದ ಕೇಂಪೇಗೌಡ ಪ್ರತಿಮೆ ಅನಾವರಣ, ಕಲಬುರಗಿ ಸಮಾವೇಶ, ಮಂಗಳೂರಿನಲ್ಲಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಅಡಿಗಲ್ಲು ಕಾರ್ಯಕ್ರಮ, ತುಮಕೂರಿನಲ್ಲಿ ಎಚ್‌ಎಎಲ್‌ ಉದ್ಘಾಟನೆ, ಬೆಂಗಳೂರಿನಲ್ಲಿ ಇಂಧನ ಸಪ್ತಾಹ ಉದ್ಘಾಟನೆ.. ಹೀಗೆ ಐದು ಬಾರಿ ರಾಜ್ಯಕ್ಕೆ ಆಗಮಿಸಿ ಎಲೆಕ್ಷನ್​ ಸೆಟ್​​ ಮಾಡುವ ತಂತ್ರಗಾರಿಕೆ ಮಾಡಿದ್ದಾರೆ ನರೇಂದ್ರ ಮೋದಿ. ಇದೀಗ ಫೆಬ್ರವರಿ ೨೭ಕ್ಕೆ ಮತ್ತೆ ಹಿರಿಯ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರ ಹುಟ್ಟುಹಬ್ಬ ಮತ್ತು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಯ ನೆಪದಲ್ಲಿ ಬಂದು ಹವಾ ಎಬ್ಬಿಸಲಿದ್ದಾರೆ.

ಅಮಿತ್‌ ಶಾ ಕೂಡಾ ಮೂರು ಬಾರಿ ಭೇಟಿ
ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿಯ ನಾಯಕತ್ವದಲ್ಲಿ ನಂಬರ್‌ ೨ ಸ್ಥಾನದಲ್ಲಿರುವ ಅಮಿತ್‌ ಶಾ ಅವರು ಕೂಡಾ ಮೂರನೇ ಬಾರಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಬಿಜೆಪಿ ಇನ್ನೂ ಮಂದಗತಿಯಲ್ಲಿರುವ ಹಳೆ ಮೈಸೂರು ಭಾಗದಲ್ಲಿ ಪಕ್ಷವನ್ನು ಬಲಗೊಳಿಸುವ, ಸ್ಥಾನ ಗೆಲ್ಲುವ ತಂತ್ರಗಾರಿಕೆ ಹೆಣೆಯುತ್ತಿರುವ ಈ ಚಾಣಕ್ಯ ಇನ್ನು ಹಲವು ಬಾರಿ ಸುತ್ತಾಡುವ ಎಲ್ಲ ಅವಕಾಶಗಳು ಮುಕ್ತವಾಗಿವೆ.

ಡಿಸೆಂಬರ್​​ 28, 29ರಂದು ಮೈಸೂರು ಭಾಗದಲ್ಲಿ ಸಂಚಲನ ಮೂಡಿಸಿದ್ದ ಅವರು, ಜನವರಿ 28 ಮತ್ತು 29ರಂದು ಬೆಳಗಾವಿ ಹಾಗೂ ಧಾರವಾಡದಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಇದೀಗ ಫೆಬ್ರವರಿ 11ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ, 21ರಂದು ಬಳ್ಳಾರಿಗೆ ಆಗಮಿಸುತ್ತಿದ್ದಾರೆ. ಈ ಮೂಲಕ ಅವರು ಕರಾವಳಿ ಮತ್ತು ಹೈದರಾಬಾದ್‌​ ಕರ್ನಾಟಕವನ್ನು ಟಾರ್ಗೆಟ್‌ ಮಾಡಿದ್ದಾರೆ.

ಕಾಂಗ್ರೆಸ್‌ ಈ ವಿಚಾರದಲ್ಲಿ ಫುಲ್‌ ಸೈಲೆಂಟ್‌!

ಬಿಜೆಪಿಯ ಇಬ್ಬರು ಹಿರಿಯ ನಾಯಕರು, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ನಿತಿನ್‌ ಗಡ್ಕರಿ ಮತ್ತು ಇತರರ ರಾಜ್ಯಕ್ಕೆ ಆಗಾಗ ಬಂದು ಹೋಗುತ್ತಿದ್ದರೂ, ಎಲೆಕ್ಷನ್‌ಗೆ ಲಾಭವಾಗುವ ರೀತಿಯಲ್ಲಿ ಚಟುವಟಿಕೆಗಳನ್ನು ನಡೆಸುತ್ತಿದ್ದರೂ ಕಾಂಗ್ರೆಸ್‌ ವರಿಷ್ಠರು ಮಾತ್ರ ಈ ವಿಚಾರದಲ್ಲಿ ಫುಲ್‌ ಸೈಲೆಂಟ್‌ ಆಗಿದ್ದಾರೆ.

ಎರಡು ತಿಂಗಳ ಹಿಂದೆ ಭಾರತ್‌ ಜೋಡೋ ಯಾತ್ರೆಯ ಮೂಲಕ ಕರ್ನಾಟಕದಲ್ಲಿ ಹವಾ ಎಬ್ಬಿಸಿದ್ದರು ರಾಹುಲ್‌ ಗಾಂಧಿ. ಆದರೆ, ಈಗ ಒಟ್ಟಾರೆ ಭಾರತ್‌ ಜೋಡೋ ಯಾತ್ರೆ ಮುಗಿದು ಒಂದು ವಾರವೇ ಆದರೂ ಮುಂದೇನು ಎನ್ನುವ ವಿಚಾರದಲ್ಲಾಗಲೀ, ಕರ್ನಾಟಕದ ಚುನಾವಣೆಯ ಕುರಿತಾಗಲೀ ಅವರು ಯೋಚಿಸಿದಂತೆ ಕಾಣುತ್ತಿಲ್ಲ.

ಈ ಹೊತ್ತಿಗಾಗಲೇ ಕಾಂಗ್ರೆಸ್‌ನ ನಾಯಕರು ರಾಜ್ಯದಲ್ಲಿ ಓಡಾಟ ಶುರು ಮಾಡಿ ಹವಾ ಎಬ್ಬಿಸಬೇಕಾಗಿತ್ತು. ಆದರೆ, ಯಾವುದೇ ಕಾರ್ಯಕ್ರಮಗಳು ಸೆಟ್‌ ಆಗಿಲ್ಲ. ರಾಜ್ಯಕ್ಕೆ ಯಾವ ನಾಯಕರೂ ಬರುವ ಲಕ್ಷಣಗಳೂ ಕಾಣಿಸುತ್ತಿಲ್ಲ.

ನಿಜವೆಂದರೆ ಕಾಂಗ್ರೆಸ್‌ ಇಂಥ ನಿರ್ಲಕ್ಷ್ಯಗಳಿಂದಲೇ ಗುಜರಾತ್‌ನಲ್ಲಿ ಹೀನಾಯ ಸೋಲು ಕಾಣುವಂತಾಗಿತ್ತು. ೨೦೧೭ರಲ್ಲಿ ಗುಜರಾತ್‌ನಲ್ಲಿ ರಾಹುಲ್‌ ಗಾಂಧಿ ನಿರಂತರ ಪ್ರಚಾರ ನಡೆಸಿದ ಫಲವಾಗಿ ಒಂದು ಹಂತದಲ್ಲಿ ಕಾಂಗ್ರೆಸ್‌ ಗೆದ್ದೇಬಿಟ್ಟಿತು ಎನ್ನುವ ವಾತಾವರಣ ನಿರ್ಮಾಣವಾಗಿತ್ತು. ಬಿಜೆಪಿ ಪ್ರಯಾಸದ ಗೆಲುವು (೧೮೨ರಲ್ಲಿ ೯೯ ಸ್ಥಾನ) ಪಡೆದಿತ್ತು. ಈ ಬಾರಿ ಆಮ್‌ ಆದ್ಮಿ ಪಾರ್ಟಿ ಎಂಟ್ರಿ ಪಡೆದುಕೊಂಡಿದ್ದರೂ ಸ್ವತಃ ರಾಹುಲ್‌ ಗಾಂಧಿಯೇ ಆಸಕ್ತಿ ವಹಿಸದೆ ಕಾಂಗ್ರೆಸ್‌ ಹೀನಾಯ ಸೋಲು ಕಾಣುವಂತಾಯಿತು. ಆದರೆ, ಇಷ್ಟಾದರೂ ಹೈಕಮಾಂಡ್‌ ಎಚ್ಚೆತ್ತುಕೊಳ್ಳಲೇ ಇಲ್ಲ.

ನಿಜವೆಂದರೆ, ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ತವರು ರಾಜ್ಯವಿದು. ಅವರಿಗೆ ಯಾವುದೆ ಹಿರಿಯ ನಾಯಕರನ್ನು ಕರೆತರುವ, ಪ್ರಚಾರದ ಹವಾ ಎಬ್ಬಿಸುವ ಎಲ್ಲ ತಾಕತ್ತಿದೆ. ಆದರೆ, ಅವರು ಬೇರೆಯವರನ್ನು ಕರೆಸುವುದು ಬಿಡಿ, ಅವರೇ ರಾಜ್ಯದಲ್ಲಿ ದೊಡ್ಡ ಮಟ್ಟದ ಪ್ರಚಾರದಲ್ಲಿ ತೊಡಗಿಕೊಂಡಿಲ್ಲ.

ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ವಾದ್ರಾ ಸೇರಿ ಹಿರಿಯ ಜನಪ್ರಿಯ ನಾಯಕರು ರಾಜ್ಯದಲ್ಲಿ ಈಗಾಗಲೇ ಒಂದು ಸುತ್ತು ಪ್ರಚಾರ ಮಾಡಬೇಕಿತ್ತು. ಆದರೆ, ಅವರ ನಿರುತ್ಸಾಹವೇ ಎದ್ದು ಕಾಣುತ್ತಿದೆ. ಪ್ರಿಯಾಂಕಾ ಒಬ್ಬರೇ ಒಮ್ಮೆ ಬಂದು ಹೋಗಿದ್ದು ಬಿಟ್ಟರೆ ಬೇರೆಯವರಿಗೆ ಆಸಕ್ತಿ ಇಲ್ಲ. ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರೇ ಪ್ರಚಾರದ ಸರ್ವ ಸಾರಥ್ಯವನ್ನು ವಹಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಬಿಜೆಪಿ ಕೇಂದ್ರ ನಾಯಕರು ವಾರಕ್ಕೊಬ್ಬರಂತೆ ರಾಜ್ಯ ಸುತ್ತುವುದನ್ನು ನೋಡಿ ನಮ್ಮ ನಾಯಕರು ಯಾಕೆ ಇಷ್ಟು ನಿರುತ್ಸಾಹಿಗಳಾಗಿದ್ದಾರೆ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಬೇಸರಗೊಂಡಿದ್ದಂತೂ ಸತ್ಯ. ಇದು ರಾಜ್ಯದಲ್ಲಿ ಪಕ್ಷದ ಚುನಾವಣಾ ಭವಿಷ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಂತೂ ಇದೆ.

ಇದನ್ನೂ ಓದಿ : B.Y. Vijayendra: ಕಾಂಗ್ರೆಸ್‌ ನಾಯಕರಿಗೆ ಅಡ್ರೆಸ್‌ ಇಲ್ಲ; ನಮ್ಮವರು ವಿಶ್ವ ನಾಯಕರು: ಟೀಕೆಗೆ ಬಿ.ವೈ. ವಿಜಯೇಂದ್ರ ಪ್ರತ್ಯುತ್ತರ

Exit mobile version